ಮಂಗಳವಾರ, ಸೆಪ್ಟೆಂಬರ್ 21, 2021
21 °C
ಜಿಲ್ಲೆಯಲ್ಲಿ ಬಿರುಸುಗೊಂಡ ಮಳೆ, ಎರಡು ವರ್ಷವೂ ಇದೇ ತಿಂಗಳು ಸಂಭವಿಸಿದ್ದ ಮಳೆ ಅನಾಹುತ

ಮುಂಗಾರು: ಕೊಡಗಿಗೆ ಆಗಸ್ಟ್‌ ಭಯ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶಿಸಿ ಎರಡು ತಿಂಗಳ ಬಳಿಕ ಮಳೆಯು ಬಿರುಸಾಗಿದೆ. ಎರಡು ದಿನಗಳಿಂದ ಜಿಲ್ಲೆಯಲ್ಲಿ ಧೋ... ಎಂದು ಮಳೆ ಸುರಿಯುತ್ತಿದೆ. ಆಗಸ್ಟ್‌ 2ರಂದು ‘ಆಶ್ಲೇಷ ಮಳೆ’ ಪದಾರ್ಪಣೆ ಮಾಡಿದ್ದು ಈ ಮಳೆಯು ಬಿಡದೇ ಸುರಿಯುತ್ತಿದೆ.

ಕಳೆದ ಎರಡು ವರ್ಷವೂ ಆಗಸ್ಟ್‌ ತಿಂಗಳಲ್ಲೇ ಭಾರೀ ಮಳೆ ಸುರಿದು ಅನಾಹುತ ತಂದೊಡ್ಡಿತ್ತು. ಈ ಬಾರಿಯೂ ಜಿಲ್ಲೆಯ ಜನರಿಗೆ ಅದೇ ಭಯ ಕಾಡಲಾರಂಭಿಸಿದೆ.

ಈ ವರ್ಷ ಜೂನ್‌ನಲ್ಲಿ ಉತ್ತಮ ಮಳೆಯಾಗಿತ್ತು. ಆದರೆ, ಜುಲೈನಲ್ಲಿ ಮಳೆ ಕೈಕೊಟ್ಟಿದ್ದರಿಂದ ಭತ್ತದ ನಾಟಿ ಕಾರ್ಯಕ್ಕೆ ಸ್ವಲ್ಪ ಹಿನ್ನಡೆಯಾಗಿತ್ತು. ಉತ್ತರ ಕೊಡಗು ಹಾಗೂ ದಕ್ಷಿಣ ಕೊಡಗಿನಲ್ಲಿ ನಾಟಿ ಕಾರ್ಯಕ್ಕೆ ಭತ್ತದ ಗದ್ದೆಗಳಲ್ಲಿ ಸಾಕಷ್ಟು ನೀರು ಆಗಿಲ್ಲ ಎಂಬುದು ರೈತರ ಕೊರಗಾಗಿತ್ತು. ಆದರೆ, ಎರಡೇ ದಿನಕ್ಕೆ ಸಾಕಷ್ಟು ನೀರು ಹರಿಯುವಂತೆ ಮಳೆ ಸುರಿದಿದ್ದು ಹಳ್ಳ, ಕೊಳ್ಳಗಳಲ್ಲಿ ನೀರು ಹೆಚ್ಚಾಗಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳಲ್ಲೂ ನೀರು ಏರಿಕೆಯಾಗಿದೆ. ಈ ತಿಂಗಳು ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ‘ಯಾವುದೇ ಅನಾಹುತ ಆಗದಿರಲಿ’ ಎಂದು ಕೊಡಗಿನ ಜನರು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ಹಿಂದಿನ ಎರಡು ವರ್ಷ ಏನೆಲ್ಲಾ ಅನಾಹುತವಾಗಿತ್ತು ಒಮ್ಮೆ ನೋಡೋಣ.

2018ರಲ್ಲಿ ಭೂಕುಸಿತ– ಜಲಸ್ಫೋಟ: ಎರಡು ವರ್ಷಗಳ ಹಿಂದೆ ಅಂದರೆ, 2018ರಲ್ಲಿ ಮೇ ಅಂತ್ಯದಲ್ಲಿಯೇ ಮಳೆ ಆರಂಭವಾಗಿತ್ತು. ಜೂನ್‌ ಮೊದಲ ವಾರದಲ್ಲಿ ಮುಂಗಾರು ಜಿಲ್ಲೆಗೆ ಪ್ರವೇಶಿಸಿದ್ದ ಮೇಲೆ, ನಿರಂತರವಾಗಿ ಮಳೆ ಸುರಿಯಲು ಆರಂಭಿಸಿತ್ತು. ಅದರಲ್ಲೂ ಮಡಿಕೇರಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿತ್ತು. 50ಕ್ಕೂ ಹೆಚ್ಚು ದಿನ ಸೂರ್ಯ ದರ್ಶನವೇ ಜನರಿಗೆ ಆಗಿರಲಿಲ್ಲ. ಭಾರೀ ಮಳೆಯಿಂದ ಆಗಸ್ಟ್ 14, 15 ಹಾಗೂ 16ರಂದು ಜಿಲ್ಲೆಯಲ್ಲಿ ದೊಡ್ಡ ಅನಾಹುತವೇ ಸಂಭವಿಸಿತ್ತು.  

ಮಡಿಕೇರಿ– ಸೋಮವಾರಪೇಟೆ ಮಾರ್ಗದಲ್ಲಿ ಹಾಗೂ ಮಡಿಕೇರಿ ಸುತ್ತಮುತ್ತಲ 32ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಲಸ್ಫೋಟವಾಗಿತ್ತು. ಇನ್ನು ಹಾರಂಗಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿದ ಪರಿಣಾಮ ಒಳಹರಿವು ಏರಿತ್ತು. ಏಕಾಏಕಿ ಜಲಾಶಯದಿಂದ ನೀರನ್ನು ನದಿಗೆ ಬಿಟ್ಟ ಪರಿಣಾಮ, ಕುಶಾಲನಗರ ಪಟ್ಟಣವು ನೀರಿನಲ್ಲಿ ಮುಳುಗಿತ್ತು. ಅತ್ತ ಭಾಗಮಂಡಲದಲ್ಲೂ ಸುರಿದ ಮಳೆಯಿಂದ ಕಾವೇರಿ ನದಿಯಲ್ಲೂ ಪ್ರವಾಹ ಬಂದಿತ್ತು.

2019ರಲ್ಲಿ ಪ್ರವಾಹ ತಂದ ಸಂಕಟ: ಕಳೆದ ವರ್ಷ ಉತ್ತರ ಕೊಡಗು ವ್ಯಾಪ್ತಿಯಲ್ಲಿ ಮಳೆ ಕಡಿಮೆಯಾಗಿತ್ತು. ಆದರೆ, ದಕ್ಷಿಣ ಕೊಡಗಿನಲ್ಲಿ ಇದೇ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಯಿಂದ ಗೋಣಿಕೊಪ್ಪಲು, ಪೊನ್ನಂಪೇಟೆ, ವಿರಾಜಪೇಟೆ ಪಟ್ಟಣಗಳು ಜಲಾವೃತಗೊಂಡಿದ್ದವು. ಕುಶಾಲನಗರವೂ ಮತ್ತೆ ಮುಳುಗಿತ್ತು. ವಿರಾಜಪೇಟೆ ತಾಲ್ಲೂಕಿನ ತೋರಾ ಗ್ರಾಮದಲ್ಲಿ ದೊಡ್ಡಮಟ್ಟ ಭೂಕುಸಿತ ಸಂಭವಿಸಿತ್ತು. ಗ್ರಾಮದ ಕೆಲವರು ಭೂಸಮಾಧಿಯಾಗಿದ್ದರು. ಇನ್ನು ಭಾಗಮಂಡಲ ಸಮೀಪವೂ ಭೂಕುಸಿತ ಸಂಭವಿಸಿತ್ತು. ಭಾಗಮಂಡಲ ದೇಗುಲವು ಪ್ರವಾಹದ ನೀರಿನಲ್ಲಿ ಮುಳುಗಿತ್ತು.

ಈ ವರ್ಷ ಮಳೆಯ ಅನಾಹುತ ಸಂಭವಿಸದಿರಲಿ ಎಂಬುದು ಜನರ ಪ್ರಾರ್ಥನೆ. ಕೊರೊನಾದಿಂದ ಜನರು ಐದು ತಿಂಗಳಿಂದ ಸಂಕಷ್ಟದಲ್ಲಿದ್ದಾರೆ. ಮಳೆಯಿಂದಲೂ ಸಮಸ್ಯೆಯಾದರೆ, ಪರಿಸ್ಥಿತಿ ಸುಧಾರಣೆ ಕಷ್ಟವೆಂದು ಹಿರಿಯರು ಹೇಳುತ್ತಾರೆ.

ಹಾರಂಗಿ: ಈ ವರ್ಷ ಬೇಗ ನದಿಗೆ ನೀರು...

ಕಳೆದ ವರ್ಷ ಆಗಸ್ಟ್‌ 8ರಂದು ಹಾರಂಗಿಯಿಂದ ನದಿಗೆ ನೀರು ಬಿಡುಗಡೆ ಮಾಡಲಾಗಿತ್ತು. ಅತ್ತ ಕಾವೇರಿ ನದಿಯಲ್ಲೂ ಅಪಾರ ಪ್ರಮಾಣದ ನೀರು ಹರಿದು ಬಂದು, ಕುಶಾಲನಗರವು 2ನೇ ಬಾರಿಗೆ ಮುಳುಗಿತ್ತು. ಈ ವರ್ಷ ಜಲಾಶಯ ಭರ್ತಿಗೆ ಇನ್ನೂ ಐದು ಅಡಿ ಬಾಕಿ ಇರುವಾಗಲೇ ಜುಲೈ 17ರಂದು ನೀರು ಹರಿಸಲಾಗಿದೆ. ಹಿನ್ನೀರಿನ ಒತ್ತಡವು ಕಡಿಮೆ ಆಗಿದೆ. ಈಗಾಗಲೇ ಎಡದಂಡೆ ಹಾಗೂ ಬಲದಂಡೆಗೂ ನೀರು ಬಿಡುಗಡೆ ಮಾಡಲಾಗಿದೆ. ನಿರ್ವಹಣೆಯನ್ನೂ ಅಚ್ಚುಕಟ್ಟಾಗಿ ನಡೆಸಲು ನಿರ್ಧರಿಸಲಾಗಿದೆ.

ಮಡಿಕೇರಿ ಹಾಗೂ ಮಾದಾಪುರ ಭಾಗದಲ್ಲಿ ಸುರಿಯುವ ಮಳೆಯನ್ನು ಗಮನಿಸಿಕೊಳ್ಳಬೇಕು. ಒಳಹರಿವು ನಿರಂತರವಾಗಿ ಅವಲೋಕಿಸುತ್ತಲೇ ಇರಬೇಕು. ಒಳಹರಿವು ಹೆಚ್ಚಾದಂತೆಯೇ ಹೊರಹರಿವು ಹೆಚ್ಚಿಸಿ ‘ನಿವೃತ್ತರ ಸ್ವರ್ಗ’ ಕುಶಾಲನಗರವನ್ನು ಕಾಪಾಡಬೇಕು ಎಂದು ಕುಶಾಲನಗರ ನಿವಾಸಿಗಳು ಕೋರಿದ್ದಾರೆ.

ವಿಪತ್ತು ನಿರ್ವಹಣೆ ಪ್ರಾಧಿಕಾರದ ಎಚ್ಚರಿಕೆ

ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ. ಆಗಸ್ಟ್‌ 4ರ ಬೆಳಿಗ್ಗೆಯಿಂದ 7ರ ಬೆಳಿಗ್ಗೆ ತನಕ ‘ಆರೆಂಜ್‌ ಅಲರ್ಟ್‌’ ಇದೆ. ಈ ಅವಧಿಯಲ್ಲಿ 115.6 ಮಿ.ಮೀನಿಂದ 204.4 ಮಿ.ಮೀವರೆಗೆ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರು ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು