ಮಂಗಳವಾರ, ಸೆಪ್ಟೆಂಬರ್ 21, 2021
26 °C

ನೈಜೀರಿಯಾ ಸೇನಾ ಶಿಬಿರದ ಮೇಲೆ ಭಯೋತ್ಪಾದಕರ ದಾಳಿ: 71 ಯೋಧರ ಹತ್ಯೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ನಿಯಮೆ: ಮಾಲಿ ದೇಶಕ್ಕೆ ಹೊಂದಿಕೊಂಡಂತೆ ಇರುವ ನೈಜೀರಿಯಾ ಸೇನಾ ಶಿಬಿರದ ಮೇಲೆ ಶೆಲ್, ಮೋರ್ಟಾರ್‌ ಮತ್ತು ಅತ್ಯಾಧುನಿಕ ರೈಫಲ್‌ಗಳಿಂದ ದಾಳಿ ನಡೆಸಿದ ಶಸ್ತ್ರಸಜ್ಜಿತ ಭಯೋತ್ಪಾದಕರು 71 ಯೋಧರನ್ನು ಕೊಂದಿದ್ದಾರೆ.

ಇಸ್ಲಾಮಿಕ್ ಭಯೋತ್ಪಾದನೆ, ಹಿಂಸಾಚಾರವನ್ನು 2015ರಿಂದ ಎದುರಿಸುತ್ತಿರುವ ನೈಜಿರಿಯಾದಲ್ಲಿ ಸೇನಾ ಶಿಬಿರದ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಿದು ಎಂದು ಹೇಳಲಾಗಿದೆ.

‘ನಮ್ಮ 71 ಯೋಧರು ಹುತಾತ್ಮರಾಗಿದ್ದಾರೆ, 12 ಮಂದಿಗೆ ಗಾಯಗಳಾಗಿವೆ, ಸಾಕಷ್ಟು ಜನರು ನಾಪತ್ತೆಯಾಗಿದ್ದಾರೆ’ ಎಂದು ಅಲ್ಲಿನ ರಕ್ಷಣಾ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ನೂರಾರು ಮಂದಿಯಿದ್ದ ಭಯೋತ್ಪಾದಕರ ತಂಡ ಸುಮಾರು ಮೂರು ತಾಸುಗಳ ಕಾಲ ಸೇನಾ ಶಿಬಿರದ ಮೇಲೆ ದಾಳಿ ನಡೆಸಿತು. ಫಿರಂಗಿಗಳು, ಬಾಂಬುಗಳು ಭರ್ತಿಯಾಗಿದ್ದ ಶಸ್ತ್ರಸಜ್ಜಿತ ವಾಹನಗಳನ್ನು ದಾಳಿಗೆ ಬಳಸಲಾಗಿದೆ’ ಎಂದು ಹೇಳಿಕೆ ತಿಳಿಸಿದೆ.

ದಾಳಿ ಸಂದರ್ಭ ಶಿಬಿರದಲ್ಲಿದ್ದ ಶಸ್ತ್ರಾಸ್ತ್ರ ಕೋಠಿ ಮತ್ತು ಇಂಧನ ಸಂಗ್ರಹಾಗಾರವನ್ನು ಗುರಿಯಾಗಿಸಿ ಭಯೋತ್ಪಾದಕರು ಬಾಂಬ್‌ಗಳನ್ನು ಎಸೆದರು. ಹೀಗಾಗಿ ಸತ್ತವರ ಸಂಖ್ಯೆ ಹೆಚ್ಚಾಯಿತು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸೇನಾ ವಕ್ತಾರರು ಹೇಳಿದ್ದಾರೆ.

ನೈಜೀರಿಯಾ ಸೇನೆಯು ಈಶಾನ್ಯದಲ್ಲಿ ಬೊಕೊ ಹರಾಮ್ ಮತ್ತು ಪಶ್ಚಿಮದಲ್ಲಿ ಐಸಿಸ್ ಉಗ್ರರ ಪ್ರಭಾವದಲ್ಲಿರುವ ಜಿಹಾದಿಗಳ ವಿರುದ್ಧ ಹೋರಾಡುತ್ತಿದೆ.

ಈ ನಡುವೆ ನೈಜೀರಿಯಾದ ಸಚಿವ ಮಂಡಳಿಯು ರಾಷ್ಟ್ರದಲ್ಲಿ ಇನ್ನೂ ಮೂರು ತಿಂಗಳ ಅವಧಿಗೆ ತುರ್ತು ಪರಿಸ್ಥಿತಿ ವಿಸ್ತರಿಸಲು ಅನುಮತಿ ನೀಡಿದೆ. ಭಯೋತ್ಪಾದಕರ ಉಪಟಳ ನಿಗ್ರಹಕ್ಕಾಗಿ 2017ರಿಂದ ಅಲ್ಲಿ ತುರ್ತುಪರಿಸ್ಥಿತಿ ಘೋಷಿಸಿ, ಸೇನೆಗೆ ವಿಶೇಷ ಅಧಿಕಾರ ನೀಡಲಾಗಿದೆ. ಫ್ರಾನ್ಸ್‌ನ ಸುಮಾರು 4500 ಯೋಧರು ನೈಜೀರಿಯಾದಲ್ಲಿದ್ದು, ಅಲ್ಲಿನ ಸೇನೆಗೆ ನೆರವಾಗುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು