ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಎದುರಿಸಲು ಚೀನಾ ಕಂಪನಿಗಳ ಕೊಡುಗೆ

ದೇಶದ ವರ್ಚಸ್ಸು ರಕ್ಷಣೆ, ಸರ್ಕಾರದ ಒಲವು ಗಳಿಸಲು ನೆಪವಾದ ದೇಣಿಗೆ
Last Updated 9 ಜೂನ್ 2020, 9:37 IST
ಅಕ್ಷರ ಗಾತ್ರ

ಬೀಜಿಂಗ್: ಕೊರೊನಾ ಸೋಂಕು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ತೀವ್ರವಾಗಿ ವ್ಯಾಪಿಸಿದಂತೇ ಚೀನಾದ ವಿವಿಧ ಕಂಪನಿಗಳು ಜಾಗತಿಕವಾಗಿ ನೆರವು ನೀಡುವ ಪ್ರಮುಖ ಸಂಸ್ಥೆಗಳಾಗಿ ಹೊರಹೊಮ್ಮಿವೆ.

ಚೀನಾದ ಪ್ರಮುಖ ಇ–ಕಾಮರ್ಸ್‌ ಸಂಸ್ಥೆ ಅಲಿಬಾಬಾ ಗ್ರೂಪ್‌ನ ಸ್ಥಾಪಕ ಜಾಕ್‌ ಮಾ ಅವರು, ಏಪ್ರಿಲ್‌ ತಿಂಗಳಲ್ಲಿ ನ್ಯೂಯಾರ್ಕ್‌ನಲ್ಲಿ 1,000 ವೆಂಟಿಲೇಟರ್‌ ಕೊಡುಗೆ ನೀಡಿದ್ದರು. ಇವರು, ಚೀನಾದ ಆಡಳಿತರೂಡ ಕಮ್ಯುನಿಸ್ಟ್ ಪಕ್ಷದ ಸದಸ್ಯರೂ ಹೌದು.

ಮಾ ಫೌಂಡೇಷನ್‌ ಇದರ ಜೊತೆಗೆ ವೆಂಟಿಲೇಟರ್‌ಗಳು, ಮಾಸ್ಕ್‌, ಇತರೆ ಪರಿಕರಗಳನ್ನು ಆಫ್ರಿಕಾ, ಲ್ಯಾಟಿನ್‌ ಅಮೆರಿಕ ಮತ್ತು ಏಷ್ಯಾದ ರಾಷ್ಟ್ರಗಳಿಗೂ ಪೂರೈಸುತ್ತಿದೆ.

ಕೊರೊನಾ ಸೋಂಕು ಚೀನಾದ ಕಂಪನಿಗಳಿಗೆ ‘ಜಾಗತಿಕ ದಾನಿ’ಗಳ ಹಿರಿಮೆಯನ್ನು ತಂದಿದೆ. ಮಾ, ಅಲಿಬಾಬಾ ಮತ್ತು ತರೆ ಚೀನಿ ಕಂಪನಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ವೈದ್ಯಕೀಯ ಪರಿಕರ, ಆಹಾರ ಕೊಡುಗೆಯನ್ನು 12ಕ್ಕೂ ಹೆಚ್ಚು ದೇಶಗಳಿಗೆ ನೀಡಿವೆ.

ವಿಡಿಯೊ ಸೇವೆ ಒದಗಿಸುವ ಟಿಕ್‌ ಟಾಕ್‌ ಸಂಸ್ಥೆ ₹ 2.5 ಕೋಟಿ ನೆರವನ್ನು ಆರೋಗ್ಯ ಸೇವಾ ಕಾರ್ಯಕರ್ತರಿಗೆ ನೀಡುವ ಭರವಸೆ ನೀಡಿದ್ದರೆ, ಸಂದೇಶ ಸೇವೆ ‘ವಿ–ಚಾಟ್‌‘ನ ನಿರ್ವಾಹಕ ಸಂಸ್ಥೆಯಾದ ಟೆನ್‌ಸೆಂಟ್‌, 15 ದೇಶಗಳಿಗೆ ಮಾಸ್ಕ್‌ ಮತ್ತು ರಕ್ಷಣಾ ಪರಿಕರಗಳನ್ನು ಒದಗಿಸಿದೆ.

ಅಲ್ಲದೆ, ಚೀನಾ ಮೂಲದ ಕಂಪನಿಗಳಾದ ಲೆನೊವೊ, ಬಿವೈಡಿ ಆಟೊ, ಹೇರ್‌ ಸ್ಮಾರ್ಟ್‌ ಹೋಂ ಕೂಡಾ ವಿವಿಧ ದೇಶಗಳಿಗೆ ನೆರವು ಪ್ರಕಟಿಸಿದೆ.

ಕೊರೊನಾ ಸೋಂಕು ವ್ಯಾಪಿಸಿರುವುದು ಚೀನಾದ ವಿವಿಧ ಕಂಪನಿಗಳಿಗೆ ಜಾಗತಿಕವಾಗಿ ಚೀನಾದ ವರ್ಚಸ್ಸು ರಕ್ಷಿಸುವ ಜೊತೆಗೆ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸರ್ಕಾರದ ಒಲವು ಗಳಿಸಲು ಒಂದು ಅವಕಾಶ ಕಲ್ಪಿಸಿದೆ.

‘ಕೊರೊನಾ ಸೋಂಕಿನ ಪರಿಣಾಮ ಉದ್ಬವಿಸಿರುವ ಬಿಕ್ಕಟ್ಟನ್ನು ಯಾವುದೇ ದೇಶ ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ’ ಎಂದು ಮಾ ಅವರು ಈಚೆಗೆ ನಡೆದಿದ್ದ ಆನ್‌ಲೈನ್ ವಿಚಾರಗೋಷ್ಠಿಯಲ್ಲಿ ಅಭಿಪ್ರಾಯಪ್ಟಟಿದ್ದರು.

ಇನ್ನೊಂದೆಡೆ, ಅಮೆರಿಕ ಕಂಪನಿಗಳಾದ ವಾಲ್‌ಮಾರ್ಟ್‌, ಅಮೆಜಾನ್‌ ಡಾಟ್‌ ಕಾಂ ಕೂಡಾ ಆಫ್ರಿಕಾ, ಭಾರತ, ಲ್ಯಾಟಿನ್‌ ಅಮೆರಿಕಗಳಿಗೆ ವೈದ್ಯಕೀಯ ಪರಿಕರಗಳನ್ನು ಒದಗಿಸಿದೆ.

ಟ್ವಿಟರ್‌ ಸಿಇಒ ಜಾಕ್‌ ಡೊರ್ಸೆ ಅವರು, ಆಫ್ರಿಕಾ, ಮಧ್ಯ ಪೂರ್ವ ಏಷ್ಯಾ ಮತ್ತು ಅಮೆರಿಕಕ್ಕೆ ಒಟ್ಟಾರೆ 1 ಬಿಲಿಯನ್‌ ಡಾಲರ್‌ ನೆರವು ಪ್ರಕಟಿಸಿದ್ದಾರೆ. ಸಿಸ್ಕೊ ಸಿಸ್ಟಮ್ಸ್‌ ಸಂಸ್ಥೆಯು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಅಮೆರಿಕಕ್ಕೆ ನೆರವು ಒದಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT