ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಭೀತಿ | ಶಾಲೆಗಳಿಗೆ ರಜೆ: ಮನೆಯಲ್ಲೇ ಉಳಿದ 30 ಕೋಟಿ ಮಕ್ಕಳು

ಕ್ಯಾಲಿಫೋರ್ನಿಯಾದಲ್ಲಿ ತುರ್ತು ಪರಿಸ್ಥಿತಿ
Last Updated 5 ಮಾರ್ಚ್ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಟೆಹರಾನ್‌, ದುಬೈ, ರೋಮ್‌: ಕೋವಿಡ್‌– 19 ಸೋಂಕಿನ ಭೀತಿಯಿಂದ 13 ರಾಷ್ಟ್ರಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದರಿಂದ ಸುಮಾರು 30 ಕೋಟಿ ವಿದ್ಯಾರ್ಥಿಗಳು ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

‘ಇತರ ಒಂಬತ್ತು ರಾಷ್ಟ್ರಗಳಲ್ಲಿ ಸ್ಥಳೀಯ ಪರಿಸ್ಥಿತಿಯ ತಕ್ಕಂತೆ ಶಾಲೆಗಳಿಗೆ ರಜೆ ನೀಡಲಾಗುತ್ತಿದೆ. ವೈರಸ್‌ ಭೀತಿಯಿಂದ ಶಾಲೆಗಳಿಗೆ ರಜೆ ನೀಡುವುದು ಮುಂದುವರಿದರೆ ಶೈಕ್ಷಣಿಕ ಚಟುವಟಿಕೆಗೆ ಅಡ್ಡಿಯಾಗಲಿದೆ’ ಎಂದು ಯುನೆಸ್ಕೊ ಮುಖ್ಯಸ್ಥ ಔಡ್ರೆ ಅಝೌಲೇ ತಿಳಿಸಿದ್ದಾರೆ.

ಇರಾನ್‌ನಲ್ಲಿ ಶಾಲೆ ಮತ್ತು ವಿಶ್ವವಿದ್ಯಾಲಯಗಳನ್ನು ಒಂದು ತಿಂಗಳ ಕಾಲ ಮುಚ್ಚಲು ನಿರ್ಧರಿಸಲಾಗಿದೆ.

‘ಒಂದು ತಿಂಗಳ ರಜೆಯನ್ನು ಪ್ರವಾಸಕ್ಕೆ ತೆರಳಲು ಬಳಸಬಾರದು. ಮನೆಯಲ್ಲೇ ಇರಬೇಕು ಮತ್ತು ಸರ್ಕಾರ ನೀಡುವ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಆರೋಗ್ಯ ಸಚಿವ ಸಯೀದ್ ನಮಕಿ ತಿಳಿಸಿದ್ದಾರೆ.

ಇರಾನ್‌ನಲ್ಲಿ ಇದುವರೆಗೆ 107 ಮಂದಿ ಸಾವಿಗೀಡಾಗಿದ್ದು, 3,513 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ನಾಗರಿಕರು ಪ್ರವಾಸಕ್ಕೆ ತೆರಳುವುದನ್ನು ತಡೆಯಲು ತಪಾಸಣೆ ಠಾಣೆಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.

ಇಟಲಿಯಲ್ಲೂ ಶಾಲಾ– ಕಾಲೇಜುಗಳನ್ನು ಮುಚ್ಚಲಾಗಿದೆ. ಇಟಲಿಯಲ್ಲಿ ಮಾರ್ಚ್‌ 15ರವರೆಗೆ ಶಾಲೆ ಮತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಲು ಬುಧವಾರ ಆದೇಶ ನೀಡಲಾಗಿದೆ. ಇಟಲಿಯಲ್ಲಿ ಇದುವರೆಗೆ 107 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ದಕ್ಷಿಣ ಕೊರಿಯಾದಲ್ಲೂ ಮಾರ್ಚ್‌ 23ರವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಚೀನಾ ಹೊರತುಪಡಿಸಿದರೆ ಈ ರಾಷ್ಟ್ರದಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದುವರೆಗೆ 6,000 ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಜಪಾನ್‌ನಲ್ಲೂ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಾರ್ಚ್‌ ತಿಂಗಳ ಅಂತ್ಯದವರೆಗೂ ಇದು ಅನ್ವಯವಾಗಲಿದೆ. ಫ್ರಾನ್ಸ್‌ನಲ್ಲಿ ಸುಮಾರು 120 ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಚರ್ಚ್‌ ಮುಚ್ಚಲು ನಿರ್ಧಾರ: ಕೋವಿಡ್‌ 19 ಭೀತಿಯಿಂದ ಜೀಸಸ್‌ನ ಜನ್ಮಸ್ಥಳ ಬೆತ್ಲೆಹೆಮ್‌ನಲ್ಲಿರುವ ಚರ್ಚ್‌ ಅನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ಗುರುವಾರ ಚರ್ಚ್‌ನ ಅಧಿಕಾರಿಗಳು ಹೇಳಿದ್ದಾರೆ.

ನಗರದ ಹೋಟೆಲ್‌ವೊಂದರಲ್ಲಿವೈರಸ್‌ ಇರುವ ಶಂಕಿತ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಕಾರಣದಿಂದ ಇಲ್ಲಿನ ಚರ್ಚ್‌, ಮಸೀದಿ ಮತ್ತು ಇತರೆ ಸಂಸ್ಥೆಗಳನ್ನು ಮುಚ್ಚಲು ಆರೋಗ್ಯ ಇಲಾಖೆ ಆದೇಶ ನೀಡಿದೆ.

ಚೀನಾ: 3 ಸಾವಿರ ದಾಟಿದ ಸಾವಿನ ಸಂಖ್ಯೆ
ಬೀಜಿಂಗ್‌
: ಚೀನಾದಲ್ಲಿ ಕೋವಿಡ್‌–19 ಸೋಂಕಿನಿಂದ ಮತ್ತೆ 31 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದಾಗಿ ಸಾವಿಗೀಡಾದವರ ಸಂಖ್ಯೆ 3,012 ದಾಟಿದ್ದು, ಒಟ್ಟು 80,409 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಗುರುವಾರ ಮತ್ತೆ 139 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಅತಿ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದ್ದ ವುಹಾನ್‌ ನಗರದಲ್ಲಿ ಪರಿಸ್ಥಿತಿ ಗಂಭೀರವಾಗಿಯೇ ಇದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಹ್ಯೂಬೆ ಪ್ರಾಂತ್ಯದಲ್ಲೇ 67,466 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಪ್ರಾಂತ್ಯದಲ್ಲಿ 2,902 ಮಂದಿ ಸಾವಿಗೀಡಾಗಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ತುರ್ತು ಪರಿಸ್ಥಿತಿ
ಲಾಸ್‌ ಏಂಜಲಿಸ್‌
: ಕೋವಿಡ್‌–19 ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕ್ಯಾಲಿಫೋರ್ನಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಅಮೆರಿಕದಲ್ಲಿ ಇದುವರೆಗೆ ಸಾವಿಗೀಡಾದವರ ಸಂಖ್ಯೆ 11ಕ್ಕೇರಿದೆ. ಕ್ಯಾಲಿಫೋರ್ನಿಯಾದಲ್ಲೂ ಒಬ್ಬರು ಸಾವಿಗೀಡಾಗಿದ್ದಾರೆ. ವೈರಸ್‌ ನಿಯಂತ್ರಿಸಲು 8 ಶತಕೋಟಿ ಡಾಲರ್‌ ಅನುದಾನ ನೀಡುವುದಾಗಿ ಸಂಸದರು ಘೋಷಿಸಿದ್ದಾರೆ.

ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ‘ಗ್ರ್ಯಾಂಡ್‌ ಪ್ರಿನ್ಸೆಸ್‌’ ಹಡಗಿನ ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದೇ ಹಡಗಿನಲ್ಲೇ ಕ್ಯಾಲಿಫೋರ್ನಿಯಾದ ವ್ಯಕ್ತಿ ಸೋಂಕಿಗೆ ಒಳಗಾಗಿದ್ದರು ಎನ್ನಲಾಗಿದೆ. ಒಂದು ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಈ ಹಡಗಿನಲ್ಲಿದ್ದು, ಇವರ ಆರೋಗ್ಯ ತಪಾಸಣೆಗೆ ಕ್ರಮಕೈಗೊಳ್ಳಲಾಗಿದೆ. 11 ಪ್ರಯಾಣಿಕರು ಮತ್ತು 10 ಸಿಬ್ಬಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಕ್ಯಾಲಿಫೋರ್ನಿಯಾ ಗವರ್ನರ್‌ ಗ್ಯಾವಿನ್‌ ನ್ಯೂಸಾಮ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT