ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಂತ್ರ ಭಾರತೀಯರಿಗೆ ರಾಯಭಾರ ಕಚೇರಿ ಅಭಯ

ಸುರಕ್ಷತೆಗೆ ಒತ್ತು: ದೇಶಕ್ಕೆ ಮರಳಲು ಪರ್ಯಾಯ ವ್ಯವಸ್ಥೆ, ಅಗತ್ಯ ಸೌಲಭ್ಯ ಒದಗಿಸಲು ಕ್ರಮ
Last Updated 21 ಮಾರ್ಚ್ 2020, 20:30 IST
ಅಕ್ಷರ ಗಾತ್ರ

ಪ್ಯಾರಿಸ್‌ (ಪಿಟಿಐ): ಅಂತರರಾಷ್ಟ್ರೀಯ ವಿಮಾನಗಳ ಪ್ರವೇಶಕ್ಕೆ ಭಾರತ ನಿರ್ಬಂಧ ವಿಧಿಸಿರುವ ಹಿಂದೆಯೇ, ದೇಶಕ್ಕೆ ಮರಳಲು ಬಯಸಿದ್ದ ಭಾರತೀಯರ ಸುರಕ್ಷತೆ, ನೆರವು ಒದಗಿಸಲು ಆಯಾ ದೇಶಗಳಲ್ಲಿರುವ ಭಾರತ ರಾಯಭಾರ ಕಚೇರಿಗಳು ಕ್ರಮವಹಿಸಿವೆ.

‘ಕೋವಿಡ್‌–19’ ಭೀತಿ ಹಿನ್ನೆಲೆಯಲ್ಲಿ ಮಾರ್ಚ್‌ 22ರಿಂದ ಒಂದು ವಾರ ಯಾವುದೇ ಅಂತರರಾಷ್ಟ್ರೀಯ ವಿಮಾನಗಳ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಭಾರತ ಈಗಾಗಲೇ ಪ್ರಕಟಿಸಿದೆ.

ಫ್ರಾನ್ಸ್‌ನ ಭಾರತದ ರಾಯಭಾರ ಕಚೇರಿ ಶುಕ್ರವಾರ ಟ್ವೀಟ್ ಮೂಲಕ ‘ಭಾರತ ವಿಧಿಸಿರುವ ನಿರ್ಬಂಧ ಜಾರಿಗೆ ಬರುವ ಮೊದಲು ಕತಾರ್‌ ಏರ್‌ವೇಸ್‌ನ ವಿಮಾನವು ಪ್ಯಾರಿಸ್‌ನಿಂದ ತೆರಳಲಿದೆ. ಇದರ ಸದುಪಯೋಗ ಪಡೆಯಬೇಕು’ ಎಂದು ಸೂಚಿಸಿದೆ.

‘ಪ್ಯಾರಿಸ್‌ನಲ್ಲಿ ಅತಂತ್ರರಾಗಿರುವ ಭಾರತೀಯರು ಇದರ ನೆರವು ಪಡೆಯಬೇಕು. ವಿಫಲವಾದಲ್ಲಿ ಪರ್ಯಾಯ ವ್ಯವಸ್ಥೆ ಮಾಡುವುದು ರಾಯಭಾರ ಕಚೇರಿಗೆ ಕಷ್ಟವಾಗಲಿದೆ’ ಎಂದು ಸಲಹೆ ಮಾಡಿತ್ತು.

ಕೆನಡಾ, ಗ್ರೀಸ್‌, ಫಿನ್‌ಲ್ಯಾಂಡ್, ಎಸ್ಟೊನಿಯ, ಇಸ್ರೇಲ್‌, ಜಪಾನ್, ವಿಯೆಟ್ನಾಂ, ಬಲ್ಗೇರಿಯ, ರಷ್ಯಾ, ಕ್ಯೂಬಾ, ಬ್ರೆಜಿಲ್‌ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿನ ರಾಯಭಾರ ಕಚೇರಿಗಳು ಕೂಡಾ ಸ್ಥಳೀಯವಾಗಿ ಉಳಿದಿರುವ ಭಾರತೀಯರಿಗೆ ನೆರವಾಗಲು ಕ್ರಮವಹಿಸಿವೆ.

ಗ್ರೀಸ್‌ನ ರಾಯಭಾರ ಕಚೇರಿಯು, ಪರ್ಯಾಯ ವ್ಯವಸ್ಥೆ ಆಗುವವರೆಗೂ ತಾಳ್ಮೆ ಕಾಯ್ದುಕೊಳ್ಳಬೇಕು ಎಂದು ತಿಳಿಸಿದ್ದರೆ, ಕಜಕಿಸ್ತಾನದ ಕಚೇರಿಯು ‘ವಿಮಾನ ವ್ಯವಸ್ಥೆ ಆಗುವವರೆಗೂ ಭಾರತೀಯ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಿಗೆ ಮರಳಬೇಕು’ ಎಂದಿದೆ.

ಇಸ್ರೇಲ್‌ನ ಕಚೇರಿ, ‘ಅನಿವಾರ್ಯ ಇಲ್ಲದಿದ್ದಲ್ಲಿ ದೇಶದ ಹೊರಗೆ ಪ್ರಯಾಣಿಸುವುದನ್ನೇ ಕೈಬಿಡಬೇಕು’ ಎಂದು ಭಾರತೀಯರಿಗೆ ಮನವಿ ಮಾಡಿದೆ. ಕೆನಡಾದ ಕಚೇರಿ ಭಾರತೀಯ ವಿದ್ಯಾರ್ಥಿಗಳಿಗೆ ನೆರವು ಒದಗಿಸಲು ಸ್ಥಳೀಯ ಸರ್ಕಾರದ ಜೊತೆ ಚರ್ಚೆ ನಡೆಸಿದೆ.

ಚೀನಾದಿಂದ ಮಾಸ್ಕ್‌, ಸುರಕ್ಷತಾ ಪರಿಕರ ರವಾನೆ

ಕೊರೊನಾ ಸೋಂಕು ಭೀತಿ ಚೀನಾದಿಂದ ಯೂರೋಪ್‌, ಇನ್ನಿತರ ರಾಷ್ಟ್ರಗಳಿಗೆ ಸ್ಥಳಾಂತರವಾದಂತೆ, ಚೀನಾ ಈಗ ಸೋಂಕು ತಡೆಗೆ ಮಾಸ್ಕ್, ಇತರೆ ಸುರಕ್ಷತಾ ಪರಿಕರಗಳನ್ನು ದೊಡ್ಡ ಪ್ರಮಾಣದಲ್ಲಿ ಪೂರೈಸಲು ಮುಂದಾಗಿದೆ.

ವಿವಿಧ ದೇಶಗಳ ಜೊತೆಗೆ ರಾಜಕೀಯ ಸಂಬಂಧವನ್ನು ಬಲಪಡಿಸುವುದು ಹಾಗೂ ಸೋಂಕು ತಡೆಗೆ ಮುಂಜಾಗ್ರತೆ ವಹಿಸಲಿಲ್ಲ ಎಂಬ ಟೀಕೆಗಳಿಂದ ಹೊರಬರುವುದು ಉದ್ದೇಶ ಎನ್ನಲಾಗಿದೆ. ಲಿಬಿಯಾ, ಪಿಲಿಪ್ಪಿನ್ಸ್‌, ಜೆಕ್‌ ಗಣರಾಜ್ಯಗಳಿಗೆ ಸಾಮಗ್ರಿ ಪೂರೈಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT