ಭಾನುವಾರ, ಏಪ್ರಿಲ್ 5, 2020
19 °C

ಸಿಎಎ: ಆತಂಕ ವ್ಯಕ್ತಪಡಿಸಿದ ಅಮೆರಿಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ‘ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ‘ಧಾರ್ಮಿಕ ಸ್ವಾತಂತ್ರ್ಯ’ದ ವಿಚಾರವನ್ನು ಪ್ರಸ್ತಾಪಿಸಲಿದ್ದಾರೆ’ ಎಂದು ಅಮೆರಿಕ ಹೇಳಿದೆ.

ಟ್ರಂಪ್‌ ಅವರ ಭಾರತ ಭೇಟಿಗೂ ಮುನ್ನ, ಧಾರ್ಮಿಕ ಸ್ವಾತಂತ್ರ್ಯವನ್ನು ಕುರಿತ ಅಮೆರಿಕದ ಆಯೋಗವು ಭಾರತದ ವಸ್ತುಸ್ಥಿತಿ ವರದಿಯನ್ನು ಪ್ರಕಟಿಸಿದ್ದು, ‘ಪೌರತ್ವ (ತಿದ್ದುಪಡಿ) ಕಾಯ್ದೆಯಿಂದಾಗಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ’ ಎಂದು ಉಲ್ಲೇಖಿಸಿದೆ.

‘ಎರಡೂ ಪ್ರಜಾತಂತ್ರ ರಾಷ್ಟ್ರಗಳು ಒಪ್ಪಿಕೊಂಡಿರುವ ‘ಧಾರ್ಮಿಕ ಸ್ವಾತಂತ್ರ್ಯ’ ಕುರಿತ ವಿಚಾರವನ್ನು ಸಾರ್ವಜನಿಕ ಭಾಷಣದಲ್ಲಿ ಮತ್ತು ಮೋದಿ ಜತೆಗಿನ ವೈಯಕ್ತಿಕ ಭೇಟಿಯ ಸಂದರ್ಭದಲ್ಲಿ ಟ್ರಂಪ್‌ ಅವರು ಉಲ್ಲೇಖಿಸಲಿದ್ದಾರೆ. ನಮ್ಮ ಆಡಳಿತಕ್ಕೆ ಅದು ಪ್ರಮುಖ ವಿಚಾರವಾಗಿದೆ’ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮ ಪ್ರತಿನಿಧಿಗಳ ಜತೆ ನಡೆಸಿದ ವಿಡಿಯೊ ಸಂವಾದದಲ್ಲಿ ಹೇಳಿದ್ದಾರೆ.

ಸಿನಿಕತನ ಬಿಡಿ: ಕಾಂಗ್ರೆಸ್‌ಗೆ ಬಿಜೆಪಿ ತಾಕೀತು
ನವದೆಹಲಿ (ಪಿಟಿಐ):
‘ಟ್ರಂಪ್‌ ಭೇಟಿಯ ಬಗ್ಗೆ ಕಾಂಗ್ರೆಸ್‌ ಪಕ್ಷವು ಸಿನಿಕತನ ಪ್ರದರ್ಶಿಸುತ್ತಿದೆ’ ಎಂದು ಆರೋಪಿಸಿರುವ ಬಿಜೆಪಿಯು, ‘ಅಮೆರಿಕ– ಭಾರತ ದ್ವಿಪಕ್ಷೀಯ ಸಂಬಂಧದ ವಿಚಾರದಲ್ಲಿ ಈ ಭೇಟಿಯು ಐತಿಹಾಸಿಕವೆನಿಸಲಿದೆ. ದೇಶದ ಈ ಸಾಧನೆಯ ಬಗ್ಗೆ ಕಾಂಗ್ರೆಸ್‌ ಹೆಮ್ಮೆಪಡಬೇಕು’ ಎಂದಿದೆ.

‘ಟ್ರಂಪ್‌ ಭೇಟಿಯು ಅಮೆರಿಕದಲ್ಲಿ ನಡೆಯಲಿರುವ ಚುನಾವಣಾ ಪ್ರಚಾರದ ವಿಸ್ತರಣೆಯಾಗಬಾರದು, ಬದಲಿಗೆ ಭಾರತಕ್ಕೆ ಲಾಭದಾಯಕವಾಗಿ ಪರಿಣಮಿಸಬೇಕು’ ಎಂದು ಕಾಂಗ್ರೆಸ್‌ ನಾಯಕರು ನೀಡಿದ್ದ ಹೇಳಿಕೆಗೆ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಶನಿವಾರ ಈ ಪ್ರತಿಕ್ರಿಯೆ ನೀಡಿದರು.

‘ರಾಜಕೀಯ ಪಕ್ಷಗಳು ಕೆಲವೊಮ್ಮೆ ಸ್ವಾರ್ಥ ಬಿಟ್ಟು, ‘ಒಂದು ರಾಷ್ಟ್ರ’ ಎಂದು ಯೋಚನೆ ಮಾಡಬೇಕು. ಈ ಭೇಟಿಯಿಂದ ದೇಶದ ಗೌರವ ಹೆಚ್ಚುತ್ತಿರುವಾಗ, ಕಾಂಗ್ರೆಸ್‌ ಬೇಸರಪಡುವುದೇಕೆ ಎಂದು ಸಂಬಿತ್‌ ಪ್ರಶ್ನಿಸಿದರು.

ತಾಜ್‌ಗೆ ಮೋದಿ ಭೇಟಿ ಇಲ್ಲ: ಡೊನಾಲ್ಡ್‌ ಟ್ರಂಪ್‌ ಅವರು ಆಗ್ರಾದ ತಾಜ್‌ ಮಹಲ್‌ಗೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿರುವ ಸಾಧ್ಯತೆಗಳಿಲ್ಲ ಎಂದು ಮೂಲಗಳು ತಿಳಿಸಿವೆ.

ಭಯೋತ್ಪಾದನೆ ನಿಲ್ಲಿಸಿ: ಪಾಕ್‌ಗೆ ಸೂಚನೆ
‘ತನ್ನ ನೆಲದಲ್ಲಿರುವ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡರೆ ಮಾತ್ರ ಭಾರತ– ಪಾಕಿಸ್ತಾನದ ಮಧ್ಯೆ ಮಾತುಕತೆ ನಡೆಯಲು ಸಾಧ್ಯ’ ಎಂದು ಟ್ರಂಪ್‌ ಹೇಳಿದ್ದಾರೆ.

ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ ಶ್ವೇತಭವನದ ಅಧಿಕಾರಿಗಳು, ‘ಭಾರತ–ಪಾಕಿಸ್ತಾನ ಮಾತುಕತೆಯ ಮೂಲಕ ಉದ್ವಿಗ್ನ ವಾತಾವರಣವನ್ನು ಶಮನಗೊಳಿಸಬೇಕು ಎಂದು ಟ್ರಂಪ್‌ ಬಯಸಿದ್ದಾರೆ. ಅದಕ್ಕಾಗಿ ಅಗತ್ಯ ನೆರವು ನೀಡಲೂ ಅಮೆರಿಕ ಸಿದ್ಧವಿದೆ. ಮಾತುಕತೆಗೆ ವೇದಿಕೆ ನಿರ್ಮಿಸಬೇಕಾದರೆ ಪಾಕಿಸ್ತಾನವು ಉಗ್ರ ಚಟುವಟಿಕೆಗಳನ್ನು ನಿಯಂತ್ರಿಸುವುದು ಅನಿವಾರ್ಯ. ಗಡಿನಿಯಂತ್ರಣ ರೇಖೆಯಲ್ಲಿ ಶಾಂತಿ ಕಾಪಾಡುವಂತೆ ಎರಡೂ ರಾಷ್ಟ್ರಗಳಿಗೆ ಟ್ರಂಪ್‌ ಅವರು ಸಲಹೆ ನೀಡಲಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು