ಭಾನುವಾರ, ಜೂನ್ 13, 2021
29 °C
ಬಿಎಸ್‍ವೈ ಪರವಾಗಿ ಮಠಾಧೀಶರುಗಳ ಬ್ಯಾಟಿಂಗ್

ನಾಯಕತ್ವದ ಬದಲಾವಣೆ ಷಡ್ಯಂತರ ಸ್ಥಗಿತಗೊಳಿಸುವಂತೆ ಮಠಾಧೀಶರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪಟೂರು: ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಪಾತ್ರ ಮಹತ್ವವಾದದ್ದು, ಆದರೆ ಇದೀಗ ನಾಯಕತ್ವ ಬದಲಾವಣೆ ಸುದ್ದಿ ಆಶ್ಚರ್ಯ ಹಾಗೂ ನೋವಿನ ಸಂಗತಿಯಾಗಿದೆ ಎಂದು ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ನಗರದ ಷಡಕ್ಷರ ಮಠದಲ್ಲಿ ರುದ್ರಮುನಿ ಸ್ವಾಮೀಜಿಯ ಅಧ್ಯಕ್ಷತೆಯಲ್ಲಿ ವಿವಿಧ ಮಠಾಧಿಶರುಗಳು ಸುದ್ದಿಗೋಷ್ಠಿ ನಡೆಸಿದರು.

ಕರ್ನಾಟಕ ಬಿಜೆಪಿ ಸರ್ಕಾರ ಒಂದು ವರ್ಷವನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಇತ್ತೀಚಿನ ದಿನಗಳಿಂದ ಸುದ್ದಿ ಮಾಧ್ಯಮದಲ್ಲಿ, ಪತ್ರಿಕೆಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ವಿಚಾರ ರಾಜ್ಯದ ಜನರಿಗೆ ಆಶ್ಚರ್ಯ ತಂದಿದೆ ಎಂದರು

ಚುನಾವಣೆಯ ಪೂರ್ವದಲ್ಲಿ ಪಕ್ಷದ ವರಿಷ್ಠರುಗಳು ಮುಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಎಂಬುದನ್ನು ಸ್ಪಷ್ಟವಾಗಿ ಹೇಳಿ ಮತ ಯಾಚನೆ ಮಾಡಿದ್ದರು. ಯಡಿಯೂರಪ್ಪನವರು ಪ್ರತಿಫಲಾಪೇಕ್ಷೆ ಇಲ್ಲದೇ ಪಕ್ಷವನ್ನು ಕಟ್ಟಿ ಬೆಳಸಿ ಅಧಿಕಾರ ಪಡೆದಿದ್ದಾರೆ. ಅಧಿಕಾರ ವಹಿಸಿಕೊಂಡಾಗಿನಿಂದ ನೆರೆ ಹಾವಳಿ, ಕೋವಿಡ್ ನಂತಹ ಸಂದರ್ಭದಲ್ಲಿ ಗಟ್ಟಿಯಾಗಿ ಎದೆಗುಂದೆ ನಿಂತು ಯಶಸ್ವಿ ನಿರ್ವಹಣೆಯಲ್ಲಿ ತೊಡಗಿದ್ದಾರೆ.

ಇನ್ನೂ 3 ವರ್ಷ ಅಧಿಕಾರ ಇರುವಾಗಲೇ ಅವರ ವಿರುದ್ಧ ಷಡ್ಯಂತರ ರೂಪಿಸಿ ನಾಯಕತ್ವ ಬದಲಾವಣೆ ವಿಚಾರ ಬಂದಿರುವುದು ಮಾನಸಿಕವಾಗಿ ಕುಗ್ಗಿಸುವ ತಂತ್ರವಾಗಿದೆ. ಪಕ್ಷವನ್ನು ಅಭದ್ರಗೊಳಿಸುವ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಮಾನಸಿಕವಾಗಿ ಕುಗ್ಗಿಸುವಂತಹ ಕಾರ್ಯ ಶೋಭೆ ತರುವಂತಹದ್ದಲ್ಲ. ಯಡಿಯೂರಪ್ಪ ಇಲ್ಲದೇ ಸರ್ಕಾರ ರಚನೆ ಅಸಾಧ್ಯ ಎಂಬುದನ್ನು ಅರಿಯುವ ಅಗತ್ಯವಿದೆ. ಅದ್ದರಿಂದ ಕೂಡಲೇ ಷಡ್ಯಂತಗಳನ್ನು ಸ್ಥಗಿತಗೊಳಿಸುವಂತೆ ಮಠಾಧೀಶರ ಪರವಾಗಿ ಒತ್ತಾಯಿಸಿದರು.

ಕುಪ್ಪೂರು-ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ ಕುರುಬ ಸಮಾಜ ಬಂದಾಗ ಸಿದ್ದರಾಮಯ್ಯ ಪಕ್ಷಾತೀತವಾಗುತ್ತಾರೆ. ಒಕ್ಕಲಿಗ ಸಮಾಜ ಬಂದಾಗ ಕುಮಾರಸ್ವಾಮಿ, ಡಿಕೆಶಿ, ದೇವೇಗೌಡರು ಪಕ್ಷಾತೀತವಾಗಿ ಕಾಣುತ್ತಾರೆ. ಆದರೆ ವೀರಶೈವ ಲಿಂಗಾಯಿತ ಸಮಾಜ ಬಂದಾಗ ಬಿ.ಎಸ್.ಯಡಿಯೂರಪ್ಪರನ್ನು ಬಿಜೆಪಿಯಲ್ಲಿ ಕಡೆಗಣಿಸುತ್ತಾರೆ. ಸಮಾಜ ಸಂಘಟನೆ ಬಂದಾಗ ಎಲ್ಲಾ ಮಠಾಧೀಶರು, ಜನಸಾಮಾನ್ಯರನ್ನು ಗೌರವಯುತವಾಗಿ ನಡೆಸಿಕೊಂಡಿರುವ ಮುಖ್ಯಮಂತ್ರಿಯಾಗಿದ್ದಾರೆ. ಅಂತಹವರನ್ನು ಬದಲಾವಣೆ ಮಾಡಲು ಹೊರಟಿರುವುದು ಶ್ರೇಯಸ್ಕರವಲ್ಲ ಎಂದರು.

 ಬಿ.ಎಸ್.ಯಡಿಯೂರಪ್ಪನವರಿಗೆ 3 ವರ್ಷ ಜನ ಅಧಿಕಾರ ನೀಡದಿದ್ದಾರೆ. ಅವರನ್ನು ಬದಲಾಯಿಸಿದರೇ ಕರ್ನಾಟಕದಲ್ಲಿ ಬಿಜೆಪಿ ಹೆಸರಿಲ್ಲದಂತಾಗುತ್ತದೆ. ಅದ್ದರಿಂದ ಪಕ್ಷದ ವರಿಷ್ಠರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದೊಡ್ಡಗುಣಿಯ ರಂಭಾಪುರಿ ಶಾಖಾ ಮಠದ ರೇವಣಸಿದ್ಧೇಶ್ವರ ಸ್ವಾಮೀಜಿ, ಮದಿಹಳ್ಳಿಯ ಶ್ರೀಶೈಲ ಶಾಖಾಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿಯ ಕಾರದೇಶ್ವರ ಮಠದ ಕಾರದೇಶ್ವರ ಸ್ವಾಮೀಜಿ, ದೊಡ್ಡಮೇಟಿಕುರ್ಕೆ ಬೂದಿಹಾಳಮಠದ ಶಶಿಶೇಖರ ಸ್ವಾಮೀಜಿ, ಅಂಬಲದೇವರಹಳ್ಳಿಯ ಉಜ್ಜನೀಶ್ವರ ಸ್ವಾಮೀಜಿ, ನಿಟ್ಟೂರು ಬಿ.ಕೋಡಿಹಳ್ಳಿಯ ಬೃಂಗೀಶ್ವರ ಸ್ವಾಮೀಜಿ, ತಂಗನಹಳ್ಳಿಯ ಬಸವಮಹಾಲಿಂಗಸ್ವಾಮೀಜಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು