ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌: 40,600 ಜನರಿಗೆ ಸೋಂಕು

ಸತ್ತವರ ಸಂಖ್ಯೆ 908ಕ್ಕೆ ಏರಿಕೆ– ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ
Last Updated 10 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬೀಜಿಂಗ್‌: ಮಾರಣಾಂತಿಕ ಕೊರೊನಾ ವೈರಸ್‌ ಸೋಂಕಿಗೆಚೀನಾದಲ್ಲಿ ಬಲಿಯಾದವರ ಸಂಖ್ಯೆ 908ಕ್ಕೆ ಏರಿದೆ. ಜಾಗತಿಕವಾಗಿ ಒಟ್ಟು 40,171 ಜನರು ಸೋಂಕು ಪೀಡಿತರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ, ವಿಶ್ವದ ಇತರೆ ದೇಶಗಳಲ್ಲೂ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದು, ಚೀನಾದ ಪ್ರಕರಣಗಳು ಸೇರಿ ಜಾಗತಿಕವಾಗಿ ಒಟ್ಟು 40,600 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ವಿವಿಧ ದೇಶಗಳಲ್ಲಿ ಸೋಂಕು ಪೀಡಿತರ ಸಂಖ್ಯೆ ಹೀಗಿದೆ: ಜಪಾನ್ 162, ಸಿಂಗಪುರ 43, ಥಾಯ್ಲೆಂಡ್‌ 32, ದಕ್ಷಿಣ ಕೊರಿಯಾ 27, ಮಲೇಷ್ಯಾ 18, ತೈವಾನ್‌ 16, ಆಸ್ಟ್ರೇಲಿಯಾ, ಜರ್ಮನಿ, ವಿಯೆಟ್ನಾಂ ತಲಾ 14, ಅಮೆರಿಕ 12, ಫ್ರಾನ್ಸ್‌ 11, ಯುಎಇ 7, ಕೆನರಾ 6, ಫಿಲಿಪ್ಪೀನ್ಸ್ 3, ಇಂಗ್ಲೆಂಡ್‌, ಭಾರತ, ಇಟಲಿ ತಲಾ 3, ರಷ್ಯಾ, ಸ್ಪೇನ್ ತಲಾ 2, ಬೆಲ್ಜಿಯಂ, ನೇಪಾಳ, ಶ್ರೀಲಂಕಾ, ಸ್ವೀಡನ್, ಕಾಂಬೋಡಿಯಾ, ಫಿನ್‌ಲೆಂಡ್ ತಲಾ 1.

ಚೀನಾದಲ್ಲಿ ಭಾನುವಾರವೇ 97 ಮಂದಿ ಸತ್ತಿದ್ದು, 3,062 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಸೋಂಕಿನ ಮೂಲವಾದ ಹ್ಯುಬೆ ಪ್ರಾಂತ್ಯದಲ್ಲಿಯೇ 91 ಜನರು ಸತ್ತಿದ್ದಾರೆ.

27 ವಿದೇಶಿಯರಿಗೆ ಸೋಂಕು:ಇದುವರೆಗೂ ಒಟ್ಟು 27 ಮಂದಿ ವಿದೇಶಿಯರು ಕೊರೊನಾ ವೈರಸ್‌ ಪೀಡಿತರಾಗಿದ್ದು, ಇವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ.

ಅಮೆರಿಕ ಮತ್ತು ಜಪಾನ್‌ನ ಒಬ್ಬರು ವುಹಾನ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಆದರೆ, ಸೋಂಕು ಪೀಡಿತರು ಯಾವ ದೇಶದವರು ಎಂಬುದರ ಮಾಹಿತಿಯನ್ನು ಚೀನಾ ಬಹಿರಂಗಪಡಿಸಿಲ್ಲ.

80 ಭಾರತೀಯರು: ಸೋಂಕಿನ ಕೇಂದ್ರವಾದ ವುಹಾನ್‌ ನಗರದಲ್ಲಿ ಸುಮಾರು 80 ಮಂದಿ ಭಾರತೀಯರು ಉಳಿದಿದ್ದು, ಅವರ ಸ್ಥಳಾಂತರವಾಗಿಲ್ಲ. ಈಚೆಗೆ ಕಡೆಗಳಿಗೆಯಲ್ಲಿ ಏರ್‌ಇಂಡಿಯಾ ವಿಮಾನ ಏರಲಾಗದ 10 ಜನರೂ ಇದರಲ್ಲಿ ಸೇರಿದ್ದಾರೆ.

ಅಧಿಕ ಜ್ವರದ ಛಾಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 10 ಜನರಿಗೆ ವಿಮಾನ ಏರದಂತೆ ಚೀನಾದ ಅಧಿಕಾರಿಗಳು ತಡೆ ಒಡ್ಡಿದ್ದರು. ಭಾರತ ಸರ್ಕಾರ ಈಚೆಗೆ ಸುಮಾರು 647 ನಾಗರಿಕರನ್ನು ವುಹಾನ್‌ ನಗರದಿಂದ ಸ್ಥಳಾಂತರಿಸಿತ್ತು.

ಪಾಕ್‌ ಶೀಘ್ರ ನಿರ್ಧಾರ: ಕೊರೊನಾ ವೈರಸ್‌ ಸೋಂಕು ಪೀಡಿತ ಚೀನಾದ ಪ್ರದೇಶಗಳಿಂದ ವಿದ್ಯಾರ್ಥಿಗಳು ಸೇರಿದಂತೆ ತನ್ನ ನಾಗರಿಕರ ಸ್ಥಳಾಂತರ ಕುರಿತಂತೆ ಪಾಕ್ ಶೀಘ್ರ ನಿರ್ಧಾರ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ವೈರಸ್‌ ಪೀಡಿತರಿಗೆ ನೀಡುವ ಗುಣಮಟ್ಟದ ಚಿಕಿತ್ಸೆ ಸ್ಥಳೀಯವಾಗಿ ಲಭ್ಯವಿಲ್ಲದ ಕಾರಣ ಚೀನಾದ ವುಹಾನ್‌ನಿಂದ ದೇಶದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗದು ಎಂದು ಪಾಕಿಸ್ತಾನ ಈ ಮೊದಲು ಹೇಳಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಜಪಾನ್‌: ಡೈಮಂಡ್‌ ಪ್ರಿನ್ಸೆಸ್ ಹಡಗಿನಲ್ಲಿ ಭಾರತೀಯರು

ಟೋಕಿಯೊ: ಜಪಾನ್‌ನ ತೀರ ಪ್ರದೇಶದಲ್ಲಿ ನಿಲ್ಲಿಸಲಾದ ಡೈಮಂಡ್‌ ಪ್ರಿನ್ಸೆಸ್‌ ಕ್ರ್ಯೂಸ್‌ನಲ್ಲಿರುವ, 60 ಮಂದಿಗೆ ಕೊರೊನಾ ವೈರಸ್‌ ತಗುಲಿರುವುದು ದೃಢಪಟ್ಟಿದೆ. ಸೋಂಕು ಪೀಡಿತ ಪ್ರಯಾಣಿಕರ ಸಂಖ್ಯೆ 130ಕ್ಕೆ ಏರಿದೆ.

ಹಡಗಿನಲ್ಲಿ ಅನೇಕ ಮಂದಿ ಭಾರತೀಯರೂ ಇದ್ದಾರೆ. ಜಪಾನ್‌ನಲ್ಲಿನ ಭಾರತದ ರಾಯಭಾರಿ ಈ ಕುರಿತು ಟ್ವೀಟ್‌ ಮಾಡಿದ್ದು, ‘ಹಡಗಿನಲ್ಲಿ ಭಾರತೀಯ ಪ್ರಯಾಣಿಕರು, ಸಿಬ್ಬಂದಿ ಇದ್ದಾರೆ’ ಎಂದಿದ್ದಾರೆ. ಆದರೆ, ಎಷ್ಟು ಮಂದಿ ಭಾರತೀಯರಿದ್ದಾರೆ ಎಂಬ ವಿವರ ನೀಡಿಲ್ಲ.

ಹಡಗಿನಲ್ಲಿದ್ದ ಒಬ್ಬರಿಗೆ ಸೋಂಕು ತಗುಲಿದ್ದು, ದೃಢಪಟ್ಟ ನಂತರ ಪ್ರಯಾಣಿಕರ ನಿರ್ಗಮನಕ್ಕೆ ನಿರ್ಬಂಧ ವಿಧಿಸಲಾಗಿದೆ. ಒಟ್ಟು 3,711 ಪ್ರಯಾಣಿಕರಿದ್ದು, ಸೋಂಕು ಇಲ್ಲದಿರುವುದು ದೃಢವಾದ ಬಳಿಕ ಪ್ರಯಾಣಿಕರನ್ನು ಹೊರಗೆ ಕಳುಹಿಸಲಾಗುತ್ತಿದೆ.

ನೆರವು: ಮೋದಿ ಪತ್ರಕ್ಕೆ ಚೀನಾ ಶ್ಲಾಘನೆ

ಬೀಜಿಂಗ್: ಮಾರಣಾಂತಿಕ ಕೊರೊನಾ ವೈರಸ್‌ ಪಿಡುಗು ಕಡಿವಾಣಕ್ಕೆ ಭಾರತ ಎಲ್ಲ ಅಗತ್ಯ ನೆರವು ಒದಗಿಸಲಿದೆ ಎಂಬ ಭರವಸೆ ನೀಡಿ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿರುವುದನ್ನು ಚೀನಾ ಶ್ಲಾಘಿಸಿದೆ.

ಬೀಜಿಂಗ್ ಜೊತೆಗೆ ನವದೆಹಲಿಯ ಸ್ನೇಹ ಸೌಹಾರ್ದವನ್ನು ಇದು ಬಿಂಬಿಸಲಿದೆ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಹೇಳಿದ್ದಾರೆ. ಚೀನಾಗೆ ನೆರವು ಮತ್ತು ಮೃತರಿಗೆ ಸಂತಾಪ ವ್ಯಕ್ತಪಡಿಸಿದ ಮೋದಿ ಈಚೆಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT