ಭಾನುವಾರ, ಆಗಸ್ಟ್ 9, 2020
21 °C
ಬೆಳಗಾವಿ ಸಹಿತ 12 ಆಸ್ಪತ್ರೆಗಳಲ್ಲಿ ಕ್ಲಿನಿಕಲ್‌ ಟ್ರಯಲ್‌

ಕೋವಿಡ್‌ ಲಸಿಕೆ: ಸಾರ್ವಜನಿಕ ಬಳಕೆಗೆ ಆಗಸ್ಟ್‌ 15ರ ಗುರಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್‌ ಕ್ಯಾಂಡಿಡೇಟ್‌ನ (ಸಂಭಾವ್ಯ ಲಸಿಕೆ) ಕ್ಲಿನಿಕಲ್‌ ಟ್ರಯಲ್‌, ಕರ್ನಾಟಕದ ಬೆಳಗಾವಿಯ ಜೀವನ್‌ ಸಖಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ದೇಶದ ಆಯ್ದ 12 ಆಸ್ಪತ್ರೆಗಳಲ್ಲಿ ನಡೆಯಲಿದೆ.

ಈ ವ್ಯಾಕ್ಸಿನ್‌ಅನ್ನು ಆಗಸ್ಟ್‌ 15ರ ವೇಳೆಗೆ ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡುವ ಗುರಿ ಹೊಂದಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ (ಐಸಿಎಂಆರ್‌), ಕ್ಲಿನಿಕಲ್‌ ಟ್ರಯಲ್ ‌ಅನ್ನು ಆದ್ಯತೆ ಮೇಲೆ ಕೈಗೊಳ್ಳುವಂತೆ ಈ ಆಸ್ಪತ್ರೆಗಳಿಗೆ ಸೂಚಿಸಿದೆ.

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಐಐಎಂಎಸ್‌) ದೆಹಲಿ ಮತ್ತು ಪಟ್ನಾ ಘಟಕ, ಹೈದರಾಬಾದ್‌ನ ನಿಜಾಮ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ನಲ್ಲಿ ಸಹ ಕ್ಲಿನಿಕಲ್‌ ಟ್ರಯಲ್‌ ನಡೆಯಲಿದೆ.

ಹೈದರಾಬಾದ್‌ ಮೂಲದ ಭಾರತ್‌ ಬಯೊಟೆಕ್‌ ಸಹಯೋಗದಲ್ಲಿ ಐಸಿಎಂಆರ್‌ ‘ಕೋವ್ಯಾಕ್ಸಿನ್‌’ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಒಟ್ಟು ಎರಡು ಹಂತಗಳಲ್ಲಿ ನಡೆಯುವ ಕ್ಲಿನಿಕಲ್‌ ಟ್ರಯಲ್‌ಗಾಗಿ 1,125 ಜನರನ್ನು ಆಯ್ಕೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

‘ಕ್ಲಿನಿಕಲ್‌ ಟ್ರಯಲ್‌ನಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರ ನೋಂದಣಿ ಕಾರ್ಯವನ್ನು ಜುಲೈ 7ರಿಂದ ಆರಂಭಿಸಬೇಕು. ನಿಗದಿತ ಅವಧಿಯಲ್ಲಿ ಗುರಿ ಸಾಧಿಸದಿದ್ದರೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಐಸಿಎಂಆರ್‌ನ ಪ್ರಧಾನ ನಿರ್ದೇಶಕ ಬಲರಾಂ ಭಾರ್ಗವ ಅವರು ಆಸ್ಪತ್ರೆಗಳಿಗೆ ಬರೆದ ಪತ್ರದಲ್ಲಿ ಎಚ್ಚರಿಸಿದ್ದಾರೆ.

‘ಕ್ಲಿನಿಕಲ್‌ ಟ್ರಯಲ್ ಯಾವಾಗ ಆರಂಭವಾಗುವುದು ಮತ್ತು ಫಲಿತಾಂಶ ಯಾವಾಗ ಲಭಿಸುವುದು ಎಂಬ ಬಗ್ಗೆ ನಾನು ಏನನ್ನೂ ಹೇಳಲಾರೆ’ ಎಂದು ಭಾರತ್‌ ಬಯೊಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲ ಪ್ರತಿಕ್ರಿಯಿಸಿದ್ದಾರೆ.

ಹೇಗೆ ಸಾಧ್ಯ?: ‘ಲಸಿಕೆ ಬಳಸಿ ಕ್ಲಿನಿಕಲ್‌ ಟ್ರಯಲ್‌ ಇನ್ನೂ ಆರಂಭವಾಗಬೇಕಿದೆ. ಇದಕ್ಕಾಗಿ ಜುಲೈ 7ರಿಂದ ನೋಂದಣಿ ಆರಂಭಿಸಿ, ಆಗಸ್ಟ್‌ 15ರ ವೇಳೆಗೆ ಲಸಿಕೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವುದು ಹೇಗೆ ಸಾಧ್ಯ’ ಎಂದು ಇಂಟರ್‌ ನ್ಯಾಷನಲ್‌ ಅಸೋಸಿಯೇಷನ್‌ ಆಫ್‌ ಬಯೊಎಥಿಕ್ಸ್‌ನ ಮಾಜಿ ಅಧ್ಯಕ್ಷ ಅನಂತ್‌ ಭಾನ್‌ ಪ್ರಶ್ನಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು