ಭಾನುವಾರ, ಆಗಸ್ಟ್ 1, 2021
27 °C

ಚಿನ್ನ ಕಳ್ಳಸಾಗಣೆ ಪ್ರಕರಣ: ಮತ್ತೆ ಆರು ಮಂದಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇರಳದಲ್ಲಿ ರಾಜತಾಂತ್ರಿಕ ಮಾರ್ಗವನ್ನು ದುರುಪಯೋಗಪಡಿಸಿಕೊಂಡು ಚಿನ್ನ ಕಳ್ಳ ಸಾಗಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತೆ ಆರು ಜನರನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಈವರೆಗೆ ಒಟ್ಟು ಹತ್ತು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳ ಮನೆ ಶೋಧ ನಡೆಸಿದ ಎನ್‌ಐಎ ಹಾರ್ಡ್‌ ಡಿಸ್ಕ್‌, ಕಂಪ್ಯೂಟರ್‌, ಮೊಬೈಲ್‌ ಫೋನ್‌, ಸಿಮ್‌ ಕಾರ್ಡ್‌, ಡಿಜಿಟಲ್‌ ವಿಡಿಯೊ ರೆಕಾರ್ಡರ್‌ ಮತ್ತು ಐದು ಡಿವಿಡಿ, ಬ್ಯಾಂಕ್‌ ಪಾಸ್‌ಬುಕ್‌, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌, ಪ್ರವಾಸ ಮತ್ತು ಗುರುತಿನ ದಾಖಲೆಗಳನ್ನು ವಶಕ್ಕೆ ಪಡೆದಿದೆ.

ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಮೀಸ್‌ ಕೆ.ಟಿ ಜೊತೆಗೆ ಸಂಪರ್ಕ ಹೊಂದಿದ, ಪಿತೂರಿಯ ಭಾಗವಾಗಿದ್ದ ಆರೋಪದಲ್ಲಿ ಎರ್ನಾಕುಲಂನ ಜಲಾಲ್‌ ಎ.ಎಂ ಮತ್ತು ಮಲಪ್ಪುರಂನ ಸೈಯದ್ ಅಳವಿ ಇ ಎಂಬುವರನ್ನು ಜೂನ್‌ 30ರಂದು ಬಂಧಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ. 

ಜೂನ್‌ 31ರಂದು ಮಲಪ್ಪುರಂ ನಿವಾಸಿಗಳಾದ ಮೊಹಮ್ಮದ್ ಶಫಿ ಮತ್ತು ಅಬ್ದು ಪಿ.ಟಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆಗಸ್ಟ್‌ 1ರಂದು ಎರ್ನಾಕುಲಂನ ಮಹಮ್ಮದ್‌ ಅಲಿ ಇಬ್ರಾಹಿಂ, ಮೊಹಮ್ಮದ್‌ ಅಲಿ ಎಂಬುವರನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಮಾಹಿತಿ ನೀಡಿದೆ. 

ಮಹಮ್ಮದ್‌ ಅಲಿ, ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ಸದಸ್ಯನಾಗಿದ್ದಾನೆ.  ಪ್ರಾಧ್ಯಾಪಕರೊಬ್ಬರ ಅಂಗೈ ಕತ್ತರಿಸಿದ ಆರೋಪದಲ್ಲಿ ಈತನನ್ನು ಈ ಹಿಂದೆ ಬಂಧಿಸಲಾಗಿತ್ತು, ಆದರೆ, ಆರೋಪ ಸಾಬೀತಾಗದೆ ಖುಲಾಸೆಗೊಂಡಿದ್ದ. 

ಪ್ರಕರಣವೇನು?: ಜುಲೈ 5ರಂದು ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಲ್ಫ್‌ನಿಂದ ಬಂದ ಏರ್‌ ಕಾರ್ಗೊದಲ್ಲಿದ್ದ ಬ್ಯಾಗ್ ಒಂದರಲ್ಲಿ 15 ಕೋಟಿ ಮೌಲ್ಯದ 30 ಕೆ.ಜಿ. ಬಂಗಾರವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಪ್ರಕರಣದ ತನಿಖೆಯನ್ನು ಕಸ್ಟಮ್ಸ್‌, ಎನ್‌ಐಎ ಹಾಗೂ ಆದಾಯ ತೆರಿಗೆ ಇಲಾಖೆ ಕೈಗೆತ್ತಿಕೊಂಡಿತ್ತು. ಜುಲೈ 11ರಂದು ಎನ್‌ಐಎ, ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಹಾಗೂ ಆಕೆಯ ಜೊತೆಗಿದ್ದ ಸಂದೀಪ್‌ ನಾಯರ್‌ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು