ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಮಾಧ್ಯಮ ಮಕ್ಕಳಿಗೆ 'ಟೆಲಿಗ್ರಾಂ ಪಾಠ'

ಯೂ ಟ್ಯೂಬ್‌ನಲ್ಲಿ ಗಣಿತ, ವಿಜ್ಞಾನ ಸಮಸ್ಯೆಗಳಿಗೆ ಪರಿಹಾರ
Last Updated 26 ಜುಲೈ 2020, 19:30 IST
ಅಕ್ಷರ ಗಾತ್ರ

ಶಿರಸಿ: ಕನ್ನಡ ಮಾಧ್ಯಮ ಪಠ್ಯಕ್ರಮವನ್ನು ಯೂ ಟ್ಯೂಬ್‌ ಮೂಲಕ ಪಾಠ ಮಾಡಿ, ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳನ್ನು ತಲುಪುವ ಪ್ರಯತ್ನವನ್ನು ಇಲ್ಲಿ ಶಿಕ್ಷಕರ ತಂಡವೊಂದು ಪ್ರಾರಂಭಿಸಿದೆ.

ಒಂದು ವಾರದಿಂದ ಯೂ ಟ್ಯೂಬ್‌ನಲ್ಲಿ ಹಾಕುತ್ತಿರುವ ಆರರಿಂದ ಎಂಟನೇ ತರಗತಿವರೆಗಿನ ಗಣಿತ ಹಾಗೂ ವಿಜ್ಞಾನ ಪಾಠಗಳನ್ನು ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಪಾಠಗಳನ್ನು ಅಪ್‌ಲೋಡ್ ಮಾಡಲು ಈ ಶಿಕ್ಷಕರ ತಂಡ ಟೆಲಿಗ್ರಾಂ ಗ್ರೂಪ್‌ ರಚಿಸಿಕೊಂಡಿದೆ. ಈ ಗ್ರೂಪ್‌ನಲ್ಲಿ ರಾಜ್ಯದ ವಿವಿಧೆಡೆಯ ಶಿಕ್ಷಕರು, ವಿದ್ಯಾರ್ಥಿಗಳು ಸೇರಿ, 750ಕ್ಕೂ ಹೆಚ್ಚು ಸದಸ್ಯರಿದ್ದಾರೆ.

‘ಇಂಗ್ಲಿಷ್ ಮಾಧ್ಯಮ ಮಕ್ಕಳಿಗೆ ಹಲವಾರು ಕಡೆಗಳಲ್ಲಿ ಪಾಠದ ಲಭ್ಯತೆ ಇರುತ್ತದೆ. ಅಂತರ್ಜಾಲ ಮಾಧ್ಯಮದಲ್ಲಿ ಇವು ಸುಲಭವಾಗಿ ಸಿಗುತ್ತವೆ. ಆದರೆ, ಕನ್ನಡ ಮಾಧ್ಯಮ ಮಕ್ಕಳಿಗೆ ಪಠ್ಯಕ್ರಮದ ಮಾಹಿತಿಯ ಅಷ್ಟಾಗಿ ಸಿಗುವುದಿಲ್ಲ. ಆರಂಭದಲ್ಲಿ ನಮ್ಮ ಶಾಲೆಯ ಮಕ್ಕಳನ್ನೊಳಗೊಂಡು ವಾಟ್ಸ್‌ಆ್ಯಪ್ ಗ್ರೂಪ್ ಮಾಡಿದ್ದೆವು. ನಾವು ಬಿಡಿಸಿ ಹಾಕುತ್ತಿದ್ದ ಲೆಕ್ಕಗಳು ಮಕ್ಕಳಿಗೆ ಅರ್ಥವಾಗುತ್ತಿರಲಿಲ್ಲ. ಆಗ ಕ್ಲಾಸ್‌ರೂಮ್ ಕಲಿಕೆಯಂತೆ ವಿಡಿಯೊ ಮಾಡುವ ವಿಚಾರ ಬಂತು. ಇದು ಕನ್ನಡ ಮಾಧ್ಯಮದ ಎಲ್ಲ ಮಕ್ಕಳಿಗೂ ಲಭ್ಯವಾಗಲೆಂದು ಯೂ ಟ್ಯೂಬ್ ಮೂಲಕ ಹಾಕಲು ಪ್ರಾರಂಭಿಸಿದೆವು’ ಎನ್ನುತ್ತಾರೆ ಇದರ ರೂವಾರಿ, ತಾಲ್ಲೂಕಿನ ತಾರಗೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗಣಪತಿ ಹೆಗಡೆ.

‘ಶಿಕ್ಷಕರಾದ ಸದ್ಗುರು ಭಟ್ಟ, ಗಣೇಶ ಹೆಗಡೆ, ಶಿವಪ್ರಸಾದ ಅವರು ಇದಕ್ಕೆ ಕೈಜೋಡಿಸಿದರು. ಪಠ್ಯಕ್ರಮದಲ್ಲಿರುವ ಕಲಿಯಲೇಬೇಕಾದ ಕಲಿಕಾಂಶಗಳನ್ನು ಪಟ್ಟಿ ಮಾಡಿಕೊಂಡು ಪಾಠ ಸಿದ್ಧಪಡಿಸಿದ್ದೇವೆ. 10–15 ನಿಮಿಷಗಳ ವಿಡಿಯೊ ಸಿದ್ಧಪಡಿಸಿ ಹಾಕುತ್ತಿದ್ದೇವೆ. ಕೆಲವು ಮಕ್ಕಳಿಗೆ ಇಂಟರ್‌ನೆಟ್ ಸೌಲಭ್ಯ ಇರುವುದಿಲ್ಲ. ನೆಟ್‌ ಲಭ್ಯವಿದ್ದಾಗ ಡೌನ್‌ಲೋಡ್ ಮಾಡಿಕೊಂಡು ನಂತರ ಅದನ್ನು ವೀಕ್ಷಿಸಬಹುದು. ಪಾಠ ಮಾಡಿದ ಮೇಲೆ ನೀಡುವ ಪ್ರಶ್ನೆಗಳಿಗೆ, ಮರುದಿನ ಉತ್ತರಗಳನ್ನು ಕಳುಹಿಸುತ್ತೇವೆ. ಇದರಿಂದ ಮಕ್ಕಳು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಅವರು ವಿವರಿಸಿದರು.

ಕನ್ನಡ, ಸಮಾಜ, ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿ, ಕೆಲವು ಶಿಕ್ಷಕರು ಇದೇ ರೀತಿ ವಿಡಿಯೊ ಮಾಡಿಕೊಡಲು ಆಸಕ್ತಿ ತೋರಿದ್ದಾರೆ. ಮುಂದಿನ ದಿನಗಳಲ್ಲಿ ಅವುಗಳನ್ನೂ ಮಕ್ಕಳಿಗೆ ಲಭ್ಯವಾಗುವಂತೆ ಮಾಡಲಾಗುವುದು. ಮಾಹಿತಿ ಅಥವಾ ಸಲಹೆಗಳಿದ್ದರೆ ವೈಯಕ್ತಿಕವಾಗಿ ಸಂಪರ್ಕಿಸಬಹುದು ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT