ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಗುಂಡೇಟಿಗೆ ಒಬ್ಬ ಬಲಿ

ಜಾರ್ಜ್ ಫ್ಲಾಯ್ಡ್‌ ಸಾವಿಗೆ ವಿರೋಧಿಸಿ ಪ್ರತಿಭಟನೆ
Last Updated 30 ಮೇ 2020, 21:32 IST
ಅಕ್ಷರ ಗಾತ್ರ

ಮಿನ್ನಿಯಾಪೊಲೀಸ್: ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್‌ ಸಾವಿಗೆ ಕಾರಣರಾದ ಬಿಳಿಯ ಪೊಲೀಸರ ಅಟ್ಟಹಾಸದ ವಿರುದ್ಧ ಮಿನ್ನಿಯಾ ಪೊಲೀಸ್ ನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಅಪರಿಚಿತ ವ್ಯಕ್ತಿಯೊಬ್ಬನ ಗುಂಡೇಟಿಗೆ ಒಬ್ಬ ಬಲಿಯಾಗಿದ್ದಾನೆ.

ಜಾರ್ಜ್‌ ಹತ್ಯೆ ವಿರೋಧಿಸಿ ಸಾವಿರಾರು ಜನರು ಶನಿವಾರಕರ್ಫ್ಯೂವನ್ನು ಧಿಕ್ಕರಿಸಿದ್ದರಿಂದ ಮಿನ್ನಿಯಾಪೊಲೀಸ್ ನಗರದಲ್ಲಿ ಅವ್ಯವಸ್ಥೆ ಉಂಟಾಯಿತು. ಇದನ್ನು ನಿಯಂತ್ರಿಸಲು ನನ್ನ ಬಳಿ ಸಿಬ್ಬಂದಿ ಇಲ್ಲ ಎಂದು ಅಲ್ಲಿನ ರಾಜ್ಯಪಾಲ ಟಿಮ್ ವಾಲ್ಜ್‌ ಅಸಹಾಯಕತೆ ವ್ಯಕ್ತಪಡಿಸಿದರು.

ಹಿಂಸಾಚಾರವುಮಿನ್ನಿಯಾ ಪೊಲೀಸ್ ನಗರವನ್ನೂ ದಾಟಿ ಇತರ ನಗರಗಳಿಗೆ ಹಬ್ಬಿದ್ದು, ಡೆಟ್ರಾಯಿಟ್‌ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಾರಿಸಿದ ಗುಂಡಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಟ್ಲಾಂಟಾ ನಗರದಲ್ಲಿ ಪೊಲೀಸ್ ಕಾರುಗಳು ಹಾನಿಗೀಡಾಗಿದ್ದರೆ, ನ್ಯೂಯಾರ್ಕ್‌ನಲ್ಲಿ ಪ್ರತಿಭಟನಕಾರರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು, ಶಾಂತಿ ಸ್ಥಾಪಿಸಲು ಮಿಲಿಟರಿ ನಿಯೋಜಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿ ಪ್ರತಿಭಟನಕಾರರಿಗೆ ಶನಿವಾರ ಎಚ್ಚರಿಕೆ ನೀಡಿದ್ದಾರೆ.

ದೂರು ದಾಖಲು: ಜಾರ್ಜ್ ಫ್ಲಾಯ್ಡ್ ಕುತ್ತಿಗೆ ಮೇಲೆ ಬಲವಾಗಿ ಮಂಡಿಯೂರಿ ಕ್ರೌರ್ಯ ಮೆರೆದಿದ್ದ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್‌ನನ್ನು ಬಂಧಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ.

ಫ್ಲಾಯ್ಡ್ ಕುಟುಂಬದ ವಕೀಲರು ಬಂಧನವನ್ನು ಸ್ವಾಗತಿಸಿದ್ದು, ಚೌವಿನ್ ವಿರುದ್ಧ ಗಂಭೀರವಾದ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ. ಘಟನೆ ಸಂದರ್ಭದಲ್ಲಿ ಚೌವಿನ್ ಜತೆಗಿದ್ದ ಇತರ ಪೊಲೀಸರನ್ನೂ ಬಂಧಿಸಬೇಕೆಂದೂ ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT