ಸೋಮವಾರ, ಮೇ 25, 2020
27 °C

ಕೊರೊನಾಗೆ ಮಲೇರಿಯಾ ಔಷಧ ಉತ್ತಮ ಎಂದ ಟ್ರಂಪ್ ಹೇಳಿಕೆ ಹಿಂದೆ ಲಾಭದ ಆಸೆ?

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Donald trump

ವಾಷಿಂಗ್ಟನ್: ಕೊರೊನಾ ವೈರಸ್ ಸೋಂಕಿನ ಚಿಕಿತ್ಸೆಗೆ ಮಲೇರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಉತ್ತಮ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೇಳಿದ್ದರು. ಬಳಿಕ ವಿಶ್ವದಾದ್ಯಂತ ಆ ಔಷಧದ ಬೇಡಿಕೆಯೂ ಗಣನೀಯವಾಗಿ ಹೆಚ್ಚಾಗಿತ್ತು. ಟ್ರಂಪ್ ಹೀಗೆ ಹೇಳುವುದರ ಹಿಂದೆ ವಾಣಿಜ್ಯ ಉದ್ದೇಶ ಅಡಗಿದೆಯೇ? ಇಂಥದ್ದೊಂದು ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

ಒಂದು ವೇಳೆ, ಕೊರೊನಾ ಚಿಕಿತ್ಸೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಪರಿಣಾಮಕಾರಿ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದ್ದೇ ಆದಲ್ಲಿ ಅನೇಕ ಔಷಧ ತಯಾರಿಕಾ ಕಂಪೆನಿಗಳಿಗೆ ಲಾಭವಾಗಲಿದೆ. ಅಂತಹ ಕಂಪೆನಿಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ಜತೆ ಸಹಭಾಗಿತ್ವ ಹೊಂದಿರುವ ಷೇರುದಾರರ ಕಂಪೆನಿಗಳೂ ಇವೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಪ್ಲ್ಯಾಕ್‌ನಿಲ್ ಬ್ರ್ಯಾಂಡ್‌ನಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ತಯಾರಿಸುವ ಫ್ರಾನ್ಸ್‌ನ ಔಷಧ ತಯಾರಿಕಾ ಕಂಪೆನಿ ಸನೊಫಿ ಜತೆಗೂ ಟ್ರಂಪ್ ಅವರಿಗೆ ನಂಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಬ್ರೂಕ್ಲಿನ್ ಆಸ್ಪತ್ರೆ ಕೇಂದ್ರದ ವೈದ್ಯ ಡಾ. ಜೋಶುವಾ ರೋಸೆನ್‌ಬರ್ಗ್ ಹೇಳುವುದೇ ಬೇರೆ. ‘ಯಾಕೆ ಟ್ರಂಪ್ ಅವರು ಆ ಔಷಧ ನಿಡುವಿಕೆ ಉತ್ತೇಜಿಸುತ್ತಾರೆ ಎಂಬುದು ತಿಳಿದಿದೆ. ‘ಅವರು (ಟ್ರಂಪ್) ಅಮೆರಿಕದ ಅಧ್ಯಕ್ಷ. ಅವರಿಗೆ ಜನರಲ್ಲಿ ಆಶಾವಾದ ಮೂಡಿಸುವುದು ಬೇಕಿದೆ. ನಮ್ಮಲ್ಲಿ ಆಶಾವಾದವೇ ಇಲ್ಲದಿದ್ದಾಗ ಪರಿಸ್ಥಿತಿ ಮತ್ತಷ್ಟು ಕೈ ಮೀರಿ ಹೋಗುತ್ತದೆ. ಹೀಗಾಗಿ ಟ್ರಂಪ್ ಅವರು ಆ ಔಷಧವನ್ನು ಸೂಚಿಸಿದ್ದನ್ನು ತಪ್ಪೆಂದು ಹೇಳಲಾರೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮೆದುರು ಇರುವ ಆಯ್ಕೆ ಅದೊಂದೇ’ ಎನ್ನುತ್ತಾರೆ ಅವರು.

ಆದರೆ ವೈಜ್ಞಾನಿಕವಾಗಿ ಸಾಬೀತಾಗದ ಔಷಧವನ್ನು ಸೂಚಿಸಿದ್ದಕ್ಕೆ ಬ್ರಾಂಕ್ಸ್‌ನಲ್ಲಿರುವ ಬಾರ್ನಬಾಸ್ ಆಸ್ಪತ್ರೆಯ ವೈದ್ಯರೊಬ್ಬರು ಸೇರಿದದಂತೆ ಅನೇಕ ವೈದ್ಯರು ಟ್ರಂಪ್ ಅವರನ್ನು ಟೀಕಿಸಿದ್ದಾರೆ. ಸುಳ್ಳು ಭರವಸೆ ಕೂಡ ಕೆಟ್ಟದ್ದಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಉತ್ತಮ ಎನ್ನಲು ಟ್ರಂಪ್ ಉಲ್ಲೇಖಿಸಿರುವ ಫ್ರಾನ್ಸ್‌ನ ಅಧ್ಯಯನ ವರದಿಯ ಬಗ್ಗೆಯೇ ಈಗ ತಕರಾರು ವ್ಯಕ್ತವಾಗಿದೆ ಎನ್ನಲಾಗಿದೆ.

ಈ ಮಧ್ಯೆ, ಕೊರೊನಾಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಪರಿಣಾಮಕಾರಿ ಔಷಧ ಎಂಬುದು ವೈಜ್ಞಾನಿಕವಾಗಿ ಇನ್ನೂ ದೃಢಪಟ್ಟಿಲ್ಲ. ಇದರ ಅತಿಯಾದ ಮಾರಾಟ, ಸೇವನೆ ಸಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಅತಿಯಾದ ಸೇವನೆ ಹೃದ್ರೋಗಿಗಳಿಗಂತೂ ಖಂಡಿತಾ ಒಳ್ಳೆಯದಲ್ಲ ಎಂದಿದ್ದಾರೆ. ಈ ವಿಚಾರವನ್ನು ಟ್ರಂಪ್ ಸಹ ಸಮ್ಮತಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು