ಗುರುವಾರ , ಜನವರಿ 23, 2020
27 °C

ಅಧಿಕಾರ ದುರುಪಯೋಗ, ಶಾಸಕಾಂಗ ಸಭೆಗೆ ತಡೆ ಆರೋಪ: ಟ್ರಂಪ್‌ಗೆ ಸಂಸತ್ ವಾಗ್ದಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ವಾಷಿಂಗ್ಟನ್: ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಸಂಸತ್ (ಡೆಮಾಕ್ರೆಟಿಕ್‌ ಬಹುಮತವಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್) ವಾಗ್ಡಂಡನೆಗೆ ಗುರಿಪಡಿಸಿದೆ.

ಸದನ ಸಮಿತಿ ಅನುಮೋದನೆ ನೀಡಿದ ಬಳಿಕ ಈ ಪ್ರಕರಣ ಕೆಳಮನೆಗೆ ಬಂದಿದೆ. ಸುದೀರ್ಘ ಚರ್ಚೆಯ ಬಳಿಕ ಮತ ಪ್ರಕ್ರಿಯೆ ನಡೆದಿದ್ದು, ಎರಡು ಆರೋಪಗಳಿಗೂ ಪ್ರತ್ಯೇಕವಾಗಿ ಮತಕ್ಕೆ ಹಾಕಲಾಗಿದೆ. ಅಧಿಕಾರ ದುರುಪಯೋಗದ ಆರೋಪದಲ್ಲಿ ಟ್ರಂಪ್‌ ವಿರುದ್ಧ  230 ಮತಗಳು ಬಿದ್ದರೆ, ಅವರ ಪರ 197 ಮತಗಳು ಬಂದಿವೆ. ಇನ್ನು ಶಾಸಕಾಂಗ ಸಭೆಗೆ ತಡೆ ಆರೋಪದಲ್ಲಿ 229-198 ಮತಗಳಿಂದ ಟ್ರಂಪ್‌ಗೆ ಸೋಲಾಗಿದೆ.
 

ಸಂಸತ್‌ ನೀಡಿದ ವಾಗ್ದಂಡನೆಗೆ ಸೆನೆಟ್‌ ಅಂಗೀಕಾರ ಅಗತ್ಯ. ಮುಂದಿನ ತಿಂಗಳು ಇದು ಸೆನೆಟ್‌ನಲ್ಲಿ ಚರ್ಚೆಯಾಗಲಿದೆ. ಅಲ್ಲಿ ಆಡಳಿತರೂಢ ರಿಪಬ್ಲಿಕನ್‌ ಪಾರಮ್ಯವಿದೆ. ಒಂದು ವೇಳೆ ಈ ಆರೋಪಗಳು ಸಾಬೀತಾದರೆ, ಟ್ರಂಪ್‌ ಅವರು ವಾಗ್ದಂಡನೆಗೆ ಒಳಗಾಗಿ ಸೆನೆಟ್‌ನಲ್ಲಿ ವಿಚಾರಣೆ ಎದುರಿಸುವ ಅಮೆರಿಕದ ಮೂರನೇ ನಾಯಕ ಎನಿಸಲಿದ್ದಾರೆ. ಇದಕ್ಕೂ ಮುನ್ನ 1868ರಲ್ಲಿ ಆಂಡ್ರೂ ಜಾನ್ಸನ್ ಮತ್ತು 1998ರಲ್ಲಿ ಬಿಲ್ ಕ್ಲಿಂಟನ್ ವಾಗ್ದಂಡನೆಯ ಮೂಲಕ ಅಧ್ಯಕ್ಷಗಿರಿ ಕಳೆದುಕೊಂಡಿದ್ದರು.

ವಾಗ್ದಂಡನೆ ಮತಚಲಾವಣೆಯಲ್ಲಿ ಡಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ತುಳಸಿ ಗಬ್ಬಾರ್ಡ್, ಎರಡೂ ಆರೋಪಗಳ ಸಂದರ್ಭದಲ್ಲಿಯೂ ಕೇವಲ 'ಹಾಜರಿದ್ದೇನೆ' ಎಂದಷ್ಟೇ ಹೇಳಿ ಮತ ಹಾಕಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ಸೋಮವಾರ ದೀರ್ಘವಾದ ವರದಿ ಬಿಡುಗಡೆ ಮಾಡಿತ್ತು. ಟ್ರಂಪ್‌ ಅವರು ರಾಜಕೀಯ ಲಾಭಕ್ಕಾಗಿ ರಾಷ್ಟ್ರಕ್ಕೆ ದ್ರೋಹ ಎಸಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

‘ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ನೇತೃತ್ವದಲ್ಲಿ ದೇಶವೂ ಉತ್ತಮ ಸಾಧನೆ ಮಾಡುತ್ತಿದೆ. ನನ್ನ ವಿರುದ್ಧದ ವಾಗ್ದಂಡನೆ ಕ್ರಮ ನ್ಯಾಯೋಚಿತವಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಪಾದಿಸಿದ್ದರು.

‘ಡೆಮಾಕ್ರೆಟಿಕ್‌ ಸಂಸದರು ಅಸಂವಿಧಾನಿಕವಾಗಿ ಅಧಿಕಾರದ ದುರುಪಯೋಗ ಪಡಿಸಿಕೊಂಡಿದ್ದಾರೆ. ಕಾನೂನುಬಾಹಿರ ಮತ್ತು ಪಕ್ಷಪಾತದಿಂದ ಕೂಡಿದ ಅವರ ಪ್ರಯತ್ನಕ್ಕೆ  ನಾನು ಬಲಿಪಶು ಆಗಿದ್ದೇನೆ’ ಎಂದು ಆರೋಪಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು