ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರವರ ರಾವ್‌ಗೆ ಅನಾರೋಗ್ಯ: ಕುಟುಂಬದ ಕಳವಳ

ಅತ್ಯುತ್ತಮ ಚಿಕಿತ್ಸೆ ನೀಡಲು ಒತ್ತಾಯ
Last Updated 12 ಜುಲೈ 2020, 11:01 IST
ಅಕ್ಷರ ಗಾತ್ರ

ಮುಂಬೈ: ಕವಿ ಮತ್ತು ಸಾಮಾಜಿಕ ಕಾರ್ಯಕರ್ತ ವರವರ ರಾವ್‌ ಅವರ ಆರೋಗ್ಯ ತೀವ್ರ ಹದಗೆಡುತ್ತಿದೆ ಎಂದು ಕುಟುಂಬದ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

81 ವರ್ಷದ ವರವರ ರಾವ್‌ ಅವರು ಸದ್ಯ ನವಿ ಮುಂಬೈನ ತಳೋಜಾ ಜೈಲಿನಲ್ಲಿದ್ದಾರೆ. ಎಲ್ಗಾರ್‌ ಪರಿಷತ್‌ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದಾರೆ.

‘ಮೇ 28ರಂದು ಮುಂಬೈನ ಜೆ.ಜೆ. ಆಸ್ಪತ್ರೆಗೆ ದಾಖಲಿಸಿದ ಬಳಿಕ ವರವರಾವ್‌ ಆರೋಗ್ಯ ತೀವ್ರ ಹದಗೆಟ್ಟಿದೆ. ಆರೋಗ್ಯದಲ್ಲಿ ಸುಧಾರಣೆಯಾಗದಿದ್ದರೂ ಮೂರು ದಿನಗಳ ನಂತರ ಆಸ್ಪತ್ರೆಯಿಂದ ಮತ್ತೆ ಜೈಲಿಗೆ ಅವರನ್ನು ಕರೆತರಲಾಯಿತು’ ಎಂದು ರಾವ್‌ ಅವರ ಪತ್ನಿ ಮತ್ತು ಪುತ್ರಿಯರು ಹಾಗೂ ಕುಟುಂಬದ ಸದಸ್ಯರು ಭಾನುವಾರ ನಡೆಸಿದ ಆನ್‌ಲೈನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ನಮಗೆ ತೀವ್ರ ಆತಂಕವಾಗಿದೆ.ಪೊಲೀಸರು ಅವಕಾಶ ನೀಡಿದಾಗ ನಮ್ಮ ಜತೆ ನಿಯಮಿತವಾಗಿ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಆದರೆ, ಇತ್ತೀಚೆಗೆ ಅವರಿಗೆ ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಧ್ವನಿ ನಡಗುತ್ತಿದೆ’ ಎಂದು ರಾವ್‌ ಅವರ ಪತ್ನಿ ತಿಳಿಸಿದ್ದಾರೆ.

’ಆರೋಗ್ಯದ ಬಗ್ಗೆ ರಾವ್‌ ಅವರು ಶನಿವಾರ ಸ್ಪಷ್ಟವಾಗಿ ಉತ್ತರ ನೀಡಲಿಲ್ಲ. ಭ್ರಮನಿರಸಗೊಂಡಿದ್ದಾರೆ. ದಶಕಗಳ ಹಿಂದೆ ನಡೆದ ಅವರ ತಂದೆ ಮತ್ತು ತಾಯಿಯ ಅಂತ್ಯಕ್ರಿಯೆ ಬಗ್ಗೆ ಮಾತನಾಡಿದರು. ಈಗ ಅವರಿಗೆ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರ ಜತೆ ಜೈಲಿನಲ್ಲಿರುವ ಇನ್ನೊಬ್ಬ ಆರೋಪಿ ತಿಳಿಸಿದ್ದಾರೆ. ನೆನಪಿನ ಶಕ್ತಿಯೂ ಕಡಿಮೆಯಾಗಿದೆ. ರಾವ್‌ ಅವರಿಗೆ ಚಿಕಿತ್ಸೆ ನೀಡಲು ತಳೋಜಾ ಜೈಲಿನಲ್ಲಿ ಸಮರ್ಪಕ ಸೌಲಭ್ಯಗಳಿಲ್ಲ’ ಎಂದು ವಿವರಿಸಿದ್ದಾರೆ.

‘ರಾವ್‌ ಅವರನ್ನು ಅತ್ಯುತ್ತಮ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಬೇಕು ಅಥವಾ ಅವರನ್ನು ಆರೈಕೆ ಮಾಡಲು ನಮಗೆ ಅವಕಾಶ ಕಲ್ಪಿಸಬೇಕು. ನಮಗೆ ಅವರ ಜೀವ ಮುಖ್ಯ’ ಎಂದು ಕೋರಿದ್ದಾರೆ.

22 ತಿಂಗಳಿಂದ ರಾವ್‌ ಜೈಲಿನಲ್ಲಿದ್ದಾರೆ. ವಯಸ್ಸು, ಅನಾರೋಗ್ಯ ಮತ್ತು ಕೋವಿಡ್‌–19 ಕಾರಣಗಳನ್ನು ನೀಡಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಎಲ್ಗಾರ್‌ ಪರಿಷತ್‌ 2017ರ ಡಿಸೆಂಬರ್‌ 31ರಂದು ಪುಣೆಯಲ್ಲಿ ನಡೆಸಿದ್ದ ಕಾರ್ಯಕ್ರಮದಲ್ಲಿ ಹಲವರು ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಇದರಿಂದಾಗಿ ಮರುದಿನ ಭೀಮಾ–ಕೋರೆಗಾಂವ್‌ದಲ್ಲಿ ಹಿಂಸಾಚಾರಕ್ಕೆ ತಿರುಗಿತ್ತು ಎಂದು ಪೊಲೀಸರು ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾವ್ ಮತ್ತು 10 ಇತರ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT