ಬುಧವಾರ, ಸೆಪ್ಟೆಂಬರ್ 22, 2021
25 °C
ಕಾಂಗ್ರೆಸ್‌ ನಾಯಕರ ಸುಳ್ಳು ಲೆಕ್ಕ : ಡಿಸಿಎಂ ಆರೋಪ

ಕೋವಿಡ್‌–19 ನಿರ್ವಹಣೆ: ಉಪಕರಣ ಖರೀದಿಗೆ ₹323 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Coronavirus

ಬೆಂಗಳೂರು: ಕೋವಿಡ್‌–19 ನಿರ್ವಹಣೆಗಾಗಿ ಆರೋಗ್ಯ ಇಲಾಖೆಯಿಂದ ₹ 290 ಕೋಟಿ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ₹ 33 ಕೋಟಿಯಷ್ಟು (ಒಟ್ಟು ₹ 323 ಕೋಟಿ) ವೈದ್ಯಕೀಯ ಉಪಕರಣಗಳನ್ನು ಮಾತ್ರ ಖರೀದಿಸಲಾಗಿದ್ದು, ಸಾವಿರಾರು ಕೋಟಿ ಹಗರಣ ನಡೆದಿಲ್ಲ ಎಂದು ಸರ್ಕಾರ ಪ್ರತಿ‍ಪಾದಿಸಿದೆ.

ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಗೆ ಸಂಬಂಧಿಸಿದ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಿದರು.

‘ಖರೀದಿಯಲ್ಲಿ ಒಂದು ರೂಪಾಯಿಯಷ್ಟೂ ದುರ್ಬಳಕೆ ಆಗಿಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದುರುದ್ದೇಶದಿಂದ  ಸುಳ್ಳು ಆರೋಪ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಅವರ ಗಮನ ಬೇರೆಡೆ ಸೆಳೆದು, ಕೋವಿಡ್‌ ವಿರುದ್ಧದ ಹೋರಾಟವನ್ನು ವಿಫಲಗೊಳಿಸುವುದು ಇವರ ಏಕೈಕ ಉದ್ದೇಶ’ ಎಂದು ಅಶ್ವತ್ಥನಾರಾಯಣ ದೂರಿದರು.

‘ರಾಜ್ಯದಲ್ಲಿ ಮೊದಲ ಕೋವಿಡ್‌ ಪ್ರಕರಣ ವರದಿ ಆದಾಗ; ಎನ್‌ 95 ಮಾಸ್ಕ್‌, ಪಿಪಿಇ ಕಿಟ್‌ಗಳು, ವೆಂಟಿಲೇಟರ್‌ಗಳು ಲಭ್ಯವಿರಲಿಲ್ಲ. ರಾಜ್ಯದಲ್ಲಿ ಕೋವಿಡ್‌ ಪ್ರಕರಣ ಹೆಚ್ಚಾಗಬಹುದು, ಅದನ್ನು ನಿಭಾಯಿಸಲು ತಯಾರಾಗಿರಬೇಕು ಎಂಬ ಕಾರಣಕ್ಕೆ ಚೀನಾದಿಂದ ಆಮದು ಮಾಡಿಕೊಳ್ಳಲಾಯಿತು. ಇದಕ್ಕಾಗಿ ಚೀನಾ ರಾಯಭಾರಿ ಜತೆ ಮಾತನಾಡಿ ಪಿಪಿಇ ಕಿಟ್‌ಗಳ ಪೂರೈಕೆಗಾಗಿ ಮನವಿ ಮಾಡಿದ್ದೆವು. ಎಲ್ಲದಕ್ಕೂ ಲೆಕ್ಕಪತ್ರ ಇಟ್ಟಿದ್ದೇವೆ. ವಿಧಾನಮಂಡಲದ ಅಧಿವೇಶನದಲ್ಲಿ ಇಡುತ್ತೇವೆ. ಸಂದೇಹ ಇದ್ದವರು ನೋಡಿಕೊಳ್ಳಬಹುದು’ ಎಂದರು.

‘ಹಿಂದೆ ಶಿವಾನಂದ ಪಾಟೀಲರು ಆರೋಗ್ಯ ಸಚಿವರಾಗಿದ್ದಾಗ 2019ರಲ್ಲಿ ವೆಂಟಿಲೇಟರ್ ಖರೀದಿಯಾಗಿದೆ. ಆಗ ತಲಾ ಒಂದು ವೆಂಟಿಲೇಟರ್‌ಗೆ ₹15.12 ಲಕ್ಷ ವೆಚ್ಚ ಮಾಡಲಾಗಿದೆ. ಆಗ ಅಷ್ಟು ದುಬಾರಿ ದರದಲ್ಲಿ ಖರೀದಿಸಿದ್ದು ಏಕೆ? ಅಂದಿನ ಪರಿಸ್ಥಿತಿ ಏನಿತ್ತು ಎಂಬುದನ್ನು ವಿವರಿಸಲಿ’ ಎಂದು ಅಶ್ವತ್ಥನಾರಾಯಣ ಸವಾಲು ಹಾಕಿದರು.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವೆಂಟಿಲೇಟರ್‌ಗಳಿಗೆ ₹ 4 ಲಕ್ಷದಿಂದ ₹50 ಲಕ್ಷದವರೆಗೆ ಬೆಲೆ ಇದೆ. ಪ್ರತಿಯೊಂದು ವೆಂಟಿಲೇಟರ್‌ಗಳ ಕಾರ್ಯ ನಿರ್ದಿಷ್ಟತೆ (ಸ್ಪೆಸಿಫಿಕೇಷನ್‌) ಮತ್ತು ಬಳಕೆಯೂ ಭಿನ್ನವಾಗಿರುತ್ತದೆ. ತಮಿಳುನಾಡಿನಲ್ಲಿ ಕಡಿಮೆ ಬೆಲೆಗೆ ವೆಂಟಿಲೇಟರ್‌ ಖರೀದಿಸಲಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ. ಅಲ್ಲಿ ಖರೀದಿಸಿರುವುದು‌ ಆಂಬುಲೆನ್ಸ್‌ನಲ್ಲಿ ರೋಗಿಯನ್ನು ಸಾಗಿಸಲು ಬಳಸುವಂತದ್ದು.‌ ಅದರ ಬಳಕೆ ಸೀಮಿತ. ಅದರಿಂದ ಅದರ ಬೆಲೆಯೂ ಕಡಿಮೆ. ಐಸಿಯುನಲ್ಲಿ ಬಳಸುವ ವೆಂಟಿಲೇಟರ್‌ ಬೆಲೆ ಹೆಚ್ಚು’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

‘ಈವರೆಗೆ ಭಾರತ ಸರ್ಕಾರ ಸ್ವಾಮ್ಯದ ಎಚ್‌ಎಲ್‌ಎಲ್‌ನಿಂದ 640 ಮತ್ತು ಸ್ಕಾನ್ರೆಯಿಂದ 80 ಬೇಸಿಕ್‌ ವೆಂಟಿಲೇಟರ್‌ಗಳನ್ನು‌ ಖರೀದಿಸಲಾಗಿದೆ. ಅಧಿಕ ಗುಣಮಟ್ಟದ(ಹೈಎಂಡ್‌) 28 ವೆಂಟಿಲೇಟರ್‌ಗಳನ್ನು ಖರೀದಿಸಲಾಗಿದೆ. ಬಹುತೇಕ ವೆಂಟಿಲೇಟರ್‌ಗಳ ಬೆಲೆ ತಲಾ ₹11 ಲಕ್ಷದಿಂದ ₹12 ಲಕ್ಷಗಳು. ಒಂದು ವೆಂಟಿಲೇಟರ್‌ ಬೆಲೆ ಮಾತ್ರ ₹18.20 ಲಕ್ಷಗಳು. ಇದನ್ನು ಜಯನಗರ ಜನರಲ್‌ ಆಸ್ಪತ್ರೆಯಲ್ಲಿ ಬಳಸಲಾಗುತ್ತಿದೆ’ ಎಂದು ಅವರು ಹೇಳಿದರು.

‘ಅಕ್ರಮದ ಆರೋಪ ಸಾಬೀತುಪಡಿಸಿದರೆ, ರಾಜೀನಾಮೆ ನೀಡುತ್ತೇನೆ’ ಎಂದೂ ಶ್ರೀರಾಮುಲು ತಿಳಿಸಿದರು.

ನಿಮಗೆ ₹3 ಸಾವಿರಕ್ಕೂ ಮೊಬೈಲ್‌ ಫೋನೂ ಸಿಗುತ್ತದೆ, ₹1 ಲಕ್ಷದ್ದೂ ಸಿಗುತ್ತದೆ. ಅವುಗಳ ನಿರ್ದಿಷ್ಟತೆ, ಸಾಮರ್ಥ್ಯ ಬೇರೆ ಇರುತ್ತದೆ, ವೆಂಟಿಲೇಟರ್‌ಗಳೂ ಹಾಗೆ

- ಬಿ.ಶ್ರೀರಾಮುಲು, ಆರೋಗ್ಯ ಸಚಿವ

ಅಧಿಕಾರಿಗಳು, ವೈದ್ಯರ ಸಮಿತಿಯೇ ಕೂಲಂಕಷವಾಗಿ ಪರಿಶೀಲಿಸಿಯೇ ಖರೀದಿಸಿದೆ. ನಿಮಗೆ ಇನ್ನೂ ಸಂದೇಹವಿದ್ದರೆ, ಪೋರ್ಟಲ್‌ಗಳಲ್ಲಿ ದರ ನೋಡಿ

- ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ

‘ಆರೋಗ್ಯ ಅಭಯ ಹಸ್ತ ಯೋಜನೆ ಶೀಘ್ರ’

‘ಹಳ್ಳಿ ಜನರ ಆರೋಗ್ಯ ತಪಾಸಣೆಗೆ ಪಕ್ಷದಿಂದ ಆರೋಗ್ಯ ಅಭಯಹಸ್ತ ಕಾರ್ಯಕ್ರಮ ಶೀಘ್ರ ಆರಂಭಿಸಲಾಗುವುದು’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಜಿಲ್ಲಾ, ವಿಧಾನಸಭಾ ಕ್ಷೇತ್ರ, ಬ್ಲಾಕ್ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಉಸ್ತುವಾರಿಗೆ ನಿಯೋಜಿತರಾಗಿರುವ ಪಕ್ಷದ ಪ್ರತಿನಿಧಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಅವರು, ‘ಪ್ರತಿ ಗ್ರಾಮ ಪಂಚಾಯಿತಿಗೆ ಪಿಪಿಇ ಕಿಟ್‌ ಧರಿಸಿದ ಮೂವರು ಪ್ರತಿನಿಧಿಗಳ ತಂಡ ಭೇಟಿ ನೀಡಲಿದೆ. ಜನರನ್ನು ಪರೀಕ್ಷಿಸಲಿರುವ ಅವರು, ಉಷ್ಣತೆ ಅಥವಾ ಆಕ್ಸಿಜನ್ ಪ್ರಮಾಣದಲ್ಲಿ ವ್ಯತ್ಯಾಸವಿದ್ದರೆ, ಪಕ್ಷದ ವೈದ್ಯ ಘಟಕದ ಜತೆ ಚರ್ಚಿಸಿ ಸಲಹೆಗಳನ್ನು ನೀಡಲಿದ್ದಾರೆ’ ಎಂದರು.

ಜನಾಂದೋಲನಕ್ಕೆ ‘ಕೈ’ ನಾಯಕರ ನಿರ್ಧಾರ

ಕೋವಿಡ್‌ ನಿಯಂತ್ರಣಕ್ಕೆ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌, ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸಲು ನಿರ್ಧರಿಸಿದೆ.

ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿರುವ ಕಾಂಗ್ರೆಸ್, ಇದೇ 23ರಂದು ದಾಖಲೆಗಳ ಸಮೇತ ಸುದ್ದಿಗೋಷ್ಠಿ ನಡೆಸಲು ತೀರ್ಮಾನಿಸಿದೆ. ಅಲ್ಲದೆ, ಎಲ್ಲ 30 ಜಿಲ್ಲೆಗಳಿಗೆ ಪಕ್ಷದ ನಾಯಕರ ತಂಡ ಭೇಟಿ ನೀಡಿ, ಅಂಕಿ ಅಂಶಗಳ ಸಹಿತ ಮಾಹಿತಿಯನ್ನು ಜನರ ಮುಂದಿಡಲು ಮತ್ತು ಪಕ್ಷದ ವತಿಯಿಂದ ಕೋವಿಡ್ ಸಹಾಯ ಕಾರ್ಯಪಡೆ ರಚಿಸಲು ಕೂಡಾ ಮುಂದಾಗಿದೆ.

ಈ ಬಗ್ಗೆ ಪಕ್ಷದ ನಾಯಕರ ಜೊತೆ ಸೋಮವಾರ ಚರ್ಚಿಸಿದ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ಒಂದೊಂದು ಜಿಲ್ಲೆಯ ಜವಾಬ್ದಾರಿಯನ್ನು ಒಬ್ಬೊಬ್ಬ ನಾಯಕರಿಗೆ ವಹಿಸಿ, ಜನಜಾಗೃತಿ ಮೂಡಿಸಲಾಗುವುದು. ಅವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಂಗ್ರಹಿಸಿದ್ದೇವೆ. ಅವುಗಳನ್ನು ಜನರ ಮುಂದಿಡುತ್ತೇವೆ’ ಎಂದರು.

‘ನ್ಯಾಯಾಲಯಕ್ಕೆ ಸರ್ಕಾರ ಸಲ್ಲಿಸಿರುವ ದಾಖಲೆಯೂ ನಮ್ಮಲ್ಲಿದೆ. ತಮಿಳುನಾಡು ಸರ್ಕಾರ ಖರೀದಿಸಿದ ದಾಖಲೆಗಳೂ ಇವೆ. ವಿರೋಧ ನಾಯಕ ಸಿದ್ದರಾಮಯ್ಯ ಅವರು ಈಗಾಗಲೇ ಲೆಕ್ಕ ಕೊಡಿ ಎಂದು ಸರ್ಕಾರವನ್ನು ಕೇಳಿದ್ದಾರೆ. ಅದನ್ನು ಅವರು ಮೊದಲು ಮಾಡಲಿ’ ಎಂದು ಆಗ್ರಹಿಸಿದರು.

‘ಕೋವಿಡ್‌ ಕೇರ್ ಕೇಂದ್ರಗಳಲ್ಲಿ ಬಳಸಿದ ಹಾಸಿಗೆಗಳನ್ನು ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೆ ನೀಡುವುದಾಗಿ ಹೇಳುತ್ತಿದ್ದಾರೆ. ನಾವು ಮುಖ್ಯಮಂತ್ರಿಗೆ ಕೇಳುವುದಿಷ್ಟೆ. ಸೋಂಕಿತರು ಬಳಸಿದ ಹಾಸಿಗೆಗಳನ್ನು ಮುಖ್ಯಮಂತ್ರಿ, ಆರೋಗ್ಯ ಸಚಿವರು ತಮ್ಮ ಮನೆಗೆ ಹಾಕಿಕೊಳ್ಳಲಿ. ಬೇಕಾದರೆ, ಶಾಸಕರ ವಸತಿಗೃಹಗಳಿಗೆ ಹಾಕಿಕೊಳ್ಳಲಿ. ಈ ಬಗ್ಗೆಯೂ ಆಂದೋಲನ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ನೀಡಿದ ಸ್ಪಷ್ಟನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಲೆಕ್ಕ ಕೊಡಿ ಅಂದರೆ ಹೀಗಾ ಕೊಡುವುದು. ಬಾಯಿ ಮಾತಿನಲ್ಲಿ ಲೆಕ್ಕ ಕೊಟ್ಟರೆ ಆಗುತ್ತಾ. ಏನೇನು ಖರೀದಿ ಮಾಡಲಾಗಿದೆ, ಎಷ್ಟೆಷ್ಟು ಖರ್ಚು ಮಾಡಲಾಗಿದೆ ಎಂಬ ಲೆಕ್ಕ ಬೇಡವೇ. ದಾಖಲೆಗಳನ್ನು ತೋರಿಸಲಿ’ ಎಂದು ಮರು ಸವಾಲು ಹಾಕಿದರು.

ಮಗಳು, ತಾಯಿಗೆ ಮನೆಯಲ್ಲೇ ಚಿಕಿತ್ಸೆ

ತುಮಕೂರು: ಕೊರೊನಾ ಸೋಂಕಿನಿಂದ ಬಳಲಿದ ಐದು ವರ್ಷದ ಮಗಳು, 65 ವರ್ಷದ ತಾಯಿಗೆ ಮನೆಯಲ್ಲೇ ಚಿಕಿತ್ಸೆ ಹಾಗೂ ಆರೈಕೆ ಮಾಡಿದ ಮಹಿಳೆಯೊಬ್ಬರು ಕೋವಿಡ್‌ನಿಂದ ಕುಟುಂಬವನ್ನು ರಕ್ಷಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

‘ಬಾಣಂತಿಯರಿಗೆ ಮಾಡುವ ಆರೈಕೆ ಹಾಗೂ ಪೌಷ್ಟಿಕ ಆಹಾರ ಸೇವಿಸಿದರೆ ಸೋಂಕಿನಿಂದ ಮುಕ್ತರಾಗಬಹುದು’ ಎಂಬುದು ಕೋವಿಡ್‌ಗೆ ಚಿಕಿತ್ಸೆ ಪಡೆದು ಗುಣಮುಖರಾಗಿರುವ ನಗರದ ಸಿದ್ಧರಾಮೇಶ್ವರ ಬಡಾವಣೆ ನಿವಾಸಿ ಎಸ್‌.ಪ್ರಿಯಾಂಕ ಅವರ ಅಭಿಪ್ರಾಯ. ‘ಆಸ್ಪತ್ರೆಯಲ್ಲಿ ನನಗೆ ಯಾವ ರೀತಿ ಚಿಕಿತ್ಸೆ ನೀಡಿದರು ಎಂಬುದನ್ನು ನೋಡಿಕೊಂಡಿದ್ದೇನೆ. ಅದೇ ರೀತಿ ಆರೈಕೆ ಮಾಡುತ್ತಿದ್ದೇನೆ. ಇಬ್ಬರೂ ಚೇರಿಸಿಕೊಂಡಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು