ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಐಎಸ್‌ ಸಂಘಟನೆ ಸ್ಥಾಪಕ ಬಾಗ್ದಾದಿ ಸಾವು: ಶಾಂತಿ ನೆಲೆಸೀತೆ ಜಗದಲ್ಲಿ?

Last Updated 27 ಅಕ್ಟೋಬರ್ 2019, 14:05 IST
ಅಕ್ಷರ ಗಾತ್ರ

ಇಲ್ಲಿ ಕರ್ನಾಟಕದಲ್ಲಿ ಜನರು ನರಕ ಚತುರ್ದಷಿ ಎಣ್ಣೆಶಾಸ್ತ್ರ ಮಾಡಿಕೊಳ್ಳುವ ಹೊತ್ತಿಗೆ(ಅ.27ರ ಭಾರತೀಯ ಕಾಲಮಾನಬೆಳಿಗ್ಗೆ 6.30) ಅಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಒಂದು ಟ್ವೀಟ್ ಮಾಡಿ ಜಗತ್ತಿನ ಗಮನ ಸೆಳೆದರು. ತಮ್ಮ ಟ್ವೀಟ್‌ನಲ್ಲಿ ಟ್ರಂಪ್ ಹೇಳಿದ್ದು ಇಷ್ಟೇ... ‘Something very big has just happened!’ (ಮಹತ್ತರವಾದ್ದು ಒಂದೇನೋ ಈಗಷ್ಟೇ ಘಟಿಸಿದೆ). ಆ ‘ಮಹತ್ತರವಾದ್ದು’ ಏನು ಎಂದು ಎಲ್ಲರೂ ಯೋಚಿಸಲು ಆರಂಭಿಸಿದ್ದರು.

ಟ್ರಂಪ್ ಸಾಹೇಬರ ಟ್ವೀಟ್‌ಗೆ ತಳಕು ಹಾಕಿಕೊಂಡಿದ್ದು ಒಂದು ದಿನ ಮೊದಲು, ಅಂದರೆ ಶನಿವಾರ ಸಂಜೆ ಅಮೆರಿಕದ ಶ್ವೇತಭವನ ಹೊರಡಿಸಿದ್ದ ಪ್ರಕಟಣೆ. ‘ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಭಾನುವಾರ ಬೆಳಿಗ್ಗೆ 9 ಗಂಟೆಗೆ ಮಹತ್ತರ ಹೇಳಿಕೆ ನೀಡಲಿದ್ದಾರೆ’ ಎಂದು ಶ್ವೇತಭವನದ ವಕ್ತಾರರು ಹೇಳಿದ್ದರು. ಅಮೆರಿಕ ಕಾಲಮಾನದಲ್ಲಿ ಬೆಳಿಗ್ಗೆ 9 ಗಂಟೆ ಎನ್ನುವುದು ಭಾರತೀಯ ಕಾಲಮಾನದಲ್ಲಿ ಸಂಜೆ 6.30. ಮಧ್ಯಪ್ರಾಚ್ಯ ವಿದ್ಯಮಾನಗಳನ್ನು, ಆಂತರಿಕ ಭದ್ರತೆಯನ್ನು ಕಾಳಜಿಯಿಂದ ಗಮನಿಸುವವರ ಕಣ್ಣು ಈಗಗಡಿಯಾರದ ಮುಳ್ಳು 6.30 ಮುಟ್ಟುವುದನ್ನೇ ನಿರೀಕ್ಷಿಸುತ್ತಿದೆ.

ಶ್ವೇತಭವನದ ವಕ್ತಾರರ ಹೇಳಿಕೆ, ಟ್ರಂಪ್ ಅವರ ಟ್ವೀಟ್‌ ಜೊತೆಗೆ ಅಮೆರಿಕದ ಬಹುತೇಕ ಸುದ್ದಿ ಮಾಧ್ಯಮಗಳಲ್ಲಿ ಭಾನುವಾರ ಮುಂಜಾನೆ ಇಸ್ಲಾಮಿಕ್‌ ಸ್ಟೇಟ್ (ಐಎಸ್) ಮುಖ್ಯಸ್ಥ ಅಬುಬಕರ್‌ ಅಲ್ ಬಾಗ್ದಾದಿ ಸಾವಿನ ಸುದ್ದಿಗಳು ಪುಂಖಾನುಪುಂಖವಾಗಿ ಪ್ರಕಟವಾದವು. ಉತ್ತರ ಸಿರಿಯಾದಲ್ಲಿ ಅಮೆರಿಕದ ವಿಶೇಷ ಕಾರ್ಯಾಚರಣೆ ಕಮಾಂಡೊಗಳು ನಡೆಸಿದ ದಾಳಿಯಲ್ಲಿ ಬಾಗ್ದಾದಿ ಸತ್ತಿದ್ದಾನೆ ಎಂದು ಬ್ಯೂಮ್‌ಬರ್ಗ್‌ ಸೇರಿದಂತೆ ಹಲವು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳು ‘ಅನಧಿಕೃತ’ ಮತ್ತು ‘ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು’ ಮೂಲಗಳನ್ನು ಉಲ್ಲೇಖಿಸಿ ವರದಿಗಳನ್ನು ಪ್ರಕಟಿಸಿದವು.

ನ್ಯೂಯಾರ್ಕ್‌ ಟೈಮ್ಸ್‌ ಮಾತ್ರ ‘ಅಮೆರಿಕ ಪಡೆಗಳು ದಾಳಿ ನಡೆಸಿದ್ದು ನಿಜ. ಆದರೆ ಬಾಗ್ದಾದಿ ತನ್ನನ್ನು ತಾನೇ ಸ್ಫೋಟಿಸಿಕೊಂಡು ಸತ್ತ’ ಎಂದು ವರದಿ ಮಾಡಿತು.

ಡಿಎನ್‌ಎ ಸೇರಿದಂತೆ ಹಲವು ಪರೀಕ್ಷೆಗಳ ಮೂಲಕ ಸತ್ತವನು ಬಾಗ್ದಾದಿಯೇ ಎಂದು ದೃಢಪಟ್ಟರೆ ಇದು ಅಮೆರಿಕದ ದೊಡ್ಡ ಬೇಟೆ ಎನಿಸಿಕೊಳ್ಳುತ್ತೆ.ಅಮೆರಿಕ ನೌಕಾಪಡೆ ಕಮಾಂಡೊಗಳು ಮೇ 2, 2011ರಲ್ಲಿ ಪಾಕಿಸ್ತಾನದ ಒಬಾಟೊಬಾದ್‌ನಲ್ಲಿ ಒಸಾಮಾ ಬಿನ್‌ ಲಾಡೆನ್‌ನನ್ನು ಬೇಟೆಯಾಡಿದ ನಂತರದ ಮಹತ್ವದ ಯಶಸ್ಸು ಇದು ಎನ್ನಲಾಗಿದೆ.

ಯಾರಿದು ಅಬುಬಕರ್‌ ಅಲ್ ಬಾಗ್ದಾದಿ?

ಇಸ್ಲಾಮಿಕ್ ಸ್ಟೇಟ್‌ನ(ಐಎಸ್‌) ಈ ನಾಯಕನನ್ನುಜಗತ್ತಿನಲ್ಲಿ ಅತಿ ಬೇಡಿಕೆಯಿರುವವ್ಯಕ್ತಿ ಎಂದು ಕರೆಯಲಾಗುತ್ತಿದೆ.ಇವನ ತಲೆಗೆ ಅಮೆರಿಕ ಸರ್ಕಾರ 1 ಕೋಟಿ ಡಾಲರ್ (₹ 70 ಕೋಟಿಗೂ ಹೆಚ್ಚು) ಬಹುಮಾನ ಘೋಷಿಸಿತ್ತು.

ಇರಾಕ್‌ನಲ್ಲಿ 1971ರಲ್ಲಿ ಜನಿಸಿದ್ದಾನೆ ಎನ್ನಲಾದ ಬಾಗ್ದಾದಿಯ ವೈಯಕ್ತಿಕ ಬದುಕಿನ ವಿವರಗಳು ಅಷ್ಟಾಗಿ ಸಿಗುವುದಿಲ್ಲ. ಉತ್ತರ ಇರಾಕ್‌ನ ಮೊಸೂಲ್‌ನಲ್ಲಿರುವ ಅಲ್‌ನೂರಿ ಮಸೀದಿಯಲ್ಲಿ ಜೂನ್ 2014ರರಂಜಾನ್ ಆಚರಣೆ ವೇಳೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಾಗ್ದಾದಿ ವಿಶ್ವದಲ್ಲಿ ಖಲೀಫತ್‌ ಸ್ಥಾಪನೆಯಾಗಿದೆ, ನಾನು ಅದರ ಖಲೀಫ ಎಂದು ಘೋಷಿಸಿಕೊಂಡ.

ಈಗಲೂ ಮಾಧ್ಯಮಗಳು ಬಳಸುತ್ತಿರುವ ಬಾಗ್ದಾದಿಯ ಚಿತ್ರಗಳು ಅನ್‌ನೂರಿ ಮಸೀದಿಯಲ್ಲಿ ಬಾಗ್ದಾದಿ ಭಾಷಣ ಮಾಡಿದ ಸಂದರ್ಭದವಿಡಿಯೊದಿಂದ ತೆಗೆದ ಸ್ಕ್ರೀನ್‌ಶಾಟ್‌ಗಳೇ ಆಗಿವೆ.

ಬಾಗ್ದಾದಿ ವಿಶ್ವದ ಅತಿ ಘೋರ ಭಯೋತ್ಪಾದಕ ಆಗಿದ್ದು ಯಾವಾಗ ಮತ್ತು ಹೇಗೆ?

2014ರ ಆರಂಭದ ತಿಂಗಳುಗಳಲ್ಲಿ ಬಾಗ್ದಾದಿಯ ಹೋರಾಟಗಾರರು ಪಶ್ಚಿಮ ಇರಾಕ್‌ನ ಭೂಪ್ರದೇಶವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು. ತನ್ನ ಆಳ್ವಿಕೆಯಲ್ಲಿರುವಇರಾಕ್‌ ಮತ್ತು ಸಿರಿಯಾ ಪ್ರದೇಶಗಳಲ್ಲಿ ಇಸ್ಲಾಮಿಕ್ ಸ್ಟೇಟ್‌ ಕ್ರೌರ್ಯದ ಆಡಳಿತ ನಡೆಸಿತು. ವಿದೇಶಿಗರು, ಧರ್ಮ ಉಲ್ಲಂಘಿಸಿದವರು ತಲೆ ತೆಗೆಯುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿತು. ಇದನ್ನು ಕಂಡ ವಿಶ್ವ ಬೆಚ್ಚಿಬಿತ್ತು. ಪ್ರತಿದಾಳಿಯ ತಂತ್ರ ಮತ್ತು ಪ್ರಯತ್ನಗಳು ತೀವ್ರವಾದವು.

2015ರ ಅಂತ್ಯದ ವೇಳೆಗೆ ಇಸ್ಲಾಮಿಕ್ ಸ್ಟೇಟ್‌ ಆಳ್ವಿಕೆಯಡಿ ಸುಮಾರು 1.2 ಕೋಟಿ ಜನರಿದ್ದರು. ಅವರೆಲ್ಲರ ಮೇಲೆ ಕಟ್ಟುನಿಟ್ಟಿನ ಷರಿಯತ್ ಕಾನೂನು ಹೇರಲಾಗಿತ್ತು. ಇದು ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳಿಂದ ಜಿಹಾದಿಗಳನ್ನು ಆಕರ್ಷಿಸಿತು.ಗ್ರೇಟ್‌ ಬ್ರಿಟನ್‌ನಷ್ಟು ದೊಡ್ಡದಾಗಿದ್ದ ಭೂಪ್ರದೇಶವನ್ನು ಕೈವಶ ಮಾಡಿಕೊಂಡಿದ್ದ ಬಾಗ್ದಾದಿ ಬಳಿ 30 ಸಾವಿರ ಜಿಹಾದಿ ಹೋರಾಟಗಾರರ ಸೇನೆ ಮತ್ತು 100ಕೋಟಿ ಡಾಲರ್‌ ಮೊತ್ತದ ವಾರ್ಷಿಕ ಬಜೆಟ್‌ನಷ್ಟು ಸಂಪತ್ತು ಇತ್ತು.

ಸಿರಿಯಾದ ಕುರ್ದಿಷ್‌ ಪೇಷ್ಮರ್ಗಾ ಪಡೆಗಳೊಂದಿಗೆಸ್ಥಳೀಯ ಹೋರಾಟಗಾರ ಜೊತೆಗೂಡಿ ವಿಶ್ವದ ಹಲವು ದೇಶಗಳು ಒಗ್ಗೂಡಿ ಸಂಘಟಿಸಿದ ಪ್ರತಿರೋಧ ದಾಳಿಯಿಂದ 2016ರ ನಂತರ ಐಎಸ್‌ ಸಂಘಟನೆ ಬಲ ಕಳೆದುಕೊಂಡಿತು.ಐಎಸ್‌ ಸಂಘಟನೆ ಕುಸಿದು ಬಿದ್ದ ನಂತರ ಸಾವಿರಾರು ಹೋರಾಟಗಾರರು ಭೂಗತರಾದರು. ಇಸ್ಲಾಮಿಕ್ ಸ್ಟೇಟ್ ಮತ್ತು ಬಾಗ್ದಾದಿ ಹೆಸರಿನಲ್ಲಿ ವಿಶ್ವದ ವಿವಿಧೆಡೆ ಜಿಹಾದಿಗಳು ಭಯೋತ್ಪಾದಕ ಕೃತ್ಯಗಳನ್ನು ಮಾಡುತ್ತಲೇ ಇದ್ದಾರೆ. ಅದರಲ್ಲಿ ದೊಡ್ಡದು ಎಂದರೆ ಪ್ಯಾರೀಸ್‌ನಲ್ಲಿ ನವೆಂಬರ್ 2015ರಲ್ಲಿ ನಡೆದ ದಾಳಿ ಮತ್ತು ಶ್ರೀಲಂಕಾದಲ್ಲಿ ಇದೇ ವರ್ಷನಡೆದ ದಾಳಿ.

ಬಾಗ್ದಾದಿಯನ್ನು ಕೊಲ್ಲಲಾಗಿದೆ ಎನ್ನುವ ಅಮೆರಿಕ ಹೇಳಿಕೆಯ ಅರ್ಥವೇನು?

ಬಾಗ್ದಾದಿ ಸಾವು ಮೊದಲು ಅಧಿಕೃತವಾಗಿ ಘೋಷಣೆಯಾಗಬೇಕಿದೆ. ಇಂದು ಸಂಜೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನೀಡುವ ಹೇಳಿಕೆ ಈ ಗೊಂದಲಗಳನ್ನು ಪರಿಹರಿಸಲಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆಯೂ ಬಾಗ್ದಾದಿ ಸಾವಿನ ವಿಚಾರ ಹಲವು ಬಾರಿ ಸುದ್ದಿಯಾಗಿತ್ತು. ಸಿರಿಯಾದ ರಖ್ಖಾ ನಗರದ ಮೇಲೆ ನಡೆದ ವಾಯುದಾಳಿಯಲ್ಲಿಬಾಗ್ದಾದಿ ಸತ್ತಿದ್ದಾನೆ ಎಂದು ರಷ್ಯಾ ಜೂನ್ 2017ರಲ್ಲಿ ಘೋಷಿಸಿತ್ತು. ಇದಾದ ಎರಡು ವಾರಗಳ ನಂತರ ಸಿರಿಯಾದ ಮಾನವ ಹಕ್ಕುಗಳ ನಿಗಾ ಸಂಸ್ಥೆ ಬಾಗ್ದಾದಿ ಸಾವಿನ ಕುರಿತ ರಷ್ಯಾದ ಹೇಳಿಕೆಯನ್ನು ದೃಢೀಕರಿಸಿತ್ತು. ಆದರೆ 2019ರ ಏಪ್ರಿಲ್‌ನಲ್ಲಿ ಹೊರಬಂದ ವಿಡಿಯೊ ಬಾಗ್ದಾದಿ ಸತ್ತಿಲ್ಲ, ಅಂಗವಿಕಲನೂ ಆಗಿಲ್ಲ ಎಂಬುದನ್ನು ಸಾರಿ ಹೇಳಿತು. ಇದಕ್ಕೂ ಮೊದಲು ಅಂದರೆ 2018ರಲ್ಲಿ ಬಾಗ್ದಾದಿ ತಾನು ಮಾತನಾಡಿದ್ದ ಆಡಿಯೊ ತುಣುಕನ್ನು ಬಿಡುಗಡೆ ಮಾಡಿದ್ದ.

ಅಮೆರಿಕದ ಹಲವು ಭದ್ರತಾ ಸಂಸ್ಥೆಗಳು ಸಾಕಷ್ಟು ತಿಂಗಳುಗಳಿಂದ ಬಾಗ್ದಾದಿಯ ಬೆನ್ನು ಹತ್ತಿವೆ. ಇರಾಕ್–ಸಿರಿಯಾ ಗಡಿಯಲ್ಲಿರುವ, ಜನಸಾಂದ್ರತೆ ಅತಿಕಡಿಮೆ ಇರುವ ಮರುಭೂಮಿಯಲ್ಲಿ ಬಾಗ್ದಾದಿ ವಾಸಿಸುತ್ತಿದ್ದಾನೆ ಎಂದು ಅಮೆರಿಕದ ತನಿಖಾ ದಳಗಳು ವಿಶ್ಲೇಷಿಸಿದ್ದವು. ಅಮೆರಿಕ ತನ್ನನ್ನು ಪತ್ತೆಹಚ್ಚಬಹುದು ಎಂಬ ಶಂಕೆಯಿಂದಬಾಗ್ದಾದಿ ಯಾವುದೇ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಬಳಸುತ್ತಿರಲಿಲ್ಲ. ಭಾನುವಾರ ಮುಂಜಾನೆ ಪ್ರಕಟವಾದ ವರದಿಗಳ ಪ್ರಕಾರ ಅಮೆರಿಕ ಸಶಸ್ತ್ರ ಪಡೆಗಳು ಬಾಗ್ದಾದಿಯನ್ನು ವಾಯವ್ಯ ಸಿರಿಯಾದಲ್ಲಿ ಪತ್ತೆಹಚ್ಚಿ, ಕೊಂದಿವೆ. ಈ ವಿಚಾರವನ್ನುಅಮೆರಿಕ ಸರ್ಕಾರ ಇನ್ನೂ ದೃಢಪಡಿಸಬೇಕಿದೆ.

ಬಾಗ್ದಾದಿ ಸಾವಿನಿಂದ ಐಎಸ್‌ ಉಪಟಳ ಅಂತ್ಯಗೊಂಡೀತೆ?

ಬಾಗ್ದಾದಿ ಸಾವಿನಿಂದ ಜಗತ್ತಿಗೆಇಸ್ಲಾಮಿಕ್ ಸ್ಟೇಟ್ ಉಪಟಳ ಅಂತ್ಯಗೊಂಡಿತು ಎಂದು ಹೇಳಲು ಸಾಧ್ಯವಿಲ್ಲ ಎನ್ನುವುದು ಹಲವು ವರ್ಷಗಳಿಂದ ಐಎಸ್‌ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳ ಬಗ್ಗೆ ನ್ಯೂಯಾರ್ಕ್ ಟೈಮ್ಸ್‌ಗೆ ವರದಿ ಮಾಡುತ್ತಿರುವ ರುಕ್ಮಿಣಿ ಕಲ್ಲಿಮಾಚಿ ಅವರ ಅಭಿಪ್ರಾಯ.

ಇಸ್ಲಾಮಿಕ್‌ ಸ್ಟೇಟ್ ಇಂದಿಗೂ ಜೀವಂತವಾಗಿದೆ ಮತ್ತು 2011ರಲ್ಲಿ ಇದ್ದ ಸ್ಥಿತಿಗಿಂತಲೂ ಹೆಚ್ಚು ಪ್ರಬಲವಾಗಿದೆ. ಇರಾಕ್‌ನಲ್ಲಿ ಸಾವಿರಾರು ಜಿಹಾದಿ ಹೋರಾಟಗಾರರಿದ್ದಾರೆ ಎಂದು ಮಧ್ಯಪ್ರಾಚ್ಯದ ಅಮೆರಿಕ ಸೇನಾ ಕಾರ್ಯಾಚರಣೆಗಳ ಉಸ್ತುವಾರಿ ಜನರಲ್ ಜೋಸೆಫ್ ವೊಟೆಲ್ ಅಭಿಪ್ರಾಯಪಡುತ್ತಾರೆ. ಹಿಂದೆ ಇದ್ದಂತೆ ಇಂದಿಗೂ ಇರಾಕ್ ಮತ್ತು ಸಿರಿಯಾದಲ್ಲಿ ಐಸ್‌ ಉಗ್ರರು ಪ್ರಾಬಲ್ಯ ಉಳಿಸಿಕೊಂಡಿದ್ದಾರೆ ಎನ್ನುತ್ತಾರೆ ಅವರು.

ಇರಾಕ್‌ನ ಖೊರೊಸೋನ್ ಪ್ರಾಂತ್ಯ, ಫಿಲಿಪೀನ್ಸ್‌ ಮತ್ತು ಪಶ್ಚಿಮ ಆಫ್ರಿಕಾದ ಕೆಲ ಪ್ರಾಂತ್ಯಗಳಲ್ಲಿ ಇಂದಿಗೂ ಪ್ರಾಬಲ್ಯ ಉಳಿಸಿಕೊಂಡಿದೆ. ಮಾತ್ರವಲ್ಲಅಫ್ಗಾನಿಸ್ತಾನದಲ್ಲಿ ದಿನದಿಂದ ದಿನಕ್ಕೆ ಪ್ರಬಲವಾಗುತ್ತಿದೆ.ಇರಾಕ್‌ ಮತ್ತು ಸಿರಿಯಾದಲ್ಲಿರುವ ಐಎಸ್‌ನ ಮುಖ್ಯ ತಂಡಕ್ಕೂ ವಿವಿಧ ದೇಶಗಳಲ್ಲಿರುವ ಸಂಯೋಜಿತ ಉಗ್ರ ಸಂಘಟನೆಗಳ ಬಾಂಧವ್ಯ ವೃದ್ಧಿಯಾಗುತ್ತಿದೆ ಎನ್ನಲು ಸಾಕಷ್ಟು ಸಾಕ್ಷ್ಯಗಳು ದೊರೆಯುತ್ತವೆ.

ಒಂದು ವೇಳೆಬಾಗ್ದಾದಿ ಸತ್ತಿರಬಹುದು, ಆದರೆ ಅವನ ಭಯ ಮಾತ್ರ ಇನ್ನೂ ಬದುಕಿರುತ್ತೆ ಎನ್ನುತ್ತಾರೆ ರುಕ್ಮಿಣಿ.

(ಮಾಹಿತಿ: ವಿವಿಧ ವೆಬ್‌ಸೈಟ್‌ಗಳು)

ಇನ್ನಷ್ಟು...
ಮಹಿಳೆಯರ ಜನನಾಂಗ ಛೇದನಕ್ಕೆ ಫತ್ವಾ
ಶ್ರೀಲಂಕಾ ದಾಳಿಯ ಹೊಣೆ ಹೊತ್ತ ಐಎಸ್‌ ಉಗ್ರ ಸಂಘಟನೆ
2015ರ ಸುದ್ದಿ |ಬಾಗ್ದಾದಿ ಸಾವಿನ ಶಂಕೆ
2017ರ ಸುದ್ದಿ | ಐ.ಎಸ್‌ ಮುಖ್ಯಸ್ಥ ಬಾಗ್ದಾದಿ ಜೀವಂತ?
2014ರ ಸುದ್ದಿ |ಖಲೀಫ ಬಾಗ್ದಾದಿ ಅಂದು ಹೀಗೆ ಭಾಷಣ ಮಾಡಿದ್ದ
ಭಾರತದಲ್ಲಿ ‘ಪ್ರಾಂತ್ಯ’ ಸ್ಥಾಪನೆ ಇಸ್ಲಾಮಿಕ್‌ ಸ್ಟೇಟ್‌ ಹೇಳಿಕೆ
ಐಎಸ್‌ ಸೇರಿದ್ದ ಕೇರಳದ ಯುವಕ ಸಾವು
ವಾಟ್ಸ್‌ಆ್ಯಪ್‌ನಲ್ಲಿ ಐಎಸ್‌ ಪರ ಸಂದೇಶ
‘ದಕ್ಷಿಣ ಭಾರತದಲ್ಲಿ ಉಗ್ರರ ನೆಲೆ ವಿಸ್ತರಣೆ: ಎಚ್ಚರಿಕೆ
ಇಸ್ಲಾಮಿಕ್ ಸ್ಟೇಟ್ಸ್ ವಿಡಿಯೊಗಳಲ್ಲಿ ಇಂಗ್ಲಿಷ್ ವಿವರಣೆ ನೀಡಿದಾತ ಈ ಖಲೀಫ!
ಶಿರಚ್ಛೇದ ವಿಡಿಯೊ ನೈಜ: ಬೇಹುಗಾರಿಕಾ ದಳ
ಐಎಸ್‌ ಉಗ್ರರಿಂದ ತಪ್ಪಿಸಿಕೊಂಡ ಸಂತ್ರಸ್ತರು ಹಸಿವಿನಿಂದ ಕಂಗೆಟ್ಟರು
‘ವಿದಾಯ ಭಾಷಣ’ದಲ್ಲಿ ಐಎಸ್‌ ಸೋಲೊಪ್ಪಿಕೊಂಡ ಬಾಗ್ದಾದಿ
ಸಂಪಾದಕೀಯ | ಐಎಸ್‌ ಪ್ರಭಾವ: ನಿರ್ಲಕ್ಷ್ಯ ಸಲ್ಲದು, ಕಟ್ಟೆಚ್ಚರ ವಹಿಸಿ
ಐಎಸ್‌ ಉಗ್ರರ ದಾಳಿಗೆ ನಲುಗಿದ ಯಾಜಿದಿ ಮಹಿಳೆಯರು
ಇಸ್ಲಾಮಿಕ್ ಸ್ಟೇಟ್‌ (ಐಎಸ್) ಉಗ್ರರ ನಾಯಕ ಅಲ್‌ ಬಾಗ್ದಾದಿ ಹತ್ಯೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT