ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಸಂಘರ್ಷ | ಪೂರ್ವ ಲಡಾಖ್‌ನಲ್ಲಿ ರಾತ್ರಿ ಗಸ್ತು ಹೆಚ್ಚಿಸಿದ ವಾಯುಪಡೆ

Last Updated 7 ಜುಲೈ 2020, 12:15 IST
ಅಕ್ಷರ ಗಾತ್ರ

ಲೇಹ್: ಚೀನಾ ಜತೆಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಪೂರ್ವ ಲಡಾಖ್‌ನಲ್ಲಿ ರಾತ್ರಿ ಗಸ್ತು ಕಾರ್ಯಾಚರಣೆಯನ್ನು ಭಾರತೀಯ ವಾಯುಪಡೆ (ಐಎಎಫ್‌) ತೀವ್ರಗೊಳಿಸಿದೆ.

ಮಿಗ್–29, ಸುಖೋಯ್–30 ಎಂಕೆಐ, ಅಪಾಚೆ ಹೆಲಿಕಾಪ್ಟರ್‌, ಚಿನೂಕ್ ಹೆಲಿಕಾಪ್ಟರ್‌ಗಳ ನೆರವಿನಿಂದ ಐಎಎಫ್‌ ರಾತ್ರಿ ಗಸ್ತು ತೀವ್ರಗೊಳಿಸಿರುವುದನ್ನು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ವಿಪರೀತ ಚಳಿ ಮತ್ತು ಬಲವಾದ ಗಾಳಿಯ ವಾತಾವರಣದ ಹೊರತಾಗಿಯೂ ಸಿಬ್ಬಂದಿ ಹಾಗೂ ಸಂದರ್ಭ ನೋಡಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ.

‘ರಾತ್ರಿಯ ಗಸ್ತು ಕಾರ್ಯಾಚರಣೆಗಳು ಅನೇಕ ಅಚ್ಚರಿಯ ವಿಷಯಗಳನ್ನೊಳಗೊಂಡಿವೆ. ಭಾರತೀಯ ವಾಯುಪಡೆಯು ಅತ್ಯುತ್ಸಾಹದಿಂದ ಕೂಡಿದ ಸಿಬ್ಬಂದಿ ಮತ್ತು ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ಎಂತಹ ವಾತಾವರಣದಲ್ಲಿಯೂ ಕಾರ್ಯನಿರ್ವಹಿಸಬಲ್ಲ ಸಂಪೂರ್ಣ ತರಬೇತಿ ಪಡೆದಿದೆ’ ಎಂದು ಮುಂಚೂಣಿ ನೆಲೆಯಲ್ಲಿ ನಿಯೋಜನೆಗೊಂಡಿರುವ ಹಿರಿಯ ಫೈಟರ್ ಪೈಲಟ್ ಗ್ರೂಪ್ ಕ್ಯಾಪ್ಟನ್ ಎ. ರಾಥಿ ಹೇಳಿದ್ದಾರೆ. ರಾತ್ರಿ ಕಾರ್ಯಾಚರಣೆಯ ಮಹತ್ವದ ಬಗ್ಗೆಯೂ ಅವರು ವಿವರಣೆ ನೀಡಿದ್ದಾರೆ.

ಪೂರ್ವ ಲಡಾಖ್ ಪ್ರದೇಶದಲ್ಲಿ ಸಂಜೆಯಾಗುತ್ತಿದ್ದಂತೆ ಗಾಳಿ ಬೀಸುವ ತೀವ್ರತೆ ಹೆಚ್ಚಾಗುತ್ತದೆ. ಹೀಗಾಗಿ ಹೆಚ್ಚಿನ ಯುದ್ಧವಿಮಾನಗಳು ಕೆಲ ಸಮಯ ಕಾರ್ಯಾಚರಣೆ ನಿಲ್ಲಿಸಬೇಕಾಗಿ ಬಂದಿತ್ತು. ಆದರೆ, ರಾತ್ರಿ 10 ಗಂಟೆ ವೇಳೆಗೆ ಗಾಳಿಯ ತೀವ್ರತೆ ತುಸು ಕಡಿಮೆಯಾಗಿದ್ದು, ಐಎಎಫ್‌ ಸಿಬ್ಬಂದಿ ಮತ್ತೆ ಕಾರ್ಯಾಚರಣೆಗೆ ಮರಳಿದರು ಎಂದು ಎಎನ್‌ಐ ವರದಿ ಉಲ್ಲೇಖಿಸಿದೆ.

ಜೂನ್ 15ರಂದು ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆ ಪ್ರದೇಶದಲ್ಲಿ ಚೀನಾ ಪಡೆಗಳೊಂದಿಗೆ ನಡೆದಿದ್ದ ಸಂಘರ್ಷದಲ್ಲಿ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿ 20 ಮಂದಿ ಯೋಧರು ಹುತಾತ್ಮರಾಗಿದ್ದರು. ಆ ಬಳಿಕ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ವಾಯುಪಡೆ ಹೆಚ್ಚಿನ ಯುದ್ಧವಿಮಾನಗಳನ್ನು ಮುಂಚೂಣಿ ನೆಲೆಗಳಲ್ಲಿ ಕಾರ್ಯಾಚರಣೆಗೆ ನಿಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT