ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಹೋರಾಟದ ಮೊದಲ ರಾಷ್ಟ್ರಮಟ್ಟದ ಸಾಮೂಹಿಕ ನಾಯಕ ಲೋಕಮಾನ್ಯ ತಿಲಕ್‌

Last Updated 1 ಆಗಸ್ಟ್ 2020, 1:23 IST
ಅಕ್ಷರ ಗಾತ್ರ

ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿಸಿದ ಬಾಲ ಗಂಗಾಧರ ತಿಲಕರು ನಿಧನರಾಗಿ ಇಂದಿಗೆ 100 ವರ್ಷಗಳಾಗುತ್ತವೆ. ಈ ಮಹಾನಾಯಕನ ಬದುಕೇ ಒಂದು ಮಹೋನ್ನತ ಸಂದೇಶವಾಗಿತ್ತು. 'ಅಶಾಂತಿಯ ಜನಕ'ನ ಬದುಕಿನ ಮೈಲಿಗಲ್ಲುಗಳು ಮತ್ತು ಸಾಧನೆಯನ್ನು ನೆನಪಿಸಿಕೊಳ್ಳುವ ಯತ್ನ ಇಲ್ಲಿದೆ.

---

ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು. ಅದನ್ನು ಪಡೆದೇ ತೀರುತ್ತೇನೆ ಎಂದು ಇಡೀ ಅಖಂಡ ಭಾರತದ ಜನತೆಗೆ ಪ್ರೇರಣೆ ನೀಡಿದ ಲೋಕಮಾನ್ಯ ಬಾಲಗಂಗಾಧರ ತಿಲಕರು ಹುಟ್ಟಿದ್ದು ಜುಲೈ 23, 1865ರಂದು ಮಹಾರಾಷ್ಟ್ರದ ರತ್ನಗಿರಿಯಲ್ಲಿ. ತಂದೆ ಗಂಗಾಧರ ತಿಲಕರು, ತಾಯಿ ಪಾರ್ವತಿ ಬಾಯಿ. 10ನೇ ವಯಸ್ಸಿಗೆ ತಾಯಿ, 16ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ತಿಲಕರು ಬಿಎ ಎಲ್‌ಎಲ್‌ಬಿ ಶಿಕ್ಷಣವನ್ನು ಕಡು ಬಡತನದಲ್ಲೇ ಮುಗಿಸಿ ಉನ್ನತ ಸರ್ಕಾರಿ ಉದ್ಯೋಗವನ್ನು ತಿರಸ್ಕರಿಸಿ ದೇಶಸೇವೆಗಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮೊದಲನೇ ಸಾಮೂಹಿಕ ನಾಯಕ ತಿಲಕರು. ವೈವಿಧ್ಯಪೂರ್ಣ, ವಿಶಿಷ್ಟ ವ್ಯಕ್ತಿತ್ವ. ಪತ್ರಕರ್ತರಾಗಿ, ಶಿಕ್ಷಣ ತಜ್ಞರಾಗಿ ಲೇಖಕರಾಗಿ, ಸ್ವದೇಶಿ ಉದ್ಯಮಿಯಾಗಿ, ರಾಜಕೀಯ ನೇತಾರರಾಗಿ ಹಿಂದೂ, ಮುಸ್ಲಿಂ ಐಕ್ಯತಾ ಪುರುಷರಾಗಿ ಸಮಾಜ ಸುಧಾರಕರಾಗಿ ರಾಷ್ಟ್ರ ನಾಯಕರಾಗಿ, ಪ್ರಚಂಡ ಜನ ಜಾಗೃತಿ ಮೂಡಿಸಿದ ಅವರ ವ್ಯಕ್ತಿತ್ವಕ್ಕೆ ಸರಿಸಾಟಿಯಿಲ್ಲ.

ಬ್ರಿಟಿಷರ ವಿರುದ್ಧ ಭಾರತದ ಪ್ರಜೆಗಳ ತೀವ್ರ ಆಕ್ರೋಶದ ಜನಕ ಎಂದೇ ಬ್ರಿಟಿಷರು ಇವರನ್ನು ಕರೆದರು. ಬ್ರಿಟಿಷರ ವಿರುದ್ಧ ಭಾರತದಲ್ಲಿ ಮಾತ್ರವಲ್ಲದೇ ಬ್ರಿಟನ್‌ನಲ್ಲಿ ತೀವ್ರ ಹೋರಾಟ ನಡೆಸಿದರು. ಇಂಗ್ಲೆಡ್‌ನ ಚಿರೋಲ್‌ ಎಂಬ ಪತ್ರಕರ್ತರು ಭಾರತಕ್ಕೆ ಭೇಟಿ ನೀಡಿದಾಗ ತಿಲಕರು ನಡೆಸುತ್ತಿದ್ದ ಹೋರಾಟವನ್ನು ಗಮನಿಸಿ ತಿಲಕರ ಬಗ್ಗೆ ಇಲ್ಲಸಲ್ಲದ ಆರೋಪ ಹೊರಿಸಿದಾಗ ಚಿರೋಲ್‌ ಮೇಲೆ ಮಾನಹಾನಿಯ ಮೊಕದ್ದಮೆಯನ್ನು ಹೂಡಿ, 13 ತಿಂಗಳುಗಳ ಕಾಲ ಇಂಗ್ಲೆಂಡ್‌ನಲ್ಲಿ ಮೊಕದ್ದಮೆ ನಡೆಸಿದರು. ಈ ಸಮಯದಲ್ಲಿ ಬ್ರಿಟಿಷ್‌ ಸರ್ಕಾರಕ್ಕೆ ಭಾರತದ ಬ್ರಿಟಿಷ್‌ ಆಡಳಿತ ವೈಖರಿಯನ್ನು ತಿಳಿಸಿ ಹಲವು ಸುಧಾರಣೆಗಳನ್ನು ತರಲು ಕಠಿಣ ಪರಿಶ್ರಮಪಟ್ಟರು. ಇಂಗ್ಲೆಂಡಿನಾದ್ಯಂತ ನೂರಾರು ಸಭೆಗಳನ್ನು ನಡೆಸಿ, ಇಂಗ್ಲೆಂಡಿನ ರಾಜಕೀಯ ನೇತಾರರು ಮುತ್ಸದ್ದಿಗಳು ನೀತಿ ನಿರೂಪಕರು, ಅಧಿಕಾರಿಗಳ, ಗಣ್ಯವ್ಯಕ್ತಿಗಳ ಸದಭಿಪ್ರಾಯವನ್ನು ಭಾರತದ ಪರವಾಗಿ ನಿರೂಪಿಸಿದರು. ಅಲ್ಲಿನ ವಿರೋಧ ಪಕ್ಷ ‘ಕಾರ್ಮಿಕ ಪಕ್ಷ’ದೊಡನೆಯೂ ಸ್ನೇಹ ಸಂಬಂಧಗಳಿಸಿದರು. ಕಾರ್ಮಿಕ ಪಕ್ಷಕ್ಕೆ 2,000 ಪೌಂಡ್‌ ದೇಣಿಗೆಯನ್ನೂ ನೀಡಿದರು.‌

ಪತ್ರಕರ್ತರಾಗಿ ‘ಕೇಸರಿ’ ಮರಾಠಿ ಭಾಷೆಯಲ್ಲಿ ವಾರಪತ್ರಿಕೆ ಮತ್ತು ಆಂಗ್ಲ ಭಾಷೆಯ ವಾರಪತ್ರಿಕೆ ‘ಮರಾಠ’ ಪ್ರಾರಂಭಿಸಿದ ತಿಲಕರು ಮುಂಬಯಿ ಮಹಾನಗರದಿಂದ ಪ್ರಕಟವಾಗುತ್ತಿದ್ದ ‘ರಾಷ್ಟ್ರಮತ’ ಮರಾಠಿ ಪತ್ರಿಕೆಯ ಜತೆಗೂ ಒಡನಾಟ ಇಟ್ಟುಕೊಂಡಿದ್ದರು. ಕೇಸರಿ ಈಗ ದಿನಪತ್ರಿಕೆಯಾಗಿದೆ. ಮರಾಠ ಪತ್ರಿಕೆಯ ಪ್ರಕಟಣೆ ನಿಂತಿದೆ.

ಸ್ವದೇಶಿ, ಸ್ವರಾಜ್ಯ, ಬಹಿಷ್ಕಾರ ಎಂಬ ಮೂರು ಸೂತ್ರವನ್ನು ಭಾರತದ ಪುನರುತ್ಥಾನಕ್ಕಾಗಿ ನೀಡಿದ ತಿಲಕರು ಜೆಮ್‌ಶೆಡ್‌‌ಜಿ ಟಾಟಾರವರ ಜತೆಯಾಗಿ ‘ಬಾಂಬೆ ಸ್ವದೇಶಿ ಸ್ಟೋರ್‍ಸ್‌ ನಿಯಮಿತ' ಎಂಬ ಕಂಪನಿಯನ್ನು ತೆರೆದು ಕಂಪನಿಯ ವ್ಯಾಪಾರ ಮಳಿಗೆಗಳ ಮೂಲಕ ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸಿದರು. ಪುಣೆಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಹಲವು ರಾಜ್ಯಗಳಲ್ಲಿ ತನ್ನ ಬ್ಯಾಂಕಿಂಗ್‌ ವ್ಯವಹಾರವನ್ನೂ ನಡೆಸುತ್ತಿರುವ ದೇಶದ ಅಗ್ರಗಾಮಿ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾದ ಕಾಸ್ಮೋಸ್‌ ಬ್ಯಾಂಕಿನ ಸ್ಥಾಪನೆ, ಆಡಳಿತದಲ್ಲಿ ತಿಲಕರು ಸಕ್ರಿಯ ಪಾತ್ರ ವಹಿಸಿದ್ದರು.

ಸ್ವಾತಂತ್ರ್ಯ ಹೋರಾಟದ ಲಾಲ್‌, ಬಾಲ್‌, ಪಾಲ್‌ ಸುಪ್ರಸಿದ್ಧ ತ್ರಿಮೂರ್ತಿಗಳಲ್ಲಿ ಒಬ್ಬರಾಗಿದ್ದ ತೀವ್ರಗಾಮಿ ನಾಯಕ ತಿಲಕರು ಒಟ್ಟು 88 ತಿಂಗಳ ಕಠಿಣ ಸಮಯ ಕಾರಾಗೃಹದಲ್ಲಿದ್ದಾಗ ಕುಪ್ರಸಿದ್ಧ ಕರಿನೀರಿನ ಶಿಕ್ಷೆಗೆ ಗುರಿಯಾಗಿದ್ದರು. ಅಲ್ಲಿಯೇ ತಮ್ಮ ಪ್ರಖ್ಯಾತ ‘ಗೀತಾ ರಹಸ್ಯ’ ಪುಸ್ತಕವನ್ನು ಬರೆದರು. ಅದಕ್ಕೂ ಮುಂಚೆ ಪುಣೆ ಸಮೀಪದ ಯುರವಾಡಾ ಜೈಲಿನಲ್ಲಿ 18 ತಿಂಗಳ ಕಾರಾಗೃಹ ಶಿಕ್ಷೆಯ ಅವಧಿಯಲ್ಲಿ ‘ಓರಿಯನ್‌’ ಮತ್ತು ‘ವೇದ ಕಾಲ ನಿರ್ಣಯ’ ಎಂಬ ಎರಡು ಮಹೋನ್ನತ ಕೃತಿಗಳನ್ನು ರಚಿಸಿದರು. ತಿಲಕರ ಬಿಡುಗಡೆಗಾಗಿ ಪ್ರಪಂಚದ ಹಲವು ಭಾಗಗಳಿಂದ ವಿದ್ವಾಂಸರು, ರಾಜಕಾರಣಿಗಳು ಭಾರತದ ಬ್ರಿಟಿಷ್‌ ಸರ್ಕಾರಕ್ಕೆ ಮನವಿ ಮಾಡಿದರು ಎಂಬುದು ಉಲ್ಲೇಖಾರ್ಹ.

ಭಾರತೀಯರಿಗೆ ಆಧುನಿಕ ಶಿಕ್ಷಣ ದೊರಕಬೇಕು ಎಂಬ ಹಂಬಲದಿಂದ ಹಲವು ಸಹಕಾರಿಗಳ ಜೊತೆಗೂಡಿ ತಿಲಕರು ‘ನ್ಯೂ ಇಂಗ್ಲಿಷ್‌ ಸ್ಕೂಲ್‌’ ಪ್ರಾರಂಭಿಸಿದರು. ಕೆಲ ವರ್ಷಗಳ ನಂತರ ‘ಡೆಕ್ಕನ್‌ ವಿದ್ಯಾ ಸಂಸ್ಥೆ’ ಪ್ರಾರಂಭಿಸಿದ ತಿಲಕರು ಈ ಸಂಸ್ಥೆಯ ಅಡಿಯಲ್ಲಿ ಪುಣೆಯ ಸುಪ್ರಸಿದ್ಧ ‘ಫರ್ಗುಸನ್‌ ಕಾಲೇಜು’ ಪ್ರಾರಂಭಿಸಿದರು. ಶಿಕ್ಷಣ ಸಂಸ್ಥೆಯ ಆಡಳಿತದಲ್ಲಿ ಪಾರದರ್ಶಕತೆ ಕಡಿಮೆಯಾದಾಗ ತಾವೇ ಪ್ರಾರಂಭಿಸಿದ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದರೆ ಹೊರತು ತಾವು ನಂಬಿ ಅನುಸರಿಸಿದ ತತ್ವ ಆದರ್ಶದೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ.

ಜನಸಾಮಾನ್ಯರಲ್ಲಿ ಪ್ರಖರ ದೇಶಪ್ರೇಮವನ್ನು ಬೆಳೆಸಿ ಸ್ವಾತಂತ್ರ್ಯ ಹೋರಾಟವನ್ನು ತೀವ್ರಗೊಳಿಸಲು ತಿಲಕರು ಪ್ರಾರಂಭಿಸಿದ ಸಾರ್ವಜನಿಕ ಗಣೇಶೋತ್ಸವಕ್ಕೆ ಈಗ 127ನೇ ವರ್ಷದ ಸಂಭ್ರಮ. ಅಂತೆಯೇ ಬೆಳಗಾವಿ ಗಣೇಶೋತ್ಸವಕ್ಕೆ ಬಂದಿದ್ದ ತಿಲಕರು ಎಲ್ಲ ಸಂವಾದ ಸಂಭಾಷಣೆಯನ್ನು ಕನ್ನಡದಲ್ಲಿಯೇ ನಡೆಸಿ ಎಂದು ಕರೆಕೊಟ್ಟಿದ್ದು ಉಲ್ಲೇಖಾರ್ಹ.

ದೇಶದ ಯುವಜನತೆಯಲ್ಲಿ ರಾಷ್ಟ್ರಭಕ್ತಿ, ಸ್ವದೇಶಿ, ಸ್ವಾಭಿಮಾನ ಮುಂತಾದ ಹಲವಾರು ಸಕಾರಾತ್ಮಕ ವಿಷಯಗಳನ್ನು ತುಂಬುತ್ತಿದ್ದ ತಿಲಕರು ಅವರಲ್ಲಿ ಕ್ರೀಡೆ, ಸಾಹಸ ಪ್ರವೃತ್ತಿಯನ್ನು ಬೆಳೆಸಲು ಪ್ರಯತ್ನ ನಡೆಸಿದರು. ಆ ನಿಟ್ಟಿನಲ್ಲಿ ‘ಡೆಕ್ಕನ್‌ ಜಮಖಾನ ಸಂಸ್ಥೆಯನ್ನು’ ಪ್ರಾರಂಭಿಸಿದರು. ಈ ಸಂಸ್ಥೆಯಲ್ಲಿ ಕ್ರಿಕೆಟ್‌, ಟೆನ್ನಿಸ್‌, ಟೇಬಲ್‌ ಟೆನ್ನಿಸ್‌ ಸಹಿತ ಹಲವಾರು ಕ್ರೀಡೆಗಳಲ್ಲಿ ತರಬೇತಿ ಪಡೆದ ಕ್ರೀಡಾಪಟುಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸಿ ಗೆಲುವು ಸಾಧಿಸಿದ್ದಾರೆ.

ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ನೇಪಾಳದಲ್ಲಿ ಬಾಂಬ್‌ಗಳನ್ನು ತಯಾರಿಸುವ ಕಾರ್ಖಾನೆ ಸ್ಥಾಪಿಸಲು ತಮ್ಮ ಅನುಯಾಯಿ ಕೃಷ್ಣಾಜಿ ಪ್ರಭಾಕರ್‌ ಖಾಡಿಲೈರ್‌ ಅವರನ್ನು ಕಳುಹಿಸಿದ ತಿಲಕರು, ಇದೇ ಸಂದರ್ಭದಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ರಾಜಕೀಯ ಆಶ್ರಯ ಪಡೆದ ಲಾಲಾ ಲಜಪತ್‌ರಾಯರ ಹಣಕಾಸಿನ ತೊಂದರೆ ಗಮನಕ್ಕೆ ಬಂದಾಗ ಡಾ. ಅನಿಬೆಸೆಂಟರ ‘ಥಿಯೋಸಫಿಕಲ್‌ ಸೊಸೈಟಿ’ ಮೂಲಕ ಒಟ್ಟು 6,500 ಡಾಲರ್‌ ಮೊತ್ತವನ್ನು ಲಾಲಾ ಲಜಪತ್‌ರಾಯರಿಗೆ ಕಳುಹಿಸಿದರು. ಇದೇ ಸಂದರ್ಭದಲ್ಲಿ ಅನಿಬೆಸೆಂಟ್, ಜಿನ್ನಾ ಮುಂತಾದವರ ಜೊತೆ ಸೇರಿ 1916ರ ಏಪ್ರಿಲ್‌ನಲ್ಲಿ ಬೆಳಗಾವಿಯಲ್ಲಿ ‘ಭಾರತೀಯ ಹೋಮ್‌ ರೂಲ್‌ ಲೀಗ್‌’ ಪ್ರಾರಂಭಿಸಿದರು.

ಪುಣೆ ನಗರ ಪಾಲಿಕೆ ಸದಸ್ಯ, ಮಹಾರಾಷ್ಟ್ರ ವಿಧಾನಸಭೆಯ ಸದಸ್ಯರಾಗಿದ್ದ ತಿಲಕರು ಅಪಾರವಾದ ತಮ್ಮ ಪರಿಶ್ರಮದಿಂದ ಹಲವಾರು ಜನೋಪಕಾರಿ ಕಾರ್ಯಗಳನ್ನು ಕಾರ್ಯಗತಗೊಳಿಸಿದರು. 19ನೇ ಶತಮಾನದ ಕೊನೆಯ ದಶಕದಲ್ಲಿ ಸಾಂಕ್ರಾಮಿಕ ರೋಗ ‘ಪ್ಲೇಗ್‌’ ಪುಣೆ ನಗರವನ್ನು ಆವರಿಸಿಕೊಂಡಾಗ ತಿಲಕರು ಆಸ್ಪತ್ರೆಗಳನ್ನೂ ಪ್ರಾರಂಭಿಸಿ ತಮ್ಮ ಸಹಕಾರಿಗಳ ಜೊತೆ ರೋಗಿಗಳ ಶುಶ್ರೂಷೆ ಮಾಡಿದ್ದು ಈ ಸಂದರ್ಭದಲ್ಲಿ ಬ್ರಿಟಿಷ್‌ ಆಡಳಿತದ ಉದಾಸೀನ ಧೋರಣೆಯನ್ನು ಕೇಸರಿ, ಮರಾಠ ಪತ್ರಿಕೆಯಲ್ಲಿ ಖಂಡಸಿ ಜನ ಜಾಗೃತಿ ಮೂಡಿಸಿದ್ದು, ಪ್ಲೇಗ್‌ ಆಯುಕ್ತ ಬ್ರಿಟಿಷ್‌ ದುಷ್ಟ ಅಧಿಕಾರಿಯ ಅಟ್ಟಹಾಸ, ಅಮಾನವೀಯ ವರ್ತನೆಯಿಂದ ಪುಣೆಯ ಜನರಿಗೆ ಮುಕ್ತಿ ದೊರಕಿಸಿದ ಛಾಪೇಕಲ್‌ ಸಹೋದರರ ಪರವಾಗಿ ನಿಂತ ತಿಲಕರು ಆಶಯಗಳು ಈಗ ಭಾರತ ಸೇರಿದಂತೆ ಎಲ್ಲ ಕಡೆ ಪಸರಿಸಿರುವ ಕೊರೊನಾ ವೈರಸ್‌ ನಿಯಂತ್ರಣಕ್ಕೂ ಅಧಿಕಾರಶಾಹಿ, ರಾಜಕೀಯಶಾಹಿಗೆ ಸೂಕ್ತ ಮಾರ್ಗದರ್ಶನ ನೀಡುವಂತಿದೆ.

ಸಮಾಜ ಸುಧಾರಣೆಯ ಮಾರ್ಗದಲ್ಲಿ ಬಾಲ್ಯವಿವಾಹಕ್ಕೆ ನಿಷೇಧ, ವಿಧವಾ ವಿವಾಹಕ್ಕೆ ಪ್ರೋತ್ಸಾಹ, ಸ್ವದೇಶಿ ಉದ್ಯಮಕ್ಕೆ ಪ್ರೋತ್ಸಾಹ ಮತ್ತು ಆದ್ಯತೆ ತಿಲಕರಿಂದ ಪ್ರೇರಣೆ ಪಡೆದ ಅವರ ಸಹಯೋಗಿ ಬಾಲಕೃಷ್ಣ ಶಿವರಾಮ ಮೂಂಜೆ ದೇಶದ ಮೊದಲನೆ ಸೈನಿಕ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು. 1914 ಜೂನ್‌ 16ರಂದು ಕಠಿಣ ಕಾರಾಗೃಹ ಶಿಕ್ಷೆಯನ್ನು ಪೂರ್ಣಗೊಳಿಸಿ ಬರ್ಮಾದ ಮಂಡಾಲೆ ಜೈಲಿನಿಂದ ಪುಣೆಗೆ ವಾಪಾಸ್‌ ಬಂದ ತಿಲಕರಿಗೆ ಪುಣೆಯ ಜನತೆ, ಹಲವು ಸಂಘ ಸಂಸ್ಥೆಗಳು ಸಾರ್ವಜನಿಕ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದರು. 1916ರಲ್ಲಿ ತಿಲಕರಿಗೆ 60 ವರ್ಷ ಸಂದ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿ ಒಂದು ಲಕ್ಷ ರೂಗಳ ನಿಧಿಯನ್ನು ಸಲ್ಲಿಸಿದರು. ವಿಜೃಂಭಣೆಯ ಸಾರ್ವಜನಿಕ ಸಮಾರಂಭದಲ್ಲಿ ತಿಲಕರು ಪೂರ್ಣ ಒಂದು ಲಕ್ಷ ಹಣವನ್ನು ರಾಷ್ಟ್ರೀಯ ಕಾರ್ಯಗಳಿಗೆ ಉಪಯೋಗಿಸಲು ಕೊಟ್ಟು ಬಿಟ್ಟರು. ಬ್ರಿಟಿಷ್‌ ಶತ್ರು ರಾಷ್ಟ್ರಗಳ ಮಿತ್ರತ್ವ ಸಾಧಿಸಲು ತಿಲಕರು ಮಂಡಾಲೆ ಜೈಲಿನಲ್ಲಿದ್ದಾಗ ಜರ್ಮನ್‌ ಮತ್ತು ಫ್ರೆಂಚ್‌ ಭಾಷೆಯನ್ನು ಕಲಿತಿದ್ದು ಅವರ ದೂರದರ್ಶಿತ್ವದ ಚಿಂತನೆಗೆ ಸಾಕ್ಷಿ. ಅಂತೆಯೇ ಅಸ್ಪೃಶ್ಯತೆಯ ವಿರುದ್ಧವೂ ತಿಲಕರು ಹೋರಾಟ ನಡೆಸಿದ್ದರು. ತಿಲಕರ ಮಗ ಶ್ರೀಧರ ತಿಲಕ್‌ ಅಂಬೇಡ್ಕರ್‌ ಜೊತೆ ಜೊತೆಯಲ್ಲಿ ಅಸ್ಪೃಶ್ಯತೆ ವಿರುದ್ಧ ದೀರ್ಘಕಾಲ ಆಂದೋಲನ. ಹೋರಾಟ ನಡೆಸಿದರು.

ಇಂಗ್ಲೆಡ್‌ನಲ್ಲಿ 1906ರ ಚುನಾವಣೆ ಗೆದ್ದ ಲಿಬರಲ್‌ ಪಾರ್ಟಿ ಭಾರತದ ಬ್ರಿಟಿಷರ ಆಡಳಿತದಲ್ಲಿ ಸುಧಾರಣೆ ತರಲು ಮುಂದಾಗಿ, ಭಾರತದ ಆಡಳಿತದಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಕ್ರಮ ತೆಗೆದುಕೊಂಡಿತು. ಜೊತೆಜೊತೆಯಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರವನ್ನು ನೀಡಿತು. ಹಿಂದೂ ಮುಸ್ಲಿಂಮರಲ್ಲಿ ಪ್ರತ್ಯೇಕತಾ ಮನೋಭಾವದ ಭಾವನೆಗಳನ್ನು ತೀವ್ರಗೊಳಿಸುವ ಈ ಕಾರ್ಯಸೂಚಿಯಿಂದ ಬ್ರಿಟಿಷ್‌ ಅಧಿಕಾರಶಾಹಿ ಭಾರತದ ಸಮಗ್ರತೆ ಮತ್ತು ಏಕತೆಯನ್ನು ದುರ್ಬಲಗೊಳಿಸಲು ದೀರ್ಘಕಾಲೀನದ ಕಾರ್ಯತಂತ್ರ ರೂಪಿಸಿತ್ತು. ಇದನ್ನು ಸಮರ್ಥವಾಗಿ ಅನುಪಯುಕ್ತವಾಗಿಸುವ ರಾಷ್ಟ್ರೀಯತೆಯ ಕಾರ್ಯತಂತ್ರ ರೂಪಿಸಿದ ತಿಲಕರು, 1916ರಲ್ಲಿ ಲಖನೌ ನಗರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮುಸ್ಲಿಂ ಲೀಗ್‌ನ ಜತೆ ಕಾಂಗ್ರೆಸ್‌ನ ಒಪ್ಪಂದ ಮಾಡುತ್ತಾರೆ. ‘ಲಖನೌ ಪಾಳ್ವೆ‘ ಎಂದೇ ಪ್ರಸಿದ್ಧವಾಗಿರುವ ಈ ಒಪ್ಪಂದ ತಿಲಕರ ದೂರದರ್ಶಿತ್ವದ ಚಿಂತನೆಗೆ ಸಾಕ್ಷಿಯಾಗಿದೆ.

ಹೀಗೆ ಬದುಕಿದ 64 ವರ್ಷಗಳಲ್ಲೂ ಸರ್ವಜನ ಹಿತಾಯ ಸರ್ವಜನ ಸುಖಾಯ ಎಂಬ ಆದರ್ಶವನ್ನು ಚಾಚೂತಪ್ಪದೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅನುಷ್ಠಾನ ಮಾಡಿ ಹಲವು ಹತ್ತಾರು ಲಕ್ಷ ಜನಗಳಿಗೆ ಪ್ರೇರಣಾ ಸ್ವರೂಪದ ಪ್ರತಿರೂಪವೇ ಆಗಿದ್ದ ತಿಲಕರು ಕೊನೆಗಾಲದಲ್ಲಿ ದೈಹಿಕವಾಗಿ ತುಂಬಾ ಜರ್ಝರಿತರಾಗಿದ್ದರು. ಆರೋಗ್ಯ ಕ್ಷೀಣಿಸಿ ಆಗಸ್ಟ್ 1, 1920ರಂದು ವಿಧಿವಶರಾದರು. ಗಾಂಧೀಜಿಯವರ ಪೂರ್ಣ ಶಾಂತಿಯುತವಾದ ಹೋರಾಟವನ್ನು ಒಪ್ಪಿಕೊಳ್ಳದ ತಿಲಕರು ದೊಡ್ಡಮಟ್ಟದ ಪೂರ್ಣಪ್ರಮಾಣದ ಅಹಿಂಸಾತ್ಮಕ ಹೋರಾಟ ‘ಅಸಹಕಾರ ಚಳವಳಿ’ ಪ್ರಾರಂಭವಾಗುವ ಮೊದಲೇ ತಮ್ಮ ರಾಷ್ಟ್ರಯಾತ್ರೆಯನ್ನು ಮುಗಿಸಿದರು.

ಅತ್ಯಂತ ಆದರ್ಶದ, ಸರಳ, ಸೌಜನ್ಯದ ಜೀವನ ನಡೆಸಿದ ತಿಲಕರು ತಮ್ಮ ಸ್ವಂತದ್ದೆಂದು ಯಾವ ಆಸ್ತಿಯನ್ನೂ ಮಾಡಿಕೊಳ್ಳಲಿಲ್ಲ. ನಾವು ಕಸ್ತೂರಬಾ ಗಾಂಧಿ, ಕಮಲಾ ನೆಹರೂ ಹೆಸರು ಕೇಳಿದ್ದೇವೆ. ಆದರೆ ತಿಲಕರ ಧರ್ಮಪತ್ನಿ ಸತ್ಯಭಾಮಾ ಅವರ ಹೆಸರನ್ನು ಕೇಳಿರುವುದಿಲ್ಲ. ಪತಿಗೆ ತಕ್ಕ ಸಹಧರ್ಮಿಣಿ ಅವರು. ತಿಲಕರ ಹೋರಾಟದ ಬದುಕಿನ ಪ್ರತಿ ಹೆಜ್ಜೆಯಲ್ಲೂ ತಮ್ಮ ಸಹಯೋಗ ನೀಡಿದ ಅವರು, ತಿಲಕರು ದೂರದ ಮಂಡಾಲೆ ಜೈಲಿನಲ್ಲಿ ಕರಿನೀರಿನ ಶಿಕ್ಷೆಗೆ ಒಳಗಾಗಿದ್ದಾಗ ಕೊನೆಯುಸಿರೆಳೆದರು. ಆಭರಣ, ರೇಷ್ಮೆ ಸೀರೆ ಸೇರಿದಂತೆ ಯಾವುದೇ ಐಹಿಕ ವಸ್ತುಗಳಿಗೆ ಆಸೆಪಡದ ಅವರು, ಆದರ್ಶಮಯವಾದ ಜೀವನ ನಡೆಸಿದವರು. ಅವರ ಕೊನೆ ಆಸೆ, ಆಗ ಜೈಲಿನಲ್ಲಿ ಇದ್ದ ತಮ್ಮ ಪತಿ ತಿಲಕರನ್ನು ಒಮ್ಮೆ ಭೇಟಿ ಮಾಡಬೇಕೆಂಬುದು. ಅದೂ ಕೂಡ ನೆರವೇರಲಿಲ್ಲ.

ಗಾಂಧೀಜಿಯವರು 1914ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸ್ ಬಂದಾಗ, ಮೊದಲಿಗೆ ತಿಲಕರನ್ನು ಭೇಟಿಯಾದಾಗ ‘ತಿಲಕರು ಹಿಮಾಲಯದಷ್ಟು ವಿಶಾಲ ಎತ್ತರದ ವ್ಯಕ್ತಿತ್ವದ ಸಾಧಕರು. ಅವರಷ್ಟು ಎತ್ತರಕ್ಕೆ ಏರಲು ನನಗೆ ಸಾಧ್ಯವಾಗುವುದಿಲ್ಲ’ ಎಂದು ಹೇಳಿದ್ದರು.

(ಲೇಖಕರು ರಾಷ್ಟ್ರ ಗೌರವ ಸಂರಕ್ಷಣ ಪರಿಷತ್‌ಅಧ್ಯಕ್ಷರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT