ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ ರಾತ್ರಿಯಿಂದ ಬೆಂಗಳೂರು ಲಾಕ್‌ಡೌನ್‌: ಇಲ್ಲಿದೆ ಸರ್ಕಾರದ ಮಾರ್ಗಸೂಚಿ

Last Updated 13 ಜುಲೈ 2020, 15:56 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕಳೆದ 2 ವಾರಗಳಿಂದ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವುದರಲ್ಲಿ ನಿಯಂತ್ರಣಕ್ಕಾಗಿ ಕಠಿಣ ಕ್ರಮಗಳನ್ನು ವಹಿಸಲು ಸರ್ಕಾರ ಮುಂದಾಗಿದೆ. ಇದೇ ನಿಟ್ಟಿನಲ್ಲಿ ಮಂಗಳವಾರ ರಾತ್ರಿ 8ರಿಂದ ಜುಲೈ 22 ಬೆಳಿಗ್ಗೆ 5ರ ವರೆಗೂ ಒಂದು ವಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಗೆ ಸರ್ಕಾರ ಆದೇಶಿಸಿದೆ. ಇದರೊಂದಿಗೆ ಲಾಕ್‌ಡೌನ್‌ ಮಾರ್ಗಸೂಚಿಗಳನ್ನು ಸೋಮವಾರ ಹೊರಡಿಸಲಾಗಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಬಿಬಿಎಂಪಿ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ಆದೇಶಿಸಿದ್ದಾರೆ.

ಅಂಗಡಿ: ಹಣ್ಣು, ತರಕಾರಿ, ದಿನಸಿ ಹಾಗೂ ಹಾಲು ಮಾರಾಟ ಅಂಗಡಿಗಳು ಬೆಳಿಗ್ಗೆ 5ರಿಂದ ಮಧ್ಯಾಹ್ನ 12ರ ವರೆಗೂ ತೆರೆಯಲು ಅವಕಾಶ. ಅತ್ಯವಶ್ಯಕ ವಸ್ತುಗಳನ್ನು ಮನೆಗೆ ತಲುಪಿಸಲು ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. ಸ್ಥಳೀಯ ಮಳಿಗೆಗಳು ಹಾಗೂ ಇ–ಕಾಮರ್ಸ್‌ ಕಂಪನಿಗಳ ಮುಖಾಂತರ ಸರಕು ಸಾಗಣಿಗೆ ಅವಕಾಶ.

ಕಂಟೈನ್‌ಮೆಂಟ್‌ ಅಲ್ಲದ ವಲಯಗಳಲ್ಲಿ ಸರ್ಕಾರಿ ಕಚೇರಿಗಳು, ಆರೋಗ್ಯ, ವಿದ್ಯುತ್‌, ನೀರು, ವೈದ್ಯಕೀಯ ಶಿಕ್ಷಣ, ಪೊಲೀಸ್‌ ಸೇರಿದಂತೆ ತುರ್ತು ಸೇವೆಗಳಿಗೆ ನಿರ್ಬಂಧ ಇರುವುದಿಲ್ಲ. ಬೆಂಗಳೂರಿನ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿರುವ ಕಚೇರಿಗಳಲ್ಲಿ ಶೇ 50ರಷ್ಟು ಸಿಬ್ಬಂದಿ ಕಾರ್ಯಾನಿರ್ವಹಿಸಬಹುದಾಗಿದೆ. ಕೋವಿಡ್‌–19 ಸಂಬಂಧಿಸಿದ ಕಾರ್ಯಾಚರಣೆಗಳಿಗಾಗಿ ನಿಯೋಜಿಸಿರುವ ಸರ್ಕಾರೇತರ ಸಂಸ್ಥೆಗಳು, ಸ್ವಯಂ ಸೇವಕರು ಹಾಗೂ ಇತರೆ ಎಲ್ಲ ಕಚೇರಿಗಳ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸುವಂತೆ ತಿಳಿಸಲಾಗಿದೆ.

ಕಂಟೈನ್‌ಮೆಂಟ್‌ ವಲಯಗಳಲ್ಲಿ ಹಿಂದೆ ಸೂಚಿರುವ ನಿರ್ಬಂಧಗಳು ಮುಂದುವರಿಯುತ್ತವೆ.

ರಕ್ಷಣೆ, ಸಶಸ್ತ್ರ ಪೊಲೀಸ್‌ ಪಡೆ, ದೂರ ಸಂಪರ್ಕ ಸೇವೆ ಸೇರಿ ಅಗತ್ಯ ಸೇವೆಗಳನ್ನು ನಿರ್ವಹಿಸುವ ಕಚೇರಿಗಳು ತೆರೆದಿರುತ್ತವೆ. ಅಂಚೆ ಕಚೇರಿಗಳು, ಬ್ಯಾಂಕ್‌ಗಳು, ವೇತನ , ಲೆಕ್ಕಪತ್ರ, ಹಣಕಾಸು ಸಲಹೆಗಾರರು ಹಾಗೂ ಮಹಾ ಲೆಕ್ಕ ನಿಯಂತ್ರಕರ ಕಚೇರಿಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯಾಚರಿಸಬೇಕಾಗುತ್ತದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಇತರೆ ಕಚೇರಿಗಳು, ನಿಗಮಗಳು ಹಾಗೂ ಸ್ವಾಯತ್ತ ಸಂಸ್ಥೆಗಳು ಮುಚ್ಚಿರುವಂತೆ ಸೂಚಿಸಲಾಗಿದೆ.

ಎಲ್ಲ ಆಸ್ಪತ್ರೆಗಳು, ಕ್ಲಿನಿಕ್‌, ಪ್ರಯೋಗಾಲಯ, ಔಷಧಿ ಮಳಿಗೆಗಳು,...ಹೀಗೆ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಎಲ್ಲವು ಕಾರ್ಯಾಚರಿಸುವಂತೆ ತಿಳಿಸಲಾಗಿದೆ.

ಎಲ್ಲ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲು ಅವಕಾಶ ನೀಡಲಾಗಿದೆ. ಎಲ್ಲ ಮಂಡಿ, ತರಕಾರಿ ಮತ್ತು ಹಣ್ಣು ಮಾರುಕಟ್ಟೆಗಳು, ಕೃಷಿ ಯಂತ್ರೋಪಕರಣ ಮಳಿಗೆಗಳು, ರಸಗೊಬ್ಬರ, ಕೀಟನಾಶಕ ಬೀಜ ತಯಾರಿಕೆ, ವಿತರಣೆ ಮಳಿಗೆಗಳು ತೆರೆದಿರಲಿವೆ. ಮೀನುಗಾರಿಕೆ ಚಟುವಟಿಕೆಗಳು, ಮೊಟ್ಟೆ ಕೇಂದ್ರಗಳು, ಕೋಳಿ, ಜಾನುವಾರ ಸಾಗಣೆ, ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಸ್ಕರಣೆ, ವಿತರಣೆ ಹಾಗೂ ಮಾರಾಟಕ್ಕೆ ನಿರ್ಬಂಧಗಳಿಲ್ಲ. ಪಶು ಆಹಾರದ ಮಳಿಗೆಗಳೂ ತೆರೆದಿರಲಿವೆ.

ಮಕ್ಕಳು, ಮಹಿಳೆಯರು ಹಾಗೂ ಹಾಲುಣಿಸುವ ತಾಯಂದಿರು ಮುಂತಾದ ಫಲಾನುಭವಿಗಳ ಮನೆ ಬಾಗಿಲಿದೆ ಆಹಾರ ಮತ್ತು ಪೌಷ್ಠಿಕ ಸಾಮಗ್ರಿಗಳನ್ನು 15 ದಿನಗಳಿಗೊಮ್ಮೆ ಪೂರೈಸುವುದು. ಫಲಾನುಭಾವಿಗಳು ಅಂಗನವಾಡಿಗೆ ಭೇಟಿ ನೀಡುವಂತಿಲ್ಲ. ಸಾಮಾಜಿಕ ಭದ್ರತಾ ಪಿಂಚಣಿಗಳ ವಿತರಣೆಗೆ ನಿರ್ಬಂಧವಿಲ್ಲ.

ಸಾರಿಗೆ: ರೈಲು, ಟ್ರಕ್‌ ಹಾಗೂ ವಿಮಾನಗಳ ಮೂಲಕ ಸರಕು ಸಾಗಾಟ ಮುಂದುವರಿಯುತ್ತದೆ. ಮೆಟ್ರೊ, ಕ್ಯಾಬ್‌ ಹಾಗೂ ಆಟೊರಿಕ್ಷಾ (ತುರ್ತು ಪರಿಸ್ಥಿತಿಗಾಗಿ ಬಾಡಿಗೆ ಪಡೆದವು ಹೊರತು ಪಡಿಸಿ) ಸೇವೆಗಳು ಇರುವುದಿಲ್ಲ. ಈಗಾಗಲೇ ನಿಗದಿಯಾಗಿರುವ ವಿಮಾನ ಹಾಗೂ ರೈಲು ಪ್ರಯಾಣ ಲಾಕ್‌ಡೌನ್‌ ಅವಧಿಯಲ್ಲೂ ಮುಂದುವರಿಯಲಿದೆ. ಆ ಪ್ರಯಾಣಿಕರು ಟ್ಯಾಕ್ಸಿ ಹಾಗೂ ಆಟೊರಿಕ್ಷಾಗಳ ಮೂಲಕ ವಿಮಾನ ಅಥವ ರೈಲು ನಿಲ್ದಾಣಗಳಿಗೆ ತಲುಪ ಬಹುದು. ಬುಕ್‌ ಆಗಿರುವ ಪ್ರಯಾಣದ ಟಿಕೆಟ್‌ನ್ನೇ ಪ್ರಯಾಣಿಕರ ಪಾಸ್ ಎಂದು ಪರಿಗಣಿಸಲಾಗುತ್ತದೆ. ಹೊಸ ವಿಮಾನ ಅಥವಾ ರೈಲು ಸಂಚಾರಕ್ಕೆ ಅವಕಾಶವಿಲ್ಲ.

ಶಾಲೆ, ಕಾಲೇಜು, ತರಬೇತಿ ಸಂಸ್ಥೆಗಳು ತೆರೆಯುವಂತಿಲ್ಲ. ಆನ್‌ಲೈನ್‌ ತರಬೇತಿ ಪ್ರೋತ್ಸಾಹಿಸಬೇಕು ಹಾಗೂ ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳಿಗೆ ರಾಷ್ಟ್ರೀಯ ನಿರ್ದೇಶನದಂತೆ ಅವಕಾಶ ನೀಡುವಂತೆ ಸೂಚಿಸಲಾಗಿದೆ. ಕ್ವಾರಂಟೈನ್‌ ಸೌಲಭ್ಯಗಳಿಗೆ ಉದ್ದೇಶಿತ ಹೊಟೇಲ್‌ಗಳನ್ನು ಹೊರತು ಪಡಿಸಿ ಇತರೆ ರೆಸ್ಟೊರೆಂಟ್‌, ಆತಿಥ್ಯ ಸೇವೆಗಳಿಗೆ ನಿರ್ಬಂಧ. ಶಾಪಿಂಗ್‌ ಮಾಲ್‌ಗಳು, ಸಿನಿಮಾ ಮಂದಿರಗಳು, ರಂಗಮಂದಿರಗಳು, ಈಜುಕೊಳ, ಕ್ರೀಡಾ ಸಂಕೀರ್ಣ, ಸಭಾ ಭವನಗಳು ಮುಚ್ಚಿರಲಿವೆ. ಯಾವುದೇ ಸಭೆ, ಸಮಾರಂಭ ಹಾಗೂ ಕಾರ್ಯಕ್ರಮಗಳಿಗೆ ಜನರು ಸೇರುವಂತಿಲ್ಲ. ಧಾರ್ಮಿಕ ಸ್ಥಳಗಳು ಹಾಗೂ ಪೂಜಾ ಸ್ಥಳಗಳನ್ನು ಮುಚ್ಚುವಂತೆ ತಿಳಿಸಲಾಗಿದೆ.

ತುರ್ತು ಸಂದರ್ಭಗಳಲ್ಲಿ ಮಾತ್ರ ಬೆಂಗಳೂರು ಪ್ರದೇಶದೊಳಗೆ ಪ್ರಯಾಣಿಕ ವಾಹನಗಳು ಮತ್ತು ಬಸ್‌ಗಳ ಪ್ರಯಾಣ. ಬಸ್‌ಗಳ ಮೂಲಕ ವ್ಯಕ್ತಿಗಳ ಸಂಚಾರಕ್ಕೆ ನಿಷೇಧ. ಅರ್ಹ ಪರವಾನಗಿ ಇದ್ದರೆ ಮಾತ್ರವೇ ಬೆಂಗಳೂರಿನಿಂದ ನಿರ್ಗಮಿಸುವುದು ಮತ್ತು ಆಗಮಿಸಲು ಅವಕಾಶ ಸಿಗುತ್ತದೆ. ಅನುಮತಿ ನೀಡಲಾಗಿರುವ ಕಚೇರಿಗಳಿಗೆ ಪ್ರಯಾಣಿಸುವ ಸಿಬ್ಬಂದಿ ಗುರುತಿನ ಚೀಟಿ ಹೊಂದಿರಬೇಕು.

ಬ್ಯಾಂಕ್‌, ವಿಮಾ ಕಚೇರಿಗಳು, ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಗಳು, ಎಟಿಎಂ, ಆಹಾರ ಸಂಸ್ಕಾರಣಾ ಕೈಗಾರಿಕೆಗಳು, ನಿರ್ಮಾಣ ಕಾರ್ಯಗಳನ್ನು ಮುಂದುವರಿಸಲು ಅವಕಾಶ. 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಗರ್ಭಿಣಿಯರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಇರುವಂತೆ ಸಲಹೆ ನೀಡಲಾಗಿದೆ. ಆರೋಗ್ಯ ಸೇತು ಆ್ಯಪ್‌ ಅಳವಡಿಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಅವಶ್ಯಕ. ಮಾಸ್ಕ್‌ ಧರಿಸದಿದ್ದರೆ ನಗರ ಪ್ರದೇಶಗಳಲ್ಲಿ ₹200 ದಂಡ ಹಾಗೂ ಇತರೆ ಪ್ರದೇಶಗಳಲ್ಲಿ ₹100 ದಂಡ ವಿಧಿಸಲಾಗುತ್ತದೆ. ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮಕೈಗೊಳ್ಳಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT