ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಮಾಜಿ ಸರ್ವಾಧಿಕಾರಿ ಪರ್ವೇಜ್‌ ಮುಷರಫ್‌ಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ

Last Updated 17 ಡಿಸೆಂಬರ್ 2019, 7:58 IST
ಅಕ್ಷರ ಗಾತ್ರ

ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಅವರಿಗೆ ವಿಶೇಷ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.

ಪೇಶಾವರ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಖಾರ್ ಅಹಮದ್ ಸೇಠ್ ನೇತೃತ್ವದತ್ರಿಸದಸ್ಯ ಪೀಠವು ಬಹುಕಾಲದಿಂದ ವಿಚಾರಣೆ ನಡೆಯುತ್ತಿದ್ದ ದೇಶದ್ರೋಹ ಆರೋಪದ ಪ್ರಕರಣದ ಬಗ್ಗೆ ಮಂಗಳವಾರ ತೀರ್ಪು ಪ್ರಕಟಿಸಿತು ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ನವೆಂಬರ್ 3,2007ರಲ್ಲಿ ದೇಶದ ಮೇಲೆ ಸಂವಿಧಾನಬಾಹಿರವಾಗಿ ತುರ್ತುಸ್ಥಿತಿ ಹೇರಲಾದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇಂದು ತನ್ನ ತೀರ್ಪು ಪ್ರಕಟಿಸಿದೆ. ಪ್ರಸ್ತುತ ದುಬೈನಲ್ಲಿ ನೆಲೆಸಿರುವ ಮುಷರಫ್, 1999ರಿಂದ 2008ರವರೆಗೆ ಪಾಕಿಸ್ತಾನದ ಸರ್ವಾಧಿಕಾರಿಯಾಗಿದ್ದರು.

ಡಿಸೆಂಬರ್ 2013ರಂದು ಮುಷರಫ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಾರ್ಚ್ 31, 2014ರಂದು ನ್ಯಾಯಾಲಯ ಆರೋಪಿ ಎಂದು ಗುರುತಿಸಿತು. ಅದೇ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರ ಪೂರ್ಣ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ವಿವಿಧ ವೇದಿಕೆಗಳಲ್ಲಿ ಹಲವು ದೋಷಾರೋಪಗಳು ಸಲ್ಲಿಕೆಯಾದ ಕಾರಣ ವಿಚಾರಣೆ ಸಾಕಷ್ಟು ಸಮಯ ತೆಗೆದುಕೊಂಡಿತು. ಮಾರ್ಚ್ 2016ರಂದು ಮುಷರಫ್ ಪಾಕ್‌ನಿಂದ ಪರಾರಿಯಾದರು.

ಮುಷರಫ್ ವಿರುದ್ಧದ ದೋಷಾರೋಪ ವಿಚಾರಣೆಗೆಂದು ನ್ಯಾಯಮೂರ್ತಿ ಸೇಠ್ ನೇತೃತ್ವದಲ್ಲಿ ಸಿಂಧ್ ಹೈಕೋರ್ಟ್‌ನ ನ್ಯಾಯಮೂರ್ತಿ ನಜರ್ ಅಕ್ಬರ್ ಮತ್ತು ಲಾಹೋರ್ ಹೈಕೋರ್ಟ್‌ನ ನ್ಯಾಯಮೂರ್ತಿ ಶಾಹಿದ್ ಕರೀಂ ನೇತೃತ್ವದಲ್ಲಿ ನ್ಯಾಯಪೀಠ ರಚಿಸಲಾಯಿತು. ನವೆಂಬರ್ 19ರಂದು ವಿಚಾರಣೆ ನಡೆಸಿದ್ದ ನ್ಯಾಯಪೀಠ ತೀರ್ಪು ಕಾಯ್ದಿರಿಸಿತ್ತು.

ಲಭ್ಯ ದಾಖಲೆಗಳನ್ನು ಆಧರಿಸಿ ನ.28ರಂದು ತೀರ್ಪು ನೀಡುವುದಾಗಿ ಅಂದು ನ್ಯಾಯಪೀಠ ಪ್ರಕಟಿಸಿತ್ತು. ಆದರೆ ಅಂತಿಮ ತೀರ್ಪಿಗೆ ಕೆಲವೇ ದಿನಗಳು ಬಾಕಿಯಿರುವಂತೆ ಪಾಕಿಸ್ತಾನದ ಆಡಳಿತಾರೂಢ ತೆಹ್ರೀಕ್ ಇ ಇನ್ಸಾಫ್ ಪಕ್ಷವು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ನ್ಯಾಯಪೀಠತೀರ್ಪು ಮುಂದೂಡುವಂತೆ ನಿರ್ದೇಶನ ನೀಡಲು ಕೋರಿತ್ತು.

ಸರ್ಕಾರದ ಮನವಿ ಪುರಸ್ಕರಿಸಿದ ಇಸ್ಲಾಮಾಬಾದ್ ಹೈಕೋರ್ಟ್‌ ನವೆಂಬರ್ 27ರಂದು ಆದೇಶ ನೀಡಿ, ನ್ಯಾಯಪೀಠದ ತೀರ್ಪು ಪ್ರಕಟಕ್ಕೆ ತಡೆಯಾಜ್ಞೆ ನೀಡಿತು. ಡಿಸೆಂಬರ್ 5ರ ಒಳಗೆ ಸರ್ಕಾರಿ ವಕೀಲರು ನ್ಯಾಯಪೀಠದ ಎದುರುಹೊಸ ಮನವಿ ಸಲ್ಲಿಸಬೇಕು ಎಂದು ಆದೇಶಿಸಿತು.

ಅದರಂತೆ ವಿಶೇಷ ನ್ಯಾಯಾಲಯದ ಎದುರು ಹಾಜರಾದ ಸರ್ಕಾರಿ ವಕೀಲರು ತಮ್ಮ ವಾದ ಮಂಡಿಸಿದರು. ನ್ಯಾಯಪೀಠವು ಡಿ.17ಕ್ಕೆ ಕಲಾಪ ಮುಂದೂಡಿತ್ತು. ಅಂದು ವಾದ–ಪ್ರತಿವಾದ ಆಲಿಸುವುದರ ಜೊತೆಗೆ ತೀರ್ಪನ್ನೂ ಪ್ರಕಟಿಸಲಾಗುವುದು ಎಂದು ಹೇಳಿತ್ತು. ಅದರಂತೆ ಇಂದು ನ್ಯಾಯಪೀಠದ ತೀರ್ಪು ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT