ಶನಿವಾರ, ಫೆಬ್ರವರಿ 22, 2020
19 °C

ಏನದು ಲಾಹೋರ್‌ನಲ್ಲಿ ಹಾರಾಡಿದ ನಿಗೂಢ ಆಕೃತಿ?  

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಹೋರ್‌: ಪಾಕಿಸ್ತಾನದ ಲಾಹೋರ್‌ನಲ್ಲಿ ಇತ್ತೀಚೆಗೆ ಬೃಹದಾಕಾರದ, ಕಪ್ಪು ಬಣ್ಣದ, ವೃತ್ತಾಕಾರದ ಆಕೃತಿಯೊಂದು ಹಾರಾಡಿ ಜನರನ್ನು ಆತಂಕಕ್ಕೆ ದೂಡಿದೆ. ಆಕೃತಿ ನಿಜಕ್ಕೂ ಏನು ಎಂಬ ಪ್ರಶ್ನೆ ಅಲ್ಲಿನ ಜನರನ್ನು ಕಾಡಲಾರಂಭಿಸಿದೆ. 

ವೃತ್ತಾಕಾರದ ಕಪ್ಪು ಹೊಗೆ ಮೆಲ್ಲಗೆ ಮೇಲೇಳುತ್ತಾ, ಆಗಸದಲ್ಲಿ ತೇಲುತ್ತಾ ಮರೆಯಾಗುವ ದೃಶ್ಯವನ್ನು ಕಳೆದ ಸೋಮವಾರ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿತ್ತು. 

ಈ ಆಕೃತಿಯ ಬಗ್ಗೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಒಂದಷ್ಟು ಮಂದಿ ಇದು ಅನ್ಯಗ್ರಹ ಜೀವಿಗಳ ವಿಮಾನ ಎಂದು ಹೇಳಿದ್ದಾರೆ. ಒಂದಷ್ಟು ಮಂದಿ ಇದನ್ನು ನಿರಾಕರಿಸಿದ್ದಾರೆ. ಇನ್ನೂ ಕೆಲ ಮಂದಿ ಜಗತ್ತಿನ ವಿವಿಧೆಡೆ ಹಾರಾಡಿದ್ದ ಇದೇ ಮಾದರಿಯ ಆಕೃತಿಯನ್ನೂ ಹಂಚಿಕೊಂಡಿದ್ದಾರೆ. ಆದರೆ, ಹಾರಾಡಿದ್ದು ಏನು ಎಂಬುದರ ಬಗ್ಗೆ ಮಾತ್ರ ಎಲ್ಲರೂ ಗೊಂದಲ. ಟ್ವಿಟರ್‌ನಲ್ಲಿ ಶೇರ್‌ ಆಗಿದ್ದ ವಿಡಿಯೋವನ್ನು ಈ ವರೆಗೆ 37 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ. 

ಈ ನಿಗೂಢ ಆಕೃತಿ ಏನು? ಏಕೆ ಸೃಷ್ಟಿಯಾಯಿತು ಎಂಬುದಕ್ಕೆ ಉತ್ತರವೂ ಸಿಕ್ಕಿದೆ. ಲಂಡನ್‌ ಮೂಲದ ಸುದ್ದಿ ಸಂಸ್ಥೆ ‘ದಿ ಸನ್‌’  ಈ ಕುರಿತು ವಿವರಣೆ ನೀಡಿದೆ. ಆಗಸದಲ್ಲಿ ಕಾಣುವ ಈ ವೃತ್ತಾಕಾರದ ಕಪ್ಪು ಹೊಗೆಗೆ ಭೂಮಿಯ ಮೇಲಿನ ಕಾರಣವನ್ನು ಅದು ನೀಡಿದೆ. ಕಾರ್ಖಾನೆಗಳಿಂದ ಹೊಮ್ಮುವ ಹೊಗೆ, ಸ್ಫೋಟದಿಂದ ಇಂಥ ಆಕೃತಿಗಳು ಮೂಡುತ್ತವೆ ಎಂದು ಅದು ಹೇಳಿದೆ.

ಇಂಥದ್ದೇ ಆಕೃತಿಗಳು ಜಗತ್ತಿನ ಹಲವೆಡೆ ಕಾಣಿಸಿಕೊಂಡ ಬಗ್ಗೆ ಈ ಹಿಂದೆ ವರದಿಯಾಗಿವೆ. 2014ರಲ್ಲಿ ಇಂಗ್ಲೆಂಡ್‌ನ ಲೀಮಿಂಗ್ಟನ್ ಸ್ಪಾನಲ್ಲಿ ಇಂಥದ್ದೇ ಆಕೃತಿ ಕಂಡಿತ್ತು. ಅಲ್ಲೆಲ್ಲೋ ಸಿಡಿದಿದ್ದ ಬೃಹತ್‌ ಪ್ರಮಾಣದ ಪಟಾಕಿಯಿಂದ ಆ ಆಕೃತಿ ಮೂಡಿತ್ತು ಎಂದು ನಂತರ ಪತ್ತೆ ಹಚ್ಚಲಾಯಿತು. ಷಿಕಾಗೋದಲ್ಲಿ 2012ರಲ್ಲಿ ಇಂಥದ್ದೇ ಹೊಗೆಯ ಮೋಡ ಕಾಣಿಸಿಕೊಂಡಿತ್ತು. ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡ ಕಾರಣಕ್ಕೆ ಆ ಆಕೃತಿ ರಚನೆಯಾಗಿತ್ತು ಎಂದು ಸುದ್ದಿ ಸಂಸ್ಥೆ ಎನ್‌ಬಿಸಿ ನ್ಯೂಸ್‌ ವರದಿ ಮಾಡಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು