ಗುರುವಾರ , ಅಕ್ಟೋಬರ್ 1, 2020
25 °C

ರಾಮಮಂದಿರ ನಿರ್ಮಾಣದ ಮುಹೂರ್ತ ಅಶುಭ: ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

digvijaySingh

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅನುಕೂಲಕರವಾಗುವಂತೆ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯ ನಿಗದಿ ಮಾಡಲಾಗಿದೆ. ಸನಾತನ ಧರ್ಮ ಮತ್ತು ಜನರ ಭಾವನೆಯನ್ನು ಕಡೆಗಣಿಸಿ ಅಶುಭ ಮುಹೂರ್ತದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಕಾಂಗ್ರೆಸ್‍‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಟ್ವೀಟಿಸಿದ್ದಾರೆ.

ಆಚಾರ್ಯ ಪ್ರಮೋದ್ ಅವರ ಟ್ವೀಟ್‌ನ್ನು ರೀಟ್ವೀಟ್ ಮಾಡಿದ ದಿಗ್ವಿಜಯ ಸಿಂಗ್ ನಾನು ಆಚಾರ್ಯರ ಮಾತನ್ನು ಒಪ್ಪುತ್ತೇನೆ. ಅವರ (ಬಿಜೆಪಿ) ಧರ್ಮ ಹಿಂದುತ್ವ ಆಗಿರುವುದರಿಂದ ಅವರಿಗೆ ಸನಾತನ ಧರ್ಮ ಅಥವಾ ಸನಾತನ ಪರಂಪರೆಯೊಂದಿಗೆ ಯಾವುದೇ ಸಂಬಂಧ ಇಲ್ಲ, ಎಲ್ಲ ಹಿರಿಮೆಗಳನ್ನು ಇಲ್ಲವಾಗಿಸಿದರು. ಈಗ ಮುಹೂರ್ತವನ್ನೂ ಮೋದಿಯವರು ನಿಗದಿ ಮಾಡಿ ಶಿಲಾನ್ಯಾಸ ಮಾಡಲಿದ್ದಾರೆ. ಪ್ರಾಣ ಕಳೆದುಕೊಂಡ ಕರಸೇವಕರ ಕುಟುಂಬವನ್ನೂ ಅವರು ಮರೆತಿದ್ದಾರೆ ಎಂದು ದಿಗ್ವಿಜಯ ಸಿಂಗ್ ಟ್ವೀಟಿಸಿದ್ದಾರೆ.

ಮನೆಯ ಒಬ್ಬ ಸದಸ್ಯರಿಗೆ ಕೊರೊನಾ ಬಂದರೆ ಇಡೀ ಕುಟುಂಬವನ್ನು ಕ್ವಾರಂಟೈನ್‌ನಲ್ಲಿರಿಸಲಾಗುತ್ತದೆ. ಹೀಗಿರುವಾಗ ಇಡೀ ಪಕ್ಷವನ್ನು ಯಾಕೆ ಇಲ್ಲ? ಎಂಬ ಆಚಾರ್ಯ ಪ್ರಮೋದ್ ಅವರ ಟ್ವೀಟ್ ರೀಟ್ವೀಟ್ ಮಾಡಿದ ಸಿಂಗ್, ಇಡೀ ಪಕ್ಷವನ್ನಲ್ಲ ಸಚಿವ ಸಂಪುಟವನ್ನು ಕ್ವಾರಂಟೈನ್ ಮಾಡಬೇಕು. ಅಯೋಧ್ಯೆಯಲ್ಲಿ ಇನ್ನೆಷ್ಟು ಜನರಿಗೆ ಇವರು ಕೊರೊನಾ ಹರಡುತ್ತಾರೆ ಏನೋ. ನಿಯಮಗಳು ಎಲ್ಲರಿಗೂ ಒಂದೇ ಆಗಬೇಕು ಎಂದಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ ದಿಗ್ವಿಜಯ ಸಿಂಗ್, ಸನಾತನ ಧರ್ಮದ ಮಾನ್ಯತೆಯನ್ನು ಕಡೆಗಣಿಸಿದರ ಪರಿಣಾಮ ರಾಮ ಮಂದಿರದ ಎಲ್ಲ ಅರ್ಚಕರಿಗೆ ಕೊರೊನಾ ಪಾಸಿಟಿವ್ ಆಗಿದೆ. ಉತ್ತರ ಪ್ರದೇಶದ ಸಚಿವೆ ಕಮಲಾ ರಾಣಿ ವರುಣಾ ಅವರು ಕೊರೊನಾದಿಂದ ಮೃತಪಟ್ಟರು. ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷರಿಗೆ ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಾರತದ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೊನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲು. ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ, ಬಿಜೆಪಿಯ ಪ್ರದೇಶ ಅಧ್ಯಕ್ಷರಿಗೆ ಕೊರೊನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲು. ಕರ್ನಾಟಕದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗೆ ಕೊರೊನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದಿದ್ದಾರೆ.

ಸರಣಿ ಟ್ವೀಟ್‌ಗಳ ಮೂಲಕ ರಾಮಮಂದಿರ ನಿರ್ಮಾಣದ ಶಿಲಾನ್ಯಾಸದ ಮುಹೂರ್ತ ಅಶುಭ ಎಂದು ಹೇಳಿದ ಸಿಂಗ್, ಶ್ರೀರಾಮನ ಮೇಲೆ ಹಲವಾರು ಹಿಂದೂಗಳು ನಂಬಿಕೆ ಇಟ್ಟಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಧರ್ಮದೊಂದಿಗೆ ಆಟವಾಡಬೇಡಿ.

ಆಗಸ್ಟ್ 5ರಂದು ಅಶುಭ ಮುಹೂರ್ತ, ಅದನ್ನು ಕೈ ಬಿಡಿ ಎಂದು ನಾನು ಮೋದಿಯವರಲ್ಲಿ ವಿನಂತಿಸುತ್ತಿದ್ದೇನೆ. ಹಲವಾರು ವರ್ಷಗಳ ಹೋರಾಟದ ನಂತರ ಭಗವಾನ್ ರಾಮನ ಮಂದಿರ ನಿರ್ಮಾಣ ಮಾಡುವ ಸುಯೋಗ ಬಂದೊದಗಿದೆ. ನಿಮ್ಮ ಹಟದಿಂದ ಇದಕ್ಕೆ ವಿಘ್ನವಾಗದಂತೆ ನೋಡಿಕೊಳ್ಳಿ ಎಂದು ಟ್ವೀಟಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು