ಭಾನುವಾರ, ಸೆಪ್ಟೆಂಬರ್ 19, 2021
25 °C

ಬಸ್‌ನಲ್ಲಿ ಕಲ್ಲು ತುಂಬಿ ಸಾಗಿಸಿದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕುಂದಗೋಳ–ಹುಬ್ಬಳ್ಳಿ ನಡುವೆ ಸಂಚರಿಸುವ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ, ಸಿಬ್ಬಂದಿ ಗುರುವಾರ ಕಲ್ಲು ಸಾಗಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೊಸೂರು ರಸ್ತೆ ಬಳಿ ರಸ್ತೆ ವಿಭಜಕ ಕಾಮಗಾರಿ ನಡೆಯುತ್ತಿದ್ದು, ಮೊದಲು ರಸ್ತೆಗೆ ಹಾಕಲಾಗಿದ್ದ ಕಲ್ಲುಗಳನ್ನು ತೆಗೆಯಲಾಗಿದೆ. ಗೋಕುಲ ರಸ್ತೆಯ ಬಸ್‌ ಡಿಪೊದಲ್ಲಿ ಉದ್ಯಾನ ಕಾಮಗಾರಿ ನಡೆಯುತ್ತಿರುವುದರಿಂದ, ಅಲ್ಲಿಗೆ ಈ ಕಲ್ಲುಗಳನ್ನು ಸಾಗಿಸಲು ಸಿಬ್ಬಂದಿ ಬಸ್‌ ಬಳಕೆ ಮಾಡಿಕೊಂಡಿದ್ದಾರೆ.

ರಸ್ತೆ ಮೇಲಿದ್ದ ಕಲ್ಲುಗಳನ್ನು ಐದಾರು ಸಿಬ್ಬಂದಿ ಸೇರಿ ಬಸ್‌ಗೆ ತುಂಬಿದ್ದಾರೆ. 50ಕ್ಕಿಂತಲೂ ಹೆಚ್ಚು ಕಲ್ಲುಗಳನ್ನು ತುಂಬಿಕೊಂಡು ಡಿಪೋಗೆ ತೆರಳಿದ್ದಾರೆ. ‘ಗೂಡ್ಸ್‌ನಲ್ಲಿ ಕಲ್ಲು ತುಂಬಿಕೊಂಡು ಹೋಗುವ ಬದಲು, ಬಸ್‌ನಲ್ಲಿ ಯಾಕೆ ತುಂಬಿಕೊಂಡು ಹೋಗುತ್ತಿದ್ದೀರಿ? ಈ ಕೆಲಸಕ್ಕೆ ಕಾರ್ಮಿಕರು ಇರಲಿಲ್ಲವೇ?’ ಎಂದು ಕೆಲ ಸಾರ್ವಜನಿಕರು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಬ್ಬಂದಿ ‘ಮೇಲಧಿಕಾರಿಗಳು ಹೇಳಿದ ಹಾಗೆ ನಾವು ಕೇಳಬೇಕು’ ಎಂದಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಕ ಎಚ್‌. ರಾಮನಗೌಡ, ‘ಕಲ್ಲು ತುಂಬಿಕೊಂಡು ಬಂದ ಬಸ್‌ ಲಾಕ್‌ಡೌನ್‌ ಘೋಷಣೆಯಾದ ದಿನದಿಂದ ಡಿಪೊದಲ್ಲಿಯೇ ಇತ್ತು. ನಿರ್ಬಂಧ ತೆರವುಗೊಳಿಸಿದ್ದರಿಂದ ರೋಡ್‌ ಟೆಸ್ಟ್‌ಗೆ ಹೊರಗೆ ತೆಗೆಯಲಾಗಿತ್ತು. ಟೆಸ್ಟ್ ಮುಗಿಸಿಕೊಂಡು ಬರುವಾಗ ಸಿಬ್ಬಂದಿ ಕಲ್ಲುಗಳನ್ನು ಬಸ್‌ನಲ್ಲಿ ತುಂಬಿಕೊಂಡು ಬಂದಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು