ಮಂಗಳವಾರ, ಆಗಸ್ಟ್ 20, 2019
22 °C
ಐತಿಹಾಸಿಕ ಉಡಾವಣೆ ವೇದಿಕೆಯಲ್ಲಿ ಗಗನಯಾತ್ರಿಗಳು

ಚಂದಿರನಲ್ಲಿ ಹೆಜ್ಜೆ ಇರಿಸಿದ ಕ್ಷಣಕ್ಕೆ 50 ವರ್ಷ

Published:
Updated:
Prajavani

ಕೇಪ್‌ ಕ್ಯಾನವೆರಲ್‌: ಚಂದ್ರನ ಅಂಗಳಕ್ಕೆ ತೆರಳಿದ್ದ ಗನಯಾತ್ರಿಗಳು ಸರಿಯಾಗಿ 50 ವರ್ಷಗಳ ಬಳಿಕ ಬಾಹ್ಯಾಕಾಶ ಉಡಾವಣೆಗೆ ವೇದಿಕೆ ಕಲ್ಪಿಸಿದ್ದ ಐತಿಹಾಸಿಕ ಜಾಗದಲ್ಲಿ ಸೇರಿ ಅದ್ಭುತ ಕ್ಷಣಗಳಿಗೆ ಮತ್ತೊಮ್ಮೆ ಸಾಕ್ಷಿಯಾಗಲಿದ್ದಾರೆ.

ಅಮೆರಿಕದ ಮೂವರು ಗಗನಯಾತ್ರಿಗಳು 50 ವರ್ಷಗಳ ಹಿಂದೆ ಫ್ಲಾರಿಡಾದಿಂದ ಚಂದ್ರನ ಅಂಗಳಕ್ಕೆ ತೆರಳಿದ್ದರು. ’ಅಪೊಲೊ 11’ ಬಾಹ್ಯಾಕಾಶ ನೌಕೆ ಮೊದಲ ಬಾರಿಗೆ ಮಾನವರನ್ನು ಹೊತ್ತು ಚಂದ್ರನ ಮೇಲಿಳಿದಿತ್ತು. ಈ ಮೂವರಲ್ಲಿ ಬಝ್‌ ಅಲ್ಡ್ರಿನ್‌ ಮತ್ತು ಮೈಕಲ್‌ ಕಾಲಿನ್ಸ್‌ ಬದುಕುಳಿದಿದ್ದಾರೆ. ಇವರ ಕಮಾಂಡರ್‌ ಆಗಿದ್ದ ಮತ್ತು ಚಂದ್ರನ ಅಂಗಳಲ್ಲಿ ಮೊದಲು ಹೆಜ್ಜೆ ಇಟ್ಟ ನೀಲ್‌ ಎ. ಆರ್ಮ್‌ಸ್ಟ್ರಾಂಗ್‌ 2012ರಲ್ಲಿ ನಿಧನರಾದರು.

‘ಅಪೊಲೊ 11’ರ ನೆನಪಿಗಾಗಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿಯೇ 89 ವರ್ಷದ ಅಲ್ಡ್ರಿನ್‌ ಮತ್ತು 88 ವರ್ಷದ ಕಾಲಿನ್ಸ್‌  ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಭೇಟಿಯಾಗಲಿದ್ದಾರೆ. ಇದೇ ಕೇಂದ್ರದಿಂದ 50 ವರ್ಷಗಳ ಹಿಂದೆ ‘ಅಪೊಲೊ 11’ ಅನ್ನು  ‘ಸ್ಯಾಟರ್ನ್ ವಿ’ ರಾಕೆಟ್‌ ಮೂಲಕ ಉಡಾವಣೆ ಮಾಡಲಾಗಿತ್ತು.

1969ರ ಜುಲೈ 16ರಂದು ಈ ಗಗನಯಾತ್ರಿಗಳು ’ಅಪೊಲೊ 11’ ಬಾಹ್ಯಾಕಾಶ ನೌಕೆ ಮೂಲಕ ತೆರಳಿದ್ದರು. ನಾಲ್ಕು ದಿನಗಳ ಬಳಿಕ  ಆರ್ಮ್‌ಸ್ಟ್ರಾಂಗ್‌ ಹೊರಗೆ ಬಂದು ಚಂದ್ರನ ಅಂಗಳದಲ್ಲಿನ ರೋಮಾಂಚನ ಕ್ಷಣಗಳನ್ನು ಅನುಭವಿಸಿದರು. ಅಲ್ಡ್ರಿನ್‌ ಚಂದ್ರನ ಅಂಗಳದಲ್ಲಿ ಹೆಜ್ಜೆ ಇಟ್ಟ ಎರಡನೇ ವ್ಯಕ್ತಿಯಾಗಿದ್ದರು. ಕಾಲಿನ್ಸ್‌ ಚಂದ್ರನ ಕಕ್ಷೆಯಲ್ಲಿದ್ದ ಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲೇ ಉಳಿದುಕೊಂಡಿದ್ದರು. ಅಪೊಲೊ ಚಂದ್ರ ಯಾನ ಯೋಜನೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾನವನ ಅತ್ಯುನ್ನತ ಸಾಧನೆಯಾಗಿತ್ತು. 

ಇದುವರೆಗೆ ಚಂದ್ರನಲ್ಲಿಗೆ ತೆರಳಿದ 12 ಮಂದಿಯಲ್ಲಿ ನಾಲ್ವರು ಮಾತ್ರ ಬದುಕುಳಿದಿದ್ದಾರೆ.  

Post Comments (+)