ಮಂಗಳವಾರ, ಫೆಬ್ರವರಿ 18, 2020
23 °C
ಕೋವಿಡ್‌: ವಿಶ್ವದ ಹಲವೆಡೆ ವ್ಯಾಪಿಸುತ್ತಲೇ ಇದೆ ಸೋಂಕು

1,500ರ ಗಡಿ ಮುಟ್ಟಿದ ಮೃತರ ಸಂಖ್ಯೆ

ಪಿಟಿಐ/ಎಎಫ್‌ಪಿ/ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಚೀನಾದಲ್ಲಿ ಮಾರಕ ‘ಕೋವಿಡ್‌–19’ ಸೋಂಕಿನಿಂದ ಮೃತರಾದವರ ಸಂಖ್ಯೆ 1,500ರ ಗಡಿ ತಲುಪುತ್ತಿದೆ. ಹೊಸದಾಗಿ 5,090 ಜನರು ಸೋಂಕು ಪೀಡಿತರಾಗಿರುವುದು ಶುಕ್ರವಾರ ದೃಢಪಟ್ಟಿದೆ.

ಸೋಂಕಿಗೆ ಶುಕ್ರವಾರ ಮತ್ತೆ 121 ಜನರು ಬಲಿಯಾಗಿದ್ದು, ಮೃತರಲ್ಲಿ ಹೆಚ್ಚಿನವರು ಸೋಂಕು ಮೊದಲಿಗೆ ಕಾಣಿಸಿಕೊಂಡಿರುವ ಹುಬೈ ಪ್ರಾಂತ್ಯದವರಾಗಿದ್ದಾರೆ. ಈ ಪ್ರಾಂತ್ಯದಲ್ಲಿ 4,823 ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದು ಚೀನಾ ಆರೋಗ್ಯ ಆಯೋಗ ತಿಳಿಸಿದೆ.

ಚೀನಾದಲ್ಲಿ ಸೋಂಕಿನಿಂದ ಇದುವರೆಗೂ ಒಟ್ಟು 1,488 ಜನರು ಸತ್ತಿದ್ದಾರೆ ಎಂದು ಆಯೋಗವು ತಿಳಿಸಿದೆ.  

ವಿಶ್ವ ಆರೋಗ್ಯ ಸಂಸ್ಥೆಯು ಗುರುವಾರ, ‘ಚೀನಾದಲ್ಲಿ ಸೋಂಕು ಪೀಡಿತರ ಸಂಖ್ಯೆ ಗಣನೀಯವಾಗಿ ಏರಲು ಪ್ರಕರಣಗಳ ಲೆಕ್ಕಾಚಾರ ಕ್ರಮದಲ್ಲಿ ಆಗಿರುವ ಬದಲಾವಣೆ ಕಾರಣ’ ಎಂದು ಸ್ಪಷ್ಟಪಡಿಸಿದೆ.

‘ಹೆಚ್ಚಿನ ಪ್ರಕರಣಗಳು ವರದಿ ಆಗುತ್ತಿವೆ. ಅದರರ್ಥ ಸೋಂಕಿನ ವ್ಯಾಪ್ತಿ ವಿಸ್ತರಿಸುತ್ತಿದೆ ಎಂದಲ್ಲ. ಗುರುತಿಸಲು ಅನುಸರಿಸುತ್ತಿರುವ ಹೊಸ ಕ್ರಮಗಳು ಕಾರಣ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಆರೋಗ್ಯ ಸೇವೆಯ ಮುಖ್ಯಸ್ಥ ಮೈಕೇಲ್‌ ರ‍್ಯಾನ್‌ ಅವರು ಹೇಳಿದರು. 

ಕೋವಿಡ್‌ ವೈರಸ್‌ ವ್ಯಾಪಿಸುವುದನ್ನು ತಡೆಯುವ ಕ್ರಮವಾಗಿ ಸಹಕಾರ ನೀಡಲು ವಿಶ್ವ ಆರೋಗ್ಯ ಸಂಸ್ಥೆಯ 15 ತಜ್ಞ ವೈದ್ಯರ ತಂಡ ಚೀನಾಗೆ ಆಗಮಿಸಿದೆ.

ಆರೋಗ್ಯ ಇಲಾಖೆಯ ಆರು ಸಿಬ್ಬಂದಿ ಸಾವು

ಸೋಂಕು ಪೀಡಿತರಿಗೆ ಸೇವೆ ಒದಗಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಯೂ ಸೋಂಕಿನ ಪರಿಣಾಮಕ್ಕೆ ತುತ್ತಾಗುತ್ತಿದ್ದಾರೆ. ಆರು ಮಂದಿ ಸಿಬ್ಬಂದಿ ಸತ್ತಿದ್ದರೆ, 1,700ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಸೋಂಕಿನ ಕುರಿತು ಮೊದಲಿಗೆ ಮಾಹಿತಿ ನೀಡಿದ್ದ ವೈದ್ಯರ ಸಾವಿನ ಕುರಿತು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾದ ಹಿಂದೆಯೇ ಈ ಅಂಕಿ ಅಂಶಗಳು ಹೊರಬಿದ್ದಿವೆ. ಆದರೆ, ವೈದ್ಯರ ಎಚ್ಚರಿಕೆಯನ್ನು ಪೊಲೀಸರು ಹತ್ತಿಕ್ಕಿದ್ದರು.

ಎರಡು ವಾರಗಳ ‘ಜಲವಾಸ’ಕ್ಕೆ ತೆರೆ!

ಕಾಂಬೋಡಿಯ: ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ಬಂದರು ಪ್ರವೇಶಿಸದಂತೆ ತಡೆಹಿಡಿಯಲಾಗಿದ್ದ ಹಡಗಿನಲ್ಲಿದ್ದ ಪ್ರವಾಸಿಗರ ಎರಡು ವಾರಗಳ ‘ಜಲವಾಸ’ ಶುಕ್ರವಾರ ತೆರೆಬಿದ್ದಿದೆ. 

ಪ್ರಯಾಣಿಕರಿಗೆ ಹಡಗಿನಿಂದ ಇಳಿಯಲು ಕಾಂಬೊಡಿಯ ಅವಕಾಶ ಕಲ್ಪಿಸಿದ್ದು ಪ್ರವಾಸಿಗರಿಗೆ ಹೂವು ಮತ್ತು ವಸ್ತ್ರಗಳನ್ನು ನೀಡುವ ಮೂಲಕ ಕಾಂಬೋಡಿಯ ಮುಖಂಡ ಹುನ್‌ ಸೆನ್‌ ಬರಮಾಡಿಕೊಂಡರು.

ಹಾಂಗ್‌ಕಾಂಗ್‌ನಿಂದ ಫೆಬ್ರುವರಿ 1ರಂದು ಸಂಚಾರ ಆರಂಭಿಸಿದ್ದ ವೆಸ್ಟರ್‌ಡ್ಯಾಂ ಹಡಗಿನಲ್ಲಿ ಸಿಬ್ಬಂದಿ ಸೇರಿದಂತೆ 2,257 ಮಂದಿ ಇದ್ದರು.

ಆನ್‌ಲೈನ್‌ ಉಪನ್ಯಾಸಕ್ಕೆ ಚರ್ಚ್‌ ಒಲವು

ಸಿಂಗಪುರ: ವೈರಸ್‌ ಭೀತಿಯಿಂದಾಗಿ ಸ್ಥಳೀಯ ಸಿಟಿ ಹಾರ್ವೆಸ್ಟ್ ಚರ್ಚ್‌ ತನ್ನ ವಾರಾಂತ್ಯದ ಸಭೆಯಲ್ಲಿ ಸಾಂಪ್ರಾದಾಯಿಕ ಮಾದರಿಯ ಉಪನ್ಯಾಸಕ್ಕೆ ಬದಲಾಗಿ, ಆನ್‌ಲೈನ್‌ ಮೂಲಕ ಉಪನ್ಯಾಸ ಪ್ರಸಾರ ಮಾಡಲು ಮುಂದಾಗಿದೆ.

ಇದು, ಏಷಿಯಾದಲ್ಲಿಯೇ ಅತಿದೊಡ್ಡ ಲಾಭದಾಯಕ ಚರ್ಚ್‌ ಆಗಿದೆ. ಸಿಂಗಪುರದಲ್ಲಿ ಸೋಂಕು ಪೀಡಿತರ ಸಂಖ್ಯೆ 58ಕ್ಕೆ ಏರಿದ ಬೆನ್ನಲ್ಲೇ ಚರ್ಚ್ ಈ ಕ್ರಮಕ್ಕೆ ಮುಂದಾಗಿದೆ. ‘ಜವಾಬ್ದಾರಿಯುತ ಕ್ರಮವಾಗಿ ಈ ಹೆಜ್ಜೆ ಇಡಲಾಗಿದೆ’ ಎಂದು ಚರ್ಚ್‌ನ ರೆವರೆಂಡ್‌ ಹೊ ಯೊ ಸುನ್‌ ಅವರು ಫೇಸ್‌ಬುಕ್‌ ವಿಡಿಯೊದಲ್ಲಿ ಹೇಳಿದರು. ಸರ್ಕಾರ ಕೂಡಾ ಉದ್ಯಮ ಸಂಸ್ಥೆಗಳು ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ಮುಂದೂಡಬೇಕು ಎಂದು ಸಲಹೆ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು