ಗುರುವಾರ , ಆಗಸ್ಟ್ 5, 2021
23 °C
ಬೆಡ್‌ರೂಂನಲ್ಲಿ ಉಪಕರಣ ಅಳವಡಿಸುವ ಸಂಪೂರ್ಣ ಅಧಿಕಾರ ಇಲ್ಲ

ಬೆಡ್‌ರೂಂ ಸಾಕ್ಷ್ಯಕ್ಕೆ ಅವಕಾಶ ಇಲ್ಲ : ದೆಹಲಿ ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದಾಂಪತ್ಯ ಜೀವನದಲ್ಲಿ ವ್ಯತ್ಯಾಸಗಳಾದಾಗ ಸಾಕ್ಷ್ಯಗಳನ್ನು ಸಂಗ್ರಹಿಸಲು ಬೆಡ್‌ರೂಮ್‌ ಮತ್ತು ಖಾಸಗಿ ಸ್ಥಳಗಳಲ್ಲಿ ರಹಸ್ಯವಾಗಿ ಉಪಕರಣಗಳನ್ನು ಅಳವಡಿಸುವುದನ್ನು ಒಪ್ಪಲಾಗದು ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

ಸಮಾಜದಲ್ಲಿ ಮದುವೆಗೆ ಒಂದು ಪವಿತ್ರ ಸಂಬಂಧ ಕಲ್ಪಿಸಲಾಗಿದೆ. ದಾಂಪತ್ಯ ಜೀವನದಲ್ಲಿ ವ್ಯತ್ಯಾಸಗಳಿದ್ದರೂ ಹಲವು ವರ್ಷಗಳ ಕಾಲ ಒಟ್ಟಾಗಿ ಬದುಕುವುದು ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿದೆ. ಆದರೆ, ಕಾನೂನುಬಾಹಿರ ರೀತಿಯಲ್ಲಿ ಸಾಕ್ಷ್ಯ ಸಂಗ್ರಹಿಸಲು ಪತಿ ಅಥವಾ ಪತ್ನಿಗೆ ಸಂಪೂರ್ಣ ಸ್ವಾತಂತ್ರ್ಯ ಅಥವಾ ಅಧಿಕಾರ ಇಲ್ಲ. ಇದರಿಂದ, ಕೌಟುಂಬಿಕ ಸಂಬಂಧಗಳಿಗೆ ಧಕ್ಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಯಾವುದೇ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯದಲ್ಲಿ ಮಂಡಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಪ್ರಮುಖ ಅಂಶವನ್ನೇ ಪರಿಗಣಿಸಿ ಕಾನೂನುಬಾಹಿರ ಸಾಕ್ಷ್ಯಗಳ ಸಂಗ್ರಹಕ್ಕೂ ಮುಂದಾಗಬಾರದು ಎಂದು ನ್ಯಾಯಾಲಯ ಹೇಳಿದೆ.

ವಿಚ್ಛೇದನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿ.ಡಿಯಲ್ಲಿ ಸಾಕ್ಷ್ಯ ಸಲ್ಲಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪು ಪ್ರಶ್ನಿಸಿ ಪತಿಯಿಂದ ದೂರವಾಗಿದ್ದ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. 

ಸಿ.ಡಿಯಲ್ಲಿ ಸಾಕ್ಷ್ಯ ಸಲ್ಲಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ. ಆದರೆ, ಇದರಲ್ಲಿನ ಅಂಶಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದಿಂದ ಪರಿಶೀಲನೆಗೆ ಒಳಪಡಿಸಬೇಕು ಎಂದು ಇದೇ ಸಂದರ್ಭದಲ್ಲಿ ಸೂಚಿಸಿದೆ. ನ್ಯಾಯಮೂರ್ತಿ ಅನೂಪ್‌ ಜೆ. ಭಂಭಾನಿ ಈ ಆದೇಶ ನೀಡಿದ್ದಾರೆ.

‘ತನ್ನ ಸ್ನೇಹಿತೆಯೊಂದಿಗೆ ಪತ್ನಿ ಮಾತನಾಡಿರುವ ಆಡಿಯೊ–ವಿಡಿಯೊ ಇರುವ ಸಿ.ಡಿ ತನ್ನ ಬಳಿ ಇದೆ. ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಇದರಲ್ಲಿದೆ. ಇದೊಂದು ಕ್ರೂರತನ ಪರಮಾವಧಿ. ಹೀಗಾಗಿ, ವಿಚ್ಛೇದನ ಪಡೆಯುತ್ತಿದ್ದೇನೆ’ ಎಂದು ಪತಿ ಪ್ರತಿಪಾದಿಸಿದ್ದರು.
ಮಾತುಕತೆಯನ್ನು ರಹಸ್ಯವಾಗಿ ದಾಖಲಿಸಿಕೊಂಡಿರುವುದು ತನ್ನ ಖಾಸಗಿತನದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಪತ್ನಿ ವಾದ ಮಂಡಿಸಿದ್ದರು. ಆದರೆ, ನ್ಯಾಯಾಲಯ ಪತ್ನಿಯ ವಾದವನ್ನು ಸಂಪೂರ್ಣವಾಗಿ ಪರಿಗಣಿಸಲಿಲ್ಲ.
‘ಅರ್ಜಿದಾರರಿಗೆ ಖಾಸಗಿತನದ ಹಕ್ಕಿದೆ. ಇದೇ ಸಂದರ್ಭದಲ್ಲಿ ಪ್ರತಿವಾದಿಯ ಹಕ್ಕುಗಳನ್ನು ಸಹ ಕಾಪಾಡಬೇಕು. ಸಿ.ಡಿ ರೂಪದಲ್ಲಿ ಸಲ್ಲಿಸುವ ಸಾಕ್ಷ್ಯಗಳು ಸಹ ಈ ಪ್ರಕರಣದ ಬಗ್ಗೆ ತೀರ್ಪು ನೀಡಲು ಸಹಕಾರಿಯಾಗಲಿವೆ’ ಎಂದು ನ್ಯಾಯಾಲಯ ಹೇಳಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು