ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಸಂಘರ್ಷ: 20 ಯೋಧರು ಹುತಾತ್ಮ

ಗಾಲ್ವನ್‌ ಕಣಿವೆಯಲ್ಲಿ ಭಾರತ–ಚೀನಾ ಸೇನೆ ಮುಖಾಮುಖಿ l ಪಿಎಲ್‌ಎಯ 45 ಯೋಧರ ಸಾವು l ಉದ್ವಿಗ್ನತೆ ಶಮನಕ್ಕೆ ಮಾತುಕತೆ
Last Updated 16 ಜೂನ್ 2020, 20:01 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ–ಚೀನಾ ವಾಸ್ತವ ಗಡಿ ರೇಖೆಯಲ್ಲಿ (ಎಲ್‌ಎಸಿ) 45 ವರ್ಷಗಳಲ್ಲಿ ಇದೇ ಮೊದಲ ಬಾರಿ ರಕ್ತ ಹರಿದಿದೆ. ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯ (ಪಿಎಲ್‌ಎ) ಸೈನಿಕರ ಜತೆ ಸೋಮವಾರ ರಾತ್ರಿ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿಭಾರತೀಯ ಸೇನೆಯ ತುಕಡಿಯೊಂದರ ಕಮಾಂಡಿಂಗ್‌ ಅಧಿಕಾರಿ ಸೇರಿ 20 ಯೋಧರು ಮೃತಪಟ್ಟಿದ್ದಾರೆ. ಈ ಮೂಲಕ, ಭಾರತ–ಚೀನಾ ಗಡಿಯಲ್ಲಿನ ಅತ್ಯಂತ ನಾಜೂಕು ಶಾಂತಿ ಪರಿಸ್ಥಿತಿಗೆ ಭಂಗ ಬಂದಿದೆ.

ಕರ್ನಲ್‌ ಬಿ. ಸಂತೋಷ್‌ ಬಾಬು, ಹವಾಲ್ದಾರ್‌ ಪಳನಿ ಮತ್ತು ಸಿಪಾಯಿ ಓಝಾ ಹುತಾತ್ಮರಾಗಿದ್ದಾರೆ ಎಂದಷ್ಟೇ ಸೇನೆಯು ಆರಂಭದಲ್ಲಿ ಹೇಳಿತ್ತು. ಆದರೆ, ಸಂಘರ್ಷದ ಸ್ಥಳದಲ್ಲಿ ಕರ್ತವ್ಯದಲ್ಲಿದ್ದು ಗಂಭೀರವಾಗಿ ಗಾಯಗೊಂಡಿದ್ದ ಇನ್ನೂ 17 ಯೋಧರು ಮೃತಪಟ್ಟಿದ್ದಾರೆ ಎಂದು ಮಂಗಳವಾರ ರಾತ್ರಿ ತಿಳಿಸಿತು. ಗಾಯಗೊಂಡ ಯೋಧರುಅತಿ ಎತ್ತರದ ಪ್ರದೇಶದಲ್ಲಿ, ಅತಿಯಾದ ಚಳಿಯಿಂದಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಸೋಮವಾರ ರಾತ್ರಿಯ ಸಂಘರ್ಷವು ಹಲವು ತಾಸು ನಡೆದಿತ್ತು ಎಂದು ವಿವಿಧ ಮೂಲಗಳು ತಿಳಿಸಿವೆ. ಚೀನಾದ ಯೋಧರಲ್ಲಿಯೂ ಹಲವು ಮಂದಿ ಮೃತಪಟ್ಟಿದ್ದಾರೆ ಎಂದು ಸೇನೆ ಹೇಳಿದ್ದರೂ ಸಾವಿನ ಸಂಖ್ಯೆಯ ಬಗ್ಗೆ ನಿಖರ ಮಾಹಿತಿ ನೀಡಿಲ್ಲ. ಅಲ್ಲಿ 45 ಸೈನಿಕರು ಬಲಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಅಧಿಕಾರಿಗಳ ನಡುವೆ ಜೂನ್‌ ಆರರಿಂದ ನಿರಂತರವಾಗಿ ನಡೆದ ಮಾತುಕತೆಯ ಪರಿಣಾಮವಾಗಿ ಎರಡೂ ಕಡೆಯ ಸೈನಿಕರು ವಿವಾದಾತ್ಮಕ ಪ್ರದೇಶಗಳಿಂದ ಹಿಂದಕ್ಕೆ ಸರಿಯಲು ಆರಂಭಿಸಿದ್ದರು. ಈ ಪ್ರಕ್ರಿಯೆಯ ನಡುವೆಯೇ ಹಿಂಸಾತ್ಮಕ ಸಂಘರ್ಷ ನಡೆದಿದೆ. ಸಂಘರ್ಷ ನಡೆದ ಸ್ಥಳದಿಂದಲೂ ಭಾರತ ಮತ್ತು ಚೀನಾದ ಸೈನಿಕರು ಈಗ ಹಿಂದೆ ಸರಿದಿದ್ದಾರೆ ಎಂದು ಸೇನೆಯ ಹೇಳಿಕೆಯು ತಿಳಿಸಿದೆ.

ಎರಡೂ ದೇಶಗಳ ಸೇನೆಯ ಹಿರಿಯ ಅಧಿಕಾರಿಗಳು ಉದ್ವಿಗ್ನ ಪರಿಸ್ಥಿತಿ ಶಮನಕ್ಕಾಗಿ ಮಾತುಕತೆ ಆರಂಭಿಸಿದ್ದಾರೆ ಎಂದು ಸೇನೆಯ ಹೇಳಿಕೆಯು ತಿಳಿಸಿದೆ.

ದಶಕಗಳಿಂದ, ಗಾಲ್ವನ್‌ ಕಣಿವೆಯ ವಿಚಾರದಲ್ಲಿ ಯಾವುದೇ ವಿವಾದ ಇರಲಿಲ್ಲ. ಭಾರತದ ಭೂಪ್ರದೇಶದ ಒಳಗೇ ಇದು ಇದೆ ಮತ್ತು ಈ ಬಗ್ಗೆ ಚೀನಾ ಯಾವತ್ತೂ ತಕರಾರು ಎತ್ತಿದ್ದಿಲ್ಲ. ಗಾಲ್ವನ್‌ಗೆ ಸಂಬಂಧಿಸಿ 1962ರ ಬಳಿಕ ಇದೇ ಮೊದಲು ಬಾರಿ ಚೀನಾ ಸಂಘರ್ಷಕ್ಕೆ ಇಳಿದಿದೆ.

ಮುಖಾಮುಖಿಯಲ್ಲಿ ಗುಂಡಿನ ಹಾರಾಟ ನಡೆದಿಲ್ಲ. ಹಿಂಸಾತ್ಮಕವಾದ ಕೈಕೈ ಮಿಲಾಯಿಸುವಿಕೆಯೇ ಸಾವು ನೋವಿಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT