ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ತಿದ್ದುಪಡಿ ಮಸೂದೆ ಕುರಿತು ಈಶಾನ್ಯದ ಆಕ್ರೋಶಕ್ಕೆ ಕಾರಣವೇನು?

ಪೌರತ್ವ (ತಿದ್ದುಪಡಿ) ಮಸೂದೆ: ಸರ್ಕಾರದಿಂದ ಸುಳ್ಳು ಮಾಹಿತಿ...
Last Updated 13 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಪೌರತ್ವ (ತಿದ್ದುಪಡಿ) ಕಾಯ್ದೆಯು ಜಾರಿಗೆ ಬಂದರೆ, ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವ ಹಿಂದೂಗಳಿಗೆ ಅಸ್ಸಾಂನಲ್ಲಿ ನೆಲೆ ನೀಡಬೇಕಾಗುತ್ತದೆ. ಇಲ್ಲಿನ ಬುಡಕಟ್ಟು ಸಮುದಾಯದ ಜನರ ಸಂಸ್ಕೃತಿಗೆ ಇದರಿಂದ ಧಕ್ಕೆಯಾಗುತ್ತದೆ ಎಂಬುದು ಈ ಕಾಯ್ದೆಯನ್ನು ವಿರೋಧಿಸಲು ಪ್ರಮುಖ ಕಾರಣ.ಈ ಕಾಯ್ದೆಯಿಂದ ಅಸ್ಸಾಂನ ಜನರಿಗೆ ಧಕ್ಕೆಯಾಗುವುದಿಲ್ಲಎಂದು ಕೇಂದ್ರ ಸರ್ಕಾರ ಹೇಳುತ್ತಲೇ ಇದೆ. ಆದರೆ, ಈ ಕಾಯ್ದೆಯಿಂದ ಅಸ್ಸಾಂನ ಎಲ್ಲಾ ಪ್ರದೇಶಗಳಿಗೆ ವಿನಾಯಿತಿ ಇಲ್ಲ ಎಂದು ಕಾಯ್ದೆಯೇ ಹೇಳುತ್ತದೆ. ಕಾಯ್ದೆ ವಿರುದ್ಧ ಹೋರಾಟ ತೀವ್ರಗೊಳ್ಳಲು ಇದೂ ಒಂದು ಕಾರಣ

ಅಸ್ಸಾಂಗೆ ವಿನಾಯಿತಿ ಇದೆಯೇ?

‘ಸಂವಿಧಾನದ 6ನೇ ಪರಿಚ್ಛೇದದ ಅಡಿಯಲ್ಲಿ ಗುರುತಿಸಲಾಗಿರುವ ಅಸ್ಸಾಂ, ಮೇಘಾಲಯ, ತ್ರಿಪುರಾ ಮತ್ತು ಮಿಜೋರಾಂನ ಬುಡಕಟ್ಟು ಪ್ರದೇಶಗಳು ಹಾಗೂ ‘ಇನ್ನರ್ ಲೈನ್ ಪರ್ಮಿಟ್’ ಅಡಿ ಬರಲಿರುವ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ ರಾಜ್ಯಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಅನ್ವಯ ಆಗುವುದಿಲ್ಲ’ ಎಂದು ಕಾಯ್ದೆಯಲ್ಲಿ ವಿವರಿಸಲಾಗಿದೆ.

ಸರ್ಕಾರ ಹೇಳಿದ್ದು...

‘ಈಶಾನ್ಯ ಭಾರತದ ಯಾವ ರಾಜ್ಯಕ್ಕೂ ಈ ಮಸೂದೆ ಅನ್ವಯ ಆಗುವುದಿಲ್ಲ’ ಎಂದು ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಲೋಕಸಭೆಯಲ್ಲಿ ಸೋಮವಾರ ಪೌರತ್ವ (ತಿದ್ದುಪಡಿ) ಮಸೂದೆ ಮಂಡಿಸುವಾಗ ಅವರು ಈ ಮಾತು ಹೇಳಿದ್ದರು.

‘ಈಶಾನ್ಯ ಭಾರತದ ಯಾವ ರಾಜ್ಯಕ್ಕೂ ಈ ಮಸೂದೆಯಿಂದ ಧಕ್ಕೆಯಾಗುವುದಿಲ್ಲ ಎಂದು ಅಲ್ಲಿನ ಸಂಸದರಿಗೆ ಮನವರಿಕೆಯಾಗಿದೆ. ಹೀಗಾಗಿಯೇ ಅವರೆಲ್ಲರೂ ಮಸೂದೆ ಪರವಾಗಿ ಮತ ಚಲಾಯಿಸಿದ್ದಾರೆ’ ಎಂದು ರಾಜ್ಯಸಭೆಯಲ್ಲಿ ಮಸೂದೆ ಮೇಲಿನ ಚರ್ಚೆಯ ವೇಳೆ ಅಮಿತ್ ಶಾಬುಧವಾರ ಹೇಳಿದ್ದರು.

‘ಪೌರತ್ವ (ತಿದ್ದುಪಡಿ) ಮಸೂದೆ ಅಂಗೀಕಾರದಿಂದ ಅಸ್ಸಾಂನ ಸೋದರ ಸೋದರಿಯರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ನಾನು ಭರವಸೆ ಕೊಡುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಟ್ವೀಟ್ ಮಾಡಿದ್ದರು.

ಹೋರಾಟಗಾರರ ಆಕ್ಷೇಪಗಳು

* ರಾಜ್ಯದಲ್ಲಿ ಈಗಾಗಲೇ ಲಕ್ಷಾಂತರ ಅಕ್ರಮ ವಲಸಿಗರಿಗೆ 1985ರ ‘ಅಸ್ಸಾಂ ಒಪ್ಪಂದ’ ಪ್ರಕಾರ ಪೌರತ್ವ ನೀಡಲಾಗಿದೆ. ಇದರಿಂದ ರಾಜ್ಯದ ಸಂಸ್ಕೃತಿಗೆ ಧಕ್ಕೆಯಾಗಿದೆ. ರಾಜ್ಯದ ಸಂಪನ್ಮೂಲದ ಮೇಲಿನ ಹೊರೆ ಅಧಿಕವಾಗಿದೆ

* ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವ ಹಿಂದೂಗಳಿಗೆ ಭಾರತದ ಪೌರತ್ವ ನೀಡಲುಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ

* ಅಸ್ಸಾಂನ ಜನರ ಭಾಷೆ, ಸಂಸ್ಕೃತಿಯೇ ಬೇರೆ. ಬಾಂಗ್ಲಾ ಹಿಂದೂಗಳ ಸಂಸ್ಕೃತಿಯೇ ಬೇರೆ. ಬಾಂಗ್ಲಾ ಹಿಂದೂಗಳಿಗೆ ಪೌರತ್ವ ನೀಡಿದರೆ,ಸ್ಥಳೀಯರು ಮತ್ತು ವಲಸಿಗರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ

‘ಇನ್ನರ್‌ ಲೈನ್‌ ಪರ್ಮಿಟ್‌–ಐಎಲ್‌ಪಿ’ ರಾಜ್ಯಗಳು

ದೇಶದ ಬೇರೆ ರಾಜ್ಯಗಳ ಜನರು ಈ ರಾಜ್ಯಗಳಿಗೆ ಭೇಟಿ ನೀಡಲು ಸರ್ಕಾರದಿಂದ ಏಳು ದಿನಗಳ ಪರ್ಮಿಟ್ ಪಡೆಯಬೇಕಾಗುತ್ತದೆ. ಈ ರಾಜ್ಯಗಳನ್ನು ಸಂರಕ್ಷಿತ ಪ್ರದೇಶಗಳು ಎಂದು ಗುರುತಿಸಲಾಗಿದೆ. ಹೀಗಾಗಿ ಹೊರಗಿನ ವ್ಯಕ್ತಿಗಳು ಇಲ್ಲಿಗೆ ಮುಕ್ತವಾಗಿ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಈ ರಾಜ್ಯಗಳಲ್ಲಿ ಬೇರೆ ರಾಜ್ಯದವರು ನೆಲೆಸಲೂ ವಿಶೇಷ ‘ಪರ್ಮಿಟ್’ ಪಡೆಯಬೇಕು. ಆದರೆ ಹೊರಗಿನವರು ಇಲ್ಲಿ ಜಮೀನು ಖರೀದಿಸಲು ಅವಕಾಶವೇ ಇಲ್ಲ. ಈ ರಾಜ್ಯಗಳಿಗೆ ಪೌರತ್ವ (ತಿದ್ದುಪಡಿ) ಕಾಯ್ದೆ ಅನ್ವಯ ಆಗುವುದಿಲ್ಲ

ಪರಿಚ್ಛೇದ 6ರ ಪ್ರದೇಶಗಳು

ಇವನ್ನೂ ಸಂರಕ್ಷಿತ ಬುಡಕಟ್ಟು ಪ್ರದೇಶಗಳು ಎಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಬರುವ ಜಿಲ್ಲೆಗಳಲ್ಲಿ ಸ್ವಾಯತ್ತ ಜಿಲ್ಲಾಡಳಿತಗಳು ಇವೆ. ಇಲ್ಲಿಯೂ ಹೊರಗಿನವರು ಜಮೀನು ಖರೀದಿಸಲು ಅವಕಾಶವಿಲ್ಲ. ಈ ಪ್ರದೇಶಗಳಲ್ಲಿಪೌರತ್ವ (ತಿದ್ದುಪಡಿ) ಕಾಯ್ದೆ ಅನ್ವಯ ಆಗುವುದಿಲ್ಲ

ಪೌರತ್ವ (ತಿದ್ದುಪಡಿ) ಕಾಯ್ದೆ ಅನ್ವಯ ಆಗುವ ಪ್ರದೇಶಗಳು

ಅಸ್ಸಾಂ

33 ಅಸ್ಸಾಂನ ಜಿಲ್ಲೆಗಳ ಸಂಖ್ಯೆ

7 ಈ ಕಾಯ್ದೆಯಿಂದ ವಿನಾಯಿತಿ ಪಡೆದ ಅಸ್ಸಾಂನ ಜಿಲ್ಲೆಗಳು

26 ಈ ಕಾಯ್ದೆ ಅನ್ವಯ ಆಗುವ ಅಸ್ಸಾಂನ ಜಿಲ್ಲೆಗಳು


ಮೇಘಾಲಯ

ಶಿಲ್ಲಾಂಗ್‌ಗೆ ಈ ಕಾಯ್ದೆ ಅನ್ವಯ ಆಗುತ್ತದೆ


ತ್ರಿಪುರಾ

ರಾಜ್ಯದ ಶೇ 30ರಷ್ಟು ಪ್ರದೇಶಗಳಿಗೆ ಕಾಯ್ದೆ ಅನ್ವಯ ಆಗುತ್ತದೆ

ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ

ಆಧಾರ: ಪೌರತ್ವ (ತಿದ್ದುಪಡಿ) ಕಾಯ್ದೆ, ಸಂವಿಧಾನದ 6ನೇ ಪರಿಚ್ಛೇದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT