ಭಾನುವಾರ, ಮಾರ್ಚ್ 29, 2020
19 °C

ಭಯೋತ್ಪಾದನೆ ವಿರುದ್ಧ ಮೋದಿ ನೀಡಿದ ಹೇಳಿಕೆ ಅತ್ಯಂತ ಆಕ್ರಮಣಕಾರಿ ಎಂದ ಟ್ರಂಪ್‌

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ‘ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆ ಅತ್ಯಂತ ಆಕ್ರಮಣಕಾರಿಯಾಗಿತ್ತು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜತೆಗೆ ಸೋಮವಾರ (ಭಾರತೀಯ ಕಾಲಮಾನ ಸೋಮವಾರ ತಡರಾತ್ರಿ) ನಡೆಸಿದ ಸಭೆಯಲ್ಲಿ ಟ್ರಂಪ್ ಈ ಮಾತು ಹೇಳಿದ್ದಾರೆ. ಕಾಶ್ಮೀರದ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಮಧ್ಯಸ್ಥಿಕೆ ವಹಿಸುವಂತೆ ಇಮ್ರಾನ್ ಖಾನ್ ಅವರು ಮಾಡಿಕೊಂಡ ಮನವಿಗೆ ಪ್ರತಿಕ್ರಿಯೆಯಾಗಿ ಟ್ರಂಪ್ ಈ ಮಾತು ಹೇಳಿದ್ದಾರೆ.

‘ಭಯೋತ್ಪಾದನೆಯನ್ನು ಯಾರು ಪೋಷಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಭಯೋತ್ಪಾದನೆ ವಿರುದ್ಧ ನಿರ್ಣಾಯಕವಾದ ಹೋರಾಟ ನಡೆಸಲು ಇದು ಸೂಕ್ತ ಸಮಯ’ ಎಂದು ಮೋದಿ ಅವರು ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಘೋಷಿಸಿದ್ದರು. ಆದರೆ ಮೋದಿ ಅವರು ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸಿರಲಿಲ್ಲ. ಆದರೆ ಪಾಕಿಸ್ತಾನದ ಪ್ರಧಾನಿ ಜತೆ ಟ್ರಂಪ್ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದು ಚರ್ಚೆಗೆ ಕಾರಣವಾಗಿದೆ.

‘ಹೌಡಿ ಮೋದಿಯಲ್ಲಿ ನಾನೂ ಭಾಗಿಯಾಗಿದ್ದೆ. ಅಲ್ಲಿ ಮೋದಿ ಒಂದು ಅತ್ಯಂತ ಆಕ್ರಮಣಕಾರಿಯಾದ ಹೇಳಿಕೆ ನೀಡಿದ್ದರು. ಅಂತಹ ಆಕ್ರಮಣಕಾರಿ ಹೇಳಿಕೆಯನ್ನು ಕೇಳಬಹುದು ಎಂದು ನಾನು ನಿರೀಕ್ಷಿಸಿಯೇ ಇರಲಿಲ್ಲ. ಅಲ್ಲಿ 50,000 ಜನ ಸೇರಿ ದ್ದರು. ಆ ಹೇಳಿಕೆಯನ್ನು ಆ ಜನ ಸ್ವಾಗ ತಿಸಿದರು. ಆದರೆ ನಿಜಕ್ಕೂ ಆ ಹೇಳಿಕೆ ಆಕ್ರಮಣಕಾರಿಯಾಗಿತ್ತು’ ಎಂದು ಟ್ರಂಪ್ ಕಳವಳ ವ್ಯಕ್ತಪಡಿಸಿದ್ದಾರೆ.

‘ಈ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳಲು ಬೇರೆ–ಬೇರೆ ಮಾರ್ಗ ಗಳಿವೆ. ಭಾರತ –ಪಾಕಿಸ್ತಾನಗಳು ಮುಂದೆ ಬಂದು ಈ ಸಮಸ್ಯೆ ಬಗೆಹರಿಸಿ ಕೊಳ್ಳುತ್ತವೆ ಎಂಬ ವಿಶ್ವಾಸ ನನಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.

ಮಧ್ಯಸ್ಥಿಕೆಗೆ ಮತ್ತೆ ಉತ್ಸುಕತೆ: ಕಾಶ್ಮೀರದ ವಿಚಾರದಲ್ಲಿ ಭಾರತ–ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ಟ್ರಂಪ್ ಮತ್ತೆ ಉತ್ಸುಕತೆ ವ್ಯಕ್ತಪಡಿಸಿದ್ದಾರೆ. ಮಧ್ಯಸ್ಥಿಕೆ ವಹಿಸುವಂತೆ ಇಮ್ರಾನ್ ಖಾನ್ ಮಾಡಿದ ಮನವಿಗೆ ಪ್ರತಿಯಾಗಿ ಟ್ರಂಪ್ ಈ ಮಾತು ಹೇಳಿದ್ದಾರೆ.

‘ಕಾಶ್ಮೀರದಲ್ಲಿ ಭಾರತವು ಮೂಲಸೌಕರ್ಯಗಳ ಮೇಲೂ ನಿರ್ಬಂಧ ಹೇರುತ್ತಿದೆ. ಈ ವಿಚಾರದಲ್ಲಿ ಅಮೆ ರಿಕವು ಸಹಾಯ ಮಾಡಲೇಬೇಕು. ಅಲ್ಲಿ ಜನರ ಮೇಲೆ ಹೇರಿರುವ ನಿರ್ಬಂಧಗಳನ್ನು ತೆಗೆಯಲಾದರೂ ಮೋದಿಗೆ ಹೇಳಿ’ ಎಂದು ಇಮ್ರಾನ್ ಕೋರಿದ್ದರು.

‘ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೂ ಉತ್ತಮ ಸಂಬಂಧ ಹೊಂದಿದ್ದೇನೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಅವರೊಂದಿಗೂ ಉತ್ತಮ ಸಂಬಂಧ ಹೊಂದಿದ್ದೇನೆ. ನಾನು ಅತ್ಯುತ್ತಮ ಸಂಧಾನಕಾರನೂ ಹೌದು. ಈವರೆಗೆ ಸಂಧಾನದಲ್ಲಿ ವಿಫಲನಾಗಿಲ್ಲ. ನಾನು ಸಂಧಾನ ನಡೆಸಬೇಕು ಎನ್ನುವುದಾದರೆ ಭಾರತ ಮತ್ತು ಪಾಕಿಸ್ತಾನಗಳೆರಡೂ ಒಪ್ಪಿಕೊಳ್ಳಬೇಕು’ ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರ ಈ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಲು ಭಾರತದ ರಾಜತಾಂತ್ರಿಕರು ನಿರಾಕರಿಸಿ ದ್ದಾರೆ.

‘ಪ್ರಧಾನಿ ಮೋದಿ ಮತ್ತು ಟ್ರಂಪ್ ಮಧ್ಯೆ ಸಭೆ ನಡೆಯಲಿದೆ. ಅಲ್ಲಿಯವರೆಗೆ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ. ಸಭೆ ಮುಗಿಯುವವರೆಗೂ ಕಾಯಿರಿ’ ಎಂದು ಭಾರತದ ವಿದೇಶಾಂಗ ವ್ಯವ ಹಾರಗಳ ಸಚಿವಾಲಯದ ಪಾಶ್ಚಿಮಾತ್ಯ ವಲಯದ ಕಾರ್ಯದರ್ಶಿ ಗೀತೇಶ್ ಶರ್ಮಾ ಹೇಳಿದ್ದಾರೆ.

ಕಾಶ್ಮೀರದ ವಿಚಾರದಲ್ಲಿ ಮೂರನೇ ರಾಷ್ಟ್ರ ಮಧ್ಯಪ್ರವೇಶಿಸುವುದನ್ನು ಭಾರತವು ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ.

ಹ್ಯೂಸ್ಟನ್‌ನಲ್ಲಿ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಮೋದಿಯ ಜತೆ ಟ್ರಂಪ್ ವೇದಿಕೆ ಹಂಚಿಕೊಂಡಿದ್ದರು.

ಟ್ರಂಪ್‌ ಅವರನ್ನು ಪುನರಾಯ್ಕೆ ಮಾಡಿ ಎಂದು ಮೋದಿ ಕೋರಿದ್ದರು. ಆದರೆ ಆಗ ಇಬ್ಬರು ನಾಯಕರೂ ಕಾಶ್ಮೀರದ ವಿಚಾರವನ್ನು ಚರ್ಚಿಸಲಿಲ್ಲ. ಆದರೆ, ‘ಹೌಡಿ ಮೋದಿ’ ನಡೆದ ಮರುದಿನವೇ ಟ್ರಂಪ್ ಅವರು ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದಿದ್ದಾರೆ ಮತ್ತು ಮೋದಿ ಹೇಳಿಕೆ ಅಕ್ರಮಣಕಾರಿ ಎಂದೂ ಹೇಳಿದ್ದಾರೆ.

ಈ ಎಲ್ಲಾ ಕಾರಣದಿಂದ ಇಬ್ಬರು ನಾಯಕರ ಮಧ್ಯೆ (ಭಾರತೀಯ ಕಾಲಮಾನ ಮಂಗಳವಾರ ರಾತ್ರಿ) ನಡೆಯಲಿರುವ ಸಭೆ ಮಹತ್ವ ಪಡೆದಿದೆ.

ಚೀನಾಕ್ಕೆ ಅಮೆರಿಕ ಎಚ್ಚರಿಕೆ
ವ್ಯಾಪಾರದ ವಿಚಾರದಲ್ಲಿ ಚೀನಾದ ದುರ್ವರ್ತನೆಗೆ ಅಂತ್ಯ ಹಾಡುವ ಸಮಯ ಬಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಸಿದ್ದಾರೆ. ಜತೆಗೆ, ಹಾಂಗ್‌ ಕಾಂಗ್‌ನಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ರಕ್ಷಿಸುವಂತೆಯೂ ಚೀನಾವನ್ನು ಒತ್ತಾಯಿಸಿದ್ದಾರೆ.

ವರ್ಷಗಳಿಂದ ಅವರ (ವ್ಯಾಪಾರ) ದುರ್ವರ್ತನೆಯನ್ನು ಸಹಿಸಿಕೊಂಡಿದ್ದೇವೆ, ನಿರ್ಲಕ್ಷಿಸಿದ್ದೇವೆ ಅಥವಾ ಕೆಲವೊಮ್ಮೆ ಉತ್ತೇಜಿಸಿದ್ದೇವೆ ಕೂಡ. ಜಾಗತಿಕವಾದದ ಕಾರಣದಿಂದ ವಿಶ್ವ ನಾಯಕರು ತಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಬದಿಗೊತ್ತಿದ್ದರು ಎಂದು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಟ್ರಂಪ್‌ ಹೇಳಿದ್ದಾರೆ.

‘ನನಗೆ ನೊಬೆಲ್ ಬರಬೇಕಿತ್ತು’: ‘ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ಆಯ್ಕೆ ನ್ಯಾಯಯುತವಾಗಿ ನಡೆದಿದ್ದರೆ, ನನಗೆ ಎಂದೋ ನೊಬೆಲ್‌ ಶಾಂತಿ ಪುರಸ್ಕಾರ ಲಭಿಸಬೇಕಿತ್ತು’ ಎಂದು ಡೊನಾಲ್ಡ್‌ ಟ್ರಂಪ್ ಬೇಸರ ವ್ಯಕ್ತಪಡಿಸಿದ್ದಾರೆ.

**

ಕಾಶ್ಮೀರದ ಮೇಲೆ ಭಾರತವು ದಿಗ್ಬಂಧನ ಹೇರಿದೆ. ದಿನೇದಿನೇ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಇದನ್ನು ಸರಿಪಡಿಸುವುದು ಜಗತ್ತಿನ ಶಕ್ತಿಯುತ ರಾಷ್ಟ್ರದ ಜವಾಬ್ದಾರಿ.
-ಇಮ್ರಾನ್‌ ಖಾನ್, ಪಾಕಿಸ್ತಾನ ಪ್ರಧಾನಿ

**

ನನ್ನಿಂದ ನೆರವಾಗುತ್ತದೆ ಎನ್ನುವುದಾದರೆ, ಅದನ್ನು ನನಗೆ ತಿಳಿಸಿ. ಆದರೆ ಅದಕ್ಕೂ ಮುನ್ನ ಆ ಕಡೆಯಿಂದಲೂ (ಭಾರತದಿಂದ) ಒಪ್ಪಿಗೆ ಪಡೆದುಕೊಂಡು ಬನ್ನಿ.
-ಡೊನಾಲ್ಡ್‌ ಟ್ರಂಪ್, ಅಮೆರಿಕ ಅಧ್ಯಕ್ಷ

**

ನಮ್ಮ ನಿಲುವು ಸ್ಪಷ್ಟವಾಗೇ ಇದೆ. ಈ ಹಿಂದೆಯೂ ಇದನ್ನೇ ಹೇಳಿದ್ದೇವೆ. ಮೋದಿ–ಟ್ರಂಪ್ ಸಭೆ ಮುಗಿಯುವವರೆಗೂ ಕಾಯಿರಿ.
-ರವೀಶ್‌ ಕುಮಾರ್, ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು