ಶುಕ್ರವಾರ, ಏಪ್ರಿಲ್ 3, 2020
19 °C

ಮಾರಣಾಂತಿಕ ಕೊರೊನಾ ವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ 2,715ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೀಜಿಂಗ್‌: ದಿನದಿಂದ ದಿನಕ್ಕೆ ಹಲವಾರು ಜನರನ್ನು ಬಲಿಪಡೆಯುತ್ತಲೇ ಇರುವ ‘ಕೋವಿಡ್‌–19’ (ಕೊರೊನಾ ವೈರಸ್‌) ಸೋಂಕಿಗೆ ಚೀನಾದಲ್ಲಿ ಹೊಸದಾಗಿ 406 ಜನರು ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 2,715ಕ್ಕೆ ಏರಿಕೆಯಾಗಿದೆ.  

ಫೆಬ್ರವರಿ 25ರ ಅಂತ್ಯದ ವೇಳೆಗೆ ಮೃತಪಟ್ಟವರ ಸಂಖ್ಯೆ 2,715ಕ್ಕೆ ತಲುಪಿದೆ. ಹೊಸದಾಗಿ 406 ಕೊರೊನಾವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಸೋಂಕು ತಗುಲಿರುವವರ ಸಂಖ್ಯೆಯು 78,064ಕ್ಕೆ ಏರಿಕೆಯಾಗಿದೆ. 29,700ಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ ಎಂದು ದೇಶದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‍‌ಸಿ)ತಿಳಿಸಿದೆ.

ಹೊಸದಾಗಿ ಮೃತಪಟ್ಟವರೆಲ್ಲರೂ ತೀವ್ರವಾಗಿ ಸೋಂಕು ಪೀಡಿತ ಕೇಂದ್ರವಾದ ಹುಬೆ ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ. ಫೆಬ್ರವರಿ 25ಕ್ಕೆ ಹೊಸದಾಗಿ 401ಸಾವು ಸಂಭವಿಸಿದ್ದು, ಹಿಂದಿನ ದಿನ 499 ಜನರು ಮೃತಪಟ್ಟಿದ್ದರು. 

ಹುಬೆ ಪ್ರಾಂತ್ಯದ ಹೊರಗೆ ಐವರು ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ಇದು ಸತತ ಐದನೇ ದಿನ ಮತ್ತು ಜನವರಿ 20ರ ನಂತರದ ಅತಿ ಕಡಿಮೆ ಸಂಖ್ಯೆಯು ಇದಾಗಿದೆ ಎಂದು ಎನ್‌ಎಚ್‌ಸಿ ರಾಷ್ಟ್ರವ್ಯಾಪಿಯ ಅಂಕಿ ಅಂಶಗಳನ್ನು ಪ್ರಕಟಿಸಿದೆ.

ಚೀನಾದ ಕೆಲವು ಭಾಗಗಳು ತಮ್ಮ ತುರ್ತು ಪ್ರತಿಕ್ರಿಯೆ ಮಟ್ಟವನ್ನು ಕಡಿಮೆ ಮಾಡಲು ಪ್ರಾರಂಭಿಸಿದ ಬಳಿಕ ಅಲ್ಲಿ ವರದಿಯಾದ ಹೊಸ ಪ್ರಕರಣಗಳ ಸಂಖ್ಯೆ ನಿಧಾನವಾಗುತ್ತಿದೆ. ಈ ಮಧ್ಯೆ ಯುರೋಪ್, ಮಧ್ಯಪ್ರಾಚ್ಯ ಮತ್ತು ವಿಶ್ವದ ಇತರ ಭಾಗಗಳಲ್ಲಿ ಕೊರೊನಾ ವೈರಸ್ ಹರಡುತ್ತಿದೆ. 

ಇಟಲಿಯಲ್ಲಿ ಹೆಚ್ಚಿನ ಸಾವು ನೋವುಗಳು ವರದಿಯಾಗಿವೆ. ದಕ್ಷಿಣ ಕೊರಿಯಾದಲ್ಲಿ ಕೊರೊನಾವೈರಸ್‌ಗೆ ಬುಧವಾರ 11ನೇ ವ್ಯಕ್ತಿ ಮೃತಪಟ್ಟಿದ್ದಾರೆ. ಹೊಸದಾಗಿ 169 ಸೋಂಕು ಪೀಡಿತ ಪ್ರಕರಣಗಳು ದೃಢಪಟ್ಟಿದ್ದು, ದೇಶದಲ್ಲಿ ಈಗ ಕನಿಷ್ಠ 1,146 ಕೊರೊನಾವೈರಸ್ ಪೀಡಿತ ಪ್ರಕರಣಗಳಿವೆ. ಇವುಗಳಲ್ಲಿ ಹೆಚ್ಚಿನವು ಡೇಗು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ವರದಿಯಾಗಿವೆ.

ಲೆಬನಾನ್‌, ಬೆಲ್ಜಿಯಂ, ನೇಪಾಳ, ಶ್ರೀಲಂಕಾ, ಸ್ವೀಡನ್‌, ಕಾಂಬೋಡಿಯಾ, ಫಿನ್ಲೆಂಡ್‌, ಈಜಿಪ್ಟ್‌ ಹಾಗೂ ಅಫ್ಗಾನಿಸ್ತಾನದಲ್ಲಿ ತಲಾ ಒಬ್ಬರಲ್ಲಿ ಸೋಂಕು ಕಾಣಿಸಿದೆ. ಈ ದೇಶಗಳಲ್ಲಿ ಯಾರೂ ಸತ್ತಿರುವ ಬಗ್ಗೆ ವರದಿಯಾಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು