ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ರಾಜಕೀಯ | ಇಂದು ರಾತ್ರಿ ಕಾಂಗ್ರೆಸ್ ಶಾಸಕರ ಸಭೆ ಕರೆದ ಸಿಎಂ ಗೆಹ್ಲೋಟ್

Last Updated 12 ಜುಲೈ 2020, 13:19 IST
ಅಕ್ಷರ ಗಾತ್ರ
ADVERTISEMENT
""

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಣ ಭಿನ್ನಮತ ಉಲ್ಬಣಿಸಿದೆ ಎಂದು ವರದಿಯಾಗುತ್ತಿರುವ ಬೆನ್ನಲ್ಲೇ ಗೆಹ್ಲೋಟ್‌ ಭಾನುವಾರ ರಾತ್ರಿ ಕಾಂಗ್ರೆಸ್‌ ಶಾಸಕರ ಸಭೆ ಕರೆದಿದ್ದಾರೆ.

ರಾಜಸ್ಥಾನ ಕಾಂಗ್ರೆಸ್‌ ಘಟಕದ ಅಧ್ಯಕ್ಷರೂ ಆಗಿರುವ ಸಚಿನ್ ಪೈಲಟ್‌ ಹಾಗೂ ಅವರ ಆಪ್ತ ಶಾಸಕರೊಂದಿಗೆ ದೆಹಲಿಯಲ್ಲಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ಹಲವು ಸಚಿವರು ಹಾಗೂ ಶಾಸಕರು ಬೆಳಗ್ಗಿನಿಂದ ಗೆಹ್ಲೋಟ್‌ ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.

ಇಂದು ರಾತ್ರಿ 9ಗಂಟೆಗೆ ಮುಖ್ಯಮಂತ್ರಿ ಅಧಿಕೃತ ನಿವಾಸದಲ್ಲಿ ಸಭೆ ನಿಗದಿಯಾಗಿರುವುದಾಗಿ ಕಾಂಗ್ರೆಸ್‌ ಮೂಲಗಳಿಂದ ತಿಳಿದು ಬಂದಿದೆ. ಗೆಹ್ಲೋಟ್‌ ಸರ್ಕಾರಕ್ಕೆ ಬೆಂಬಲ ನೀಡಿರುವ ಪಕ್ಷೇತರ ಶಾಸಕರನ್ನೂ ಸಭೆಗೆ ಆಹ್ವಾನಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಸರ್ಕಾರ ಅಸ್ಥಿರಗೊಳಿಸುವ ಸಲುವಾಗಿ ನಮ್ಮ ಶಾಸಕರನ್ನು ಬಿಜೆಪಿ ಸೆಳೆಯುತ್ತಿದೆ. ಕೆಲವು ಶಾಸಕರಿಗೆ ಆಮಿಷವೊಡ್ಡಲಾಗಿದೆ ಎಂದು ಅಶೋಕ್ ಗೆಹ್ಲೋಟ್ ಶನಿವಾರ ಆರೋಪಿಸಿದ್ದರು. ಆರೋಪ ತಳ್ಳಿ ಹಾಕಿರುವ ಬಿಜೆಪಿ, ಈ ಬೆಳವಣಿಗೆಯು ಗೆಹ್ಲೋಟ್‌ ಮತ್ತು ಪೈಲಟ್‌ ನಡುವಣ ಅಧಿಕಾರ ತಿಕ್ಕಾಟವನ್ನು ತೋರುತ್ತಿದೆ ಎಂದಿದೆ.

ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ರಾಜಸ್ಥಾನ ಕಾಂಗ್ರೆಸ್‌ ಸಚಿನ್ ಪೈಲಟ್‌ ಮತ್ತು ಇತರೆ ಮುಖಂಡರು

ರಾಜಸ್ಥಾನ 200 ಶಾಸಕರ ವಿಧಾನಸಭೆಯಾಗಿದ್ದು, ಕಾಂಗ್ರೆಸ್‌ನಿಂದ 107 ಶಾಸಕರಿದ್ದಾರೆ. 13 ಜನ ಪಕ್ಷೇತರ ಶಾಸಕರಿಂದ ಕಾಂಗ್ರೆಸ್‌ ಸರ್ಕಾರ ಬೆಂಬಲ ಪಡೆದಿದೆ. ಕಳೆದ ತಿಂಗಳು ನಡೆದ ರಾಜ್ಯಸಭೆ ಚುನಾವಣೆಯಲ್ಲೂ ಪಕ್ಷೇತರ ಶಾಸಕರು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ನೀಡಿದ್ದರು.

ರಾಜಸ್ಥಾನದಲ್ಲಿ ನಡೆಯುತ್ತಿರುವ ಬೆಳವಣಿಗಗಳ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಹಿರಿಯ ಮುಖಂಡ ಕಪಿಲ್‌ ಸಿಬಲ್‌, 'ನಮ್ಮ ಪಕ್ಷದ ಬಗ್ಗೆ ಚಿಂತೆಯಾಗಿದೆ. ಕುದುರೆಗಳು ನಮ್ಮ ಸ್ಥಿರತೆಯಿಂದ (ಲಾಯದಿಂದ) ಬಿಚ್ಚಿಕೊಂಡು ಹೋದ ನಂತರವೇ ನಾವು ಎಚ್ಚರಗೊಳ್ಳುತ್ತೇವೆಯೇ?' ಎಂದು ಪ್ರಶ್ನಿಸಿದ್ದಾರೆ.

ಗೆಹ್ಲೋಟ್‌ ಅವರ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್‌ ಶಾಸಕರ ಖರೀದಿಗೆ ಕುದುರೆ ವ್ಯಾಪಾರ ನಡೆಸಿದ್ದರೆಂಬ ಆರೋಪದ ಮೇರೆಗೆ ಇಬ್ಬರು ವ್ಯಕ್ತಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ತಂಡವು (ಎಸ್‌ಒಜಿ) ಪ್ರಕರಣ ದಾಖಲಿಸಿ ಅವರನ್ನು ವಶಕ್ಕೆ ಪಡೆದಿತ್ತು. ಸರ್ಕಾರವನ್ನು ಉರುಳಿಸಲು ನಡೆದಿರುವ ಪ್ರಯತ್ನಗಳ ಕುರಿತು ಹೇಳಿಕೆಯನ್ನು ದಾಖಲಿಸುವಂತೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರಿಗೆ ರಾಜಸ್ಥಾನ ಪೊಲೀಸರು ಶುಕ್ರವಾರ ನೋಟಿಸ್‌ ನೀಡಿದ್ದರು.

ಎಸ್‌ಒಜಿ ನೀಡಿರುವ ನೋಟಿಸ್‌ನಿಂದ ಸಚಿನ್‌ ಪೈಲಟ್‌ ಅಸಮಾಧಾನಗೊಂಡಿದ್ದು, ಅದನ್ನು ಅವರು ಅಪಮಾನ ಎಂದೇ ಭಾವಿಸಿದ್ದರು ಎಂದು ಸಚಿನ್‌ ಪೈಲಟ್‌ ಆಪ್ತರ ಮೂಲಗಳಿಂದ ತಿಳಿದು ಬಂದಿದೆ.

ನೋಟಿಸ್‌ಗೆ ಸಂಬಂಧಿಸಿದಂತೆ ಭಾನುವಾರ ಟ್ವೀಟ್‌ ಮಾಡಿರುವ ಗೆಹ್ಲೋಟ್‌, ಹಲವು ಜನರಿಗೆ ನೋಟಿಸ್‌ ತಲುಪಿದೆ ಎಂದು ಒತ್ತಿ ಹೇಳಿದ್ದಾರೆ. ಆದರೆ, ಕೆಲವು ಮಾಧ್ಯಮಗಳು ಅದನ್ನು ತಪ್ಪಾಗಿ ವ್ಯಾಖ್ಯಾನಿಸಿವೆ ಎಂದಿದ್ದಾರೆ.

ಪಕ್ಷೇತರ ಶಾಸಕ ಬಾಬುಲಾಲ್‌ ನಗರ್ ತನಗೆ ಹಾಗೂ ಇತರೆ ಶಾಸಕರಿಗೂ ನೋಟಿಸ್‌ ಬಂದಿರುವುದಾಗಿ ಹೇಳಿದ್ದಾರೆ. ನಮಗೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ನಾಯಕತ್ವದಲ್ಲಿ ನಂಬಿಕೆಯಿದೆ ಹಾಗೂ ಅದನ್ನು ತಿಳಿಸಿದ್ದೇವೆ ಎಂದಿದ್ದಾರೆ.

ಇದೇ ವರ್ಷ ಮಾರ್ಚ್‌ನಲ್ಲಿ ಮಧ್ಯ‍ಪ್ರದೇಶದಲ್ಲಿ ಕಾಂಗ್ರೆಸ್‌ನಿಂದ ಜ್ಯೋತಿರಾದಿತ್ಯ ಸಿಂದಿಯಾ ಬೇರ್ಪಟ್ಟು ಬಿಜೆಪಿ ಸೇರಿದ್ದರು. ಈಗ ಸಿಂದಿಯಾ ಬಿಜೆಪಿ ಸಂಸದರಾಗಿದ್ದು, ಮಧ್ಯಪ್ರದೇಶದಲ್ಲಿ ಕಮಲನಾಥ್ ನೇತೃತ್ವದ ಸರ್ಕಾರ ಪತನಗೊಂಡು ಬಿಜೆಪಿಯ ಶಿವರಾಜ್‌ ಸಿಂಗ್‌ ಚೌಹಾಣ್‌ ರಾಜ್ಯದ ನೇತೃತ್ವ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT