ಗುರುವಾರ , ನವೆಂಬರ್ 21, 2019
23 °C

ಪಾಕ್ ಜತೆಗಿನ ಸಂಬಂಧವೇ ಸವಾಲು: ಜೈಶಂಕರ್

Published:
Updated:
Prajavani

ನ್ಯೂಯಾರ್ಕ್: ಚರ್ಚೆಗೆ ಬರುವಂತೆ ಭಾರತದ ಮೇಲೆ ಒತ್ತಡ ಹಾಕುತ್ತಿರುವ ಪಾಕಿಸ್ತಾನದ ಜೊತೆ ಮಾತುಕತೆ ಇಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್ ಗುರುವಾರ ಸ್ಪಷ್ಟಪಡಿಸಿದ್ದಾರೆ. 

ವಿದೇಶಾಂಗ ವಿಚಾರಗಳ ಕುರಿತ ಪ್ರಮುಖ ಚಿಂತಕರ ಚಾವಡಿಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಕಾಶ್ಮೀರ ಹಾಗೂ ಪಾಕಿಸ್ತಾನದ ಜತೆಗಿನ ಸಂಬಂಧವನ್ನು ಭಾರತ ಹೇಗೆ ನಿರ್ವಹಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದರು. 

‘ಕಾಶ್ಮೀರ ಹಾಗೂ ಪಾಕಿಸ್ತಾನ ಎರಡೂ ಪ್ರತ್ಯೇಕ ವಿಚಾರಗಳು. ಎರಡನ್ನೂ ಬೇರೆ ಬೇರೆಯಾಗಿ ನೋಡಲೂ ಕಾರಣಗಳಿವೆ. ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಕಾಶ್ಮೀರ ವಿಷಯವೇ ಮೂಲಭೂತವಾದ ವಿಚಾರವೆಂದು ನನಗೆ ಅನ್ನಿಸುತ್ತಿಲ್ಲ. ಇದು ನಮ್ಮ ನಡುವಿನ ವಿಚಾರಗಳಲ್ಲಿ ಒಂದು ಭಾಗ ಮಾತ್ರ’ ಎಂದು ಜೈಶಂಕರ್ ವಿವರಿಸಿದರು.

‘ನೆರೆಯ ದೇಶದ ಜೊತೆ ಮಾತುಕತೆ ನಡೆಸಬೇಕೆಂಬುದು ಎಲ್ಲರ ಬಯಕೆ. ಪಾಕಿಸ್ತಾನದ ಜತೆ ಭಾರತ ಮಾತುಕತೆ ನಡೆಸುತ್ತದೆಯೇ ಎಂಬುದು ವಿಷಯವಲ್ಲ. ಆದರೆ ಭಯೋತ್ಪಾದನೆಯನ್ನು ಸಂಘಟಿಸುತ್ತಿರುವ ದೇಶದ ಜೊತೆ ಮಾತುಕತೆ ನಡೆಸುವುದಾದರೂ ಹೇಗೆ ಎಂಬುದು ನಿಜವಾದ ವಿಷಯ’ ಎಂದು ಅವರು ಹೇಳಿದರು. 

‘ಪಾಕಿಸ್ತಾನ ಹಾಗೂ ಭಾರತದ ಇತಿಹಾಸ ಸಹಜ ಇತಿಹಾಸವಲ್ಲ. ಪಾಕಿಸ್ತಾನ ಜೊತೆಗಿನ ಸಂಬಂಧ ಸವಾಲಿನದ್ದು. ಪಾಕಿಸ್ತಾನ ನೆರೆಯ ದೇಶವಾಗಿದ್ದರೂ, ಭಾರತದ ಜೊತೆ ಅದು ವ್ಯಾಪಾರ ಮಾಡಲು ಸಿದ್ಧವಿಲ್ಲ. ವಿಶ್ವವ್ಯಾಪಾರ ಸಂಘಟನೆಯ ಸದಸ್ಯ ದೇಶವಾಗಿದ್ದರೂ ಅದು ‘ಅತ್ಯಾಪ್ತ ದೇಶದ ಸ್ಥಾನಮಾನ’ ವಿಸ್ತರಿಸಲು ಸಿದ್ಧವಿಲ್ಲ. ಇದೆಲ್ಲವನ್ನೂ ಅದು ಕಾನೂನುಬದ್ಧವಾಗಿ ನಿರ್ಬಂಧಿಸಿದೆ' ಎಂದರು.

ಕ್ರಿಕೆಟ್ ಆಟ ನಿಲ್ಲಿಸಿದ್ದು ಏಕೆ?

ಉಭಯ ದೇಶಗಳ ನಡುವಿನ ಕ್ರಿಕೆಟ್ ಪಂದ್ಯಗಳನ್ನು ನಿಲ್ಲಿಸಿದ್ದು ಏಕೆ ಎಂಬುದಕ್ಕೆ ಉತ್ತರಿಸಿದ ಜೈಶಂಕರ್, ಸದ್ಯದ ಪರಿಸ್ಥಿತಿಯಲ್ಲಿ ಅದು ಕಷ್ಟ ಎಂದು ಅಭಿಪ್ರಾಯಪಟ್ಟರು.

ಉರಿ, ಪಠಾಣ್‌ಕೋಟ್, ಪುಲ್ವಾಮಾ ದಾಳಿಗಳನ್ನು ಉಲ್ಲೇಖಿಸಿದ ಅವರು, ‘ಭಯೋತ್ಪಾದನೆ, ಆತ್ಮಾಹುತಿ ದಾಳಿ, ಹಿಂಸೆಯನ್ನು ಪ್ರಚೋದಿಸುವ ಕಠಿಣ ಮಾರ್ಗಗಳನ್ನು ಅನುಸರಿಸಿದ ಬಳಿಕ, ಬನ್ನಿ ಸ್ವಲ್ಪ ಬಿಡುವು ಪಡೆದು ಕ್ರಿಕೆಟ್ ಆಡೋಣ ಎನ್ನುತ್ತೀರಿ. ಇದನ್ನು ಒಪ್ಪಲಾಗದು’ ಎಂದು ಹೇಳಿದ್ದಾರೆ.

‘ಭಯೋತ್ಪಾದನೆಯನ್ನು ಪ್ರಜ್ಞಾಪೂರ್ವಕವಾಗಿ, ಉದ್ದೇಶಪೂರ್ವಕವಾಗಿ ಹಾಗೂ ದೊಡ್ಡ ಪ್ರಮಾಣದ ಉದ್ಯಮದ ರೂಪದಲ್ಲಿ ನೆರೆಯ ದೇಶದ ಮೇಲೆ ಬಳಸುತ್ತಿರುವ ಬೇರೊಂದು ದೇಶವಿಲ್ಲ’ ಎಂದು ಜೈಶಂಕರ್ ಕುಟುಕಿದ್ದಾರೆ.

ಮತ್ತೆ ಮಧ್ಯಸ್ಥಿಕೆ ಪ್ರಸ್ತಾಪಿಸಿದ ಟ್ರಂಪ್

ಕಾಶ್ಮೀರ ವಿಚಾರದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸುವ ಪ್ರಸ್ತಾವವನ್ನು ಉಭಯ ದೇಶಗಳ ನಾಯಕರ ಮುಂದೆ ಇರಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.

ಉಭಯ ದೇಶಗಳ ನಾಯಕರ ಜೊತೆಗಿನ ಸಭೆ ‘ಫಲಪ್ರದ’ ಎಂದು ಟ್ರಂಪ್ ಹೇಳಿದರು. ‘ನಾವು ಕಾಶ್ಮೀರದ ಬಗ್ಗೆ ಚರ್ಚೆ ನಡೆಸಿದೆವು. ಎರಡೂ ದೇಶಗಳ ನಡೆಯನ್ನು ನಾನು ಗೌರವಿಸುತ್ತೇನೆ. ಅಗತ್ಯವಿರುವ ಸಹಾಯವನ್ನು ನಾನು ಮಾಡಬಲ್ಲೆ. ಮಧ್ಯಸ್ಥಿಕೆ ವಹಿಸಬಲ್ಲೆ’ ಎಂದಿದ್ದಾರೆ. 

ಟ್ರಂಪ್ ಅವರು ಮಧ್ಯಸ್ಥಿಕೆ ವಹಿಸುವುದಾಗಿ ನಾಲ್ಕನೇ ಬಾರಿ ಮುಂದೆ ಬಂದಿದ್ದಾರೆ. ಆದರೆ ಉಭಯ ದೇಶಗಳ ನಡುವಿನ ವಿಷಯ ದ್ವಿಪಕ್ಷೀಯವಾಗಿದ್ದು, ಮೂರನೇ ದೇಶಕ್ಕೆ ಅವಕಾಶವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.  

ಪ್ರತಿಕ್ರಿಯಿಸಿ (+)