ಶುಕ್ರವಾರ, ಡಿಸೆಂಬರ್ 6, 2019
21 °C

ಸಿಗರೇಟು ವ್ಯಸನಿಯ ಕಪ್ಪು ಶ್ವಾಸಕೋಶದ ವಿಡಿಯೊ ಮೂಲಕ ಧೂಮಪಾನಿಗಳಿಗೆ ವೈದ್ಯರ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್‌ (ಚೀನಾ): ಸತತ ಮೂವತ್ತು ವರ್ಷಗಳ ಕಾಲ ಪ್ಯಾಕೆಟ್ಟುಗಟ್ಟಲೆ ಸಿಗರೇಟು ಸೇದಿ, ಶ್ವಾಸಕೋಶದ ಸಮಸ್ಯೆಗೆ ತುತ್ತಾಗಿ ಪ್ರಾಣಬಿಟ್ಟ ವ್ಯಕ್ತಿಯೊಬ್ಬರು ತಮ್ಮ ದೇಹವನ್ನು ಆಸ್ಪತ್ರೆಗೆ ದಾನ ಮಾಡಿದ್ದರು. ಆದರೆ, ಅವರ  ಶ್ವಾಸಕೋಶ ಪರಿಶೀಲಿಸಿದ ವೈದ್ಯರು ಶಸ್ತ್ರಚಿಕಿತ್ಸಾ ಮೇಜಿನ ಮೇಲೆಯೇ ಅದನ್ನು ಯೋಗ್ಯವಲ್ಲ ಎಂದು ತಿರಸ್ಕರಿಸಿದ್ದಾರೆ. ಶ್ವಾಸಕೋಶದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿದ್ದಾರೆ. 

ಶ್ವಾಸಕೋಶಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದ 52 ವರ್ಷ ವಯಸ್ಸಿನ ವ್ಯಕ್ತಿ ಇತ್ತೀಚೆಗಷ್ಟೇ ಮೃತಪಟ್ಟಿದ್ದಾರೆ. ಅವರ  ಮೃತ ದೇಹವನ್ನು ಚೀನಾದ ಜೈಂಗ್ಸು ಎಂಬಲ್ಲಿರುವ ‘ವೂಕ್ಸು ಪೀಪಲ್ಸ್‌ ಹಾಸ್ಪಿಟಲ್‌’ಗೆ ದಾನ ಮಾಡಲಾಗಿತ್ತು. ಅಂಗಾಂಗಳನ್ನು ಹೊರ ತೆಗೆದು ಪರಿಶೀಲನೆ ನಡೆಸುತ್ತಿದ್ದ ವೈದ್ಯರು ಶ್ವಾಸಕೋಶವನ್ನು ಕಂಡು ಬೆರಗಾಗಿದ್ದಾರೆ. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ತಿಳಿಗೆಂಪು ಬಣ್ಣದಲ್ಲಿರುತ್ತದೆ. ಆದರೆ, ಚೀನಾದ ಆ ವ್ಯಕ್ತಿಯ ಶ್ವಾಸಕೋಶ ಕಡುಕಪ್ಪು ಬಣ್ಣದ್ದಾಗಿತ್ತು. ಇದಕ್ಕೆ ಕಾರಣ ಸಿಗರೇಟು ಹೊಗೆ. ಹೀಗಾಗಿ ಆ ಶ್ವಾಸಕೋಶವನ್ನು ವೈದ್ಯರು ನಿರುಪಯುಕ್ತ ಎಂದು ಪರಿಗಣಿಸಿದ್ದಾರೆ. 

ಅಲ್ಲದೆ, ಶ್ವಾಸಕೋಶದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿರುವ ವೈದ್ಯರು ‘ಸಿಗರೇಟು ಸೇದಲು ನಿಮಗೆ ಇನ್ನೂ ಧೈರ್ಯವಿದೆಯೇ’ ಎಂಬ ಸವಾಲನ್ನೂ ಸಿಗರೇಟು ವ್ಯಸನಿಗಳಿಗೆ ಹಾಕಿದ್ದಾರೆ. 

ಸದ್ಯ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಈ ವರೆಗೆ 25 ಮಿಲಿಯನ್‌ ಮಂದಿ ವೀಕ್ಷಣೆ ಮಾಡಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು