ಶುಕ್ರವಾರ, ಜನವರಿ 17, 2020
20 °C

20 ಮಂದಿ ಮೀನುಗಾರರನ್ನು ಬಿಡುಗಡೆ ಮಾಡಿದ ಪಾಕ್‌

ಪಿಟಿಐ/ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಾಹೋರ್‌ : 20 ಮಂದಿ ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಸೇನೆ ಸೋಮವಾರ ವಾಘಾ ಗಡಿಯಲ್ಲಿ ಬಿಎಸ್‌ಎಫ್‌ಗೆ ಹಸ್ತಾಂತರಿಸಿದೆ. 

ಎರಡೂ ರಾಷ್ಟ್ರಗಳ ಸಂಬಂಧಗಳು ನನೆಗುದಿಗೆ ಬಿದ್ದಿದ್ದ ವೇಳೆ ಮೀನುಗಾರರ ಬಿಡುಗಡೆ ಉತ್ತಮ ಬೆಳವಣಿಗೆ ಎಂದು ಮಾಧ್ಯಮಗಳು ಬಣ್ಣಿಸಿವೆ. ಮೀನುಗಾರರು ಸಿಂಧ್‌ ಪ್ರಾಂತ್ಯದ ಮಲೀರ್‌ ಜಿಲ್ಲಾ ಜೈಲಿನಲ್ಲಿ ಬಂಧಿಯಾಗಿದ್ದರು. ಅವರನ್ನು ಭಾನುವಾರ ಬಿಡುಗಡೆಗೊಳಿಸಿ ಲಾಹೋರ್‌ಗೆ ರೈಲಿನಲ್ಲಿ ಕರೆತರಲಾಗಿತ್ತು. 

ಸ್ವಯಂಸೇವಾ ಸಂಸ್ಥೆ ‘ಈಧೀ ಫೌಂಡೇಶನ್‌’ ಲಾಹೋರ್‌ ರೈಲು ನಿಲ್ದಾಣದಲ್ಲಿ ಬಿಡುಗಡೆಗೊಂಡವರನ್ನು ಬರಮಾಡಿಕೊಂಡಿತು. ಅಲ್ಲದೆ, ಅವರಿಗೆ ಹೊಸ ಉಡುಗೆಗಳನ್ನು ನೀಡಿ ಸತ್ಕರಿಸಿತು.  

‘ಬಿಡುಗಡೆಗೊಂಡವರಲ್ಲಿ ಬಹುತೇಕರು ಆಂಧ್ರಪ್ರದೇಶಕ್ಕೆ ಸೇರಿದವರಾಗಿದ್ದಾರೆ. ‘ಜಲಗಡಿಯನ್ನು ದಾಟಿದ್ದರಿಂದಾಗಿ ಪಾಕಿಸ್ತಾನ ಕರಾವಳಿ ರಕ್ಷಣಾ ಪಡೆ 2018ರಲ್ಲಿ ನಮ್ಮನ್ನು ಬಂಧಿಸಿತ್ತು’ ಎಂದು ಮೀನುಗಾರ ಗಿರ್‌ ಸೋಮನಾಥ್‌ ಹೇಳಿದ್ದಾರೆ. 

‘ಗಡಿಯನ್ನು ಪ್ರವೇಶಿಸಿದ್ದರಿಂದ 6 ತಿಂಗಳ ಶಿಕ್ಷೆಯನ್ನು ವಿಧಿಸಲಾಗಿತ್ತು. ಬಂಧಿತರ ದಾಖಲೆ ಪತ್ರಗಳ ಸಾಬೀತಿಗೆ ಆದ ವಿಳಂಬ ಮತ್ತು ಇತರ ಕಾರಣಗಳಿಗಾಗಿ ಬಿಡುಗಡೆ ತಡವಾಗಿದೆ’ ಎಂದು ಜೈಲು ಅಧೀಕ್ಷಕ ಔರಂಗ್‌ಜೇಬ್‌ ಕಂಗೋ ತಿಳಿಸಿದ್ದಾರೆ. ಜೈಲಿನಲ್ಲಿ ಇನ್ನೂ 200 ಮಂದಿ ಭಾರತೀಯ ಮೀನುಗಾರರು ಇದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು