ಗುರುವಾರ , ಆಗಸ್ಟ್ 5, 2021
23 °C
ಕಳೆದ ಐದು ವರ್ಷಗಳಲ್ಲಿ ಸಂಭವಿಸಿದ ಅತಿ ಭೀಕರ ದುರಂತ

ಮ್ಯಾನ್ಮಾರ್‌ ಭೂ ಕುಸಿತ: 126 ಮಂದಿ ಸಾವು

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಯಾಂಗೂನ್‌: ಉತ್ತರ ಮ್ಯಾನ್ಮಾರ್‌ ಹವಳ ಗಣಿ ಪ್ರದೇಶದಲ್ಲಿ ಗುರುವಾರ ಭೂ ಕುಸಿತ ಸಂಭವಿಸಿದ್ದು, 126 ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ. 

ಕಚಿನ್ ರಾಜ್ಯದ ಪಕೆಂಟ್‌ ಪ್ರದೇಶ‌ದಲ್ಲಿ ಈ ದುರಂತ ಸಂಭವಿಸಿದ್ದು, ಮೃತರ ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ಭಾರಿ ಮಳೆಯಿಂದ ಉಂಟಾದ ಭೂಕುಸಿತಕ್ಕೆ ಮೃತದೇಹಗಳು ಮಣ್ಣಿನಲ್ಲಿ ಹುದುಗಿ ಹೋಗಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. 

‘ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಹಲವರು ಮಣ್ಣಿನಲ್ಲಿ ಸಿಲುಕಿಕೊಂಡಿದ್ದಾರೆ. ಬಹುತೇಕರು ನಾಪತ್ತೆಯಾಗಿದ್ದಾರೆ’ ಎಂದು ಮಾಹಿತಿ ಸಚಿವಾಲಯದ ಸ್ಥಳೀಯ ಅಧಿಕಾರಿ ಟಾರ್ ಲಿನ್ ಮಾಂಗ್ ತಿಳಿಸಿದ್ದಾರೆ. 

‘ಕನಿಷ್ಠ 100 ಮಂದಿ ಕಾಣೆಯಾಗಿದ್ದು, 30 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿಕೂಲ ವಾತಾವರಣ ಇರುವುದರಿಂದ ಗುರುವಾರ ಗಣಿಗಾರಿಕೆ ಪ್ರದೇಶಕ್ಕೆ ಹೋಗದಂತೆ ಸ್ಥಳೀಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಮೃತರಲ್ಲಿ ಬಹುತೇಕರು ಗುತ್ತಿಗೆ ಕಾರ್ಮಿಕರಾಗಿರುವುದರಿಂದ  ಅವರ ಕುಟುಂಬಕ್ಕೆ ಪರಿಹಾರ ದೊರಕುವುದು ಅನುಮಾನ’ ಎಂದು ಸ್ಥಳೀಯ ಸಂಘಟನೆಯೊಂದರ ಸದಸ್ಯೆ ಥಾನ್‌ ಹ್ಲೇಂಗ್‌ ತಿಳಿಸಿದ್ದಾರೆ. 

ಅನಾಹುತದಿಂದ ತಪ್ಪಿಸಿಕೊಳ್ಳಲು ಕಾರ್ಮಿಕರು ಓಡುತ್ತಿದ್ದು, ಸುನಾಮಿಯಂತೆ ಅವರ ಮೇಲೆ ಮಣ್ಣಿನ ರಾಶಿ ಅಪ್ಪಳಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಳೆದ ಐದು ವರ್ಷಗಳಲ್ಲಿ ಸಂಭವಿಸಿರುವ ಭೀಕರ ದುರಂತ ಇದಾಗಿದೆ. 2015ರಲ್ಲಿ ಸಂಭವಿಸಿದ್ದ ಭೂ ಕುಸಿತದಲ್ಲಿ 100 ಮಂದಿ ಮೃತಪಟ್ಟಿದ್ದರು.

ಗಣಿ ಕಾರ್ಮಿಕರ ಸುರಕ್ಷತೆಗಾಗಿ ರೂಪಿಸಲಾಗಿರುವ ಮುಂಜಾಗ್ರತಾ ಕ್ರಮಗಳನ್ನು ಕಂಪನಿಗಳು ಪಾಲಿಸುತ್ತಿಲ್ಲ. ಅಲ್ಲದೆ, ಗಣಿಗಾರಿಕೆ ಪ್ರದೇಶಗಳಲ್ಲಿ ಭೂ ಕುಸಿತ ಹೆಚ್ಚುತ್ತಿರುವುದರಿಂದ ಕಾರ್ಮಿಕರು ಸಾವಿಗೀಡಾಗುತ್ತಿದ್ದಾರೆ. ಮ್ಯಾನ್ಮಾರ್‌ದ ಹವಳಗಳಿಗೆ ಚೀನಾದಲ್ಲಿ ಹೆಚ್ಚಿನ ಬೇಡಿಕೆಯಿರುವ ಕಾರಣ ಇಲ್ಲಿ ಹವಳ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಸ್ಥಳೀಯ ಹೋರಾಟಗಾರರು ದೂರುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು