ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌: 106 ಕ್ಕೇರಿದ ಸಾವಿನ ಸಂಖ್ಯೆ

Last Updated 28 ಜನವರಿ 2020, 19:30 IST
ಅಕ್ಷರ ಗಾತ್ರ

ಬೀಜಿಂಗ್‌: ಕೊರೊನಾ ವೈರಸ್‌ ಸೋಂಕಿಗೆ ಮತ್ತೆ 24 ಮಂದಿ ಬಲಿಯಾಗಿದ್ದು, ಮೃತರ ಸಂಖ್ಯೆ 106 ಕ್ಕೇರಿದೆ. 4,515 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಟಿಬೆಟ್‌ ಹೊರತುಪಡಿಸಿ ಚೀನಾದ ಎಲ್ಲ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್‌ ಸೋಂಕು ತಗುಲಿರುವ ಪ್ರಕರಣಗಳು ಪತ್ತೆಯಾಗಿವೆ. ಥಾಯ್ಲೆಂಡ್‌ನಲ್ಲಿ 7, ಸಿಂಗಪುರ ಮತ್ತು ಆಸ್ಟ್ರೇಲಿಯಾದಲ್ಲಿ ತಲಾ ನಾಲ್ಕು, ಜಪಾನ್‌, ದಕ್ಷಿಣ ಕೊರಿಯಾ, ಮಲೇಷ್ಯಾ, ಫ್ರಾನ್ಸ್‌ ಅಮೆರಿಕದಲ್ಲಿ ತಲಾ ಮೂರು, ವಿಯೆಟ್ನಾಂನಲ್ಲಿ ಎರಡು ಹಾಗೂ ನೇಪಾಳ ಮತ್ತು ಶ್ರೀಲಂಕಾದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.

ಸೋಂಕು ತಗುಲಿರುವ 1,300 ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು, ಒಟ್ಟು 4,515 ಮಂದಿಯಲ್ಲಿ ಈ ಸೋಂಕು ಕಂಡುಬಂದಿದೆ. ಈ ಪೈಕಿ 2,567 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 563 ಮಂದಿಯ ಸ್ಥಿತಿ ಗಂಭೀರವಾಗಿದೆ. 127 ಮಂದಿ ಸ್ಥಿತಿ ಚಿಂತಾಜನಕವಿದೆ ಎಂದು ಅವರು ತಿಳಿಸಿದ್ದಾರೆ.

ದೊಡ್ಡ ಉದ್ಯಮಗಳು ಕೆಲಸ ಸ್ಥಗಿತಗೊಳಿಸಿದ್ದು, ಮನೆಯಿಂದಲೇ ಕೆಲಸ ಮಾಡುವಂತೆ ನೌಕರರಿಗೆ ಸೂಚಿಸಿದೆ. ಹೊಸ ವರ್ಷದ ರಜೆ ಅವಧಿಯನ್ನು ಸರ್ಕಾರ ವಿಸ್ತರಿಸಿದೆ.

ಹಾಂಗ್‌ಕಾಂಗ್‌: ಸಾರ್ವಜನಿಕ ಸೌಲಭ್ಯಗಳು ಬಂದ್‌

ಹಾಂಗ್‌ಕಾಂಗ್‌ (ಎಎಫ್‌ಪಿ): ಕೊರೊನಾ ವೈರಸ್‌ ಹರಡುವುದನ್ನು ತಡೆಯುವ ಉದ್ದೇಶದಿಂದ ಕ್ರೀಡಾ ಕೇಂದ್ರಗಳಿಂದ ಹಿಡಿದು ಪ್ರವಾಸಿತಾಣಗಳವರೆಗೆ ಎಲ್ಲ ಸಾರ್ವಜನಿಕ ಸೌಲಭ್ಯಗಳನ್ನು ಬಂದ್‌ ಮಾಡುವುದಾಗಿ ಹಾಂಗ್‌ಕಾಂಗ್‌ ಮಂಗಳವಾರ ತಿಳಿಸಿದೆ.

ಈ ವೈರಸ್‌ನಿಂದ ಚೀನಾದಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಒಂದೆಡೆ ಜನರು ಸೇರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಎಲ್ಲ ಮನರಂಜನಾ ಸೌಲಭ್ಯಗಳನ್ನು ಬುಧವಾರದಿಂದ ತಾತ್ಕಾಲಿಕವಾಗಿ ಬಂದ್‌ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಂಗ್‌ಕಾಂಗ್‌ನಲ್ಲಿ ಎಂಟು ಮಂದಿಯಲ್ಲಿ ಈ ಸೋಂಕು ಕಂಡುಬಂದಿದೆ. ಕಡಲತೀರಗಳು,ವಸ್ತು ಸಂಗ್ರಹಾಲಯಗಳು, ಪ್ರವಾಸಿಗರ ಶಿಬಿರಗಳನ್ನು ಬಂದ್‌ ಮಾಡಲಾಗಿದೆ. ಶಾಲೆಗಳಿಗೆ ನೀಡಿದ್ದ ಹೊಸ ವರ್ಷದ ರಜೆಯನ್ನು ಫೆಬ್ರುವರಿ ಮಧ್ಯದವರೆಗೆ ವಿತರಿಸಲಾಗಿದೆ. ಸರ್ಕಾರಿ ನೌಕರರಿಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ಮುಂದಿನ ಆದೇಶದವರೆಗೆ ಈ ಕ್ರಮಗಳು ಜಾರಿಯಲ್ಲಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆನಡಾ: ಮೊದಲ ಪ್ರಕರಣ ಪತ್ತೆ

ಮಾಂಟ್ರಿಯಲ್‌ (ಎಎಫ್‌ಪಿ): ಕೊರೊನಾ ವೈರಸ್‌ ಸೋಂಕು ತಗುಲಿದ ಮೊದಲನೇ ಪ್ರಕರಣ ಕೆನಡಾದಲ್ಲಿ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.

ಸೋಂಕು ಪೀಡಿತ ವ್ಯಕ್ತಿಯ ಪತ್ನಿಯಲ್ಲೂ ವೈರಸ್‌ ತಗುಲಿದ ಲಕ್ಷಣಗಳು ಕಂಡುಬಂದಿದೆ. ಆದರೆ, ದೃಢಪಟ್ಟಿಲ್ಲ. ಸುಮಾರು 20 ಮಂದಿಯ ಮೇಲೆ ನಿಗಾ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಪಾನ್‌ ಪ್ರಜೆಗಳನ್ನು ಕರೆತರಲು ಕ್ರಮ

ಟೋಕಿಯೊ (ಎಎಫ್‌ಪಿ): ಚೀನಾದ ವುಹಾನ್‌ ನಗರದಲ್ಲಿರುವ ಜಪಾನ್‌ ಪ್ರಜೆಗಳನ್ನು ಸ್ವದೇಶಕ್ಕೆ ಕರೆತರಲು ವಿಮಾನವೊಂದನ್ನು ಕಳುಹಿಸಲು ಸಜ್ಜುಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವತೋಷಿಮಿಟ್ಸು ಮೊಟೆಗಿ ಮಂಗಳವಾರ ತಿಳಿಸಿದ್ದಾರೆ.

‘ನಮ್ಮ ಪ್ರಜೆಗಳನ್ನು ಕರೆತರಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಂಗಳವಾರ ಸಂಜೆ ಇಲ್ಲಿಂದ ವಿಮಾನ ಹೊರಡಲಿದ್ದು, ಬುಧವಾರ ಬೆಳಿಗ್ಗೆ ಮರಳಿ ಬರುವ ಸಾಧ್ಯತೆ ಇದೆ. ಈ ಕುರಿತು ಚೀನಾ ಜೊತೆಗೂ ಮಾತುಕತೆ ನಡೆಸಲಾಗಿದ್ದು, ಅಲ್ಲಿಂದ ಒಪ್ಪಿಗೆ ದೊರೆತಿದೆ. ವುಹಾನ್‌ ನಗರದಲ್ಲಿರುವ 650 ಜಪಾನ್‌ ಜನರ ಪೈಕಿ 200 ಮಂದಿಯನ್ನು ಮೊದಲ ಹಂತದಲ್ಲಿ ಕರೆತರಲಾಗುವುದು. ಉಳಿದವರನ್ನು ಸಹ ಆದಷ್ಟು ಬೇಗ ಕರೆತರಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಸ್ವದೇಶಕ್ಕೆ ಕರೆದುಕೊಂಡು ಹೋಗಲು ಪಾಕ್‌ ವಿದ್ಯಾರ್ಥಿಗಳ ಮನವಿ

ಇಸ್ಲಾಮಾಬಾದ್‌/ಬೀಜಿಂಗ್‌ (ಪಿಟಿಐ): ಚೀನಾದ ವುಹಾನ್‌ ನಗರದಲ್ಲಿ ಪಾಕಿಸ್ತಾನದ 2000 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಆದಷ್ಟು ಬೇಗನೆ ತಮ್ಮನ್ನು ಸ್ವದೇಶಕ್ಕೆ ಕರೆದುಕೊಂಡು ಹೋಗಬೇಕು ಎಂದು ಅವರು ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

‘ಇತರೆ ದೇಶಗಳು ತಮ್ಮ ಪ್ರಜೆಗಳನ್ನು ವಿಶೇಷ ವಿಮಾನಗಳ ಮೂಲಕ ಕರೆದುಕೊಂಡು ಹೋಗುತ್ತಿದ್ದಾರೆ. ಅದೇ ರೀತಿ ನಮ್ಮನ್ನು ಕರೆದುಕೊಂಡು ಹೋಗಬೇಕು. 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದು, ಕೊರೊನಾ ವೈರಸ್‌ ಸೋಂಕು ಒಬ್ಬರಿಗೆ ತಗುಲಿದರೂ ಇತರರು ತೊಂದರೆಗೆ ಒಳಗಾಗಬೇಕಾದ ಪರಿಸ್ಥಿತಿ ಇದೆ’ ಎಂದು ವಿದ್ಯಾರ್ಥಿನಿ ಹಫ್ಸಾ ತಯಬಾ ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

‘ವಿದ್ಯಾರ್ಥಿಗಳನ್ನು ಕರೆತರಲು ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಚೀನಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ನಮ್ಮ ದೇಶದ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆಯೂ ಕೋರಲಾಗಿದೆ’ ಎಂದು ಇಸ್ಲಾಮಾಬಾದ್‌ನ ವಿದೇಶಾಂಗ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT