ಶನಿವಾರ, ಆಗಸ್ಟ್ 8, 2020
28 °C

ಸೇನೆಯಲ್ಲಿ ಮಹಿಳೆಯರಿಗೆ ಪೂರ್ಣಾವಧಿ ಅವಕಾಶ: ಶೀಘ್ರ ಜಾರಿಗೆ ಸುಪ್ರೀಂಕೋರ್ಟ್ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸೇನೆಯಲ್ಲಿ ಅಲ್ಪಾವಧಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಗಳಿಗೆ ಕಾಯಂ ಸೇವೆಯ ಅವಕಾಶ (ಪರ್ಮನೆಂಟ್‌ ಕಮಿಷನ್‌) ನೀಡಬೇಕೆಂದು ಈ ಹಿಂದೆ ನೀಡಿದ್ದ ತೀರ್ಪನ್ನು ಜಾರಿಗೊಳಿಸಲು ಸರ್ಕಾರಕ್ಕೆ ಸುಪ್ರಿಂ ಕೋರ್ಟ್‌ ಇನ್ನೂ ಒಂದು ತಿಂಗಳ ಕಾಲಾವಕಾಶ ನೀಡಿದೆ.

ಕೋವಿಡ್‌ ಸಂಕಷ್ಟ ಎದುರಾಗಿರುವುದರಿಂದ, ತೀರ್ಪನ್ನು ಜಾರಿಗೊಳಿಸಲು ಆರು ತಿಂಗಳ ಕಾಲಾವಕಾಶ ಕೊಡಬೇಕು ಎಂದು ಕೇಂದ್ರ ಸರ್ಕಾರವು ಮಾಡಿರುವ ಮನವಿಯನ್ನು ಕೋರ್ಟ್‌ ಪರಿಶೀಲಿಸಿತು. ಬಳಿಕ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠವು, ಕೇವಲ ಒಂದು ತಿಂಗಳ ಕಾಲಾವಕಾಶ ನೀಡಿತು. 

‘ತೀರ್ಪಿನಲ್ಲಿ ನೀಡಲಾಗಿರುವ ಎಲ್ಲಾ ನಿರ್ದೇಶನಗಳನ್ನು ಪಾಲಿಸಬೇಕು’ ಎಂದೂ ಸೂಚಿಸಿತು.

ಸೇನೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಸೇವೆಯ ಅವಕಾಶ ನೀಡಬೇಕು, ಕಮಾಂಡ್‌ ಹುದ್ದೆಯನ್ನೂ ನೀಡಬೇಕು ಎಂಬ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್‌ ಫೆಬ್ರುವರಿ 17ರಂದು ನೀಡಿತ್ತು. ಜತೆಗೆ, ‘ಮಹಿಳೆಯರಿಗೆ ದೈಹಿಕವಾಗಿ ಮಿತಿಗಳಿರುತ್ತವೆ’ ಎಂಬ ಕೆಂದ್ರ ಸರ್ಕಾರದ ವಾದವನ್ನು ತಳ್ಳಿಹಾಕಿ, ಅದು ಮಹಿಳೆಯರ ವಿರುದ್ಧದ ಲೈಂಗಿಕ ತಾರತಮ್ಯ ಮನಸ್ಥಿತಿಯ ಚಿಂತನೆ’ ಎಂದಿತ್ತು.

14 ವರ್ಷ ಅಥವಾ 20 ವರ್ಷ ಸೇವೆ ಮುಗಿಸಿದ್ದಾರೆ ಎಂಬ ಯಾವ ಮಾನದಂಡವನ್ನೂ ಲೆಕ್ಕಿಸದೆ, ಅಲ್ಪಾವಧಿ ಸೇವೆಯಲ್ಲಿರುವ ಎಲ್ಲಾ ಅಧಿಕಾರಿಗಳನ್ನು ಕಾಯಂ ಸೇವೆಗೆ ಪರಿಗಣಿಸುವ ಪ್ರಕ್ರಿಯೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಕೋರ್ಟ್‌ ಈ ಹಿಂದೆ ಸೂಚಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು