ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲಿ ನೈರ್ಮಲ್ಯ ಸೌಲಭ್ಯ: ಭಾರತ ನೆರವು

Last Updated 16 ಜೂನ್ 2020, 7:49 IST
ಅಕ್ಷರ ಗಾತ್ರ

ಕಠ್ಮಂಡು: ಭಕ್ತರ ಅನುಕೂಲಕ್ಕಾಗಿ ಇಲ್ಲಿನ ಪುರಾಣ ಪ್ರಸಿದ್ಧ ಪಶುಪತಿನಾಥ ದೇವಸ್ಥಾನದ ಆವರಣದಲ್ಲಿ ₹2.3 ಕೋಟಿ ವೆಚ್ಚದಲ್ಲಿ ನೈರ್ಮಲ್ಯ ಸೌಲಭ್ಯ ಕಲ್ಪಿಸಲು ಭಾರತ ಸರ್ಕಾರ ಮುಂದಾಗಿದೆ.

ಶೌಚಾಲಯ ಸೌಲಭ್ಯ ಸೇರಿದಂತೆ ನಿರ್ಮಾಣ ಕಾಮಗಾರಿಯು ‘ನೇಪಾಳ–ಭಾರತ ಮೈತ್ರಿ’ ಸಮುದಾಯ ಅಭಿವೃದ್ಧಿ ಯೋಜನೆಯಡಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ನೇಪಾಳದಲ್ಲಿನ ಭಾರತದ ರಾಯಭಾರ ಕಚೇರಿ, ನೇಪಾಳದ ವಿದೇಶಾಂಗ ಸಚಿವಾಲಯ, ಕಠ್ಮಂಡು ಮಹಾನಗರ ಪಾಲಿಕೆಗಳ ನಡುವೆ ಒಪ್ಪಂದ ಏರ್ಪಟ್ಟಿದೆ.

ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ದೇವಸ್ಥಾನದ ಆವರಣದಲ್ಲಿ ಕಠ್ಮಂಡು ಮಹಾನಗರ ಪಾಲಿಕೆಯು ನಿರ್ಮಾಣ ಕಾಮಗಾರಿ ಶುರು ಮಾಡಲಿದೆ. 15 ತಿಂಗಳಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ಭಾರತದ ರಾಯಭಾರ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೇಪಾಳದ ಅತಿದೊಡ್ಡ ದೇವಸ್ಥಾನಗಳಲ್ಲಿ ಒಂದು ಎನಿಸಿರುವ ಪಶುಪತಿನಾಥ ಮಂದಿರವು ಭಾಗಮತಿ ನದಿಯ ಎರಡೂ ದಡಗಳನ್ನು ವ್ಯಾಪಿಸಿದೆ. ನೇಪಾಳ ಹಾಗೂ ಭಾರತದ ಸಾವಿರಾರು ಜನರು ಇಲ್ಲಿಗೆ ನಿತ್ಯ ಭೇಟಿ ನೀಡುತ್ತಾರೆ.

ಉಭಯ ದೇಶಗಳ ನಡುವೆ ಗಡಿ ವಿವಾದ ಸೃಷ್ಟಿಯಾಗಿರುವ ಸಮಯದಲ್ಲೇ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಹಣ ನೀಡಲು ಭಾರತ ಮುಂದಾಗಿರುವುದು ಇಲ್ಲಿ ಗಮನಾರ್ಹ. ಭಾರತಕ್ಕೆ ಸೇರಿದ ಕೆಲ ಪ್ರದೇಶಗಳನ್ನು ನೇಪಾಳ ರಾಜಕೀಯ ನಕ್ಷೆಯಲ್ಲಿ ಸೇರ್ಪಡೆ ಮಾಡುವ ಮುಸೂದೆಗೆ ಸಂಸತ್ತಿನ ಕೆಳಮನೆ ಕಳೆದ ಶನಿವಾರ ಒಪ್ಪಿಗೆ ನೀಡಿತ್ತು. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT