ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾಕರ್‌ ಏಕಿಲ್ಲ... ಸರ್ಕಾರದೊಳಗೊಂದು ಸರ್ಕಾರ ಇದೆಯೇ? ಸಿದ್ದರಾಮಯ್ಯ ಪ್ರಶ್ನೆ

Last Updated 20 ಜುಲೈ 2020, 15:26 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಅವ್ಯವಹಾರ ಬಗೆಗಿನ ನನ್ನ ಆರೋಪಕ್ಕೆ ಉತ್ತರ ನೀಡಲು ಸಚಿವ ಶ್ರೀರಾಮುಲು ಮತ್ತು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಆದರೆ, ಅದರಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಕಾಣಲಿಲ್ಲ. ಸರ್ಕಾರದೊಳಗೊಂದು ಸರ್ಕಾರವಿದೆಯೇ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಕೊರೊನಾ ವೈರಸ್‌ ನಿಯಂತ್ರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ‘ಲೆಕ್ಕ ಕೊಡಿ’ ಎಂಬ ಪ್ರಶ್ನೆಯೊಂದಿಗೆ ಸರ್ಕಾರದ ವಿರುದ್ಧಮಾಜಿ ಮುಖ್ಯಮಂತ್ರಿ ಹಲವು ಆರೋಪಗಳನ್ನು ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಶ್ರೀರಾಮು ಮತ್ತು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದರು. ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮ್ಯಯ ಮತ್ತೆ ಹಲವು ಪ್ರಶ್ನೆಗಳು ಸರ್ಕಾರಕ್ಕೆ ಕೇಳಿದ್ದಾರೆ.

’ಕೊರೊನಾ ನಿಯಂತ್ರಣದಲ್ಲಿನ ಅವ್ಯವಹಾರದ ಬಗೆಗಿನ ನನ್ನ ಆರೋಪಕ್ಕೆ ಪತ್ರಿಕಾಗೋಷ್ಠಿಯಲ್ಲಿ ಉತ್ತರ ನೀಡಲು ಪ್ರಯತ್ನಿಸಿರುವ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ಉಪಮುಖ್ಯಮಂತ್ರಿ ಆಶ್ವತ್ಥನಾರಾಯಣ ಸತ್ಯವನ್ನು ಬಿಚ್ಚಿಡುವ ಬದಲಿಗೆ ಸುಳ್ಳನ್ನು ಮುಚ್ಚಿಡಲು ಪರದಾಡಿದ್ದಾರೆ. ನಾನು ಕೇಳಿರುವ ಯಾವ ಪ್ರಶ್ನೆಗಳಿಗೆ ಸಚಿವರು ಉತ್ತರ ನೀಡಿದ್ದಾರೆನ್ನುವುದು ನನಗೆ ತಿಳಿದಿಲ್ಲ. ರಾಜ್ಯ ಸರ್ಕಾರದ ಲಿಖಿತ ಸ್ಪಷ್ಟನೆ ಕೈ ಸೇರಿದ ನಂತರ ವಿವರವಾಗಿ ಪ್ರತಿಕ್ರಿಯಿಸುವೆ. ಆದರೆ... ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಸಚಿವ ಡಾ.ಸುಧಾಕರ್ ಕಾಣಲಿಲ್ಲ. ಸರ್ಕಾರದೊಳಗೊಂದು ಸರ್ಕಾರ ಇದೆಯೇ?’ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

‘ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಟ್ಟು ರೂ.323 ಕೋಟಿ ಖರ್ಚು ಮಾಡಿದೆ ಎಂದು ಶ್ರೀರಾಮುಲು ತಿಳಿಸಿದ್ದಾರೆ. ಆದರೆ ಅವರು ನೀಡಿರುವ ಲೆಕ್ಕವನ್ನು ಎಷ್ಟೇ ಕೂಡಿಸಿ ಕಳೆದರೂ ಅದು 100 ಕೋಟಿ ರೂಪಾಯಿ ದಾಟುವುದಿಲ್ಲ. ಉಳಿದ ದುಡ್ಡಿಗೆ ಲೆಕ್ಕ ಎಲ್ಲಿದೆ? ಪಿಎಂ ಕೇರ್ಸ್ ನಲ್ಲಿ ಕೇಂದ್ರ ಸರ್ಕಾರ ತಲಾ ರೂ.4 ಲಕ್ಷ ಕೊಟ್ಟು ವೆಂಟಿಲೇಟರ್ ಖರೀದಿಸಿದೆ. ಆದರೆ, ನಮ್ಮಲ್ಲಿ ಮಾತ್ರ ವೆಂಟಿಲೇಟರ್‌ಗಳನ್ನು 12ರಿಂದ 18 ಲಕ್ಷ ರೂಪಾಯಿ ವರೆಗೆ ನೀಡಿ ಖರೀದಿಸಲಾಗಿದೆ. ಅಂತಹ ವಿಶೇಷತೆ ಈ ವೆಂಟಿಲೇಟರ್‌ಗಳಲ್ಲೇನಿದೆ? ಇವುಗಳ ಬೆಲೆಯಲ್ಲಿ ಯಾಕೆ ಇಷ್ಟೊಂದು ವ್ಯತ್ಯಾಸ?’ ಎಂದು ಅವರು ಕೇಳಿದ್ದಾರೆ.

‘ಆರೋಗ್ಯ ಸಚಿವರು ಮತ್ತು ಉಪಮುಖ್ಯಮಂತ್ರಿಗಳಿಬ್ಬರೂ, ಖರೀದಿ ಮಾಡಿರುವ ಸಲಕರಣೆಗಳ ದುಬಾರಿ ದರವನ್ನು ಸಮರ್ಥಿಸುತ್ತಾ, ದರ ವ್ಯತ್ಯಾಸಕ್ಕೆ ಗುಣಮಟ್ಟದಲ್ಲಿನ ವ್ಯತ್ಯಾಸ ಕಾರಣ ಎಂದು ಹೇಳಿದ್ದಾರೆ. ಆದರೆ ಇದನ್ನು ತಾಂತ್ರಿಕವಾಗಿ ಸಮರ್ಥಿಸುವ ಯಾವ ದಾಖಲೆಗಳನ್ನು ಯಾಕೆ ನೀಡಿಲ್ಲ? ಎಂದು ಪ್ರಶ್ನೆ ಎಸೆದಿದ್ದಾರೆ.

‘ನಾನು ಕೊರೊನಾ ನಿಯಂತ್ರಣದ ಸಲಕರಣೆಗಳ ಲೆಕ್ಕ ಮಾತ್ರ ಕೇಳಿದ್ದಲ್ಲ. ಆಹಾರ ಧಾನ್ಯ, ಮತ್ತು ಆಹಾರ ಸಾಮಗ್ರಿಗಳ ಕಿಟ್, ಮತ್ತು ಆಸ್ಪತ್ರೆಗಳಿಗೆ‌ ಖರೀದಿಸಲಾದ ಬೆಡ್ ಗಳ ಬೆಲೆ, ಕ್ವಾರಂಟೈನ್ ಕೇಂದ್ರಗಳು, ಐಸೋಲೇಷನ್ ವಾರ್ಡ್ ಗಳಿಗೆ ಆಗಿರುವ ಖರ್ಚಿನ ವಿವರವನ್ನೂ ಕೇಳಿದ್ದೇನೆ. ಆ ಲೆಕ್ಕ‌ ಎಲ್ಲಿದೆ?’ ಎಂದು ಕೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT