ಗುರುವಾರ , ಆಗಸ್ಟ್ 5, 2021
28 °C
ಕೋವಿಡ್‌–19: ಮೂರು ತಿಂಗಳವರೆಗೆ ಔಷಧ ಸಂಗ್ರಹಿಸಿಟ್ಟಿಕೊಂಡಿರುವ ಅಮೆರಿಕ

‘ರೆಮ್‌ಡೆಸಿವಿರ್‌’ ತಯಾರಿಸಲು ಭಾರತದ ಕಂಪನಿಗಳಿಗೆ ಲೈಸನ್ಸ್‌ ನೀಡಿ: ಸಿಪಿಐ(ಎಂ)

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ನಿಯಂತ್ರಿಸಲು ಉಪಯೋಗವಾಗುವ ಎಲ್ಲ ಔಷಧಗಳನ್ನು ಅಮೆರಿಕ ಸಂಗ್ರಹಿಸಿಟ್ಟುಕೊಂಡಿದೆ. ಹೀಗಾಗಿ, ಕೇಂದ್ರ ಸರ್ಕಾರ ಜೆನೆರಿಕ್‌ ’ರೆಮ್‌ಡೆಸಿವಿರ್‌’ ತಯಾರಿಸಲು ಭಾರತೀಯ ಫಾರ್ಮಾ ಕಂಪನಿಗಳಿಗೆ ಲೈಸನ್ಸ್‌ ನೀಡಬೇಕು ಎಂದು ಸಿಪಿಐ(ಎಂ) ಒತ್ತಾಯಿಸಿದೆ.

ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ‘ಗಿಲೆಯಾಡ್‌ ಸೈನ್ಸಸ್‌’ನ ’ರೆಮ್‌ಡೆಸಿವಿರ್‌’ ಪರಿಣಾಮಕಾರಿಯಾಗಿದೆ. ಆದರೆ, ಅಮೆರಿಕ ಮುಂದಿನ ಮೂರು ತಿಂಗಳವರೆಗೆ ಸಾಕಾಗುವಷ್ಟು ಗಿಲೆಯಾಡ್‌ ಸೈನ್ಸಸ್‌ನಿಂದ ಔಷಧವನ್ನು ಸಂಗ್ರಹಿಸಿಟ್ಟುಕೊಂಡಿದೆ. ಇದರಿಂದ, ಉಳಿದ ಯಾವುದೇ ದೇಶದಲ್ಲಿ ’ರೆಮ್‌ಡೆಸಿವಿರ್‌’ ಲಭ್ಯವಾಗುತ್ತಿಲ್ಲ ಎನ್ನುವುದನ್ನು ಮಾಧ್ಯಮಗಳು ವರದಿ ಮಾಡಿವೆ ಎಂದು ಅದು ತಿಳಿಸಿದೆ.

ಅಮೆರಿಕದಲ್ಲಿ ಐದು ದಿನಗಳ ಅವಧಿಯ ‘ರೆಮ್‌ಡೆಸಿವಿರ್‌’ ಚಿಕಿತ್ಸೆಗೆ 3000 ಡಾಲರ್‌ (₹2.25 ಲಕ್ಷ) ಪಡೆಯಲಾಗುತ್ತಿದೆ. ಗಿಲಿಯಾಡ್‌ ಸೈನ್ಸಸ್‌ನ ಲೈಸನ್ಸ್‌ ಅಡಿಯಲ್ಲೇ ಔಷಧವನ್ನು ತಯಾರಿಸಲು ಭಾರತದ ಐದು ಕಂಪನಿಗಳು ಮಾತುಕತೆಯಲ್ಲಿ ತೊಡಗಿವೆ. ಭಾರತದಲ್ಲಿ ಈ ಔಷಧವನ್ನು ತಯಾರಿಸಿದರೆ ರಿಯಾಯಿತಿ ದರದಲ್ಲಿ ದೊರೆಯಲಿದೆ. ಐದು ದಿನಗಳ ಚಿಕಿತ್ಸೆಗೆ 400 ಡಾಲರ್‌ ಅಥವಾ ₹30,000ರಿಂದ 35,000ವರೆಗೆ ಲಭ್ಯವಾಗಲಿದೆ ಎಂದು ಸಿಪಿಐ(ಎಂ) ಪ್ರತಿಪಾದಿಸಿದೆ.

‘ರೆಮ್‌ಡೆಸಿವಿರ್‌’ ತಯಾರಿಸಲು ತಗಲುವ ವೆಚ್ಚವೂ ಕಡಿಮೆ ಇದೆ. ಆದರೆ, ಈ ಔಷಧ ತಯಾರಿಸಲು ‘ಗಿಲಿಯಾಡ್‌ ಸೈನ್ಸಸ್‌’ ಏಕಸ್ವಾಮ್ಯ ಪೆಟೆಂಟ್‌ ಹೊಂದಿರುವುದರಿಂದ ಇಡೀ ಜಗತ್ತಿನ ಮೇಲೆ ಸವಾರಿ ಮಾಡಲು ಹೊರಟಿದೆ. ವೆಚ್ಚಕ್ಕಿಂತ ನೂರು ಪಟ್ಟು ಹೆಚ್ಚು ಬೆಲೆಯನ್ನು ನಿಗದಿಪಡಿಸಿ ವಸೂಲಿಯಲ್ಲಿ ತೊಡಗಿದೆ ಎಂದು ಆರೋಪಿಸಿದೆ.

ಭಾರತದ ರೋಗಿಗಳಿಗೆ ಈ ಔಷಧ ಸಕಾಲಕ್ಕೆ ಲಭ್ಯವಾಗುತ್ತಿಲ್ಲ. ಒಂದು ವೇಳೆ ದೊರೆತರೂ ದುಬಾರಿ ಬೆಲೆ ತೆರಬೇಕಾಗುತ್ತದೆ. ಅಮೆರಿಕ ಸರ್ಕಾರ ಗಿಲಿಯಾಡ್‌ ಸೈನ್ಸಸ್‌ನಿಂದ ಈಗಾಗಲೇ ಎಲ್ಲ ಔಷಧವನ್ನು ಖರೀದಿಸಿದೆ. ಹೀಗಾಗಿ, ಪೆಟೆಂಟ್‌ ಕಾಯ್ದೆ ಅಡಿಯಲ್ಲಿ ಭಾರತೀಯ ಫಾರ್ಮಾ ಕಂಪನಿಗಳಿಗೂ ಈ ಔಷಧವನ್ನು ತಯಾರಿಸಲು ಅವಕಾಶ ನೀಡಬೇಕು. ಅನುಮತಿ ನೀಡುವ ಹಕ್ಕು ಭಾರತಕ್ಕೆ ಇದೆ. ಇದರಿಂದ, ರೋಗಿಗಳಿಗೆ ಕೈಗೆಟಕುವ ಬೆಲೆಯಲ್ಲಿ ಈ ಔಷಧ ದೊರೆಯಲಿದೆ ಎಂದು ಪ್ರತಿಪಾದಿಸಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು