ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid 19 World Update | ಹೀಗಿದೆ ಜರ್ಮನಿ ರೂಪಿಸಿರುವ ‘ಎಮರ್ಜೆನ್ಸಿ ಬ್ರೇಕ್’

ಇನ್ನೊಂದು ಹಂತಕ್ಕೆ ಲಾಕ್‌ಡೌನ್ ನಿರ್ಬಂಧಕ್ಕೆ ಜಗತ್ತು ಹೇಗೆ ಸಿದ್ಧವಾಗುತ್ತಿದೆ?
ಅಕ್ಷರ ಗಾತ್ರ
ADVERTISEMENT
""

ಹಲವು ವಾರಗಳಿಂದ ಕೊರೊನಾ ವೈರಸ್‌ ಸೋಂಕು ತಡೆಯಲೆಂದು ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದ್ದ ಹಲವು ದೇಶಗಳು ಇದೀಗ ನಿರ್ಬಂಧಗಳನ್ನು ಸಡಿಲಿಸುವ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲು ಮುಂದಾಗಿವೆ. ಇದೇ ಹೊತ್ತಿಗೆ ವೈರಸ್ ಪಿಡುಗು ಹೊಸ ಅವತಾರದಲ್ಲಿ ಮರುಕಳಿಸಬಹುದು ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ವಿಶ್ವದಲ್ಲಿ ಒಟ್ಟು 39.64 ಲಕ್ಷ ಜನರಲ್ಲಿ ಸೋಂಕು ದೃಢಪಟ್ಟಿದೆ. 2.73 ಲಕ್ಷ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.ಅಮೆರಿಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12.99 ಲಕ್ಷ ಮುಟ್ಟಿದೆ. 77,557 ಮಂದಿ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ ಸೋಂಕಿತರು ಮತ್ತು ಸಾವಿನ ಸಂಖ್ಯೆ ಅಪಾಯಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದೆ. 7 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. 629 ಮಂದಿ ಒಂದು ದಿನದಲ್ಲಿ ಮೃತಪಟ್ಟಿದ್ದಾರೆ. ಸ್ಪೇನ್‌ನಲ್ಲಿ 2.60 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 26,299 ಮಂದಿ ಮೃತಪಟ್ಟಿದ್ದಾರೆ.

ಯೂರೋಪ್‌ನ ಇತರ ದೇಶಗಳಿಗೆ ಹೋಲಿಸಿದರೆ ಅತ್ಯುತ್ತಮ ರೀತಿಯಲ್ಲಿ ಕೋವಿಡ್–19 ಪಿಡುಗು ನಿರ್ವಹಿಸಿದ್ದ ಜರ್ಮನಿಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಸೋಂಕಿನ ಮತ್ತೊಂದುಅಲೆ ಕಾಣಿಸಿಕೊಳ್ಳಬಹುದು ಎಂದು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿ ಲಾರ್ಸ್‌ ಶಾದೆ ಅಭಿಪ್ರಾಯಪಟ್ಟಿದ್ದಾರೆ.1918ರಲ್ಲಿ ಕಾಣಿಸಿಕೊಂಡಿದ್ದ ಸ್ಪೇನಿಶ್ ಫ್ಲೂ ಸಾಂಕ್ರಾಮಿಕವು ಎರಡನೇ ಅಲೆಯಲ್ಲಿ ಭೀಕರವಾಗಿ ಅಬ್ಬರಿಸಿತ್ತು. ಕೊರೊನಾ ಸೋಂಕಿನ ವಿಚಾರದಲ್ಲಿಯೂ ಇಂಥದ್ದೇ ಅಪಾಯವಿದೆ ಎನ್ನುವುದು ಹಲವರ ಲೆಕ್ಕಾಚಾರ.

‘ಲಾಕ್‌ಡೌನ್ ನಿರ್ಬಂಧ ಸಡಿಲಿಸುತ್ತಿರುವ ದೇಶಗಳು ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು. ಹಂತಹಂತವಾಗಿ ನಿರ್ಬಂಧಗಳನ್ನು ತೆರವುಗೊಳಿಸಬೇಕು. ಸಾಕಷ್ಟು ಪ್ರಮಾಣದಲ್ಲಿ ತಪಾಸಣೆ, ಪರೀಕ್ಷೆ ಮತ್ತು ಕ್ವಾರಂಟೈನ್ ಸೌಲಭ್ಯಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್ ಅಧನೊಮ್ ಸಹ ಎಚ್ಚರಿಕೆ ಹೇಳಿದ್ದಾರೆ.

‘ಎಮರ್ಜೆನ್ಸಿ ಬ್ರೇಕ್‌’ ಪರಿಕಲ್ಪನೆ ಮುಂದಿಟ್ಟ ಜರ್ಮನಿ

ಲಾಕ್‌ಡೌನ್‌ನ ಮೊದಲ ಹಂತವನ್ನು ಯಶಸ್ವಿಯಾಗಿ ಮುಗಿಸಿರುವ ಜರ್ಮನಿಯಲ್ಲಿ ಇದೀಗಶಾಲೆಗಳು, ಕ್ರೀಡಾ ಚಟುವಟಿಕೆಗಳ ಕಾರ್ಯಾಚರಣೆಗೆ ಸರ್ಕಾರ ಅವಕಾಶ ನೀಡಿದೆ. 10 ಲಕ್ಷ ಜನಸಂಖ್ಯೆಯಿರುವ ಪ್ರದೇಶದಲ್ಲಿ, 7 ದಿನಗಳಲ್ಲಿ 50 ಮಂದಿಯಲ್ಲಿ ಸೋಂಕು ದೃಢಪಟ್ಟರೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಮತ್ತೆ ಹೇರಲಾಗುವುದು. ಕೈಲಿ ಎಮರ್ಜೆನ್ಸಿ ಬ್ರೇಕ್ ಹಿಡಿದೇ ನಿರ್ಬಂಧ ಸಡಿಲಿಸಿದ್ದೇವೆ. ಇಡೀ ದೇಶಕ್ಕೆ ಸೋಂಕು ಹರಡಲಿ ಎಂದು ಕಾದು ಕೂರುವುದಿಲ್ಲಎಂದು ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ದೇಶದ 16 ಗವರ್ನರ್‌ಗಳಿಗೆ ಎಚ್ಚರಿಕೆ ಹೇಳಿದ್ದಾರೆ.

ವೈರಸ್ ವಿರುದ್ಧದ ಹೋರಾಟದಲ್ಲಿ ನಾವು ಸವೆಸಬೇಕಾದ ಹಾದಿ ಇನ್ನೂ ಸಾಕಷ್ಟಿದೆ ಎಂದಿರುವ ಮರ್ಕೆಲ್, ಜೂನ್ ತಿಂಗಳಲ್ಲಿ ಆರ್ಥಿಕ ಪ್ಯಾಕೇಜ್ ಘೋಷಿಸುವ ಆಲೋಚನೆ ಹೊಂದಿದ್ದಾರೆ. ಅಕ್ಕಪಕ್ಕದ ಮನೆಗಳವರು ಭೇಟಿಯಾಗಬಹುದು, ಸ್ವಚ್ಛತೆ ಕಾಪಾಡುವ ನಿಯಮ ಒಪ್ಪಿದರೆ ಅಂಗಡಿಗಳು ತೆರೆಯಬಹುದು, 5 ಅಡಿ ಅಂತರ ಕಾಪಾಡಿಕೊಂಡು ಸಾರ್ವಜನಿಕ ಸಾರಿಗೆ ಬಳಸಬಹುದು ಎಂದು ಸರ್ಕಾರ ಹೇಳಿದೆ.

ಜರ್ಮನಿಯಲ್ಲಿಮಾರ್ಚ್‌ ತಿಂಗಳಲ್ಲಿ ಲಾಕ್‌ಡೌನ್‌ ವಿಧಿಸಲಾಗಿತ್ತು. ಈವರೆಗೆ 7,392 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 1.69 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ವಿಶ್ವದ ವಿವಿಧ ದೇಶಗಳಲ್ಲಿ ಕೊರೊನಾ ಸೋಂಕಿತರು ಮತ್ತು ಮೃತರು (ಮೇ 8ರ ರಾತ್ರಿ 10.10ರ ಮಾಹಿತಿ). ಕೃಪೆ:www.worldometers.info

ಇಟಲಿಯಲ್ಲಿ ನಿರ್ಬಂಧ ಮುಂದುವರಿಕೆ

ಕೊರೊನಾ ವೈರಸ್ ಸೋಂಕಿನಿಂದ ಬಳಲಿದ್ದಇಟಲಿಯಲ್ಲಿ ಲಾಕ್‌ಡೌನ್‌ 2ನೇ ತಿಂಗಳಿಗೆ ಕಾಲಿಟ್ಟಿದೆ. ಹೊಟೆಲ್‌ಗಳಲ್ಲಿ ಪಾರ್ಸೆಲ್ ಕೊಂಡೊಯ್ಯಲು ಅವಕಾಶ ನೀಡಿರುವ ಸರ್ಕಾರ, ಲಾಕ್‌ಡೌನ್‌ಗೆ ಮೊದಲು ವಾಸವಿದ್ದ ಪ್ರದೇಶಗಳಿಗೆ ಹಿಂದಿರುಗಲು ಜನರಿಗೆ ಅನುಮತಿ ನೀಡಿದೆ.

‘ಭೀಕರ ಪರಿಸ್ಥಿತಿ ಮರುಕಳಿಸದಂತೆ ಇರಲು ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಜನರು ಜವಾಬ್ದಾರಿಯುತವಾಗಿ ವರ್ತಿಸಬೇಕು, ಸಹಕರಿಸಬೇಕು‘ ಎಂದು ಪ್ರಧಾನಿ ಗಿಸೆಪ್ಪೆ ಕಾಂಟೆ ಮನವಿ ಮಾಡಿದ್ದರು. ಇಟಲಿಯಲ್ಲಿ ಇಂದಿಗೂ ಸಾವಿರಾರು ಹೊಸ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ‘ದೇಶ ಇನ್ನೂ ಕೊರೊನಾ ಪಿಡುಗಿನಿಂದ ಮುಕ್ತವಾಗಿಲ್ಲ’ ಎಂದು ಕಾಂಟೆ ಹೆಳಿದ್ದರು.

ನಿರ್ಬಂಧ ತುಸು ಸಡಿಲಿಕೆಯಾಗಿದ್ದರೂ ಗೆಳೆಯರು ಪರಸ್ಪರ ಭೇಟಿಯಾಗುವಂತಿಲ್ಲ. ಮೇ 18ರವರೆಗೆ ಅಂಗಡಿಗಳು ತೆರೆಯುವಂತಿಲ್ಲ. ಶಾಲೆ, ಸಿನಿಮಾ ಥಿಯೇಟರ್‌ಗಳು ಅನಿರ್ದಿಷ್ಟಾವಧಿಗೆ ಮುಚ್ಚಿರಬೇಕು ಎಂದು ಸರ್ಕಾರ ಸೂಚಿಸಿದೆ. ಇಟಲಿಯಲ್ಲಿ ಈವರೆಗೆ 29,684 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 2.14 ಲಕ್ಷ ಮಂದಿ ಮೃತಪಟ್ಟಿದ್ದಾರೆ.

ಅಮೆರಿಕ ಗೊಂದಲದ ಗೂಡು

ಅಮೆರಿಕದ ಮಿಸಿಸಿಪ್ಪಿ ಮತ್ತು ಬೊಟ್‌ಸ್ವಾನಾ ಸೇರಿದಂತೆ ಕೆಲ ರಾಜ್ಯಗಳು ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸಿವೆ. ಕೊರೊನಾ ಸೋಂಕನ್ನು ಅತ್ಯುತ್ತಮವಾಗಿ ನಿಭಾಯಿಸಿದ ನ್ಯೂಯಾರ್ಕ್‌ ನಗರದ ಮೇಯರ್ ಬಿಲ್‌ ಡೆ ಬ್ಲಾಸಿಯೊ, ‘ನಿರ್ಬಂಧಗಳನ್ನು ಆತುರಾತುರವಾಗಿ ಸಡಿಲಿಸುತ್ತಿರುವ ರಾಜ್ಯಗಳು ತಪ್ಪು ಮಾಡುತ್ತಿವೆ. ಆರ್ಥಿಕತೆ ಪುನಶ್ಚೇತನಕ್ಕಾಗಿ ಎಂದು ನೀವು ತೆಗೆದುಕೊಳ್ಳುತ್ತಿರುವ ಕ್ರಮಗಳು ತಿರುಗುಬಾಣವಾಗಬಹುದು‘ ಎಂದು ಹೇಳಿದ್ದಾರೆ.

‘ಏನು ಬೇಕಾದರೂ ಆಗಲಿ ಸುರಕ್ಷೆಯ ಕಡೆಗೆ ಗಮನ ಕೊಟ್ಟು, ನಿರ್ಬಂಧ ಸಡಿಲಿಸಿಯೇ ಸಿದ್ದ‘ ಎನ್ನುವ ಧೋರಣೆ ಪ್ರದರ್ಶಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘60 ವರ್ಷ ದಾಟಿದವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.

ಬ್ರಿಟನ್ ಪ್ರಧಾನಿಯಿಂಧ ಶೀಘ್ರ ನಿರ್ಬಂಧ ತೆರವು ಘೋಷಣೆ ಸಾಧ್ಯತೆ

ಸೋಂಕಿತರು ಮತ್ತು ಸತ್ತವರ ಸಂಖ್ಯೆಯಲ್ಲಿ ಇಟಲಿಯನ್ನು ಮೀರಿಸಿದ ಬ್ರಿಟನ್‌ ಯುರೋಪ್‌ನಲ್ಲಿ ಅತ್ಯಂತ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವ ದೇಶ. ಈವರೆಗೆ 30,000 ಸಾವು ಸಂಭವಿಸಿವೆ. 2.02 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

‘ದೇಶದಲ್ಲಿ ಪರಿಸ್ಥಿತಿ ಸುಧಾರಿಸಿದೆ. ನಿರ್ಬಂಧಗಳನ್ನು ಶೀಘ್ರ ತೆರವುಗೊಳಿಸಲಾಗುವುದು’ ಎಂದು ಪ್ರಧಾನಿ ಬೋರಿಸ್ ಬಾನ್ಸನ್ ಹೇಳಿದ್ದಾರೆ.

ಮೇ ತಿಂಗಳ ಅಂತ್ಯದ ಹೊತ್ತಿಗೆ 2 ಲಕ್ಷ ಮಂದಿಯ ತಪಾಸಣೆ ಮಾಡುವ ಗುರಿ ಹೊಂದಿರುವ ಬ್ರಿಟನ್ ಸರ್ಕಾರ ಈ ಕಾರ್ಯಕ್ಕಾಗಿ 18,000 ಮಂದಿಯನ್ನು ನಿಯೋಜಿಸಿದೆ. 70 ವರ್ಷ ದಾಟಿದವರಿಗಾಗಿ ಪ್ರತ್ಯೇಕ ನಿಯಮಾವಳಿಗಳನ್ನು ರೂಪಿಸಲಾಗುವುದು. ಈ ವಯೋಮಾನದವರಿಗೆ 13 ವಾರಗಳ ಅವಧಿಗೆ ನಿರ್ಬಂಧ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.

ಲಾಕ್‌ಡೌನ್ ವಿಸ್ತರಿಸಿದ ಸ್ಪೇನ್

ಈ ಹಿಂದೆ ಯೂರೋಪ್‌ನಲ್ಲಿ ಸೋಂಕಿನ ಕೇಂದ್ರವಾಗಿದ್ದ ಸ್ಪೇನ್‌ನಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಇನ್ನೂ ಎರಡು ವಾರಗಳ ಅವಧಿಗೆ (ಮೇ 24) ವಿಸ್ತರಿಸಲಾಗಿದೆ. ಅಧಿಕಾರದ ಚುಕ್ಕಾಣಿ ಹಿಡಿದಿರುವವರಿಗೆ ವಿರೋಧ ಪಕ್ಷಗಳಿಂದ ಸರಿಯಾದ ಬೆಂಬಲ ಸಿಗುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿದೆ. ಈ ವಾರದ ಆರಂಭದಲ್ಲಿ ಜನರಿಗೆ ಮನೆಗಳಿಂದ ಹೊರಗೆ ಬರಲು, ವ್ಯಾಯಾಮ ಮಾಡಲು ಅವಕಾಶ ನೀಡಲಾಗಿತ್ತು.

70 ವರ್ಷ ದಾಟಿದವರು ಬೆಳಿಗ್ಗೆ 10ರಿಂದ 11 ಮತ್ತು ರಾತ್ರಿ 7ರಿಂದ 8ವರೆಗೆ ಮನೆಗಳಿಂದ ಹೊರಗೆ ಬಂದು ವಾಕಿಂಗ್ ಮಾಡಲು ಅನುಮತಿ ನೀಡಲಾಗಿದೆ. ಈ ಅವಧಿಯನ್ನು ಹೊರತುಪಡಿಸಿ 14 ವರ್ಷ ದಾಟಿದವರು 1 ಕಿ.ಮೀ. ದೂರದವರೆಗೂ ವಾಕ್ ಮಾಡಬಹುದಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯ. ಒಂದೇ ಮನೆಯವರಾಗಿದ್ದರೂ ಬೀದಿಗಳಲ್ಲಿ ನಿಂತು ಮಾತನಾಡುವಂತಿಲ್ಲ ಎಂಬ ನಿಯಮಗಳಿವೆ.

ಸ್ಪೇನ್‌ನಲ್ಲಿ ಈವರೆಗೆ 25,857 ಮಂದಿ ಸೋಂಕಿಗೆ ಮೃತಪಟ್ಟಿದ್ದಾರೆ. ಒಟ್ಟು 2.20 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT