ಭಾನುವಾರ, ಸೆಪ್ಟೆಂಬರ್ 19, 2021
29 °C

ಅಮೆರಿಕ ನೌಕಾಪಡೆ ಅತಿ ದೊಡ್ಡ ಲಂಚ ಹಗರಣ: ಭಾರತ ಸಂಜಾತೆಗೆ ಜೈಲು ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

ಸಿಂಗಪುರ: ಅಮೆರಿಕದ  ನೌಕಾಪಡೆಯ ಅತಿ ದೊಡ್ಡ ಲಂಚ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಭಾರತ ಸಂಜಾತೆ ಶರೋನ್‌ ರಾಚೆಲ್‌ ಗುರುಶರಣ್‌ ಕೌರ್‌ ಅವರಿಗೆ ಇಲ್ಲಿನ ನ್ಯಾಯಾಲಯ ಮೂರು ವರ್ಷಕ್ಕಿಂತಲೂ ಹೆಚ್ಚು ಕಾಲ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಿಂಗಪುರದಲ್ಲಿ ನೆಲೆಸಿರುವ 57 ವರ್ಷದ ಶರೋನ್‌ ಅವರು ಈ ಹಿಂದೆ ಅಮೆರಿಕದ ನೌಕಾಪಡೆಯ ಪ್ರಮುಖ ಗುತ್ತಿಗೆ ತಜ್ಞೆಯಾಗಿ ಕಾರ್ಯ ನಿರ್ವಹಿಸಿದ್ದರು.

ಅಮೆರಿಕದ ನೌಕಾಪಡೆಯಲ್ಲಿ ನಡೆದ ಅಂದಾಜು ₹227 ಕೋಟಿಯ (ಮೂರೂವರೆ ಕೋಟಿ ಅಮೆರಿಕ ಡಾಲರ್‌) ‘ಫ್ಯಾಟ್‌ ಲಿಯನಾರ್ಡೊ’ ಹಗರಣಕ್ಕೆ ಸಂಬಂಧಿಸಿ ನೌಕಾಪಡೆಯ ಹಲವು ಉನ್ನತ ಅಧಿಕಾರಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಮಾಧ್ಯಮಗಳು ಹೇಳಿವೆ.

ಸಿಂಗಪುರದಲ್ಲಿರುವ ಅಮೆರಿಕದ ನೌಕಾಪಡೆಯ ಸರಕು ಸಾಗಣೆ ಕೇಂದ್ರದಲ್ಲಿ ಶರೋನ್‌ ಕೆಲಸ ಮಾಡುತ್ತಿದ್ದ ವೇಳೆ  ಗ್ಲೆನ್‌ ಡಿಫೆನ್ಸ್‌ ಮೆರೈನ್‌ ಏಷ್ಯಾ (ಜಿಡಿಎಂಎ) ಕಂಪನಿಯ ಮಲೇಷ್ಯಾ ಮುಖ್ಯಸ್ಥ ಲಿಯೊನಾರ್ಡ್‌ ಗ್ಲೆನ್‌ ಫ್ರಾನ್ಸಿಸ್‌ ಅವರಿಂದ ಸುಮಾರು ₹64 ಲಕ್ಷ ( 1.30 ಲಕ್ಷ ಸಿಂಗಪುರ ಡಾಲರ್‌) ಲಂಚ ಪಡೆದಿದ್ದರು ಎಂದು ನ್ಯಾಯಾಲಯ ಹೇಳಿದೆ.

ಅಮೆರಿಕ ನೌಕಾಪಡೆಗೆ ಸಂಬಂಧಿಸಿದ ಗೋಪ್ಯ ಮಾಹಿತಿ ನೀಡಿದ್ದಕ್ಕಾಗಿ 2006 ಮತ್ತು 2011ರ ನಡುವೆ ಲಿಯೊನಾರ್ಡ್‌ ಅವರು ಶರೋನ್‌ಗೆ ಲಂಚ ನೀಡಿದ್ದರು ಎಂದು ಆರೋಪಿಸಲಾಗಿದೆ.

ಜಿಡಿಎಂಎ ಕಂಪನಿಯು ಅಮೆರಿಕ ಸೇರಿದಂತೆ ಹಲವು ದೇಶಗಳ ಹಡಗುಗಳಿಗೆ ಸರಕು ಸಾಗಣೆ ಸೇವೆ ಒದಗಿಸುತ್ತಿದೆ.

ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಮೂರು ಪ್ರಕರಣಗಳಲ್ಲಿ ಶರೋನ್‌ ಅವರನ್ನು ಕಳೆದ ವರ್ಷ ತಪ್ಪಿತಸ್ಥರು ಎಂದು ಘೋಷಿಸಿದ್ದು ಜಾಮೀನಿನ ಮೇಲೆ ಅವರು ಬಿಡುಗಡೆಗೊಂಡಿದ್ದಾರೆ.  ಜುಲೈ 6ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವ ನಿರೀಕ್ಷೆ ಇದೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು