ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧಭೀತಿ | ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್‌ ಖಂಡಾಂತರ ಕ್ಷಿಪಣಿ ದಾಳಿ

Last Updated 8 ಜನವರಿ 2020, 2:37 IST
ಅಕ್ಷರ ಗಾತ್ರ

ಬಾಗ್ದಾದ್: ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ 12ಕ್ಕೂ ಹೆಚ್ಚು ಖಂಡಾಂತರ ಕ್ಷಿಪಣಿಗಳನ್ನು ಮಂಗಳವಾರ ರಾತ್ರಿ (ಭಾರತೀಯ ಕಾಲಮಾನ ರಾತ್ರಿ 10:30) ಪ್ರಯೋಗಿಸಿದೆ. ಸಾವುನೋವಿನ ಬಗ್ಗೆ ಅಮೆರಿಕ ಸೇನಾ ಪ್ರಧಾನ ಕಚೇರಿ ಪೆಂಟಗನ್ ಈವರೆಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

ಖಂಡಾಂತರ ಕ್ಷಿಪಣಿ ಪ್ರಯೋಗದ ದೃಶ್ಯಗಳನ್ನು ಇರಾನ್‌ ಸರ್ಕಾರಿ ಟಿವಿ ಪ್ರಸಾರ ಮಾಡಿದೆ.

‘ಜನವರಿ 7ರಂದು ಸಂಜೆ 5.30ಕ್ಕೆ (ಭಾರತೀಯ ಕಾಲಮಾನ ರಾತ್ರಿ 10.30)ಇರಾಕ್‌ನಲ್ಲಿರುವ ಅಮೆರಿಕ ಸೇನೆ ಮತ್ತು ಮಿತ್ರಪಡೆಗಳ ಮೇಲೆ ಇರಾನ್‌ 12ಕ್ಕೂ ಹೆಚ್ಚು ಖಂಡಾಂತರ ಕ್ಷಿಪಣಿಗಳನ್ನು ಪ್ರಯೋಗಿಸಿತು’ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಜೊನಾಥನ್ ಹೊಫ್‌ಮನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಇರಾಕ್‌ನ ಅಲ್‌–ಅಸಾದ್ ಮತ್ತು ಇಬ್ರಿಲ್‌ ಪಟ್ಟಣಗಳಲ್ಲಿರುವ ಅಮೆರಿಕ ಸೇನಾನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ.ಈ ಕ್ಷಿಪಣಿಗಳನ್ನುಇರಾನ್‌ನಿಂದ ಉಡಾಯಿಸಲಾಗಿದೆಎಂಬ ಬಗ್ಗೆ ಯಾವುದೇ ಅನುಮಾನಗಳಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಸೇನಾ ನೆಲೆಗಳಲ್ಲಿ ಉಂಟಾಗಿರುವ ಸಾವುನೋವುಗಳ ಬಗ್ಗೆ ಯಾವುದೇ ಮಾಹಿತಿಯನ್ನು ಅಮೆರಿಕ ಈವೆರೆಗೆ ಬಹಿರಂಗಪಡಿಸಿಲ್ಲ. ಇರಾಕ್‌ನಲ್ಲಿರುವ ಇರಾನ್‌ ಪರ ಗುಂಪುಗಳು ಮೇಜರ್ ಜನರಲ್ ಖಾಸಿಂ ಸುಲೇಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ ನಂತರ ಈ ದಾಳಿ ನಡೆದಿದೆ.

ಅಮೆರಿಕದ ಶ್ವೇತಭವನವು ಈ ಕುರಿತು ಪ್ರತ್ಯೇಕ ಹೇಳಿಕೆ ಹೊರಡಿಸಿ,‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ರಾಷ್ಟ್ರೀಯ ಭದ್ರತಾ ತಂಡದ ಸಲಹೆ ಪಡೆದುಕೊಳ್ಳುತ್ತಿದ್ದಾರೆ’ ಎಂದು ಹೇಳಿದೆ.

ಅಮೆರಿಕ ಮತ್ತು ಮಿತ್ರಪಡೆಗಳ ಸೇನೆ ನೆಲೆ ನಿಂತಿರುವಇರಾಕ್‌ನ ಅಲ್‌–ಅಸದ್ ವಾಯುನೆಲೆಯಮೇಲೆ ಕನಿಷ್ಠ 9 ಕ್ಷಿಪಣಿಗಳು ಸ್ಫೋಟಗೊಂಡವು ಎಂದು ಸ್ಥಳೀಯ ಮೂಲಗಳು ಖಚಿತಪಡಿಸಿವೆ.

ಇರಾನ್‌ ತಾನೇ ಈ ದಾಳಿ ನಡೆಸಿರುವುದಾಗಿಸರ್ಕಾರಿ ಟಿವಿಯಲ್ಲಿ ಹೇಳಿಕೊಂಡಿದೆ.

ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಇರಾನ್‌ನ ಖಾಸಿಂ ಸುಲೇಮಾನಿ ಜೊತೆಗೆ ಇರಾನ್‌ನ ಹಷೆದ್ ಅಲ್–ಶಾಬಿ ಸಶಸ್ತ್ರಪಡೆಯ ಉಪಮುಖ್ಯಸ್ಥ ಮಹ್ದಿ ಅಲ್ ಮುಹಂಡಿಸ್ ಸಹ ಮೃತಪಟ್ಟಿದ್ದ. ಇರಾಕ್‌ನಲ್ಲಿ ಇರಾನ್ ಪ್ರಭಾವವಿರುವ ವಲಯಗಳಲ್ಲಿ ಈತನನ್ನು ‘ಗಾಡ್‌ಫಾದರ್’ ಎಂದೇ ಗೌರವಿಸುತ್ತಾರೆ. ಈಗ ಇರಾನ್ ಅಧಿಕೃತವಾಗಿ ತೊಡೆತಟ್ಟಿರುವುದರಿಂದ ಮುಂದಿನ ದಿನಗಳಲ್ಲಿ ಈ ಗುಂಪು ಅಮೆರಿಕ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT