ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋವಿಡ್‌–19’ ವೈರಸ್‌: ಚೀನಾದಲ್ಲಿ ನೋಟುಗಳ ಸ್ವಚ್ಛತೆ

Last Updated 15 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬೀಜಿಂಗ್‌: ‘ಕೋವಿಡ್‌–19’ ವೈರಸ್‌ ಹಬ್ಬದಂತೆ ಚೀನಾ ಈಗ ಬ್ಯಾಂಕ್‌ ನೋಟುಗಳನ್ನು ಸ್ವಚ್ಛಗೊಳಿಸಲು ಮುಂದಾಗಿದೆ.

ಅಲ್ಟ್ರಾವೈಲಟ್ ಬೆಳಕು ಅಥವಾ ಅತಿ ಹೆಚ್ಚಿನ ತಾಪಮಾನದ ವಾತಾವರಣದಲ್ಲಿ ಉಪಯೋಗಿಸಿದ ನೋಟುಗಳನ್ನು ಸೋಂಕಿನಿಂದ ಮುಕ್ತಗೊಳಿಸಿ ಪ್ರತ್ಯೇಕಗೊಳಿಸುವ ಕಾರ್ಯಕೈಗೊಳ್ಳಲಾಗುತ್ತಿದೆ. ಬಳಿಕ, ಈ ನೋಟುಗಳನ್ನು ಸೀಲ್‌ ಮಾಡಿ ಏಳರಿಂದ 14 ದಿನಗಳವರೆಗೆ ಇಡಲಾಗುತ್ತಿದೆ. ನಂತರವಷ್ಟೇ ಮರುಪ್ರಸರಣಕ್ಕೆ ನೀಡಲಾಗುತ್ತಿದೆ.

ಅತಿ ಹೆಚ್ಚು ವೈರಸ್‌ ಪ್ರಕರಣಗಳು ಕಾಣಿಸಿಕೊಂಡಿರುವ ಹುಬೈ ಪ್ರಾಂತ್ಯದಲ್ಲೇ ನಾಲ್ಕು ಶತಕೋಟಿ ಯುವಾನ್‌ ಮೌಲ್ಯದ ಹೊಸ ನೋಟುಗಳನ್ನು ವಿತರಿಸಲಾಗಿದೆ.

‘ಸಾಧ್ಯವಿರುವ ಸ್ಥಳಗಳಲ್ಲಿ ಹೊಸ ನೋಟುಗಳನ್ನು ವಿತರಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ’ ಎಂದು ‘ಪೀಪಲ್ಸ್‌ ಬ್ಯಾಂಕ್‌ ಆಫ್ ಚೀನಾ’ ಡೆಪ್ಯೂಟಿ ಗವರ್ನರ್‌ ಫ್ಯಾನ್‌ ಯಿಫೈ ತಿಳಿಸಿದ್ದಾರೆ.

ನೋಟುಗಳನ್ನು ಬಳಸುವಾಗ ಸಾರ್ವಜನಿಕರ ಸುರಕ್ಷತೆ ಮತ್ತು ಆರೋಗ್ಯ ಕಾಪಾಡುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಈ ಕ್ರಮಗಳು ಯಾವ ರೀತಿ ಪರಿಣಾಮ ಬೀರಿವೆ ಎನ್ನುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಜಾಗತಿಕವಾಗಿ ಇದುವರೆಗೆ 67 ಸಾವಿರ ಮಂದಿಗೆ ‘ಕೋವಿಡ್‌–19’ ವೈರಸ್‌ ಸೋಂಕು ತಗುಲಿದೆ. ಚೀನಾದಲ್ಲಿ ಮತ್ತೆ 143 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದಾಗಿ, ಮೃತಪಟ್ಟವರ ಸಂಖ್ಯೆ 1,631ಕ್ಕೆ ಏರಿದೆ.

ಸಾಂಪ್ರದಾಯಿಕ ಪದ್ಧತಿಯಲ್ಲಿ ಚಿಕಿತ್ಸೆ: ‘ಕೋವಿಡ್‌–19’ ವೈರಸ್‌ ಸೋಂಕಿನಿಂದ ಬಳಲುತ್ತಿರುವ ಹುಬೈ ಪ್ರಾಂತ್ಯದ ಅರ್ಧಕ್ಕಿಂತ ಹೆಚ್ಚು ರೋಗಿಗಳಿಗೆ ಚೀನಾದ ಸಾಂಪ್ರದಾಯಿಕ ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಯುರೋಪ್‌ನಲ್ಲಿ ಮೊದಲ ಸಾವು: ‘ಕೋವಿಡ್‌–19’ ವೈರಸ್‌ ಸೋಂಕಿನಿಂದ ಬಳಲುತ್ತಿದ್ದ ಚೀನಾದ ಪ್ರವಾಸಿಗರೊಬ್ಬರು ಶನಿವಾರ ಫ್ರಾನ್ಸ್‌ನಲ್ಲಿ ಸಾವಿಗೀಡಾಗಿದ್ದಾರೆ. ಇದು ಯುರೋಪ್‌ನಲ್ಲಿ ವೈರಸ್‌ನಿಂದ ಸಾವಿಗೀಡಾದ ಮೊದಲ ಪ್ರಕರಣವಾಗಿದೆ. ಫ್ರಾನ್ಸ್‌ನಲ್ಲಿ 11 ಮಂದಿ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ.

ಸಾಂಪ್ರದಾಯಿಕ ಪದ್ಧತಿಯಲ್ಲಿ ಚಿಕಿತ್ಸೆ
‘ಕೋವಿಡ್‌–19’ ವೈರಸ್‌ ಸೋಂಕಿನಿಂದ ಬಳಲುತ್ತಿರುವ ಹುಬೈ ಪ್ರಾಂತ್ಯದ ಅರ್ಧಕ್ಕಿಂತ ಹೆಚ್ಚು ರೋಗಿಗಳಿಗೆ ಚೀನಾದ ಸಾಂಪ್ರದಾಯಿಕ ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಸರ್ಕಾರ ರೋಗಿಗಳಿಗೆ ಚಿಕಿತ್ಸೆ ನೀಡಲುಸಾಂಪ್ರದಾಯಿಕ ವೈದ್ಯ ಪದ್ಧತಿ (ಟಿಸಿಎಂ) ಮತ್ತು ಪಾಶ್ಚಿಮಾತ್ಯ ವೈದ್ಯ ಪದ್ಧತಿಗೂ ಪ್ರಾಮುಖ್ಯತೆ ನೀಡಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಉಪ ಮುಖ್ಯಸ್ಥ ವಾಂಗ್‌ ಹೆಷೆಂಗ್‌ ತಿಳಿಸಿದ್ದಾರೆ.

ರೋಗಿಗಳಿಗೆ ಸಹಾಯ ಮಾಡಲು ದೇಶಾದ್ಯಂತದ ಟಿಸಿಎಂ ವಿಶ್ವವಿದ್ಯಾಲಯಗಳು ಮತ್ತು ಆಸ್ಪತ್ರೆಗಳು 2,220 ವೈದ್ಯಕೀಯ ಸಿಬ್ಬಂದಿಯನ್ನು ಹುಬೈಗೆ ಕಳುಹಿಸಿವೆ ಎಂದೂ ವಾಂಗ್ ಹೇಳಿದ್ದಾರೆ.

ಕೋವಿಡ್‌–19ಗೆ ಚಿಕಿತ್ಸೆ ನೀಡುವ ಸಲುವಾಗಿ ಅಮೆರಿಕದ ರೋಗ ನಿರೋಧಕ ‘ರೆಮಡೆಸಿವರ್‌’ ಔಷಧಿ ಬಳಕೆ ಮಾಡಲು ಚೀನಾವು ಅನುಮೋದನೆ ನೀಡಿದೆ ಎಂದೂ ವಾಂಗ್ಹೇಳಿದ್ದಾರೆ.

ಸಾಂಪ್ರದಾಯಿಕ ಚೀನಾದ ಮತ್ತು ಪಾಶ್ಚಿಮಾತ್ಯ ಔಷಧಗಳನ್ನು ಸಮನ್ವಯಗೊಳಿಸುವ ಮೂಲಕ ರೋಗಿಗಳ ಗುಣಪಡಿಸುವಿಕೆಯ ಪ್ರಮಾಣವನ್ನು ಸುಧಾರಿಸಲು ಚೀನಾ ಪ್ರಯತ್ನಿಸುತ್ತಿದೆ ಎಂದು ಪ್ರತಿಪಾದಿಸಿದರು.

ಭಾರತದ ನಾಗರಿಕರ ಸ್ಥಳಾಂತರಕ್ಕೆ ಯತ್ನ
ಟೊಕಿಯೊ (ಎಎಫ್‌ಪಿ): ಜಪಾನ್‌ನ ಯೊಕೊಹಾಮಾದಲ್ಲಿರುವ ಡೈಮಂಡ್ ಪ್ರಿನ್ಸ್ ಐಷಾರಾಮಿ ಹಡಗಿನಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್‌ ಕರೆತರುವ ಪ್ರಯತ್ನಗಳು ನಡೆದಿವೆ ಎಂದು ಜಪಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.

ಹಡಗಿನಲ್ಲಿರುವ 138 ಭಾರತೀಯರಲ್ಲಿ ಮೂವರು ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ. ಈ ಮೂವರಿಗೆ ಅಗತ್ಯವಿರುವ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ತಿಳಿಸಿದೆ.

ಎಲ್ಲ ರೀತಿಯ ನೆರವು ನೀಡುವುದಾಗಿ ರಾಯಭಾರ ಕಚೇರಿಯು ಹಡಗಿನಲ್ಲಿರುವ ಎಲ್ಲ ಭಾರತೀಯರಿಗೆ ಇ–ಮೇಲ್‌ ಕಳುಹಿಸಿದೆ.

ಅಮೆರಿಕ ಸಹ ತನ್ನ ನಾಗರಿಕರನ್ನು ವಾಪಸ್‌ ಕರೆತರಲು ಉದ್ದೇಶಿಸಿದೆ.

ಇದಕ್ಕಾಗಿ, ಭಾನುವಾರ ಜಪಾನ್‌ಗೆ ವಿಮಾನವೊಂದನ್ನು ಅಮೆರಿಕ ಕಳುಹಿಸಲಿದೆ. ಅಮೆರಿಕಗೆ ಬಂದ ಬಳಿಕ ಕನಿಷ್ಠ ಎರಡು ವಾರಗಳ ಕಾಲ ಇವರನ್ನು ಪ್ರತ್ಯೇಕವಾಗಿರಿಸಿ ಅವರ ಆರೋಗ್ಯದ ಮೇಲೆ ನಿಗಾವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

17 ಮಂದಿಯಲ್ಲಿ ಸೋಂಕಿನ ಲಕ್ಷಣ
ನವದೆಹಲಿ (ಪಿಟಿಐ): ಚೀನಾ ಮತ್ತು ಇತರ ದೇಶಗಳಿಂದ ಬಂದ 17 ಪ್ರಯಾಣಿಕರಲ್ಲಿ ‘ಕೋವಿಡ್‌–19’ ವೈರಸ್‌ನ ಲಕ್ಷಣಗಳು ಕಂಡು ಬಂದಿವೆ.

ಇವರೆಲ್ಲರೂ ವಿಮಾನ ನಿಲ್ದಾಣಗಳಲ್ಲಿ ವೈರಸ್‌ಗಾಗಿ ತಪಾಸಣೆ ಕೈಗೊಳ್ಳುವುದನ್ನು ಆರಂಭಿಸುವ ಮುನ್ನವೇ ಜನವರಿ ತಿಂಗಳ ಮಧ್ಯದಲ್ಲಿ ಭಾರತಕ್ಕೆ ಬಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರುವರಿ 13ರವರೆಗೆ ಸುಮಾರು 5,700 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ 17 ಮಂದಿಯಲ್ಲಿ ವೈರಸ್‌ ಸೋಂಕು ಲಕ್ಷಣಗಳು ಕಾಣಿಸಿಕೊಂಡಿವೆ. ಇವರಲ್ಲಿ 4,707 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿಲ್ಲ. ಆದರೂ, ಅವರಿಗೆ ಪ್ರತ್ಯೇಕ ಮನೆಯಲ್ಲಿ ಇರಲು ಸೂಚಿಸಲಾಗಿದೆ ಎಂದು ದೆಹಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT