ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಪಿಡುಗು: 93 ದಿನ, 10 ಲಕ್ಷ ಸೋಂಕು, 53,000 ಜನ ಸಾವು; ವ್ಯಥೆ ಮುಗಿದಿಲ್ಲ

Last Updated 3 ಏಪ್ರಿಲ್ 2020, 3:00 IST
ಅಕ್ಷರ ಗಾತ್ರ

ನವದೆಹಲಿ: 2019ರ ಡಿಸೆಂಬರ್‌ 31, ಜಗತ್ತಿನಾದ್ಯಂತ ಹೊಸ ವರ್ಷದ ಆಚರಣೆಗೆ ಅಂತಿಮಹಂತದ ಸಿದ್ಧತೆಗಳು ನಡೆದಿದ್ದವು. ಅತ್ತ ಚೀನಾದ ವುಹಾನ್‌ನಲ್ಲಿ ಮೊದಲ ಕೊರೊನಾ ವೈರಸ್‌ ಸೋಂಕು ಪ್ರಕರಣ ವರದಿಯಾಯಿತು. ನಿಗೂಢ ರೀತಿಯ ಸೋಂಕು ಎಂದೇ ಬಿಂಬಿತವಾಗಿದ್ದ ಕೊರೊನಾ, ಅದಾಗಲೇ 27 ಮಂದಿಗೆ ತಗುಲಿರುವುದು ದೃಢಪಟ್ಟಿತ್ತು. ಮೊದಲ ಸೋಂಕು ಪ್ರಕರಣ ದಾಖಲಾಗಿ 93 ದಿನಗಳಲ್ಲಿ ಜಗತ್ತಿನಾದ್ಯಂತ ಸೋಂಕು 10 ಲಕ್ಷಕ್ಕೂ ಹೆಚ್ಚು ಜನರಿಗೆ ತಗುಲಿ, 53 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ.

ಕೆಲವು ರಾಷ್ಟ್ರಗಳು ಅಧಿಕೃತವಾಗಿ ಲಾಕ್‌ಡೌನ್‌ ಘೋಷಿಸಿದರೆ, ಇನ್ನೂ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ಪ್ರಭಾವ ಇಡೀ ವ್ಯವಸ್ಥೆಯನ್ನೇ ಸ್ಥಗಿತಗೊಳಿಸುವಷ್ಟು ಪ್ರಭಾವ ಬೀರಿದೆ. ವ್ಯಾಪಾರ, ವಹಿವಾಟುಗಳ ಕಾರ್ಯಾಚರಣೆ, ಕೈಗಾರಿಕೆಗಳಲ್ಲಿ ತಯಾರಿಕೆ, ಸಂಚಾರ ಎಲ್ಲವೂ ನಿಂತ ನೀರಾಗಿದೆ. ಇದರಿಂದಾಗಿ 200ಕ್ಕಿಂತ ಹೆಚ್ಚು ರಾಷ್ಟ್ರಗಳಲ್ಲಿ ಆರ್ಥಿಕತೆಗೆ ತೀವ್ರ ಪೆಟ್ಟು ಬಿದ್ದಿದೆ. ಜಗತ್ತಿನಾದ್ಯಂತ 10,18,961 ಲಕ್ಷ ಮಂದಿ ಸೋಂಕಿತರಾಗಿರುವುದು ಸಾಮಾಜಿಕ, ಆರ್ಥಿಕ ಹಾಗೂ ಮಾನಸಿಕ ಸ್ವಾಸ್ಥ್ಯದ ಮೇಲೆ ಗಾಢ ಪರಿಣಾಮವನ್ನೇ ಉಂಟು ಮಾಡಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಹೊರಬರದೆ ಮನೆಯಲ್ಲಿಯೇ ಉಳಿಯುವುದಷ್ಟೇ ಸೋಂಕು ನಿಯಂತ್ರಣಕ್ಕಿರುವ ದಾರಿಯಾಗಿ ತೋರಿದೆ. 53,105 ಜನರು ಕೋವಿಡ್‌–19ಗೆ ಬಲಿಯಾಗಿದ್ದಾರೆ. 2,09,063 ಮಂದಿ ಮಾತ್ರಚೇತರಿಕೆ ಕಂಡಿದ್ದಾರೆ.

ಕೊರೊನಾದಿಂದ ತೀವ್ರ ಹೊಡೆತಕ್ಕೆ ಸಿಲುಕಿರುವುದು ವಿಶ್ವದ ಹಿರಿಯಣ್ಣ ಅಮೆರಿಕ. ಗುರುವಾರದ ವರೆಗೂ ಅಮೆರಿಕದಲ್ಲಿ 2,44,137 ಸೋಂಕು ಪ್ರಕರಣಗಳು ವರದಿಯಾಗಿದ್ದು, 6,049 ಮಂದಿ ಸಾವಿಗೀಡಾಗಿದ್ದಾರೆ. ಭಾರತದಲ್ಲಿ ಗುರುವಾರ ಒಂದೇ ದಿನ 500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟು ಪ್ರಕರಣ 2,511 ತಲುಪಿದೆ ಹಾಗೂ 69 ಮಂದಿ ಸಾವಿಗೀಡಾಗಿದ್ದಾರೆ. ಇಟಲಿ ಅಥವಾ ಅಮೆರಿಕದಲ್ಲಿ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿರುವಂತೆಭಾರತದಲ್ಲೂ ವ್ಯಾಪಿಸುವುದನ್ನುನಿಯಂತ್ರಿಸಲು ಏಪ್ರಿಲ್‌ 14 ವರೆಗೂ ಲಾಕ್‌ಡೌನ್‌ ಆಚರಣೆಯಲ್ಲಿದೆ. ದೆಹಲಿಯ ನಿಜಾಮುದ್ದೀನ್‌ನ ಮರ್ಕಜ್‌ನಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಸುಮಾರು 9,000 ಮಂದಿ ಭಾಗಿಯಾಗಿದ್ದು, ಅವರಲ್ಲಿ ಹಲವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರಲ್ಲಿ ಬಹುತೇಕರನ್ನು ಕ್ವಾರಂಟೈನ್‌ ಮಾಡಲಾಗಿದೆ ಹಾಗೂ ಪರೀಕ್ಷೆಗಳಿಗೆ ಒಳಪಡಿಸಲಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ದಾಖಲಾಗಿದೆ.

ನ್ಯೂಯಾರ್ಕ್‌ವೊಂದರಲ್ಲೇ 2,200 ಜನರು ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಅಮೆರಿಕ ಮತ್ತು ಯುರೋಪ್‌ ಕೊರೊನಾ ಹರಡುವ ಹಾಟ್‌ಸ್ಪಾಟ್‌ಗಳಾಗಿ ಪರಿಣಮಿಸಿವೆ. 'ಮುಂದಿನ ಎರಡು–ಮೂರು ವಾರಗಳು ಅತ್ಯಂತ ಕಠಿಣ ದಿನಗಳಾಗಬಹುದು. ನಾವು ಸಾವಿರಾರು ಜನರನ್ನು ಕಳೆದುಕೊಳ್ಳಬಹುದು' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಸೇರಿದಂತೆ ಹಲವು ನಾಯಕರು ಮರುಗುತ್ತಿದ್ದಾರೆ. ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಅಮೆರಿಕದಲ್ಲಿ 2,40,000 ಮಂದಿ ಸಾವಿಗೀಡಾಗಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಜಾನ್‌ ಹಾಪ್‌ಕಿನ್ಸ್‌ ಯೂನಿವರ್ಸಿಟಿ ಪ್ರಕಾರ, 24 ಗಂಟೆಗಳಲ್ಲಿ ಅಮೆರಿಕದಲ್ಲಿ 1,169 ಜನರು ಮೃತಪಟ್ಟಿದ್ದಾರೆ.

ಸಾರ್ಸ್‌–ಕೊರೊನಾ ವೈರಸ್‌ 2 ಸೋಂಕಿಗೆ ಅತಿ ವೇಗವಾಗಿ ತೆರೆದುಕೊಂಡಿದ್ದು ಇಟಲಿಯಲ್ಲಿ. ಹೆಚ್ಚು ಹಿರಿಯ ನಾಗರಿಕರನ್ನು ಹೊಂದಿರುವ ಇಟಲಿಯಲ್ಲಿ ಈವರೆಗೂ 13,974 ಮಂದಿ ಸಾವಿಗೀಡಾಗಿದ್ದಾರೆ. ಇನ್ನೂ ಸ್ಪೇನ್‌, ಯುನೈಟೆಡ್‌ ಕಿಂಗ್‌ಡಮ್‌, ಫ್ರಾನ್ಸ್‌ ಹಾಗೂ ಜರ್ಮನಿಯಲ್ಲಿ ಸಾವಿಗೀಡಾದವರ ಸಂಖ್ಯೆ 20,000 ಮುಟ್ಟಿದೆ. ಎರಡು ತಿಂಗಳು ಪೂರ್ಣ ಲಾಕ್‌ಡೌನ್‌ಗೆ ಮೊರೆ ಹೋಗಿದ್ದ ಚೀನಾದಲ್ಲಿ3,300 ಮಂದಿ ಮೃತಪಟ್ಟಿದ್ದಾರೆ.

ಹೊಸ ವರ್ಷದ ಮೊದಲ ಮೂರು ತಿಂಗಳು ವಿಶ್ವದ ಷೇರುಪೇಟೆಗಳಲ್ಲಿ ಐತಿಹಾಸಿಕ ಕುಸಿತ ದಾಖಲಾಗಿದೆ. ಅಮೆರಿಕದ ಡೌ ಜಾನ್ಸ್‌ ಶೇ 23ರಷ್ಟು ಹಾಗೂ ಲಂಡನ್‌ನ ಎಫ್‌ಟಿಎಸ್‌ಇ 100 ಷೇರುಪೇಟೆ ಶೇ 25ರಷ್ಟು ಇಳಿಕೆಯಾಗಿದ್ದು, 1987ರಿಂದ ಇದೇ ಮೊದಲ ಬಾರಿಗೆ ತ್ರೈಮಾಸಿಕದಲ್ಲಿ ಅತಿ ದೊಡ್ಡ ಕುಸಿತ ಕಂಡಿವೆ. ಭಾರತದ ಮುಂಬೈ ಷೇರುಪೇಟೆಯಲ್ಲಿ ಮಾರ್ಚ್‌ನಲ್ಲಿ ಹೂಡಿಕೆದಾರರ ₹33.38 ಲಕ್ಷ ಕೋಟಿ ಕೊಚ್ಚಿ ಹೋಗಿದೆ.

ಸುಮಾರು ಒಂದು ಕೋಟಿ ಅಮೆರಿಕನ್ನರು ಎರಡು ವಾರಗಳಲ್ಲಿ ಉದ್ಯೋಗದಿಂದ ದೂರ ಉಳಿದಿದ್ದಾರೆ. ಭಾರತದಲ್ಲಿಯೂ ಕೈಗಾರಿಕೆಗಳು, ಮಾರುಕಟ್ಟೆ ಕಾರ್ಯ ಸ್ಥಗಿತದಿಂದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೊನಾ ವೈರಸ್‌ ಪ್ರಭಾವ ಶಮನಗೊಂಡರೂ ನಿರುದ್ಯೋಗ ಪ್ರಮಾಣ ಜಗತ್ತಿನಾದ್ಯಂತ ತೀವ್ರವಾಗಿ ಕಾಡಲಿದೆ ಹಾಗೂ ಆರ್ಥಿಕ ಹಿಂಜರಿತ ಎದುರಾಗಲಿದೆ ಎಂದು ಅರ್ಥಶಾಸ್ತ್ರ ತಜ್ಞರು ವಿಶ್ಲೇಷಿಸಿದ್ದಾರೆ.

ಪ್ರಮುಖ ಬೆಳವಣಿಗೆಗಳು

ಜನವರಿ 30: ಭಾರತದಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ದಾಖಲು
ಮಾರ್ಚ್‌ 11: ಕೊರೊನಾ ವೈರಸ್‌ ಸೋಂಕು ಜಾಗತಿಕ ಸಾಂಕ್ರಾಮಿಕ ಎಂದು ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ
ಮಾರ್ಚ್‌ 12: ಕೋವಿಡ್‌–19ನಿಂದ ಭಾರತದಲ್ಲಿ ಮೊದಲ ಸಾವು
ಮಾರ್ಚ್‌ 25: ದೇಶದಾದ್ಯಂತ 21 ದಿನಗಳ ಲಾಕ್‌ಡೌನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT