ಶನಿವಾರ, ಜೂನ್ 19, 2021
22 °C

ಆತ್ಮಚರಿತ್ರೆಯ ನಾಲ್ಕನೇ ಭಾಗ: ಬಾಲ್ಯವನ್ನು ನೆನಪಿಸಿಕೊಂಡ ರಸ್ಕಿನ್‌ ಬಾಂಡ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ನಾನು ಲೇಖಕನಾಗುತ್ತೇನೆ’ ಎಂದು ರಸ್ಕಿನ್‌ ಬಾಂಡ್‌ ಅವರು ತಾಯಿಯ ಮುಂದೆ ಹೇಳಿಕೊಂಡಾಗ ಆಕೆ ನಕ್ಕು, ನಿನ್ನ ಕೈಬರಹ ಚೆನ್ನಾಗಿದೆ, ನೀನು ವಕೀಲರ ಕಚೇರಿಯಲ್ಲಿ ಒಬ್ಬ ಕ್ಲರ್ಕ್‌ ಆಗುವೆ ಅಷ್ಟೇ ಎಂದು ಪ್ರತಿಕ್ರಿಯೆ ನೀಡಿದ್ದರಂತೆ. ‘ಅದಾದ ನಂತರ ನಾನು ಆ ಕುರಿತು ತಾಯಿಯ ಮುಂದೆ ಹೇಳುವುದನ್ನೇ ಬಿಟ್ಟಿದ್ದೆ’ ಎಂದು ಬಾಂಡ್‌ ನೆನಪಿಸಿಕೊಂಡಿದ್ದಾರೆ.

1951ರ ಆರಂಭದ ದಿನಗಳು, ಬಾಂಡ್‌ ಅವರು ತಮ್ಮ ಬೋರ್ಡ್‌ ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಇಂಗ್ಲಿಷ್‌ ಸಾಹಿತ್ಯ, ಇತಿಹಾಸ, ಭೂಗೋಳಶಾಸ್ತ್ರದಲ್ಲಿ ಒಳ್ಳೆಯ ಅಂಕ ಬರಬಹುದೆಂಬ ಭರವಸೆ ಇತ್ತು. ಆದರೆ, ಗಣಿತ ಹಾಗೂ ಭೌತವಿಜ್ಞಾನದ ಬಗ್ಗೆ ಅಂಥ ಖಚಿತತೆ ಇರಲಿಲ್ಲ. ಕತೆಗಳನ್ನು ಬರೆಯಬೇಕು, ಲೇಖಕನಾಗಬೇಕು ಎಂಬುದು ಬಾಂಡ್‌ ಅವರ ಗುರಿಯಾಗಿತ್ತು.

ಬಾಂಡ್‌, ಕಾಲೇಜಿಗೆ ಹೋಗಬೇಕು ಎಂದು ಅವರ ಮಲತಂದೆ ಬಯಸಿದ್ದರು. ಸೇನೆಗೆ ಸೇರಬೇಕು ಎಂಬುದು ತಾಯಿಯ ಇಚ್ಛೆಯಾಗಿತ್ತು. ಆದರೆ ಶಾಲೆಯ ಮುಖ್ಯಶಿಕ್ಷಕರು, ಬಾಂಡ್‌ ಶಿಕ್ಷಕ ಆಗಬೇಕು ಎಂದು ಬಯಸಿದ್ದರಂತೆ.

‘ಶಿಕ್ಷಕ ಆಗುವುದನ್ನು ನಾನು ಎಂದೂ ಇಷ್ಟಪಡಲಿಲ್ಲ. ಹೋಮ್‌ವರ್ಕ್‌, ಮುಂಜಾನೆಯ ದೈಹಿಕ ಶಿಕ್ಷಣ ಮುಂತಾಗಿ ಅದಾಗಲೇ ಶಾಲಾ ನಿಯಮಗಳು ನನಗೆ ಸಾಕಾಗಿ ಹೋಗಿದ್ದವು. ಸೇನೆ ಎಂದರೆ ಇನ್ನೂ ಹೆಚ್ಚಿನ ನಿಯಮ, ಇನ್ನಷ್ಟು ದೈಹಿಕ ಶಿಕ್ಷಣ, ಭಾರದ ಬೂಟ್‌ಗಳು ಎಂದು ಅರ್ಥ... ಹೀಗೆ ಎಲ್ಲಾ ದಿಕ್ಕಿನಿಂದ ಯೋಚನೆ ಮಾಡಿ, ನಾನು ಲೇಖಕನಾಗುತ್ತೇನೆ ಎಂದು ತಾಯಿಗೆ ಹೇಳಿದ್ದೆ’ ಎಂದು ಅವರು ನೆನಪಿಸಿಕೊಂಡಿದ್ದಾರೆ.

‘ಆಗೊಮ್ಮೆ ಈಗೊಮ್ಮೆ ನನ್ನ ಮಲತಂದೆ ಒಂದೋ ಎರಡೋ ರೂಪಾಯಿಗಳನ್ನು ಕೊಡುತ್ತಿದ್ದರು. ಜತೆಗೆ ನೀನೂ ಸಂಪಾದನೆ ಆರಂಭಿಸಬೇಕು ಎಂದು ಸಲಹೆ ನೀಡುತ್ತಿದ್ದರು. ನನ್ನ ಸಾಹಿತ್ಯದ ಆಸಕ್ತಿಯನ್ನು ಪರೀಕ್ಷೆಗೆ ಒಡ್ಡಬೇಕು ಎಂಬ ಚಿಂತನೆ ಆಗ ಆರಂಭವಾಯಿತು. ಮಲತಂದೆಯ ಹಳೆಯ ಟೈಪ್‌ರೈಟರ್‌ ಅನ್ನು ಬಳಸಿ ಬರವಣಿಗೆ ಆರಂಭಿಸಿದೆ. ನಾನು ಬರೆದ ಕತೆಗಳನ್ನು ದೇಶದ ಎಲ್ಲಾ ಪತ್ರಿಕೆಗಳಿಗೆ ಕಳುಹಿಸಿಕೊಡಲು ಆರಂಭಿಸಿದೆ.

‘ಎಲ್ಲಿಂದಲೂ ಪ್ರತಿಕ್ರಿಯೆ ಬರಲಿಲ್ಲ. ಕೊನೆಗೊಂದು ದಿನ, ಮದ್ರಾಸ್‌ನ ಒಂದು ನಿಯತಕಾಲಿಕೆಯು ನನ್ನ ಕತೆಯನ್ನು ಸ್ವೀಕರಿಸಿ, ಪ್ರಕಟಿಸಿತು. ಅದಕ್ಕೆ ಆಗ ಐದು ರೂಪಾಯಿ ಸಂಭಾವನೆಯನ್ನೂ ಕಳುಹಿಸಿತು. ಅದಾದ ನಂತರ ನಾನು ಆ ಪತ್ರಿಕೆಗೆ ಬರೆಯುತ್ತಲೇ ಇದ್ದೆ, ಐದು ರೂಪಾಯಿ ಸಂಭಾವನೆ ಬರುತ್ತಲೇ ಇತ್ತು’ ಎಂದು ಅವರು ತಮ್ಮ ಇತ್ತೀಚಿನ ಪುಸ್ತಕ ‘ಎ ಸಾಂಗ್‌ ಆಫ್‌ ಇಂಡಿಯಾ: ದಿ ಇಯರ್‌ ಐ ವೆಂಟ್‌ ಅವೇ’ ಪುಸ್ತಕದಲ್ಲಿ ಸ್ಮರಿಸಿಕೊಂಡಿದ್ದಾರೆ.

ಬಾಂಡ್‌ ಅವರ ಆತ್ಮಚರಿತ್ರೆ ಸರಣಿಯ ನಾಲ್ಕನೇ ಪುಸ್ತಕ ಇದಾಗಿದೆ. ಇದನ್ನು ಪಫಿನ್‌ ಸಂಸ್ಥೆಯು ಪ್ರಕಟಿಸುತ್ತಿದೆ. ಇಂಗ್ಲಂಡ್‌ಗೆ ಹೋಗುವುದಕ್ಕೂ ಮುನ್ನ ತಾನು ಡೆಹರಾಡೂನ್‌ನಲ್ಲಿ ಕಳೆದ ದಿನಗಳನ್ನು ಈ ಪುಸ್ತಕದಲ್ಲಿ ನಮೂದಿಸಿದ್ದಾರೆ. ಬಾಂಡ್‌ ಅವರ ಬರವಣಿಗೆಯ 70ನೇ ವರ್ಷದ ಸಂದರ್ಭದಲ್ಲಿ ಈ ಕೃತಿ ಬಿಡುಗಡೆಯಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು