ಶುಕ್ರವಾರ, ಏಪ್ರಿಲ್ 10, 2020
19 °C

ಕೊರೊನಾವೈರಸ್‌ ಮೊದಲು ವರದಿಯಾದ ಹುಬೇ ಪ್ರಾಂತ್ಯ ನಿರ್ಬಂಧ ಮುಕ್ತಿಗೆ ಚೀನಾ ನಿರ್ಧಾರ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಬೀಚಿಂಗ್: ಕೊರೊನಾವೈರಸ್‌ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ವುಹಾನ್ ನಗರ ಇರುವ ಚೀನಾದ ಹುಬೇ ಪ್ರಾಂತ್ಯದಲ್ಲಿ ಈಚಿನ ದಿನಗಳಲ್ಲಿ ಕೋವಿಡ್-19 ಪ್ರಕರಣಗಳು ನಾಟಕೀಯವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪ್ರಾಂತ್ಯದ ಮೇಲಿನ ನಿರ್ಬಂಧ ಸಡಿಲಿಸಲು ಚೀನಾ ಸರ್ಕಾರವು ನಿರ್ಧರಿಸಿದೆ.

1.1 ಕೋಟಿ ಜನಸಂಖ್ಯೆ ಇರುವ ಹುಬೇ ಪ್ರಾಂತ್ಯದ ರಾಜಧಾನಿ ವುಹಾನ್ ನಗರದ ಮೇಲೆ ವಿಧಿಸಿರುವ ಕಟ್ಟುನಿಟ್ಟಿನ ನಿರ್ಬಂಧವನ್ನು ತುಡುವಾದಿ, ಅಂದರೆ ಏಪ್ರಿಲ್ 8ರಂದು ಸಡಿಲಿಸಲಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೊರೊನಾವೈರಸ್‌ ಪ್ರಕರಣಗಳು ಮೊದಲ ಬಾರಿಗೆ ಬೆಳಕಿಗೆ ಬಂದ ವುಹಾನ್ ನಗರದಲ್ಲಿ ಕಳೆದ ಐದು ದಿನಗಳಿಂದ ಒಂದೇ ಒಂದು ಪ್ರಕರಣವೂ ವರದಿಯಾಗಿರಲಿಲ್ಲ. ಆದರೆ ನಿನ್ನೆ (ಸೋಮವಾರ) ಒಂದು ಹೊಸ ಕೋವಿಡ್-19 ಪ್ರಕರಣ ಪತ್ತೆಯಾಗಿತ್ತು.

5.6 ಕೋಟಿ ಜನಸಂಖ್ಯೆಯಿರುವ ಹುಬೇ ಪ್ರಾಂತ್ಯದಲ್ಲಿ ಜನವರಿ 23ರಿಂದ ಈವರೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಹೇರಲಾಗಿತ್ತು. ಜನಸಂಚಾರ, ಸಾರಿಗೆಯನ್ನು ನಿರ್ಬಂಧಿಸಲಾಗಿತ್ತು.

ಹಸಿರು ಆರೋಗ್ಯ ಪಟ್ಟಿ ಪಡೆದುಕೊಂಡಿರುವ ಹುಬೇ ಪ್ರಾಂತ್ಯದ ಜನರು ನಾಳೆಯಿಂದ (ಬುಧವಾರ) ವಿವಿಧೆಡೆಗೆ ಸಂಚರಿಸಬಹುದು. ಹುಬೇ ಪ್ರಾಂತ್ಯದ ಮೇಲಿನ ನಿರ್ಬಂಧವನ್ನು ಮಾರ್ಚ್ 25ಕ್ಕೆ, ವುಹಾನ್‌ ನಗರದ ಲಾಕ್‌ಡೌನ್ ಆದೇಶವನ್ನು ಏಪ್ರಿಲ್ 8ಕ್ಕೆ ತೆರವುಗೊಳಿಸಲಾಗುವುದು ಎಂದು ಸರ್ಕಾರಿ ಸ್ವಾಮ್ಯದ ಚೀನಾದ ಪ್ರಮುಖ ದಿನಪತ್ರಿಕೆ ಪೀಪಲ್ಸ್‌ ಡೈಲಿ ವರದಿ ಮಾಡಿದೆ.

ಹುಬೇ ಪ್ರಾಂತ್ಯದಲ್ಲಿ ಈವರೆಗೆ ಕೊರೊನಾವೈರಸ್ ಪಿಡುಗಿನಿಂದ 3,160 ಮಂದಿ ಮೃತಪಟ್ಟಿದ್ದಾರೆ. ಇಂದಿಗೂ ಪ್ರಾಂತ್ಯದ ವಿವಿಧೆಡೆಯ ಆಸ್ಪತ್ರೆಗಳಲ್ಲಿ 4,200 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರ. ಈ ಪೈಕಿ 1,203 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ. 336 ಜನರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಮಂಡಳಿ ವರದಿ ತಿಳಿಸಿದೆ.

ಹುಬೇ ಪ್ರಾಂತ್ಯದಲ್ಲಿ ಒಟ್ಟು 67,801 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದರು. ಈ ಪೈಕಿ 50,006 ಪ್ರಕರಣಗಳು ವುಹಾನ್ ನಗರವೊಂದರಲೇ ವರದಿಯಾಗಿತ್ತು. ಚೀನಾದಲ್ಲಿ ಒಟ್ಟು 81,171 ಮಂದಿಯಲ್ಲಿ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದವು. ಒಟ್ಟಾರೆ 3,277 ಮಂದಿ ರೋಗದಿಂದ ಮೃತಪಟ್ಟಿದ್ದರು. ಇಂದಿಗೂ ಚೀನಾದ ವಿವಿಧೆಡೆ 4,735 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕುಪೀಡಿತರಾಗಿದ್ದ 73,159 ಮಂದಿ ಚೀನಾದ ವಿವಿಧೆಡೆ ಚಿಕಿತ್ಸೆ ಪಡೆದು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದರು ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಮಂಡಳಿ ಹೇಳಿದೆ.

ವಿಶ್ವದ 168 ದೇಶಗಳಲ್ಲಿ ಕೊರೊನಾವೈರಸ್ ಸೋಂಕು ವ್ಯಾಪಿಸಿದ್ದು, 3.82 ಲಕ್ಷ ಪ್ರಕರಣಗಳು ವರದಿಯಾಗಿವೆ. ಈವರೆಗೆ ಒಟ್ಟು 16,559 ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು