ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತದ ಹಿಡಿತ ಕಳೆದುಕೊಂಡ ಬಿ.ಎಸ್. ಯಡಿಯೂರಪ್ಪ: ಶಾಸಕ ಆರ್.ವಿ. ದೇಶಪಾಂಡೆ ಟೀಕೆ

ಧಾರಾವಿಯಿಂದಲೂ ಪಾಠ ಕಲಿಯದ ಸರ್ಕಾರ​
Last Updated 4 ಆಗಸ್ಟ್ 2020, 8:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಏಷ್ಯಾದ ಅತಿ ದೊಡ್ಡ ಕೊಳೆಗೇರಿ ಮುಂಬೈನ ಧಾರಾವಿಯಲ್ಲಿ ಈಗ ಸೋಂಕಿತರ ಸಂಖ್ಯೆ 72ಕ್ಕೆ ಇಳಿದಿದೆ. ಇದಕ್ಕೆ ಕಾರಣರಾದ ಅಲ್ಲಿನ ಅಧಿಕಾರಿಗಳ ಕಾರ್ಯವೈಖರಿ ರಾಜ್ಯಕ್ಕೆ ಮಾದರಿಯಾಗಬೇಕಿತ್ತು ಎಂದು ಶಾಸಕ ಆರ್‌.ವಿ. ದೇಶಪಾಂಡೆ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪದೇ ಪದೇ ಅಧಿಕಾರಿಗಳ ವರ್ಗಾವಣೆ, ಕೋವಿಡ್‌ ಉಸ್ತುವಾರಿಗಳನ್ನೂ ಮೇಲಿಂದ ಮೇಲೆ ಬದಲಿಸಿದ ರಾಜ್ಯ ಸರ್ಕಾರ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ’ ಎಂದು ದೂರಿದರು.

‘ಮೊದಲು ನೆರೆಯ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿತ್ತು. ಈಗ ಆ ರಾಜ್ಯಗಳಲ್ಲಿ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದ್ದು, ಕರ್ನಾಟಕದಲ್ಲಿ ಕೋವಿಡ್‌ ಪೀಡಿತರು ಹೆಚ್ಚಾಗುತ್ತಲೇ ಇದ್ದಾರೆ. 14ದಿನಗಳಿಂದ 7 ದಿನಗಳಿಗೆ ಕ್ವಾರಂಟೈನ್‌ ದಿನಗಳನ್ನು ಕಡಿಮೆ ಮಾಡಿದ್ದು, ಮಾಸ್ಕ್‌ ಧರಿಸದ ಜನರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದೇ ಇರುವುದು, ವೇಗವಾಗಿ ಪರೀಕ್ಷೆ ಮಾಡದಿರುವುದರಿಂದ ಪ್ರಕರಣಗಳು ಹೆಚ್ಚಾಗುತ್ತಿವೆ’ ಎಂದು ಟೀಕಿಸಿದರು.

‘ಬಿ.ಎಸ್. ಯಡಿಯೂರಪ್ಪ ಶಾಸಕರಾಗಿದ್ದಾಗ, ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಅವರ ಕಾರ್ಯವೈಖರಿ ನೋಡಿದ್ದೇನೆ. ಆಗ ಅತ್ಯಂತ ಪ್ರಭಾವಿ ನಾಯಕರಾಗಿದ್ದರು. ಮುಖ್ಯಮಂತ್ರಿಯಾದ ಬಳಿಕ ರಾಜೀ ರಾಜಕಾರಣಕ್ಕೆ ಒತ್ತು ಕೊಡುತ್ತಿದ್ದಾರೆ. ಶಾಸಕರು ಹಾಗೂ ಸಚಿವರ ಮಾತಿಗೆ ಮಣಿಯುತ್ತಿದ್ದಾರೆ. ಇದರಿಂದ ಯಡಿಯೂರಪ್ಪ ಸರ್ಕಾರದ ಮೇಲೆ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದಾರೆ. ಆಡಳಿತ ಹಳಿ ತಪ್ಪಿದೆ’ ಎಂದರು.

‘ಆರಂಭದ ಲಾಕ್‌ಡೌನ್‌ ಅವಧಿಯಲ್ಲಿ ರಾಜ್ಯ ಸರ್ಕಾರ ಕೊರೊನಾ ಸಮಯವನ್ನು ಎದುರಿಸಲು ಸರಿಯಾಗಿ ಸಿದ್ಧತೆಗಳನ್ನೇ ಮಾಡಿಕೊಂಡಿರಲಿಲ್ಲ. ವಲಸೆ ಕಾರ್ಮಿಕರ ನಿರ್ವಹಣೆ, ಕೊರೊನಾ ವಾರಿಯರ್‌ಗಳ ಸುರಕ್ಷೆತೆಗೆ ಕ್ರಮಗಳನ್ನು ತೆಗೆದುಕೊಂಡಿಲ್ಲ. ಶಾಸಕರ ಮೂಲಕ ಲಕ್ಷಾಂತರ ಆಹಾರದ ಕಿಟ್‌ಗಳನ್ನು ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. ಆ ಕಿಟ್‌ಗಳನ್ನು ಹೇಗೆ, ಯಾವಾಗ ಮತ್ತು ಯಾರಿಗೆ ನೀಡಲಾಗಿದೆ ಎನ್ನುವುದನ್ನು ಬಹಿರಂಗ ಪಡಿಸಬೇಕು. ಸಾಕಷ್ಟು ಸರ್ಕಾರೇತರ ಸಂಸ್ಥೆಗಳು ಕೂಡ ಸರ್ಕಾರಕ್ಕೆ ಕಿಟ್‌ ಕೊಟ್ಟಿವೆ. ಅವುಗಳ ಬಗ್ಗೆ ವಿವರ ಕೊಡಬೇಕು’ ಎಂದು ಆಗ್ರಹಿಸಿದರು.

ಪ್ರಶ್ನಿಸುವುದೇ ತಪ್ಪಾ?

ಕೋವಿಡ್‌ ಪರಿಕರಗಳ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ನಮ್ಮ ಪಕ್ಷದ ಮುಖಂಡರು ಹೇಳಿದ್ದಕ್ಕೆ ನೋಟಿಸ್‌ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದವರಾಗಿ ನಾವು ಸರ್ಕಾರದ ಕ್ರಮವನ್ನು ಪ್ರಶ್ನಿಸುವುದೇ ತಪ್ಪಾ ಎಂದು ದೇಶಪಾಂಡೆ ಕೇಳಿದರು.

ನಿವೃತ್ತಿ ನ್ಯಾಯಮೂರ್ತಿಯಿಂದ ತನಿಖೆ ನಡೆಸುವಂತೆ ನಾವು ಆಗ್ರಹಿಸಿದ್ದೇವೆ. ರಾಜ್ಯ ಸರ್ಕಾರ ಇದಕ್ಕೆ ಒಪ್ಪಬೇಕು. ಆಗ ಯಾರು ತಪ್ಪಿತಸ್ಥರು ಎಂಬುದು ಗೊತ್ತಾಗುತ್ತದೆ. ತನಿಖೆಗೆ ಹಿಂದೇಟು ಏಕೆ?. ಪ್ರಶ್ನಿಸಿದ್ದಕ್ಕೆ ನೋಟಿಸ್‌ ಕೊಡುವುದಾದರೆ ಮುಂದೆ ರಾಜ್ಯ ಸರ್ಕಾರದ ವಿರುದ್ಧ ಬರೆಯುವ ಪತ್ರಿಕೆಗಳು ಹಾಗೂ ವರದಿ ಪ್ರಸಾರ ಮಾಡುವ ವಾಹಿನಿಗಳಿಗೂ ನೋಟಿಸ್‌ ಕೊಟ್ಟರೂ ಅಚ್ಚರಿಯೇನಿಲ್ಲ ಎಂದರು.

ಡೆಕ್ಕನ್‌ ಹೆರಾಲ್ಡ್‌ ವರದಿ ಉಲ್ಲೇಖ

ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಕೊರೊನಾ ವಾರಿಯರ್‌ಗಳಾಗಿರುವ ವೈದ್ಯಕೀಯ ಸಿಬ್ಬಂದಿಗೆ ದೋಷಪೂರಿತ ಸುರಕ್ಷಿತಾ ಕಿಟ್‌ಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ. ಆರೋಗ್ಯ ಸಂರಕ್ಷಕರಿಗೆ ಸುರಕ್ಷತೆ ಇಲ್ಲವೆಂದರೆ ಹೇಗೆ ಎಂದರು. ಈ ಕುರಿತು ಡೆಕ್ಕನ್‌ ಹೆರಾಲ್ಡ್ ಪ್ರಕಟಿಸಿದ್ದ ವರದಿ ತೋರಿಸಿದರು. ಪ್ರಜಾವಾಣಿ ಕೂಡ ಈ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT