ಗುರುವಾರ , ಆಗಸ್ಟ್ 5, 2021
22 °C
ಗಾಲ್ವನ್‌ ಕಣಿವೆಯಲ್ಲಿನ ಗಡಿ ಸಂಘರ್ಷಕ್ಕೆ ಪ್ರಧಾನಿ ಪ್ರತಿಕ್ರಿಯೆ l ಹುತಾತ್ಮ ಯೋಧರ ಧೈರ್ಯ, ತ್ಯಾಗವನ್ನು ಕೊಂಡಾಡಿದ ದೇಶ

ಕೆಣಕಿದರೆ ಜೋಕೆ: ಚೀನಾಗೆ ಮೋದಿ ಪರೋಕ್ಷ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತವು ಶಾಂತಿಯನ್ನು ಬಯಸುತ್ತದೆ. ಯಾರಾದರೂ ಕೆಣಕಲು ಬಂದರೆ ಅವರಿಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಭಾರತ–ಚೀನಾ ಗಡಿಯ ಗಾಲ್ವನ್‌ ಕಣಿವೆಯಲ್ಲಿ ಸೋಮವಾರ ರಾತ್ರಿ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾದ ಬಳಿಕ ಪ್ರಧಾನಿ ನೀಡಿದ ಮೊದಲ ಪ್ರತಿಕ್ರಿಯೆ ಇದು. 

ಯೋಧರ ಬಲಿದಾನವು ವ್ಯರ್ಥವಾಗಲು ಬಿಡುವುದಿಲ್ಲ. ದೇಶದ ಏಕತೆ ಮತ್ತು ಸಾರ್ವಭೌಮತೆಯ ವಿಚಾರದಲ್ಲಿ ಯಾವ ರಾಜಿಯೂ ಇಲ್ಲ. ದೇಶದ ಆತ್ಮಗೌರವ ಮತ್ತು ಪ್ರತಿ ಇಂಚು ಭೂಮಿಯನ್ನೂ ರಕ್ಷಿಸಲಾಗುವುದು ಎಂದೂ ಮೋದಿ ಹೇಳಿದರು. ಕೋವಿಡ್‌ಗೆ ಸಂಬಂಧಿಸಿ ಮುಖ್ಯಮಂತ್ರಿಗಳ ಜತೆ ವಿಡಿಯೊ ಸಂವಾದದಲ್ಲಿ ಪ್ರಧಾನಿ ಮಾತನಾಡಿದರು. 

ಭಾರತ–ಚೀನಾ ನಡುವೆ ಐದು ದಶಕಗಳಲ್ಲೇ ಅತ್ಯಂತ ದೊಡ್ಡ ಸಂಘರ್ಷ ಸೋಮವಾರ ರಾತ್ರಿ ನಡೆದಿತ್ತು.

‘ನೆರೆ ದೇಶಗಳ ಜತೆಗೆ ನಾವು ನಿಕಟ ಸಹಕಾರ ಮತ್ತು ಸ್ನೇಹದಿಂದ ಸದಾ ಕೆಲಸ ಮಾಡಿದ್ದೇವೆ. ನಾವು ಯಾರನ್ನೂ ಕೆಣಕಲು ಹೋಗಿಲ್ಲ. ಸಮಯ ಬಂದಾಗಲೆಲ್ಲ ನಮ್ಮ ಶಕ್ತಿಯನ್ನು ನಾವು ತೋರಿಸಿದ್ದೇವೆ’ ಎಂದು ಮೋದಿ ಹೇಳಿದರು. 

ಹುತಾತ್ಮರಾದ ಯೋಧರ ಕುಟುಂಬಗಳಿಗೆ ಅವರು ಸಂತಾಪ ಸೂಚಿಸಿದರು. ಮೃತ ಸೈನಿಕರ ಗೌರವಾರ್ಥ ಎರಡು ನಿಮಿಷ ಮೌನ ಆಚರಿಸುವಂತೆ ವಿಡಿಯೊ ಸಂವಾದದಲ್ಲಿ ಭಾಗವಹಿಸಿದವರಿಗೆ ಪ್ರಧಾನಿ ಸೂಚಿಸಿದರು. 

ಹುತಾತ್ಮ ಯೋಧರ ಧೈರ್ಯ ಮತ್ತು ದಿಟ್ಟತನವನ್ನು ಇಡೀ ದೇಶವೇ ಸ್ಮರಿಸಿದೆ. ‘ಈ ಯೋಧರ ಧೈರ್ಯ ಮತ್ತು ತ್ಯಾಗವನ್ನು ದೇಶ ಎಂದೂ ಮರೆಯದು. ಯೋಧರ ಕುಟುಂಬದ ಸಂಕಷ್ಟದ ಸಮಯದಲ್ಲಿ ಅವರಿಗೆ ಇಡೀ ದೇಶವೇ ಹೆಗಲು ಕೊಟ್ಟು ನಿಲ್ಲಲಿದೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

‘ಯೋಧರ ತ್ಯಾಗಕ್ಕೆ ದೇಶವು ಆಭಾರಿಯಾಗಿದೆ. ದೇಶವೇ ಈ ಯೋಧರ ಕುಟುಂಬದ ಜತೆಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ.

ದಾಳಿಯ ಪರಿಣಾಮ ಗಂಭೀರ; ಚೀನಾಗೆ ಭಾರತದ ಸ್ಪಷ್ಟ ಸಂದೇಶ

ತನ್ನ ಯೋಧರ ಮೇಲೆ ಚೀನಾದ ಸೈನಿಕರು ನಡೆಸಿದ ‘ಪೂರ್ವಯೋಜಿತ’ ದಾಳಿಯು ದ್ವಿಪಕ್ಷೀಯ ಸಂಬಂಧದ ಮೇಲೆ ‘ಗಂಭೀರ ಪರಿಣಾಮ’ ಬೀರಲಿದೆ ಎಂಬುದನ್ನು ಭಾರತವು ಚೀನಾಕ್ಕೆ ತಿಳಿಸಿದೆ. 

ಆದರೆ, ಚೀನಾವು ಭಾರತದ ಸೈನಿಕರ ಮೇಲೆ ದೋಷ ಹೊರಿಸಿದೆ. ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿದ ಭಾರತದ ಯೋಧರು ಚೀನಾದ ಸೈನಿಕರು ಮತ್ತು ಅಧಿಕಾರಿಗಳನ್ನು ಕೆಣಕಿದ್ದಾರೆ. ಇದುವೇ ಹಿಂಸಾತ್ಮಕ ಬಡಿದಾಟ ಮತ್ತು ಸಾವು ನೋವಿಗೆ ಕಾರಣವಾಯಿತು ಎಂದು ಚೀನಾ ಹೇಳಿದೆ. 

ಘಟನೆಯ ಬಗ್ಗೆ ತನಿಖೆ ನಡೆಸಿ, ಸಂಘರ್ಷಕ್ಕೆ ಕಾರಣರಾದವರಿಗೆ ತಕ್ಕ ಶಿಕ್ಷೆ ನೀಡುವಂತೆಯೂ ಆಗ್ರಹಿಸಿದೆ. 

ಆರೋಪ–ಪ್ರತ್ಯಾರೋಪದ ನಡುವೆಯೂ, ಎಲ್‌ಎಸಿಯಲ್ಲಿ ಪರಿಸ್ಥಿತಿಯನ್ನು ಹೊಣೆಗಾರಿಕೆಯಿಂದ ನಿಭಾಯಿಸಲು ಎರಡೂ ದೇಶಗಳು ಸಮ್ಮತಿಸಿವೆ. ಎರಡೂ ದೇಶಗಳ ಸೇನೆಯ ಕೋರ್‌ ಕಮಾಂಡರ್‌ಗಳ ನಡುವೆ ಜೂನ್‌ 6ರಂದು ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಅನುಸಾರ ಈಗಿನ ಬಿಕ್ಕಟ್ಟು ಶಮನಕ್ಕೂ ಒಪ್ಪಿಗೆ ಸೂಚಿಸಲಾಗಿದೆ.   

ಗಡಿಯಲ್ಲಿ ಕೈ ಕೈ ಮಿಲಾಯಿಸುವಿಕೆ ನಡೆದು ಎರಡು ದಿನಗಳ ಬಳಿಕ, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಅವರು ದೂರವಾಣಿ ಮೂಲಕ ಬುಧವಾರ ಮಾತುಕತೆ ನಡೆಸಿದ್ದಾರೆ. 

ತಳಮಟ್ಟದಲ್ಲಿ ಈವರೆಗೆ ಕಾಯ್ದುಕೊಂಡು ಬಂದ ಸ್ಥಿತಿಯನ್ನು ಬದಲಾಯಿಸುವ ಉದ್ದೇಶದಿಂದ ಎಲ್ಲ ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸಿ ಚೀನಾದ ಸೈನಿಕರು ಹಲ್ಲೆ ನಡೆಸಿದ್ದಾರೆ ಎಂದು ವಾಂಗ್‌ ಅವರಿಗೆ ಜೈಶಂಕರ್‌ ಹೇಳಿದ್ದಾರೆ. 

ಮೇ 5ರಂದು ಪಾಂಗಾಂಗ್‌ ಸರೋವರದ ಉತ್ತರ ದಂಡೆಯಲ್ಲಿ ಎರಡೂ ದೇಶಗಳ ಸೈನಿಕರು ಮುಖಾಮುಖಿಯಾದ ನಂತರ ಇದೇ ಮೊದಲು ಇಬ್ಬರು ವಿದೇಶಾಂಗ ಸಚಿವರು ಮಾತನಾಡಿದ್ದಾರೆ. 

ಗಡಿಯಲ್ಲಿ ಗರಿಷ್ಠ ಎಚ್ಚರ

ಭಾರತ–ಚೀನಾ ನಡುವಣ ಸುಮಾರು 3,500 ಕಿ.ಮೀ. ಗಡಿ ಸಮೀಪದ ಮುಂಚೂಣಿಯ ಸೇನೆ ಮತ್ತು ವಾಯುಪಡೆ ಶಿಬಿರಗಳನ್ನು ಗರಿಷ್ಠ ಎಚ್ಚರದಲ್ಲಿ ಇರಿಸಲಾಗಿದೆ. ಚೀನಾದ ನೌಕೆಗಳು ಆಗಾಗ ಬಂದು ಹೋಗುವ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸುವಂತೆ ನೌಕಾಪಡೆಗೆ ಸೂಚಿಸಲಾಗಿದೆ. 

ಅರುಣಾಚಲ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ ಮುಂಚೂಣಿ ಶಿಬಿರಗಳಿಗೆ ಇನ್ನಷ್ಟು ತುಕಡಿಗಳನ್ನು ಕಳುಹಿಸಲಾಗಿದೆ. ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌, ಮೂರೂ ಪಡೆಗಳ ಮುಖ್ಯಸ್ಥರ ಜತೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 

 ಚೀನಾದ 35 ಸೈನಿಕರು ಬಲಿ

ಚೀನಾದ ಸೇನೆಯ ಹಿರಿಯ ಅಧಿಕಾರಿ ಸೇರಿ 35 ಸೈನಿಕರು ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ ಎಂದು ಅಮೆರಿಕದ ಗುಪ್ತಚರ ಮಾಹಿತಿಯನ್ನು ಆಧರಿಸಿ ಅಲ್ಲಿನ ಪತ್ರಿಕೆಗಳು ವರದಿ ಮಾಡಿವೆ. 

ಚೀನಾ ಸರ್ಕಾರ ಅಥವಾ ಸೇನೆಯು ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

‘ತಮ್ಮ ಸೈನಿಕರು ಸತ್ತಿದ್ದಾರೆ ಎಂದು ಹೇಳುವುದನ್ನು ಚೀನಾ ಅವಮಾನ ಎಂದು ಭಾವಿಸುತ್ತದೆ. ಅದಲ್ಲದೆ, ತಮ್ಮಲ್ಲಿ ಹೆಚ್ಚಿನ ಸಾವು ನೋವು ಆಗಿದೆ ಎಂಬುದು ಎದುರಾಳಿಯ ಬಲವನ್ನು ಒಪ್ಪಿಕೊಂಡಂತೆ ಎಂಬುದು ಚೀನಾದ ನಿಲುವು’ ಎಂದು ಅಮೆರಿಕದ ಪತ್ರಿಕೆಗಳು ವರದಿ ಮಾಡಿವೆ. 

‘ವ್ಯಾಪಾರಕ್ಕಿಲ್ಲ ಕುತ್ತು’

ಗಡಿಯಲ್ಲಿನ ಈಗಿನ ಸಂಘರ್ಷವು ದ್ವಿಪಕ್ಷೀಯ ವ್ಯಾಪಾರದ ಮೇಲೆ ತಕ್ಷಣ ಪರಿಣಾಮ ಬೀರದು. ಆದರೆ, ಬಿಕ್ಕಟ್ಟು ಇನ್ನಷ್ಟು ತೀವ್ರಗೊಂಡರೆ ವ್ಯಾಪಾರ ಸಂಬಂಧ ಮುಂದುವರಿಸುವುದು ಕಷ್ಟವಾಗಬಹುದು ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್‌.ಕೆ. ಸರಾಫ್‌ ಹೇಳಿದ್ದಾರೆ. 

ಎರಡೂ ದೇಶಗಳ ಮಾರುಕಟ್ಟೆಗಳಲ್ಲಿ ವ್ಯಾಪಾರದ ಅಪಾರ ಅವಕಾಶ ಇದೆ. ಭಾರತದ ರಫ್ತುದಾರರಿಗೆ ಚೀನಾ ದೊಡ್ಡ ಮಾರುಕಟ್ಟೆ. ಈಗ, ಈ ದೇಶದ ಜತೆ ಭಾರತಕ್ಕೆ ವ್ಯಾಪಾರ ಕೊರತೆ ಇದೆ. ಅದನ್ನು ನೀಗಿಸುವ ಅವಕಾಶ ಭಾರತದ ರಫ್ತುದಾರರಿಗೆ ಇದೆ ಎಂದು ಉದ್ಯಮದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. 

‘ಹಲ್ಲೆ ಪೂರ್ವಯೋಜಿತ’

‘ಚೀನಾದ ಆಕ್ರಮಣಕಾರಿ ನಡೆಗೆ ಯಾವ ಕಾರಣವೂ ಇಲ್ಲ. ಆರೇಳು ಗಸ್ತು ಠಾಣೆಗಳ ಮೇಲೆ ಚೀನಾವು ನಡೆಸಿದ ದಾಳಿ ಪೂರ್ವಯೋಜಿತ’ ಎಂದು ರಕ್ಷಣಾ ಖಾತೆಯ ರಾಜ್ಯ ಸಚಿವ ಶ್ರೀಪಾದ ನಾಯ್ಕ್‌ ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಪಣಜಿಯಲ್ಲಿ ಮಾತನಾಡಿದರು.

ನಾಳೆ ಸರ್ವಪಕ್ಷ ಸಭೆ

ಗಡಿ ಪರಿಸ್ಥಿತಿಯ ಬಗ್ಗೆ ಚರ್ಚಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಜೂನ್‌ 19) ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರ ಜತೆ ಸಭೆಯನ್ನು ಆಯೋಜಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು